ಮೊದಲ ಸಲ ಕೈಯಿಂದ ಎಳೆಯುವ ರಿಕ್ಷಾ ನಡೆಸುವುದನ್ನು ಲಲ್ಲನ್ ಪಾಸ್ವಾನ್ ಕಲಿಯಲು ಪ್ರಯತ್ನಿಸಿದಾಗ, ಇತರ ರಿಕ್ಷಾ ನಡೆಸುವವರು ಪ್ರಯಾಣಿಕರಂತೆ ಹಿಂಭಾಗದಲ್ಲಿ ಕುಳಿತು ಅಭ್ಯಾಸ ಮಾಡಲು ಸಹಾಯ ಮಾಡಿದರು. "ನಾನು ಮೊದಲ ಬಾರಿಗೆ [ರಿಕ್ಷಾದ ಮುಂಭಾಗದ ತುದಿಯನ್ನು] ಮೇಲಕ್ಕೆತ್ತಿ ಅದನ್ನು ಮುಂದೆ ಎಳೆಯಲು ಪ್ರಯತ್ನಿಸಿದಾಗ ಸಾಧ್ಯವಾಗಿರಲಿಲ್ಲ. ನಂತರ ಸರಿಯಾಗಿ ಕಲಿಯಲು ನನಗೆ ಎರಡು ಮೂರು ದಿನಗಳು ಬೇಕಾದವು" ಎಂದು ಅವರು ಹೇಳುತ್ತಾರೆ.
ಕುತ್ತಿಗೆಯ ಸುತ್ತ ಹಾಕಿಕೊಂಡಿದ್ದ ಗಮ್ಚಾದಿಂದ ಬೆವರೊರೆಸಿಕೊಳ್ಳುತ್ತಾ ನಂತರ ತಾನು ರಿಕ್ಷಾ ಉರುಳಿ ಬೀಳದಂತೆ ಬ್ಯಾಲೆನ್ಸ್ ಮಾಡುವುದನ್ನು ಹೇಗೆ ಕಲಿತೆನೆನ್ನುವುದನ್ನು ವಿವರಿಸುತ್ತಾರೆ. "ನೀವು ಹ್ಯಾಂಡಲ್‌ಗಳನ್ನು [ಮುಂಭಾಗದಲ್ಲಿ] ಪ್ರಯಾಣಿಕರಿಂದ ಸಾಧ್ಯವಾದಷ್ಟೂ ದೂರದಲ್ಲಿ ಹಿಡಿದರೆ, ರಿಕ್ಷಾ ಉರುಳುವುದಿಲ್ಲ" ಎಂದು ಅವರು ಹೇಳುತ್ತಾರೆ. ರಿಕ್ಷಾ ಉರುಳುವುದಿಲ್ಲವೆನ್ನುವ ವಿಶ್ವಾಸ ಮೂಡಲು ಅವರಿಗೆ ಒಂದಷ್ಟು ಸಮಯ ಬೇಕಾಯಿತು. ಆದರೆ ಈಗ "ನನಗೆ ಯಾವುದೇ ರೀತಿಯ ಭಯವಿಲ್ಲ. ಈಗ ಇಬ್ಬರನ್ನು ಕೂರಿಸಿಕೊಂಡು ಸುಲಭವಾಗಿ ಎಳೆಯಬಲ್ಲೆ. ಮೂರು ಜನರನ್ನು ಕೂಡ ಎಳೆಯಬಲ್ಲೆ ಆದರೆ ಮೂರನೇಯವರು ಚಿಕ್ಕವರಾಗಿರಬೇಕು."
ಆ ಆರಂಭಿಕ ಪ್ರಯತ್ನಗಳಿಗೆ ಈಗ ಸರಿಸುಮಾರು 15 ವರ್ಷಗಳಾಗಿವೆ. ಆ ಮೊದಲ ಪಾಠಗಳನ್ನು ಕಲಿಯುವ ಸಮಯದಲ್ಲಿ, ಲಲ್ಲನ್ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ರಘು ನಾಥಪುರ ಗ್ರಾಮದಿಂದ ನಗರಕ್ಕೆ ಬಂದಿದ್ದರು. ಅವರು 9ನೇ ತರಗತಿಯವರೆಗೆ ಓದು ಮುಗಿಸಿದ್ದರು ಮತ್ತು ಕುಟುಂಬದ ಒಂದು ಬಿಘಾ ಭೂಮಿಯಲ್ಲಿ (ಎಕರೆಗಿಂತ ಕಡಿಮೆ) ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಿದ್ದರು. ಆದರೆ ಕೃಷಿ ಸಾಕಷ್ಟು ಆದಾಯವನ್ನು ತಂದುಕೊಡಲಿಲ್ಲ, ಹೀಗಾಗಿ ಪಾಸ್ವಾನ್ ಕೆಲಸ ಹುಡುಕಿಕೊಂಡು ಕೋಲ್ಕತ್ತಾಗೆ ಬಂದರು.
ಕೆಲವು ತಿಂಗಳು, ಅವರು ಕಚೇರಿಗಳಲ್ಲಿ ಕೆಲಸ ಹುಡುಕಲು ಪ್ರಯತ್ನಿಸಿದರು. "ನನಗೆ ಯಾವುದೇ ಕೆಲಸ ಸಿಗದಿದ್ದಾಗ, ನನ್ನ ಹಳ್ಳಿಯ ಕೆಲವು ರಿಕ್ಷಾ ಎಳೆಯುವವರು ನನ್ನನ್ನು ಈ ಕೆಲಸಕ್ಕೆ ಪರಿಚಯಿಸಿದರು" ಎಂದು ಅವರು ಹೇಳುತ್ತಾರೆ.
ಸುಮಾರು 40ರ ಹರೆಯದ ಪಾಸ್ವಾನ್, ಈಗ ದಕ್ಷಿಣ ಕೋಲ್ಕತ್ತಾದ ಕಾರ್ನ್‌ಫೀಲ್ಡ್ ರಸ್ತೆ ಮತ್ತು ಎಕ್ಡಾಲಿಯಾ ರಸ್ತೆಯ ನಡುವಿನಲ್ಲಿರುವ ರಿಕ್ಷಾ ಸ್ಟ್ಯಾಂಡ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಸುಮಾರು 30 ಮಂದಿ ರಿಕ್ಷಾ ಎಳೆಯುವವರು ತಮ್ಮ ರಿಕ್ಷಾಗಳೊಂದಿಗೆ ಪ್ರಯಾಣಿಕರಿಗಾಗಿ ಕಾಯುತ್ತಾರೆ. ಮಾರ್ಚ್ನಲ್ಲಿ ಪ್ರಾರಂಭವಾದ ರಾಷ್ಟ್ರವ್ಯಾಪಿ ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ಅವರಲ್ಲಿ ಹಲವರು ತಮ್ಮ ಗ್ರಾಮಗಳಿಗೆ ಮರಳಿದರು ಎಂದು ಪಾಸ್ವಾನ್ ಹೇಳುತ್ತಾರೆ. "ಕೊರೋನಾದಿಂದಾಗಿ ಕೆಲಸ ಸರಿಯಾಗಿ ಆಗುತ್ತಿಲ್ಲ. ಅವರು ಇಲ್ಲಿ ಏನು ಮಾಡುತ್ತಾರೆ? ಹೀಗಾಗಿ ಮನೆಗೆ ಹೋದರು.”
ಲಲ್ಲನ್ ಕೊಲ್ಕತ್ತಾದಲ್ಲಿಯೇ ಉಳಿದುಕೊಂಡರು, ಏಕೆಂದರೆ ಅವರು ಊರಿನಲ್ಲಿ ಪಕ್ಕಾ ಮನೆ ನಿರ್ಮಿಸಲು ತನ್ನ ಗ್ರಾಮದ ಮಹಾಜನರಿಂದ 1 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದಾರೆ. ಅವರು ಹಿಂತಿರುಗಿ ಹೋದರೆ, ಸಾಲ ನೀಡಿದವರು ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದರು. ಆದರೆ ಸದ್ಯಕ್ಕೆ ಅದನ್ನು ಹಿಂತಿರುಗಿಸುವ ಪರಿಸ್ಥಿತಿಯಲ್ಲಿಲ್ಲ.
ಸಾಂಕ್ರಾಮಿಕ ರೋಗ ಹರಡುವ ಮೊದಲು, ಲಲ್ಲನ್ ಬೆಳಿಗ್ಗೆ 6 ಗಂಟೆಗೆ ಕೆಲಸವನ್ನು ಪ್ರಾರಂಭಿಸಿ ರಾತ್ರಿ 10 ಗಂಟೆಯ ಹೊತ್ತಿಗೆ ನಿಲ್ಲಿಸುತ್ತಿದ್ದರು. ಆಗ ಅವರು ದಿನಕ್ಕೆ 200ರಿಂದ 300 ರೂಪಾಯಿಗಳ ತನಕ ದುಡಿಯುತ್ತಿದ್ದರು., ಹತ್ತಿರದ ಪ್ರದೇಶಗಳಾದ ಗೋಲ್‌ಪಾರ್ಕ್, ಗರಿಯಾಹತ್ ಮತ್ತು ಬ್ಯಾಲಿಗುಂಗೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಇವೆಲ್ಲವೂ ರಿಕ್ಷಾ ಸ್ಟ್ಯಾಂಡ್‌ನಿಂದ ಸುಮಾರು 5 ಕಿಲೋಮೀಟರ್ ಒಳಗಿವೆ.
ಒಂದು ಕಿಲೋಮೀಟರ್ ದೂರ ರಿಕ್ಷಾ ಎಳೆಯಲು ಪಾಸ್ವಾನ್ ಸುಮಾರು 15 ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ -150 ಕಿಲೋಗಳಷ್ಟು ತೂಕವನ್ನು ಎಳೆಯುತ್ತಾರೆ - ಇದು ರಿಕ್ಷಾ ಮತ್ತು ಅದರ ಪ್ರಯಾಣಿಕರ ಒಟ್ಟು (ಅಂದಾಜು) ತೂಕ. "ನನ್ನ ಸಾಮಾನ್ಯ ಮಾರ್ಗದಿಂದ ನಾನು ಪ್ರಯಾಣಿಕರನ್ನು ಮತ್ತಷ್ಟು ದೂರ ಕರೆದೊಯ್ಯಬೇಕಾದಾಗ ಪ್ರಯಾಣದ ಕೊನೆಯಲ್ಲಿ ನನ್ನ ಕಾಲುಗಳು ಮತ್ತು ಭುಜಗಳು ನೋಯಲು ಪ್ರಾರಂಭಿಸುತ್ತವೆ. ದಣಿದು ಹೋಗುತ್ತೇನೆ" ಎಂದು ಅವರು ಹೇಳುತ್ತಾರೆ.
ಲಾಕ್‌ಡೌನ್‌ಗೂ ಮೊದಲು ಮೊದಲು ದೂರ ಮತ್ತು ಪ್ರಯಾಣಿಕರ ಸಂಖ್ಯೆಯನ್ನು ಅವಲಂಬಿಸಿ ಅವರು ಪ್ರತಿ ಟ್ರಿಪ್‌ಗೆ 30ರಿಂದ 50 ರೂ ಬಾಡಿಗೆ ಪಡೆಯುತ್ತಿದ್ದರು. “ಕೆಲವು ತಿಂಗಳು 8,000 ಹಾಗೂ ಉಳಿದ ತಿಂಗಳುಗಳಲ್ಲಿ ರೂ. 10,000, ಸಂಪಾದಿಸುತ್ತಿದ್ದೆ”ಎಂದು ಅವರು ಹೇಳುತ್ತಾರೆ. ಈ ಗಳಿಕೆಯಲ್ಲಿ, ಅವರು ರಿಕ್ಷಾ ಮಾಲೀಕರಿಗೆ ವಾರಕ್ಕೆ ರೂ. 200 ಬಾಡಿಗೆ ನೀಡಿ, ಊಟ ಮತ್ತು ಇತರ ಖರ್ಚುಗಳಿಗಾಗಿ 2,000 ರೂಪಾಯಿಗಳನ್ನು ಇರಿಸಿಕೊಂಡು, ಉಳಿದ ಹಣವನ್ನು ಅವರ ಕುಟುಂಬಕ್ಕಾಗಿ ಮನೆಗೆ ಕಳುಹಿಸುತ್ತಿದ್ದರು.
ಲಾಕ್‌ಡೌನ್ ಸಮಯದಲ್ಲಿ, ಅವರು ತಮ್ಮ ಉಳಿತಾಯದಿಂದ ಅಥವಾ ಅವರು ಗಳಿಸಿದ ಅಪರೂಪದ ಬಾಡಿಗೆಯ ಹಣದಿಂದ ಬದುಕು ನಡೆಸಿದರು. ಜೊತೆಗೆ ಸ್ಥಳೀಯ ಕೌನ್ಸಿಲರ್ ಹಾಗೂ ಲಾಭರಹಿತ ಸಂಸ್ಥೆಗಳಿಂದ ಕೆಲವು ಪಡಿತರ ವಸ್ತುಗಳನ್ನು ಸಹ ಪಡೆದರು - ಅನ್‌ಲಾಕ್ ಹಂತಗಳು ಪ್ರಾರಂಭವಾದ ನಂತರ ಇವುಗಳನ್ನು ವಿತರಿಸುವುದನ್ನು ನಿಲ್ಲಿಸಲಾಯಿತು.
ಲಾಕ್‌ಡೌನ್‌ಗೆ ಮೊದಲು, ಮಳೆಯಿದ್ದರೂ ಪಾಸ್ವಾನ್ ತನ್ನ ರಿಕ್ಷಾವನ್ನು ಹೊರತೆಗೆಯುತ್ತಿದ್ದರು. ಮಳೆಯಿಂದ ರಕ್ಷಿಸಿಕೊಳ್ಳಲು ಪ್ಲಾಸ್ಟಿಕ್ ಶೀಟ್ ಮೈಮೇಲೆ ಹೊದ್ದುಕೊಳ್ಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ, ಹೀಗೆ ಮಾಡುವುದು ಅಪಾಯಕಾರಿ ಎನ್ನುತ್ತಾರೆ. “ಮಳೆ ಬಂದಾಗ ನಾನು ನನ್ನ ರಿಕ್ಷಾದಲ್ಲಿಯೇ ಇರುತ್ತೇನೆ. ನಾನು ಯಾವುದೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಿಲ್ಲ. ಮಳೆಯಲ್ಲಿ ನೆನದು ಜ್ವರ ಬಂದರೆ, ಜನರು ನನಗೆ ಕರೋನಾ ಇದೆ ಎಂದು ಹೇಳುತ್ತಾರೆ. ಮೊದಲಿಗೆ, ನನಗೆ ಆಗಾಗ್ಗೆ ಜ್ವರ ಬರುತ್ತಿತ್ತು. ಆದರೆ ಆಗ ಪರಿಸ್ಥಿತಿ ಭಿನ್ನವಾಗಿತ್ತು. ನಾನು ಈಗ ಜ್ವರಕ್ಕೆ ಚಿಕಿತ್ಸೆ ಪಡೆಯಲು ಹೋದರೆ,ಕೊರೋನಾ ಪರೀಕ್ಷೆ ಮಾಡಿಸಲು ಹೇಳಲಾಗುತ್ತದೆ. ಆದ್ದರಿಂದ, ನಾವು [ರಿಕ್ಷಾ ಎಳೆಯುವವರು] ನೆನೆಯಲು ಹೆದರುತ್ತೇವೆ.”
ಮೇ 20ರಂದು ಕೊಲ್ಕತ್ತಾಕ್ಕೆ ಅಂಫಾನ್ ಚಂಡಮಾರುತ ಅಪ್ಪಳಿಸಿದ ದಿನವನ್ನು ಪಾಸ್ವಾನ್ ನೆನಪಿಸಿಕೊಳ್ಳುತ್ತಾರೆ. "ಆ ಚಂಡಮಾರುತವು ಬಹಳ ದೊಡ್ಡದಾಗಿತ್ತು" ಎಂದು ಅವರು ಹೇಳುತ್ತಾರೆ. ಅಂದು ಅವರು ರಿಕ್ಷಾ ಸ್ಟ್ಯಾಂಡ್‌ನಿಂದ ಮಧ್ಯಾಹ್ನ 3 ಗಂಟೆಗೆ ತಮ್ಮ ಕೋಣೆಗೆ ಹೋಗಲು ಹೊರಟಿದ್ದರು. "[ಕೋಣೆಯ] ಒಳಗಿನಿಂದ, ಮರಗಳು ಬೀಳುವ ಶಬ್ದಗಳನ್ನು ನಾನು ಕೇಳುತ್ತಿದ್ದೆ." ಅವರು ಕಾಕುಲಿಯಾದ ಕೊಳೆಗೇರಿ ಕಾಲೊನಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ (ರಿಕ್ಷಾ ಸ್ಟ್ಯಾಂಡ್‌ನಿಂದ ಸುಮಾರು 1.5 ಕಿಲೋಮೀಟರ್ ದೂರದಲ್ಲಿ) ಮತ್ತು ಪೂರ್ವ ಚಂಪಾರಣ್‌ನ ಇತರ ಎಂಟು ರಿಕ್ಷಾ ಎಳೆಯುವವರೊಂದಿಗೆ ಬಾಡಿಗೆ ಕೋಣೆಯನ್ನು ಹಂಚಿಕೊಂಡಿದ್ದಾರೆ.
ಚಂಡಮಾರುತವು ತಣಿದ ನಂತರ, ಅವರು ಮರುದಿನ ಮಧ್ಯಾಹ್ನ ಕೆಲಸಕ್ಕೆ ಮರಳಿದರು. “ನನಗೆ ಆಗ ಕೆಲವು ಪ್ರಯಾಣಿಕರು ಸಿಗುತ್ತಿದ್ದರು. ಕೆಲವರು ಟೋಲಿಗಂಜ್ ಮತ್ತು ಸೀಲ್ಡಾದಂತಹ ದೂರದ ಸ್ಥಳಗಳಿಗೆ ಹೋಗಲು ಬಯಸಿದ್ದರು. ಹಾಗಾಗಿ ನಾನು ಅವರಿಂದ 500 ರೂಪಾಯಿ, ಬಾಡಿಗೆ ಪಡೆದೆ” ಅವರು ಹೇಳುತ್ತಾರೆ.
“ಈಗ ಲಾಕ್‌ಡೌನ್ ಮುಗಿದಿದೆ, ಇನ್ನು ಮುಂದೆ ಅಂತಹ [ದೂರದ-ಪ್ರಯಾಣಿಕರು] ಸಿಗುವುದಿಲ್ಲ. ನನಗೆ ಹತ್ತಿರದ ಸ್ಥಳಗಳಿಗೂ [ಅನೇಕ] ಪ್ರಯಾಣಿಕರು ಸಿಗುವುತ್ತಿಲ್ಲ. ಇಂದು, ನಾನು ಇಲ್ಲಿಯವರೆಗೆ ಎರಡು ಬಾಡಿಗೆಯನ್ನು ಮಾತ್ರ ಸಾಗಿಸಿದ್ದೇನೆ” ಎಂದು ಅವರು ಕೆಲವು ವಾರಗಳ ಹಿಂದೆ ಹೇಳಿದ್ದರು. “ಒಂದು ರೂ. 30 ಮತ್ತು ಇನ್ನೊಂದು ರೂ. 40. ಜನರು ಇನ್ನು ಮುಂದೆ ರಿಕ್ಷಾಗಳನ್ನು ಬಳಸಲು ಬಯಸುವುದಿಲ್ಲ. ಅವರು ಕೊರೋನಾ ಬರಬಹುದೆಂದು ಭಯಪಡುತ್ತಾರೆ. ಅವರು ತಮ್ಮ ಮನೆಗಳಿಂದ ಹೊರಬರಲು ಹೆದರುತ್ತಾರೆ.”
ಲಲ್ಲನ್ ಅವರ ಅನೇಕ ಪ್ರಯಾಣಿಕರೆಂದರೆ ಹತ್ತಿರದ ಶಾಲೆಗಳಿಗೆ ಹೋಗುವ ಮಕ್ಕಳಾಗಿದ್ದರು. "ಈಗ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ" ಎಂದು ಅವರು ಹೇಳುತ್ತಾರೆ. “ಲಾಕ್‌ಡೌನ್ ಪ್ರಾರಂಭವಾದಾಗ, ಮಾಲಿಕ್ [ರಿಕ್ಷಾ ಮಾಲೀಕರು] ವಾರದ ಬಾಡಿಗೆಯನ್ನು ರೂ. 50ಕ್ಕೆ ಇಳಿಸಿದರು. ಆದರೆ ನಾನು ಈಗಲೂ ಹೆಚ್ಚು ಹಣವನ್ನು ಗಳಿಸುತ್ತಿಲ್ಲ.” ಕೆಲವೊಮ್ಮೆ, ಪರಿಸ್ಥಿತಿ ತೀರಾ ಬಿಗಡಾಯಿಸುತ್ತದೆ, ಪ್ರಯಾಣಿಕರು ಕಡಿಮೆ ಬಾಡಿಗೆಗಾಗಿ ಚೌಕಾಶಿ ಮಾಡಿದರೆ, ಪಾಸ್ವಾನ್ ಸುಲಭವಾಗಿ ಒಪ್ಪುತ್ತಾರೆ. "ನಾನೇನು ಮಾಡಲು ಸಾಧ್ಯ?" ಅವರು ಕೇಳುತ್ತಾರೆ.
ಶಾಲೆಗಳು ತೆರೆದಿದ್ದಾಗ ಮತ್ತು ರಸ್ತೆಗಳಲ್ಲಿ ಸಾಕಷ್ಟು ದಟ್ಟಣೆ ಇದ್ದಾಗ, ಪಾಸ್ವಾನ್ ಹೇಳುತ್ತಾರೆ, “ಪೊಲೀಸರು ನಮ್ಮ ಸಂಚಾರವನ್ನು ನಿರ್ಬಂಧಿಸುತ್ತಾರೆ. ಕೆಲವೊಮ್ಮೆ, ಅವರು ‘ನೋ ಎಂಟ್ರಿ’ ಬೋರ್ಡ್‌ಗಳನ್ನು ಹಾಕುತ್ತಿದ್ದರು. ಅಂತಹ ಸಮಯದಲ್ಲಿ ಖಾಲಿ [ಹಿಂದಿನ] ರಸ್ತೆಗಳನ್ನು ತೆಗೆದುಕೊಳ್ಳುತ್ತೇನೆ.” ಈ ಅಡೆತಡೆಗಳ ಹೊರತಾಗಿಯೂ, ಪಾಸ್ವಾನ್ ಸೈಕಲ್ ರಿಕ್ಷಾಗಳಿಗಿಂತ ಕೈಯಿಂದ ಎಳೆಯುವ ರಿಕ್ಷಾಕ್ಕೇ ಆದ್ಯತೆ ನೀಡುತ್ತಾರೆ. "ಪೊಲೀಸರು ಅವರನ್ನು ಸಹ ಹಿಡಿಯುತ್ತಾರೆ, ಆದರೆ ನಾವು ಕಡಿಮೆ ಸಿಕ್ಕಿಹಾಕಿಕೊಳ್ಳುತ್ತೇವೆ" ಎಂದು ನಗುತ್ತಾ ಹೇಳುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ, ಪಶ್ಚಿಮ ಬಂಗಾಳ ಸರ್ಕಾರವು ಕೊಲ್ಕತ್ತಾದ ಕೈಯಿಂದ ಎಳೆಯುವ ರಿಕ್ಷಾಗಳನ್ನು ನಿಷೇಧಿಸಲು ಅಥವಾ ನಿರ್ಬಂಧಿಸಲು ಕ್ರಮಗಳನ್ನು ಕೈಗೊಂಡಿದೆ, ಇದು ಹಲವು ರೀತಿಯಲ್ಲಿ, ಕತೆಗಳ ಮೂಲಕ ಈ ನಗರದ ಇತಿಹಾಸದ ಭಾಗವಾಗಿದೆ. ಈ ರಿಕ್ಷಾಗಳನ್ನು ತೆರವುಗೊಳಿಸುವ ಸಲುವಾಗಿ 2006ರಲ್ಲಿ ರಾಜ್ಯವು ಕಲ್ಕತ್ತಾ ಹ್ಯಾಕ್ನಿ-ಕ್ಯಾರಿಯೇಜ್ (ತಿದ್ದುಪಡಿ) ಮಸೂದೆಯನ್ನು ಪ್ರಸ್ತಾಪಿಸಿತು. ಇದನ್ನು ಪ್ರಶ್ನಿಸಲಾಯಿತೆಂದು ಪತ್ರಿಕಾ ವರದಿಗಳು ಹೇಳುತ್ತವೆ, ಮತ್ತು ಕೊಲ್ಕತ್ತಾ ಹೈಕೋರ್ಟ್ ಮಸೂದೆಯನ್ನು ತಡೆಹಿಡಿಯಲು ಆದೇಶಿಸಿತು. ಕೊಲ್ಕತ್ತಾದ ಅಧಿಕಾರಿಗಳು 2005ರಿಂದ ಯಾವುದೇ ಹೊಸ ಪರವಾನಗಿಗಳನ್ನು ನೀಡಿಲ್ಲವೆಂದು ಹೊಸ ವರದಿಗಳು ಹೇಳುತ್ತವೆ.
ಹಳೆಯ ಕೈ ರಿಕ್ಷಾಗಳು ಇನ್ನೂ ಚಲಿಸುತ್ತಿವೆ, ಮತ್ತು ಅವುಗಳ ಸಂಖ್ಯೆಗಳ ಅಂದಾಜುಗಳು ಬದಲಾಗುತ್ತವೆ. 2005ರ ಸಮೀಕ್ಷೆಯನ್ನು ಉಲ್ಲೇಖಿಸಿ (ಈ ವರದಿಗಾರನೊಂದಿಗೆ ಮಾತನಾಡುತ್ತಾ) ಅಖಿಲ ಬಂಗಾಳ ರಿಕ್ಷಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಖ್ತಾರ್ ಅಲಿ, ಕೋಲ್ಕತ್ತಾದಲ್ಲಿ 5,935 ಕೈ ರಿಕ್ಷಾಗಳಿವೆ ಎಂದು ಹೇಳುತ್ತಾರೆ. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಉಲ್ಲೇಖಿಸಿ 2015ರ ಪತ್ರಿಕೆ ವರದಿಗಳು ಈ ಸಂಖ್ಯೆಯನ್ನು ಸುಮಾರು 2,000ವೆಂದು ಹೇಳಿವೆ. ಇವೆಲ್ಲವೂ ಪರವಾನಗಿ ಪಡೆದಿಲ್ಲ ಎಂದು ವರದಿಗಳು ಹೇಳುತ್ತವೆ.
ಮತ್ತು ಈಗ, ಪಶ್ಚಿಮ ಬಂಗಾಳದಲ್ಲಿ ಲಾಕ್‌ಡೌನ್ ತೆರವುಗೊಳಿಸಿದ ಸುಮಾರು ಆರು ತಿಂಗಳ ನಂತರ, ಲಲ್ಲನ್ ದಿನಕ್ಕೆ 100 ಅಥವಾ 150 ರೂ ಸಂಪಾದಿಸುತ್ತಾರೆ. ಬೆಳಿಗ್ಗೆ ಅವರು ಆಗಾಗ್ಗೆ ಬ್ಯಾಲಿಗಂಜ್ ನಿಲ್ದಾಣದಲ್ಲಿ ಕಾಯುತ್ತಾರೆ, ಅಲ್ಲಿ ಅವರು ಈಗ ಸುಲಭವಾಗಿ ಪ್ರಯಾಣಿಕರನ್ನು ಸಂಪಾದಿಸಬಹುದು. ಅವರು ಈಗೀಗ ಸ್ವಲ್ಪ ಹಣವನ್ನು ಉಳಿಸಲು ಪ್ರಾರಂಭಿಸಿದ್ದಾರೆ (ಅದನ್ನು ಅವರು ಬಿಹಾರದ ಪಾನ್‌ವಾಲ ಒಬ್ಬರ ಬಳಿ ಇರಿಸುತ್ತಾರೆ) ಮತ್ತು ಅದನ್ನು ಅವರ ಕುಟುಂಬಕ್ಕೆ ಕಳುಹಿಸುತ್ತಾರೆ.
ಪಾಸ್ವಾನ್ ಪ್ರತಿ ಮೂರರಿಂದ ಐದು ತಿಂಗಳಿಗೊಮ್ಮೆ ತನ್ನಊರಿಗೆ ಭೇಟಿ ನೀಡುತ್ತಿದ್ದರು ಮತ್ತು ತಂದೆ, ತಾಯಿ ಮತ್ತು ಹೆಂಡತಿಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. "ನನ್ನ ಕುಟುಂಬವು ಸಾಮಾನ್ಯವಾಗಿ ನಮ್ಮ ಭೂಮಿಯಲ್ಲಿ ಬೆಳೆದ ಅಕ್ಕಿ ಮತ್ತು ಗೋಧಿಯನ್ನು ಆಹಾರಕ್ಕಾಗಿ ಬಳಸುತ್ತದೆ" ಎಂದು ಅವರು ಹೇಳುತ್ತಾರೆ. ಮನೆ ಬಳಕೆಗೆ ಸಾಕಾಗಿ ಮಿಕ್ಕಿದ್ದನ್ನು ಮಾರುತ್ತೇವೆ. ಸಾಮಾನ್ಯವಾಗಿ ಐದು ಕ್ವಿಂಟಾಲ್ ಮಾರುತ್ತೇವೆ ಒಮ್ಮೊಮ್ಮೆ 10 ಕ್ವಿಂಟಾಲ್ ಕೂಡ ಮಾರುತ್ತೇವೆ. ಆದರೆ ಈ ವರ್ಷ, ಪ್ರವಾಹದಿಂದ [ಜುಲೈ 2020 ರಲ್ಲಿ] ಬೆಳೆಗಳು ನಾಶವಾದವು. ನಮ್ಮ ಕುಟುಂಬದ ಆಹಾರಕ್ಕೂ ಈ ಬಾರಿ ಧಾನ್ಯಗಳಿಲ್ಲ ಇನ್ನು ಮಾರುವುದು ದೂರದ ಮಾತು ಬಿಡಿ." ಎಂದು ಅವರು ಹೇಳುತ್ತಾರೆ.
ಅವರು ಈ ವರ್ಷದ ಫೆಬ್ರವರಿಯಿಂದ ರಘು ನಾಥಪುರಕ್ಕೆ ಹೋಗಿಲ್ಲ, ಅವರ ಹೆಣ್ಣುಮಕ್ಕಳಾದ ಏಳು ವರ್ಷದ ಕಾಜಲ್ ಮತ್ತು ನಾಲ್ಕು ವರ್ಷದ ಕರಿಷ್ಮಾ 10 ತಿಂಗಳ ನಂತರ ಅವರನ್ನು ನೋಡಲು ಆತಂಕದಿಂದ ಕಾಯುತ್ತಿದ್ದಾರೆಂದು ಹೇಳುತ್ತಾರೆ. “ನಾನು ಯಾವಾಗ ಮನೆಗೆ ಬರುತ್ತೇನೆ ಎಂದು ನನ್ನ ಮಕ್ಕಳು ಕೇಳುತ್ತಾರೆ. [ನವೆಂಬರ್‌ನಲ್ಲಿ] ದೀಪಾವಳಿಯ ಸಂದರ್ಭದಲ್ಲಿ ನಾನು ಅಲ್ಲಿಗೆ ಬರುತ್ತೇನೆ ಎಂದು ನಾನು ಅವರಿಗೆ ಹೇಳಿದೆ” ಎಂದು ಅವರು ಹೇಳುತ್ತಾರೆ. ಮಹಾಜನ್ ಅವರಲ್ಲಿ ಸಾಲ ಬಾಕಿ ಇರುವುದರಿಂದ ಅವರಿಗೆ ಊರಿಗೆ ಹೋಗಲು ಸಾಧ್ಯವಾಗಲಿಲ್ಲ.
ಹೀಗಾಗಿ ಅವರು ಸ್ಟ್ಯಾಂಡ್‌ನಲ್ಲಿರುವ ಇತರ ರಿಕ್ಷಾ ಎಳೆಯುವವರೊಂದಿಗೆ, ಕೆಲವೊಮ್ಮೆ ಕಾರ್ಡ್‌ಗಳನ್ನು ಆಡುತ್ತಾ ಅಥವಾ ಸಣ್ಣ ನಿದ್ರೆ ಮಾಡುತ್ತಾ ಕಾಯುತ್ತಾರೆ. "ಈ ಕೆಲಸದಿಂದ ನನಗೆ ಭವಿಷ್ಯದಲ್ಲಿ ಯಾವುದೇ ಪ್ರಯೋಜನವಿಲ್ಲ" ಎಂದು ಅವರು ಹೇಳುತ್ತಾರೆ. "ಆದರೆ ನನ್ನ ಮಕ್ಕಳಿಗಾಗಿ ನನಗೆ ಎಲ್ಲಿಯವರೆಗೆ ಸಾಧ್ಯವೋ ಅಷ್ಟು ಕಾಲ ಇದನ್ನು ಮುಂದುವರಿಸುತ್ತೇನೆ."
ಅನುವಾದ: ಶಂಕರ ಎನ್. ಕೆಂಚನೂರು