ಗಣಪತಿ ಭಾಳಾ ಯಾದವ್ ಅವರು ಕಳೆದ ವಾರದ ಸೂರ್ಯಾಸ್ತದವರೆಗೂ ತನ್ನ ಸೈಕಲ್ ಸವಾರಿಯನ್ನು ಮುಂದುವರೆಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳಿಗೆ ಸುದ್ದಿವಾಹಕರಾಗಿ ಕೆಲಸ ಮಾಡಿದ್ದ ಈ ಹಿರಿಯಜ್ಜ ತನ್ನ ನೂರರ ಗಡಿಯನ್ನು ದಾಟಿ ನೂರಾ ಒಂದನೆಯ ವರ್ಷದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ಹಿರಿಯ ಜೀವ ತನ್ನ ಕೊನೆಯ ದಿನಗಳವರೆಗೂ ತನ್ನ ನೆಚ್ಚಿನ ಸೈಕಲ್ಲಿನಲ್ಲಿ ದಿನಕ್ಕೆ 5ರಿಂದ 20 ಕಿಲೋಮೀಟರ್‌ಗಳ ತನಕ ಸವಾರಿ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ತನ್ನ ಸೈಕಲ್ ಪ್ರಯಾಣವನ್ನು ನೆಲದಿಂದ ಆಕಾಶಕ್ಕೆ ವಿಸ್ತರಿಸಿ ನಮ್ಮನ್ನೆಲ್ಲ ತೊರೆದು ಹೋದರು.
ನಾವು ಅವರನ್ನು 2018ರಲ್ಲಿ ಭೇಟಿಯಾದಾಗ - ಅವರು 97 ವರ್ಷದವರಾಗಿದ್ದರು - ಅವರು ನಮ್ಮ ಹುಡುಕಾಟದಲ್ಲಿ ಸುಮಾರು 30 ಕಿಲೋಮೀಟರ್‌ಗಳಷ್ಟು ದೂರ ತಮ್ಮ ಸೈಕಲ್ ತುಳಿದಿದ್ದರು. ಅಂದು ನಮ್ಮ ಅಂದರೆ ಪರಿಯ ತಂಡ ಅವರನ್ನು ತಲುಪುವುದು ಒಂದಷ್ಟು ತಡವಾಗಿತ್ತು, ಆದರೆ ಆ ಹಿರಿಯರು ತಮ್ಮ ಬದುಕಿನ ಅದ್ಭುತ ಕತೆಯನ್ನು ನಮ್ಮೊಂದಿಗೆ ಹಂಚಿಕೊಳ್ಳುವ ಆತುರದಲ್ಲಿದ್ದರು. ಅವರ ಪುರಾತನ ಸೈಕಲ್ ಮ್ಯೂಸಿಯಮ್ಮಿನಲ್ಲಿರುವ ಪುರಾತನ ವಸ್ತುವಿನಂತೆ ಕಾಣುತ್ತಿತ್ತಾದರೂ ಅದೇನೂ ಅವರಿಗೆ ತೊಂದರೆ ಕೊಟ್ಟಂತೆ ಕಾಣುತ್ತಿರಲಿಲ್ಲ. ಅವರಿಗೆ ತಮ್ಮ ಕತೆಯನ್ನು ಹಂಚಿಕೊಳ್ಳುವ ಖುಷಿಯ ಮುಂದೆ ಈ ತೊಂದರೆಗಳು ಏನೂ ಅಲ್ಲವಾಗಿತ್ತು. ಇಂತಹ ಅದ್ಭುತ ಉತ್ಸಾಹಭರಿತ ವ್ಯಕ್ತಿ ಇಂದು ನಮ್ಮ ನಡುವೆ ಇಲ್ಲ, ಆದರೆ ಅವರ ಬದುಕಿನ ಕತೆ ನಮ್ಮೊಂದಿಗಿದೆ. ಅವರ ಕತೆಯನ್ನು ಇಲ್ಲಿ ಓದಿ: "ಗಣಪತಿ ಯಾದವ್ ಅವರ ಹೃದಯಸ್ಪರ್ಶಿ ಜೀವನಚಕ್ರ"
1920ರಲ್ಲಿ ಜನಿಸಿದ ಗಣಪತಿ ಬಾಳ್ ಯಾದವ್, ಸತಾರಾದ ಪ್ರತಿ ಸರ್ಕಾರ್ ಎನ್ನುವ ಭೂಗತ ಸರ್ಕಾರದ ಸಶಸ್ತ್ರ ವಿಭಾಗವಾದ ತೂಫಾನ್ ಸೇನೆಯ ಭಾಗವಾಗುವ ಮೂಲಕ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದರು. ಸತರಾದ ಈ ಭೂಗತ ಸರ್ಕಾರವು ಶಸ್ತ್ರಾಸ್ತ್ರಗಳನ್ನು ಹೊಂದುವುದರೊಂದಿಗೆ ಬ್ರಿಟಿಷ್ ಸರಕಾರದ ವಿರುದ್ಧ ತನ್ನ ಸ್ವಾತಂತ್ರ್ಯವನ್ನೂ ಘೋಷಿಸಿತ್ತು. ಈ ಸೇನೆಯ ಬ್ರಿಟಿಷ್ ಸರಕಾರದ ವಿರುದ್ಧದ ಕಾರ್ಯಾಚರಣೆಗಳಲ್ಲೂ ಅವರು ಭಾಗವಹಿಸಿದ್ದರು. ʼಗಣಪ ದಾದʼ, ಜಿ.ಡಿ.ಬಾಪು ಲಾಡ್ ಮತ್ತು ‘ಕ್ಯಾಪ್ಟನ್ ಭಾವು’ ನೇತೃತ್ವದಲ್ಲಿ ಜೂನ್ 1943ರಂದು ಸತಾರಾ ಜಿಲ್ಲೆಯ ಶೆನೊಲಿಯಲ್ಲಿ ನಡೆದ ದೊಡ್ಡ ರೈಲು ದರೋಡೆ ನಡೆಸಿದ ಕ್ರಾಂತಿಕಾರಿ ಕನಸಿನ ತಂಡದಲ್ಲೂ ಇದ್ದರು.
ಬಹುತೇಕ ಕೆಲವು ವರ್ಷಗಳ ತನಕ, ನಮಗೆ ಅವರು ಹೇಳಿದಂತೆ: "ನಾನು ನಮ್ಮ (ಕಾಡಿನಲ್ಲಿ ಅವಿತುಕೊಂಡಿದ್ದ) ನಾಯಕರಿಗೆ ಆಹಾರವನ್ನು ತಲುಪಿಸುತ್ತಿದ್ದೆ. ಅವರ ಭೇಟಿಗಾಗಿ ರಾತ್ರಿಯ ಹೊತ್ತು ಹೋಗುತ್ತಿದ್ದೆ. ನಾಯಕರ ಜೊತೆ 10-20 ಜನರು ಇರುತ್ತಿದ್ದರು." ಒಂದು ವೇಳೆ ಅವರು ಹಾಗೆ ಅವರ ಭೇಟಿಗೆ ಹೋಗುವಾಗ ಸಿಕ್ಕಿಬಿದ್ದಿದ್ದರೆ ಅವರ ನಾಯಕ ಮತ್ತು 20 ಜನರನ್ನು ಬ್ರಿಟಿಷ್ ಸರಕಾರ ನೇಣಿಗೇರಿಸುತ್ತಿತ್ತು. ಯಾದವ್ ತನ್ನ ಸೈಕಲ್ ಮೂಲಕ ಭೂಗತವಾಗಿ ಅವರಿಗೆ ಆಹಾರವನ್ನು ತಲುಪಿಸುತ್ತಿದ್ದರು. ಜೊತೆಗೆ ಅವರು ಕ್ರಾಂತಿಕಾರಿ ಗುಂಪುಗಳ ನಡುವೆ ನಿರ್ಣಾಯಕವಾದ ಪ್ರಮುಖ ಸಂದೇಶಗಳನ್ನು ತಲುಪಿಸುವ ಕೆಲಸವನ್ನೂ ಮಾಡುತ್ತಿದ್ದರು.
ಅವರ ಸೈಕಲ್ಲನ್ನಂತೂ ನಾನು ಎಂದಿಗೂ ಮರೆಯಲಾರೆ. ಅಂದು ನಾನು ಆ ಹಳೆಯ ಸೈಕಲ್ಲನ್ನೇ ನೋಡುತ್ತಾ ಉಳಿದುಬಿಟ್ಟಿದ್ದೆ. ಇಂತಹ ಸೈಕಲ್‌ಗಳನ್ನು ಮೊಟ್ಟೆ ಮಾರುವವರು, ಪಾವ್ ಸರಬರಾಜು ಮಾಡುವವರು, ಧೋಬಿ ಕೆಲಸದವರ ಬಳಿ ಮತ್ತೆ ಹಳ್ಳಿಗಳಲ್ಲೂ ಬಳಕೆಯಲ್ಲಿರುವುದನ್ನು ನೋಡಬಹುದು. ನಮ್ಮ ಮಾತಿನ ನಡುವೆ, ಈ ಸೈಕಲ್ ಕೇವಲ ಇಪ್ಪತೈದು ವರ್ಷ ಹಳೆಯದು ಎಂದಿದ್ದರು. ಅವರ ಹಿಂದಿನ ಸೈಕಲ್ಲನ್ನು ಯಾರೋ ಕದ್ದುಬಿಟ್ಟಿದ್ದರು. ಆ ಸೈಕಲ್ಲನ್ನು ಅವರು ಸುಮಾರು 55 ವರ್ಷಗಳಿಂದ ಬಳಸುತ್ತಿದ್ದರು ಮತ್ತದು ಅವರ ಪ್ರೀತಿ ಪಾತ್ರ ಸೈಕಲ್ ಆಗಿತ್ತು. ನನಗನ್ನಿಸುವಂತೆ ಅದನ್ನು ಯಾರೋ ಪುರಾತನ ವಸ್ತುಗಳ ಸಂಗ್ರಾಹಕನೇ ಕದ್ದಿರಬೇಕು.
ಗಣಪತಿ ಯಾದವ್ ಅವರನ್ನು ನಮಗೆ ನಮ್ಮ ಸ್ನೇಹಿತ, ಪತ್ರಕರ್ತ ಸಂಪತ್ ಮೋರೆಯವರು ಪರಿಚಯಿಸಿದರು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಶಿರ್ಗಾಂವ್ ಗ್ರಾಮದಲ್ಲಿರುವ ಅವರ ಅಜ್ಜ ಮನೆಯಲ್ಲಿ ನಾವು ಅವರನ್ನು ಮೊದಲು ಭೇಟಿಯಾದೆವು. ನಂತರ ಅಲ್ಲಿಂದ ನಾವು 5 ಕಿಲೋಮೀಟರ್ ದೂರದಲ್ಲಿರುವ ಅವರ ಊರಾದ ರಾಂಪುರಕ್ಕೆ ಹೋಗಿ, ಅಲ್ಲಿ ಅವರೊಂದಿಗೆ ಹಲವಾರು ಗಂಟೆಗಳ ಕಾಲ ಮಾತುಕತೆ ನಡೆಸಿದೆವು. ಅವರು ತನ್ನ 97ನೇ ವಯಸಿನಲ್ಲಿ ಸೈಕಲ್ ಓಡಿಸುವುದು ಆಶ್ಚರ್ಯಕರ ಎನಿಸಿದ್ದರೂ ಅವರಿಗೆ ಅದೇನೂ ದೊಡ್ಡ ವಿಷಯವಾಗಿರಲಿಲ್ಲ. ಆ ಕುರಿತು ಅವರು ಹೆಚ್ಚು ಮಾತನಾಡಲು ಬಯಸಲಿಲ್ಲ. ಕೊನೆಗೆ ನಮ್ಮ ಕೋರಿಕೆಯ ಮೇರೆಗೆ ಅರ್ಧ ಗಂಟೆಯ ಕಾಲ ಸೈಕಲ್ ಓಡಿಸಲು ಒಪ್ಪಿದರು. ಅವರ ದೈನಂದಿನ ಬದುಕಿನ ವಿರಗಳನ್ನು ದಾಖಲಿಸಲು ನಮ್ಮ ಪರಿ ಫೆಲೋ ಸಂಕೇತ್ ಜೈನ್ ಮತ್ತು ವಿಡಿಯೋ ಸಂಪಾದಕಿ ಸಿಂಚಿತಾ ಮಾಂಝಿ ಇದನ್ನು ರೆಕಾರ್ಡ್ ಮಾಡಿಕೊಳ್ಳಬೇಕಿತ್ತು. ಸಿಂಚಿತ ಸ್ಕೂಟರಿನ ಹಿಂಬಾಗದಲ್ಲಿ ಹಿಮ್ಮುಖವಾಗಿ ಕುಳಿತು ರೆಕಾರ್ಡ್ ಮಾಡಿದರು. ಅವರು ದಿನವೂ ಓಡಾಡುತ್ತಿದ್ದ ಮಣ್ಣು ರಸ್ತೆಯ ಗುಂಟ ಮುಂದೆ ಸ್ಕೂಟರ್ ಚಲಿಸುತ್ತಿದ್ದರೆ ಅದರ ಹಿಂದೆ ಅವರು ಸೈಕಲ್ಲಿನಲ್ಲಿ ಬರುತ್ತಿದ್ದರು.
ಆ ಸಂದರ್ಶನದಲ್ಲಿ ʼಪರಿʼಯ ಭರತ್ ಪಾಟೀಲ್ ಮತ್ತು ನಮಿತಾ ವಾಯಿಕರ್ ಅತ್ಯುತ್ತಮ ಅನುವಾದಕರಾಗಿ ನಮ್ಮೊಂದಿಗಿದ್ದರು, ಈ ಸಂದರ್ಶನದ ಪ್ರತಿ ಕ್ಷಣವೂ ನನಗೆ ಸ್ಮರಣೀಯ.
ಮುಂದಿನ ಎರಡು ವರ್ಷಗಳ ಕಾಲ ಆ ಹಿರಿಯ ಜೀವವನ್ನು ಭೇಟಿಯಾದಾಗಲೆಲ್ಲಾ, ʼನಾನು ಮತ್ತು ʼಪರಿʼ ತಂಡ ತನ್ನನ್ನು ಪ್ರಸಿದ್ಧನನ್ನಾಗಿ ಮಾಡಿದ್ದಾರೆʼ ಎಂದು ಹೇಳುತ್ತಾರೆಂದು ಸಂಪತ್ ಹೇಳುತ್ತಿದ್ದರು. "ನಾನು ಏನೂ ಅಲ್ಲದವನು, ಸ್ವಾತಂತ್ರ್ಯ ಹೋರಾಟದಲ್ಲಿ ಕೇವಲ ಸಂದೇಶವಾಹಕನಾಗಿದ್ದೆ. ಆದರೆ ಅದರಲ್ಲಿ ಅವರು ನನ್ನ ಪಾತ್ರವನ್ನು ಮುಖ್ಯವೆಂದು ಪರಿಗಣಿಸಿದರು ಮತ್ತು ನನಗೆ ತುಂಬಾ ಗೌರವವನ್ನು ನೀಡಿದರು." ಈ ಲೇಖನದಿಂದಾಗಿ, ಅವರು ತನ್ನ ಸ್ವಂತ ಊರು ಮತ್ತು ಸುತ್ತಲಿನ ಪ್ರದೇಶದಲ್ಲಿ ಪಡೆದ ಗುರುತಿನಿಂದ ಪ್ರಭಾವಿತನಾಗಿದ್ದರು - ಮತ್ತು ಅದು ಅವರ ಪಾಲಿಗೆ ಬಹಳ ಮಹತ್ವಪೂರ್ಣವಾದದ್ದಾಗಿತ್ತು.
ಆ ನಮ್ರತೆಯ ಭಾವವನ್ನು ನಾನು ಭಾರತದ ಹಲವು ಕೊನೆಯ ಜೀವಂತ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕಂಡಿದ್ದೇನೆ: ಅವರಿಗೆ ಗೊತ್ತು, ತಾವು ಬದುಕಿದ್ದ ಕಾಲ ಮತ್ತು ಜಗತ್ತು ವಿಶೇಷವಾದದ್ದು ಎನ್ನುವುದು. ಇದು ಒಂದು ಹಂತವಾದರೆ, ಇನ್ನೊಂದು ಹಂತದಲ್ಲಿ ಆ ಕಾಲದ ಬೇಡಿಕೆಗೆ ತಕ್ಕಂತೆ ನಿರೀಕ್ಷೆಯಿಲ್ಲದೆ, ಅವರು ಮಾಡಬೇಕಾದುದನ್ನು ಮಾಡಿ, ತಮ್ಮ ಕರ್ತವ್ಯವನ್ನು ಮಾಡಿದ್ದಾರೆಂದು ವಿನಮ್ರವವಾಗಿ ಒಪ್ಪಿಕೊಳ್ಳುವುದು. ಇದು ಅವರ ವಿಶೇಷತೆ. ಗಣಪ ದಾದಾ ಅವರಂತಹ ಅನೇಕರು 1972ರಲ್ಲಿ ಭಾರತ ಸರಕಾರವು ನೀಡಿದ ಪಿಂಚಣಿ ಸೌಲಭ್ಯದತ್ತ ಕಣ್ಣೆತ್ತಿಯೂ ನೋಡಿಲ್ಲ.
ನಮ್ಮ ಎಲ್ಲಾ ಓದುಗರು ಹಾಗೂ ಇತರರು ನಮ್ಮ ಭಾರತದ ಕೊನೆಯ ಜೀವಂತ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ಈ ವಿಶೇಷ ಲೇಖನ ಸರಣಿಯನ್ನು ನೋಡಬೇಕೆಂದು ಬಯಸುತ್ತೇನೆ. ಇನ್ನೊಂದು ಐದು ವರ್ಷಗಳಲ್ಲಿ, ನೋಡಬೇಕೆಂದರೂ ಇವರುಗಳಲ್ಲಿ ಯಾರೂ ಉಳಿದಿರುವುದಿಲ್ಲ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಗುಲಾಮಗಿರಿಯಿಂದ ಭಾರತವನ್ನು ಮುಕ್ತಗೊಳಿಸಿ, ಈ ರಾಷ್ಟ್ರಕ್ಕೆ ಸ್ವಾತಂತ್ರ್ಯ ನೀಡಿದವರನ್ನು ನೋಡಲು, ಅವರೊಡನೆ ಮಾತನಾಡಲು ಅಥವಾ ಅವರ ಅನುಭವ ಕೇಳಲು ಮುಂಬರುವ ಪೀಳಿಗೆಗೆ ಎಂದಿಗೂ ಅವಕಾಶ ಸಿಗುವುದಿಲ್ಲ.
ಈಗ ಈ ಹಿರಿಯ ಜೀವ ನಮ್ಮನ್ನು ಅಗಲಿದೆ. ಬಹಳ ವೇಗವಾಗಿ ಕಣ್ಮರೆಯಾಗುತ್ತಿರುವ ಭಾರತದ ಸುವರ್ಣ ಯುಗದ ಪೀಳಿಗೆಯ ಪಟ್ಟಿಗೆ ಇನ್ನೊಂದು ಜೀವ ಸೇರ್ಪಡೆಯಾಗಿದೆ. ಅವರು ತಮ್ಮ ಜೀವನದ ಕತೆಯನ್ನು ನಿರೂಪಿಸಲು ನಮ್ಮನ್ನು ಅಂದರೆ ʼಪರಿʼಯನ್ನು ಆಯ್ಕೆ ಮಾಡಿಕೊಂಡಿದ್ದು ನಮಗೆ ನಿಜಕ್ಕೂ ಹೆಮ್ಮೆಯ ವಿಚಾರ. 100 ವರ್ಷಗಳ ಕಾಲ ಧೀಮಂತ ಬದುಕನ್ನು ಬದುಕುತ್ತಾ ತನ್ನ ಕೊನೆಗಾಲದವರೆಗೂ ಕೃಷಿಕನಾಗಿ ಬೇಸಾಯದಲ್ಲಿ ತೊಡಗಿಕೊಂಡಿದ್ದ ಚೇತನದ ವಿದಾಯಕ್ಕಾಗಿ ಶೋಕಿಸುತ್ತಲೇ ಅವರ ಬದುಕನ್ನು ನಾವು ಸಂಭ್ರಮದಿಂದ ಆಚರಿಸುತ್ತೇವೆ. ಈ ಹಿರಿಯರು ಅಂದು ನಾನು ಹೊರಟು ನಿಂತಿದ್ದಾಗ ತನ್ನ ಕೈಗಳಿಂದ ನನಗೇನೋ ಕೊಡಲು ಬಯಸುತ್ತಿರುವುದಾಗಿ ಹೇಳಿದ್ದರು, ದೊಡ್ಡ ಕುಟುಂಬದ ಕಾಂಪೌಂಡ್‌ನೊಳಗಿನ ತನ್ನ ಒಂದು ಕೋಣೆಯ ಮನೆಯಿಂದ ನನಗೆ ಒಂದು ಬಟ್ಟಲು ತಾಜಾ ಹಾಲು ತಂದು ಕೊಟ್ಟಿದ್ದರು. ಆ ಕ್ಷಣಕ್ಕೆ ಇಬ್ಬರೂ ನಿಜಕ್ಕೂ ಭಾವುಕರಾಗಿದ್ದೆವು.
ನಮ್ಮ ಅಂದಿನ ಭೇಟಿಯ ಕೊನೆಯ ಕ್ಷಣಗಳನ್ನು ಸಂಪತ್ ಮೋರೆಗಿಂತಲೂ ಆ ಕ್ಷಣವನ್ನು ಬೇರೆ ಯಾರೂ ಉತ್ತಮವಾಗಿ ಚಿತ್ರಿಸಿಲ್ಲ, ಅವರು ಹೀಗೆ ಬರೆದಿದ್ದಾರೆ: "ಸಾಯಿನಾಥ್ ಸರ್ ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದರೆ, ಗಣಪ ದಾದಾ ಮರಾಠಿಯಲ್ಲಿ ಮಾತನಾಡುತ್ತಿದ್ದರು. ಆದರೆ ಹೊರಡುವ ಸಮಯ ಹತ್ತಿರವಾಗುತ್ತಿದ್ದಂತೆ ಇಂಗ್ಲೀಷ್ ಬರದ ದಾದ ಕೇವಲ ದೇಹ ಭಾಷೆಯನ್ನು ನೋಡಿಯೇ ಈ ವ್ಯಕ್ತಿ ಹೊರಡಲು ತಯಾರಾಗುತ್ತಿದ್ದಾರೆನ್ನುವುದನ್ನು ಕಂಡುಕೊಂಡರು. ಆ ಕ್ಷಣ ದಾದಾ ಭಾವುಕರಾದರು. ಅವರು ಎದ್ದು ಸರ್ ಕೈಯನ್ನು ಅವರ ಕೈಯಲ್ಲಿ ಬಿಗಿಯಾಗಿ ಹಿಡಿದುಕೊಂಡರು. ದಾದಾರ ಕಣ್ಣಲ್ಲಿ ನೀರು ತುಂಬಿತ್ತು. ಸರ್ ಕೂಡ ದಾದಾರ ಕೈಯನ್ನು ಬಹಳ ಹೊತ್ತು ಹಿಡಿದಿದ್ದರು, ಮತ್ತು ಅಲ್ಲಿ ಇಬ್ಬರೂ ಯಾವುದೇ ಭಾಷೆಯ ಹಂಗಿಲ್ಲದೆ ಪರಸ್ಪರ ಮಾತನಾಡುತ್ತಿರುವುದನ್ನು ನಾವು ನೋಡಬಹುದಿತ್ತು."
ಅನುವಾದ: ಶಂಕರ ಎನ್. ಕೆಂಚನೂರು