“ಘರೋ ಜಾವೋ ರಜ್ ಕೇ, ಕಾಮ್ ಹೋಗಾ ಗಜ್ ಕೇ [ನೀವು ಮನೆಯಿಂದ ಹೊರಡುವಾಗ ಹೊಟ್ಟೆ ತುಂಬಾ ಉಂಡು ಹೊರಟರೆ ನೀವು ಹೋಗುತ್ತಿರುವ ಕೆಲಸ ಯಶಸ್ವಿಯಾಗುತ್ತದೆ].”
ಇದು ಶಹಜಹಾನ್ಪುರದಲ್ಲಿ ಪ್ರತಿಭಟನಾ ನಿರತ ರೈತರಿಗಾಗಿ ಲಂಗರ್ ನಡೆಸುತ್ತಿರುವ ಬಿಲವಾಲ್ ಸಿಂಗ್ ಅವರ ಸರಳ ತತ್ವ. "ಈ ಸರ್ಕಾರಕ್ಕೆ ಹಸಿದ ಹೊಟ್ಟೆಯ ಹೋರಾಟಗಾರರೊಂದಿಗೆ ವ್ಯವಹರಿಸುವುದು ಅಭ್ಯಾಸವಾಗಿ ಹೋಗಿದೆ." ಎಂದು ಅವರು ಪಂಜಾಬಿಯಲ್ಲಿ ಹೇಳುತ್ತಾ, ಮುಂದುವರಿದು "ಸಾಕಷ್ಟು ತಿಂದು ಸರಕಾರವನ್ನು ಎದುರಿಸುವವರನ್ನು ಹೇಗೆ ನಿಭಾಯಿಸುತ್ತಾರೆಂದು ನೋಡೋಣ." ಎನ್ನುತ್ತಾರೆ.
ರಾಜಸ್ಥಾನದ ಗಂಗಾನಗರ ಜಿಲ್ಲೆಯ 41 ಆರ್‌ಬಿ ಗ್ರಾಮದ ರೈತ ಬಿಲಾವಾಲ್ (32) ಮತ್ತು ಅವರ ಸೋದರಸಂಬಂಧಿ ರಶ್ವಿಂದರ್ ಸಿಂಗ್ (30) ರಾಜಸ್ಥಾನ-ಹರಿಯಾಣ ಗಡಿಯಲ್ಲಿರುವ ದೆಹಲಿಯ ದಕ್ಷಿಣಕ್ಕೆ 120 ಕಿಲೋಮೀಟರ್ ದೂರದ ಶಹಜಹಾನಪುರದಲ್ಲಿ ಕ್ಯಾಂಪಿಂಗ್ ಮಾಡುತ್ತಿರುವ ಸಾವಿರಾರು ಪ್ರತಿಭಟನಾಕಾರರಲ್ಲಿ ಇವರೂ ಇದ್ದಾರೆ.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಮುಖ್ಯವಾಗಿ ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದಿಂದ ಬಂದಿರುವ ಲಕ್ಷಾಂತರ ರೈತರು ಮತ್ತು ಹಲವಾರು ಕೃಷಿ ಒಕ್ಕೂಟಗಳು ನವೆಂಬರ್ 26 ರಿಂದ ಧರಣಿ ಪ್ರತಿಭಟನೆಯಲ್ಲಿ ತೊಡಗಿರುವ ದೆಹಲಿ ಮತ್ತು ಸುತ್ತಮುತ್ತಲಿನ ತಾಣಗಳಲ್ಲಿ ಇದೂ ಒಂದು.
ಈ ಕಾನೂನುಗಳನ್ನು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಲಾಯಿತು ಮತ್ತು ಆ ತಿಂಗಳ 20ರಂದು ಪ್ರಸ್ತುತ ಸರ್ಕಾರವು ಕಾಯಿದೆಗಳನ್ನು ಕಾರ್ಯರೂಪಕ್ಕೆ ತರಲು ಆತುರಪಡಿಸಿತು. ರೈತರು ಈ ಕಾನೂನುಗಳನ್ನು ತಮ್ಮ ಜೀವನೋಪಾಯಕ್ಕೆ ವಿನಾಶಕಾರಿ ಎಂದು ನೋಡುತ್ತಾರೆ ಏಕೆಂದರೆ ದೊಡ್ಡ ಕಾರ್ಪೊರೇಟ್‌ಗಳು ರೈತರು ಮತ್ತು ಕೃಷಿಯ ಮೇಲೆ ಇನ್ನೂ ಹೆಚ್ಚಿನ ಬಲವನ್ನು ಹೊಂದುತ್ತಾರೆ. ಕನಿಷ್ಠ ಬೆಂಬಲ ಬೆಲೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು, ಸರ್ಕಾರಿ ಖರೀದಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಈ ಕಾಯಿದೆಗಳು ಕೃಷಿಕರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ನಾಶಗೊಳಿಸುತ್ತವೆ.







