ಸಾಯುವ ದಿನದವರೆಗೂ, 22 ವರ್ಷದ ಗುರುಪ್ರೀತ್ ಸಿಂಗ್ ಅವರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ತಮ್ಮ ಹಳ್ಳಿಯಲ್ಲಿ ರೈತರನ್ನು ಒಟ್ಟುಗೂಡಿಸುತ್ತಿದ್ದರು. ಅವರ ತಂದೆ, ಜಗ್ತಾರ್ ಸಿಂಗ್ ಕಟಾರಿಯಾ, ವಾಯುವ್ಯ ಪಂಜಾಬ್‌ನ ತಮ್ಮ ಹಳ್ಳಿಯಲ್ಲಿ ಐದು ಎಕರೆ ಜಮೀನು ಹೊಂದಿರುವ ರೈತರಾಗಿದ್ದಾರೆ, ಅವರು ಮಗನ ಕೊನೆಯ ಭಾಷಣವನ್ನು ಸ್ಮರಿಸಿಕೊಳ್ಳುತ್ತಾರೆ. ದೆಹಲಿಯ ಗಡಿಯಲ್ಲಿ ಇತಿಹಾಸ ನಿರ್ಮಿಸಲಾಗುತ್ತಿದೆ ಮತ್ತು ಅದಕ್ಕೆ ಕೊಡುಗೆ ನೀಡಲು ಅವರು ಅಲ್ಲಿಗೆ ಹೋಗಬೇಕು ಎಂದು ಹೇಳಿದಾಗ ಸುಮಾರು 15 ಪ್ರೇಕ್ಷಕರು ಅವರ ಮಾತನ್ನು ಗಮನವಿಟ್ಟು ಕೇಳುತ್ತಿದ್ದರು. 2020ರ ಡಿಸೆಂಬರ್‌ನಲ್ಲಿ ಬೆಳಿಗ್ಗೆ ನಡೆದ ರೋಮಾಂಚನಕಾರಿ ಭಾಷಣದ ಅಂತ್ಯದ ವೇಳೆಗೆ, ಆಗಲೇ ತಮ್ಮ ತೋಳುಗಳನ್ನು ಏರಿಸಿಕೊಂಡು, ಯುವಕರ ತಂಡವೊಂದು ರಾಷ್ಟ್ರದ ರಾಜಧಾನಿ ದೆಹಲಿಗೆ ಮೆರವಣಿಗೆ ಹೊರಡಲು ಸಿದ್ಧವಾಗಿತ್ತು.

ಅವರು ಕಳೆದ ವರ್ಷ ಡಿಸೆಂಬರ್ 14ರಂದು ಪಂಜಾಬ್‌ನ ಶಾಹಿದ್ ಭಗತ್ ಸಿಂಗ್ ನಗರ ಜಿಲ್ಲೆಯ ಬಾಲಾಚೌರ್ ತೆಹಸಿಲ್‌ನಲ್ಲಿರುವ ತಮ್ಮ ಗ್ರಾಮವಾದ ಮಕೋವಾಲ್‌ನಿಂದ ಹೊರಟಿದ್ದರು. ಆದರೆ ಸುಮಾರು 300 ಕಿಲೋಮೀಟರ್ ಪ್ರಯಾಣದಲ್ಲಿ, ಹರಿಯಾಣದ ಅಂಬಾಲಾ ಜಿಲ್ಲೆಯ ಮೊಹ್ರಾ ಬಳಿ ಭಾರೀ ವಾಹನವೊಂದು ಅವರ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆಯಿತು. "ಆಗ ಭಾರೀ ಘರ್ಷಣೆ ಸಂಭವಿಸಿದ್ದರಿಂದಾಗಿ ಗುರ್‌ಪ್ರೀತ್ ಮೃತಪಟ್ಟಿದ್ದರು. ಅವನ ಜೀವನವು ಚಳುವಳಿಗೆ ನೀಡಿದ ಕೊಡುಗೆ” ಎಂದು ಪಟಿಯಾಲಾದ ಮೋದಿ ಕಾಲೇಜಿನಲ್ಲಿ ಬಿಎ ವಿದ್ಯಾರ್ಥಿಯಾಗಿದ್ದ ತಮ್ಮ ಮಗನ ಬಗ್ಗೆ ಜಗತಾರ್ ಸಿಂಗ್ ಅವರು ಹೇಳುತ್ತಿದ್ದರು.

ಸೆಪ್ಟೆಂಬರ್ 2020ರಲ್ಲಿ ಭಾರತ ಸರ್ಕಾರವು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧದ ಚಳವಳಿಯಲ್ಲಿ ಭಾಗವಹಿಸಿ ಪ್ರಾಣ ಕಳೆದುಕೊಂಡ 700ಕ್ಕೂ ಹೆಚ್ಚು ಹೋರಾಟಗಾರರಲ್ಲಿ ಗುರುಪ್ರೀತ್ ಕೂಡಾ ಒಬ್ಬರು. ಈ ಕಾನೂನುಗಳ ವಿರುದ್ಧ ದೇಶದಾದ್ಯಂತ ರೈತರು ಪ್ರತಿಭಟನೆಗಳನ್ನು ದಾಖಲಿಸಿ, ಈ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪ್ರಕ್ರಿಯೆಯನ್ನು ನಾಶಪಡಿಸುತ್ತವೆ, ಖಾಸಗಿ ವ್ಯಾಪಾರಿಗಳು ಮತ್ತು ದೊಡ್ಡ ಕಂಪನಿಗಳಿಗೆ ಬೆಳೆಗಳ ಬೆಲೆಗಳನ್ನು ನಿಗದಿಪಡಿಸಲು ಮತ್ತು ನಿಯಂತ್ರಿಸಲು ಮುಕ್ತ ಅವಕಾಶವನ್ನು ನೀಡುತ್ತವೆ ಮತ್ತು ಆ ಮೂಲಕ ಅವರನ್ನು ಹೆಚ್ಚು ಸಮೃದ್ಧಗೊಳಿಸುತ್ತದೆ ಎಂದು ಅವರು ಹೇಳುತ್ತಿದ್ದರು. ಪ್ರತಿಭಟನೆಗಳು ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರನ್ನು ಒಳಗೊಂಡಿತ್ತು ಮತ್ತು ನವೆಂಬರ್ 26, 2020ರಿಂದ ರೈತರು ದೆಹಲಿಯ ಹೊಸ್ತಿಲಲ್ಲಿ ಜಮಾಯಿಸಿದ್ದರು. ದೆಹಲಿ-ಹರಿಯಾಣ ಗಡಿಯಲ್ಲಿರುವ ಸಿಂಘು ಮತ್ತು ಟಿಕ್ರಿ ಮತ್ತು ದೆಹಲಿ-ಉತ್ತರಪ್ರದೇಶದ ಗಡಿಯಲ್ಲಿರುವ ಗಾಜಿಪುರದ ರಸ್ತೆಗಳಲ್ಲಿ ಅವರು ತಮ್ಮ ಪ್ರತಿಭಟನಾ ಶಿಬಿರಗಳನ್ನು ಸ್ಥಾಪಿಸಿದ್ದರು.

ಪ್ರತಿಭಟನೆಗಳು ಪ್ರಾರಂಭವಾದ ಒಂದು ವರ್ಷದ ನಂತರ, ಪ್ರಧಾನಿ ಮೋದಿಯವರು ನವೆಂಬರ್ 19, 2021ರಂದು ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ಕೃಷಿ ಕಾನೂನುಗಳ ರದ್ದತಿ ಮಸೂದೆ 2021 ಅನ್ನು ನವೆಂಬರ್ 29ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು, ಆದರೆ ಚಳುವಳಿಯು ಡಿಸೆಂಬರ್ 11, 2021ರಂದು ಕೊನೆಗೊಂಡಿತು. ಈಗ ರೈತ ಸಂಘಗಳು ಸಲ್ಲಿಸಿದ ಬಹುತೇಕ ಬೇಡಿಕೆಗಳನ್ನು ಸರ್ಕಾರವು ಒಪ್ಪಿಕೊಂಡಿದೆ.

ಈ ಸುದೀರ್ಘ ಚಳುವಳಿ ವೇಳೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕೆಲವು ಕುಟುಂಬಗಳೊಂದಿಗೆ ನಾನು ವೈಯಕ್ತಿಕವಾಗಿ ಮತ್ತು ಫೋನ್ ಮೂಲಕ ಮಾತನಾಡಿದ್ದೇನೆ. ಅವರು ಆಘಾತ ಮತ್ತು ದುಃಖದ ಜೊತೆಗೆ ಆಕ್ರೋಶವನ್ನು ವ್ಯಕ್ತಪಡಿಸುತ್ತಾ, ಒಂದು ಮಹತ್ವದ ಉದ್ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಜಿಸಿದ ಹುತಾತ್ಮರ ನಡುವೆ ತಮ್ಮವರನ್ನೂ ಸ್ಮರಿಸಿಕೊಳ್ಳುತ್ತಿದ್ದರು.

"ನಾವು ರೈತರ ಗೆಲುವನ್ನು ಆಚರಿಸುತ್ತೇವೆ, ಆದರೆ ಕಾನೂನನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪ್ರಧಾನಿ ಮೋದಿಯವರ ಘೋಷಣೆ ನಮಗೆ ಸಂತಸ ತಂದಿಲ್ಲ." ಎಂದು ಜಗತಾರ್ ಸಿಂಗ್ ಕಟಾರಿಯಾ ಹೇಳುತ್ತಿದ್ದರು. “ರೈತರಿಗೆ ಸರಕಾರ ಯಾವುದೇ ಒಳಿತನ್ನು ಮಾಡಿಲ್ಲ. ಇದು ರೈತರು ಮತ್ತು ಹುತಾತ್ಮರಾದವರನ್ನು ಅವಮಾನಿಸಿದೆ.” ಎಂದು ಆಕ್ರೋಶ ವ್ಯಕ್ತಪಡಿಸಿದರು.

From the left: Gurpreet Singh, from Shahid Bhagat Singh Nagar district, and Ram Singh, from Mansa district, Punjab; Navreet Singh Hundal, from Rampur district, Uttar Pradesh
From the left: Gurpreet Singh, from Shahid Bhagat Singh Nagar district, and Ram Singh, from Mansa district, Punjab; Navreet Singh Hundal, from Rampur district, Uttar Pradesh
From the left: Gurpreet Singh, from Shahid Bhagat Singh Nagar district, and Ram Singh, from Mansa district, Punjab; Navreet Singh Hundal, from Rampur district, Uttar Pradesh

ಎಡದಿಂದ : ಶಾಹಿದ್ ಭಗತ್ ಸಿಂಗ್ ನಗರ ಜಿಲ್ಲೆಯಿಂದ ಗುರುಪ್ರೀತ್ ಸಿಂಗ್ ಮತ್ತು ಪಂಜಾಬ್ ಮಾನಸಾ ಜಿಲ್ಲೆಯಿಂದ ರಾಮ್ ಸಿಂಗ್ ; ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ನವರೀತ್ ಸಿಂಗ್ ಹುಂದಾಲ್

“ನಮ್ಮ ರೈತರು ಸಾಯುತ್ತಿದ್ದಾರೆ. ನಮ್ಮ ಸೈನಿಕರೂ ಪಂಜಾಬ್ ಮತ್ತು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಆದರೆ ಸರ್ಕಾರವು ಮಾತ್ರ ಹುತಾತ್ಮರ ಬಗ್ಗೆ ಯಾವುದೇ ಕಾಳಜಿಯನ್ನು ವಹಿಸುವುದಿಲ್ಲ - ಅದು ದೇಶದ ಗಡಿಯಲ್ಲಿರುವವರಾಗಿರಲಿ ಅಥವಾ ದೇಶದ ಒಳಗಿರಲಿ. ಇದು ಗಡಿಯಲ್ಲಿ ಹೋರಾಡುವ ಯೋಧರನ್ನು ಮತ್ತು ಇಲ್ಲಿ ಆಹಾರವನ್ನು ಬೆಳೆಯುವ ರೈತರನ್ನು ವ್ಯಂಗ್ಯ ಮಾಡಿದೆ ” ಎಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಬುಧ್ಲಾಡಾ ತಹಸಿಲ್‌ನ ದೋದ್ರಾ ಗ್ರಾಮದ 61 ವರ್ಷದ ಜ್ಞಾನ್ ಸಿಂಗ್ ಹೇಳಿದರು.

ಪ್ರತಿಭಟನೆಯ ಆರಂಭಿಕ ದಿನಗಳಲ್ಲಿ ಜ್ಞಾನ್ ಸಿಂಗ್ ತಮ್ಮ ಸಹೋದರ ರಾಮ್ ಸಿಂಗ್ (51) ಅವರನ್ನು ಕಳೆದುಕೊಂಡರು. ರಾಮ್ ಅವರು ರೈತ ಸಂಘಟನೆಯಾದ ಭಾರತಿ ಕಿಸಾನ್ ಯೂನಿಯನ್ (ಏಕ್ತಾ ಉಗ್ರಣ್) ನ ಸದಸ್ಯರಾಗಿದ್ದರು. ಮಾನ್ಸಾ ರೈಲು ನಿಲ್ದಾಣದಲ್ಲಿ ಪ್ರತಿಭಟನಾ ಸ್ಥಳಕ್ಕೆ ಹೋಗಲು ಕಟ್ಟಿಗೆಯನ್ನು ಸಂಗ್ರಹಿಸುತ್ತಿದ್ದರು. ಆದರೆ ಕಳೆದ ವರ್ಷ ನವೆಂಬರ್ 24ರಂದು ಅವರ ಮೇಲೆ ಮರದ ದಿಮ್ಮಿ ಬಿದ್ದಿದ್ದರಿಂದಾಗಿ ಸಾವನ್ನಪ್ಪಿದ್ದರು."ಅವರ ಐದು ಪಕ್ಕೆಲುಬುಗಳು ಮುರಿದಿದ್ದಲ್ಲದೆ ಶ್ವಾಸಕೋಶವೂ ಹಾನಿಗೊಂಡಿತ್ತು" ಎಂದು ಜ್ಞಾನ್ ಸಿಂಗ್ ಅವರು ಹೇಳುವಾಗ, ಅವರ ಗಟ್ಟಿ ಧ್ವನಿಯು ಅವರ ನೋವನ್ನು ಮರೆಮಾಚುತಿತ್ತು.

"ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು ಘೋಷಿಸಿದಾಗ ನಮ್ಮ ಹಳ್ಳಿಯ ಜನರು ಪಟಾಕಿಗಳನ್ನು ಸಿಡಿಸಿದರು ಮತ್ತು ದೀಪಗಳನ್ನು ಬೆಳಗಿಸಿದರು, ಆದರೆ ನಮ್ಮ ಕುಟುಂಬದಲ್ಲಿ ಹುತಾತ್ಮರಾಗಿರುವುದರಿಂದ ನಾವು ಸಂಭ್ರಮವನ್ನು ಆಚರಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ನಮಗೆ ಸಂತಸವಾಗಿದೆ.” ಎಂದು ಜ್ಞಾನ್ ಹೇಳಿದರು.

ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಬಹಳ ಹಿಂದೆಯೇ ರದ್ದುಗೊಳಿಸಬೇಕಿತ್ತು ಎಂದು ಉತ್ತರ ಪ್ರದೇಶದ (ಯುಪಿ) ರಾಮ್‌ಪುರ ಜಿಲ್ಲೆಯ ಬಿಲಾಸ್‌ಪುರ್ ತೆಹಸಿಲ್‌ನ ದಿಬ್ಡಿಬಾ ಗ್ರಾಮದ ರೈತ 46 ವರ್ಷದ ಸಿರ್ವಿಕ್ರಂಜೀತ್ ಸಿಂಗ್ ಹುಂಡಾಲ್ ಹೇಳುತ್ತಾರೆ. ಆದರೆ ರೈತ ಮುಖಂಡರೊಂದಿಗೆ 11 ಸುತ್ತಿನ ಮಾತುಕತೆ ನಡೆಸಿದ ನಂತರವೂ ಸರ್ಕಾರ ಅದನ್ನು ಮಾಡಲಿಲ್ಲ. ಜನವರಿ 26, 2021ರಂದು ದೆಹಲಿಯಲ್ಲಿ ರೈತರ ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾಗ ವಿಕ್ರಮ್‌ಜಿತ್ ಅವರ 25 ವರ್ಷದ ಮಗ ನವರೀತ್ ಸಿಂಗ್ ಹುಂಡಾಲ್ ಸಾವನ್ನಪ್ಪಿದರು. ಅವರು ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ದೆಹಲಿ ಪೊಲೀಸರು ಹಾಕಿದ್ದ ಭದ್ರತಾ ಬ್ಯಾರಿಕೇಡ್‌ಗಳ ಮೇಲೆ ಟ್ರಾಕ್ಟರ್ ಅನ್ನು ಚಲಾಯಿಸಲು ಮುಂದಾಗುತ್ತಿದ್ದಾಗ. ಅದಕ್ಕೂ ಮುನ್ನವೇ ನವರೀತ್ ಮೇಲೆ ಗುಂಡು ಹಾರಿಸಲಾಗಿದೆ,ಇದನ್ನು ಪೋಲಿಸರೇ ಮಾಡಿದ್ದಾರೆ ಎಂದು ಅವರ ತಂದೆ ಆರೋಪಿಸಿದ್ದಾರೆ. ಆದಾಗ್ಯೂ, ಆ ವೇಳೆ, ಟ್ರ್ಯಾಕ್ಟರ್ ಉರುಳಿ ಅದರಿಂದ ಉಂಟಾದ ಗಾಯಗಳಿಂದಾಗಿ ನವ್ರೀತ್ ಸಾವನ್ನಪ್ಪಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. “ಈಗ ತನಿಖೆ ನಡೆಯುತ್ತಿದೆ," ಎಂದು ಸಿರ್ವಿಕ್ರಂಜೀತ್ ಹೇಳಿದರು.

“ಅವರು ಹೋದ ನಂತರ ಎಲ್ಲವೂ ತಲೆಕೆಳಗಾದಂತಿದೆ, ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಸರ್ಕಾರವು ರೈತರ ಗಾಯಗಳಿಗೆ ಮುಲಾಮು ಹಚ್ಚುತ್ತಿಲ್ಲ. ಬದಲಾಗಿ ಅದು ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ತಂತ್ರವನ್ನು ಮಾಡುತ್ತಿದೆ, ಅದು ನಮ್ಮ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ.” ಎಂದು ಸಿರ್ವಿರ್ಕ್ರಮಜೀತ್ ಹೇಳುತ್ತಾರೆ.

ರೈತರ ಕುರಿತಾಗಿ ಸರ್ಕಾರದ ವರ್ತನೆ ಹೇಗಿದೆ ಎಂದರೆ ಜೀವಂತವಿರಲಿ ಅಥವಾ ಅವರು ಸತ್ತಿರಲಿ, ಒಟ್ಟಿನಲ್ಲಿ ತುಂಬಾ ಕೆಟ್ಟದಾಗಿ ಇದೆ ಎಂದು ಯುಪಿಯ ಬಹ್ರೈಚ್ ಜಿಲ್ಲೆಯ ಬಲಾಹಾ ಬ್ಲಾಕ್‌ನ ಭಟೆಹ್ತಾ ಗ್ರಾಮದ 40 ವರ್ಷದ ಜಗಜೀತ್ ಸಿಂಗ್ ಹೇಳುತ್ತಿದ್ದರು. “ನಾವು ಈ ಸರ್ಕಾರ ಅಧಿಕಾರಕ್ಕೆ ಬರಲು ಮತ ಚಲಾಯಿಸಿದ್ದೇವೆ. ಈಗ ಅವರು ನಮ್ಮನ್ನು 'ಖಲಿಸ್ತಾನಿ', 'ರಾಷ್ಟ್ರವಿರೋಧಿ' ಎಂದು ಕರೆಯುತ್ತಾರೆ ಮತ್ತು ನಮ್ಮನ್ನು ತುಳಿಯಲು ಪ್ರಯತ್ನಿಸುತ್ತಾರೆ.ಅವರಿಗೆ ಎಷ್ಟು ಧೈರ್ಯ ಇರಬೇಕು ಹೇಳಿ?" ಎಂದು ಅವರು ಪ್ರಶ್ನಿಸಿದರು. ಅಕ್ಟೋಬರ್ 3, 2021ರಂದು ಯುಪಿಯ ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾತ್ಮಕ ಘಟನೆಯಲ್ಲಿ ಜಗಜೀತ್ ಅವರ ಸಹೋದರ ದಲ್ಜೀತ್ ಸಿಂಗ್ ಸಾವನ್ನಪ್ಪಿದರು, ಅಲ್ಲಿ ಸೆಪ್ಟೆಂಬರ್‌ನಲ್ಲಿ ಮಾಡಿದ ಭಾಷಣದಲ್ಲಿ ರೈತರಿಗೆ ಬೆದರಿಕೆ ಹಾಕಿದ್ದ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಕುಮಾರ್ ಥೇಣಿ ವಿರುದ್ಧ ರೈತರು ಪ್ರತಿಭಟನೆ ನಡೆಸಲು ಸಮಾವೇಶಗೊಂಡಿದ್ದರು.

From the left: Daljeet Singh, from Bahraich district, and Lovepreet Singh Dhillon, from Kheri district, Uttar Pradesh; Surender Singh, from Shahid Bhagat Singh Nagar district, Punjab
From the left: Daljeet Singh, from Bahraich district, and Lovepreet Singh Dhillon, from Kheri district, Uttar Pradesh; Surender Singh, from Shahid Bhagat Singh Nagar district, Punjab
From the left: Daljeet Singh, from Bahraich district, and Lovepreet Singh Dhillon, from Kheri district, Uttar Pradesh; Surender Singh, from Shahid Bhagat Singh Nagar district, Punjab

ಎಡದಿಂದ : ಬಹ್ರೈಚ್ ಜಿಲ್ಲೆಯ ದಲ್ಜೀತ್ ಸಿಂಗ್ ಮತ್ತು ಉತ್ತರ ಪ್ರದೇಶದ ಖೇರಿ ಜಿಲ್ಲೆಯಿಂದ ಲವ್ಪ್ರೀತ್ ಸಿಂಗ್ ಧಿಲ್ಲೋನ್ ; ಪಂಜಾಬ್ ಶಾಹಿದ್ ಭಗತ್ ಸಿಂಗ್ ನಗರ ಜಿಲ್ಲೆಯ ಸುರೇಂದರ್ ಸಿಂಗ್

ಸಚಿವರ ಬೆಂಗಾವಲು ಪಡೆಯ ವಾಹನಗಳು ಹರಿದಿದ್ದರಿಂದಾಗಿ ನಾಲ್ವರು ರೈತರು ಮತ್ತು ಪತ್ರಕರ್ತರು ಸಾವನ್ನಪ್ಪಬೇಕಾಯಿತು, ಈ ಘಟನೆ ಹಿಂಸಾಚಾರದ ಪ್ರಕೋಪಕ್ಕೆ ಕಾರಣವಾಯಿತು. ಒಟ್ಟು 13 ಆರೋಪಿಗಳಲ್ಲಿ ತೇಣಿಯ ಪುತ್ರ ಆಶಿಶ್ ಮಿಶ್ರಾ ಕೂಡ ಸೇರಿದ್ದು, ಘಟನೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದನ್ನು 'ಪೂರ್ವ ಯೋಜಿತ ಪಿತೂರಿ' ಎಂದು ಕರೆದಿದೆ.

35 ವರ್ಷದ ದಲ್ಜೀತ್‌ಗೆ ಎರಡು ಎಸ್‌ಯುವಿಗಳು (Sport Utility Vehicles) ಡಿಕ್ಕಿ ಹೊಡೆದರೆ, ಮೂರನೆಯದು ಮೈಮೇಲೆ ಹರಿದು ಹೋಯಿತು. “ನಮ್ಮ 16 ವರ್ಷದ ಮಗ ರಾಜದೀಪ್ ಇಡೀ ಘಟನೆಗೆ ಸಾಕ್ಷಿಯಾಗಿದ್ದಾನೆ" ಎಂದು ದಲ್ಜೀತ್ ಅವರ ಪತ್ನಿ ಪರಮ್ಜೀತ್ ಕೌರ್ ಹೇಳುತ್ತಾರೆ. “ಅವರು ಬೆಳಿಗ್ಗೆ ಪ್ರತಿಭಟನೆಗೆ ಹೋಗುವ ಮೊದಲು, ದಲ್ಜೀತ್ ನಗುತ್ತಾ ನಮಗೆ ಬೈ ಎಂದು ಕೈಬೀಸುತ್ತಿದ್ದರು. ಘಟನೆ ನಡೆಯುವ ಕೇವಲ 15 ನಿಮಿಷಗಳ ಮೊದಲು ನಾವು ಫೋನ್‌ನಲ್ಲಿ ಮಾತನಾಡಿದ್ದೆವು,” ಎಂದು ಅವರು ನೆನಪಿಸಿಕೊಂಡರು. "ಅವರು ಯಾವಾಗ ಹಿಂತಿರುಗುತ್ತೀರೆಂದು ಕೇಳಿದೆ. ಅದಕ್ಕೆ ಅವರು,‘ಅಲ್ಲಿ ಸಾಕಷ್ಟು ಜನ ಇರುತ್ತಾರೆ. ಆದರೆ ನಾನು ಬೇಗನೆ ಬರುತ್ತೇನೆ.” ಎಂದು ಹೇಳಿದ್ದರು, ಆದರೆ ಅದು ಹಾಗಾಗಲಿಲ್ಲ.

ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದಾಗ, ಮನೆಯಲ್ಲಿ ದುಃಖಕರ ವಾತಾವರಣವಿತ್ತು ಎಂದು ಪರಮ್ ಜೀತ್ ಹೇಳುತ್ತಿದ್ದರು. ಇದಕ್ಕೆ ಧ್ವನಿಗೂಡಿಸುತ್ತಾ  ಜಗಜೀತ್ "ನಮ್ಮ ಕುಟುಂಬವು ಆ ದಿನ ದಲ್ಜೀತ್‌ ರ ನಿಧನಕ್ಕೆ ಮತ್ತೊಮ್ಮೆ ಕಂಬನಿ ಮಿಡಿಯಿತು. ಕಾನೂನುಗಳನ್ನು ರದ್ದುಗೊಳಿಸುವುದರಿಂದ ನನ್ನ ಸಹೋದರನನ್ನು ಮರಳಿ ತರಲು ಸಾಧ್ಯವಿಲ್ಲ. ಇದು 700 ಹುತಾತ್ಮರಲ್ಲಿ ಯಾರನ್ನೂ ಅವರ ಪ್ರೀತಿ ಪಾತ್ರರಿಗೆ ಮತ್ತೆ ಹಿಂತಿರುಗಿಸಲು ಸಾಧ್ಯವಿಲ್ಲ.” ಎಂದು ಹೇಳಿದರು.

ಲಖೀಂಪುರ ಖೇರಿಯಲ್ಲಿ ಪ್ರತಿಭಟನಾಕಾರರನ್ನು ಓಡಿಸಿದ ಎಸ್‌ಯುವಿಗಳು ಜನಸಂದಣಿ ಹೆಚ್ಚು ಇರುವಲ್ಲಿ ನಿಧಾನವಾಗಿ ಚಲಿಸಿದರೆ, ಕಡಿಮೆ ಜನಸಂದಣಿ ಇರುವಲ್ಲಿ ಅವು ವೇಗವಾಗಿ ಚಲಿಸಿದವು ಎಂದು 45 ವರ್ಷದ ಸತ್ನಮ್ ಧಿಲ್ಲೋನ್ ಹೇಳುತ್ತಿದ್ದರು. ಅವರ ಪುತ್ರ 19 ವರ್ಷದ ಲವ್‌ಪ್ರೀತ್ ಸಿಂಗ್ ಧಿಲ್ಲೋನ್ ಸಾವನ್ನಪ್ಪಿದವರಲ್ಲಿ ಒಬ್ಬರಾಗಿದ್ದಾರೆ. ಯುಪಿಯ ಖೇರಿ ಜಿಲ್ಲೆಯ ಪಾಲಿಯಾ ತಹಸಿಲ್‌ನ ಭಗವಂತ್ ನಗರ ಗ್ರಾಮದಲ್ಲಿ ವಾಸಿಸುವ ಸತ್ನಾಮ್ ಅವರು "ಅವರು ಜನರಿಗೆ ಡಿಕ್ಕಿ ಹೊಡೆಸುತ್ತಾ, ಅವರನ್ನು ಕೆಳಕ್ಕೆ ಬಿಳಿಸುತ್ತಿದ್ದರು.” ಎಂದು ಹೇಳಿದರು.ಈ ಘಟನೆ ಸಂಭವಿಸಿದಾಗ ಅವರು ಪ್ರತಿಭಟನಾ ಸ್ಥಳದಲ್ಲಿ ಇರಲಿಲ್ಲ, ಆದರೆ ಘಟನೆಯ ನಂತರ ಅವರು ಅಲ್ಲಿಗೆ ಬಂದಾಗ ಯಾರೋ ಈ ಎಲ್ಲ ದೃಶ್ಯವನ್ನು ವಿವರಿಸಿ ಹೇಳಿದ್ದರು.

ಲವ್‌ಪ್ರೀತ್ ಅವರ ತಾಯಿ, 42 ವರ್ಷದ ಸತ್ವಿಂದರ್ ಕೌರ್, ಆಗಾಗ್ಗೆ ರಾತ್ರಿಯಲ್ಲಿ ಎಚ್ಚರಗೊಂಡು ತನ್ನ ಮಗನನ್ನು ನೆನಪಿಸಿಕೊಳ್ಳುತ್ತಾ ಅಳುತ್ತಾರೆ ಎಂದು ಸತ್ನಮ್ ಹೇಳುತ್ತಿದ್ದರು.“ಸಚಿವರು ರಾಜೀನಾಮೆ ನೀಡಬೇಕು ಮತ್ತು ತಮ್ಮ ಮಗನಿಗೆ ನ್ಯಾಯ ದೊರಕಿಸಿಕೊಡಬೇಕೆಂದು ನಾವು ಆಗ್ರಹಿಸುತ್ತೇವೆ. ಈಗ ನಮಗೆ ಬೇಕಾಗಿರುವುದು ನ್ಯಾಯ ಮಾತ್ರ” ಎನ್ನುತ್ತಾರೆ.

"ಈಗ ನಮಗೆ ನ್ಯಾಯವನ್ನು ದೊರಕಿಸಿಕೊಡಲು ಸರ್ಕಾರವು ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ" ಎಂದು ಖೇರಿಯ ಧೌರಾಹರಾ ತಹಸಿಲ್‌ನಿಂದ ಜಗದೀಪ್ ಸಿಂಗ್ ಹೇಳಿದರು. ಅವರ ತಂದೆ 58 ವರ್ಷದ ನಚತ್ತರ್ ಸಿಂಗ್, ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟರು. ಈ ದುರಂತದ ಬಗ್ಗೆ ಅವರಿಗೆ ಮಾತನಾಡಲು ವಿನಂತಿಸಿಕೊಂಡಾಗ ತಳಮಳಗೊಂಡ 31 ವರ್ಷದ ಜಗದೀಪ್ ಅವರು, “ನಮಗೆ ಈಗ ಏನಾಗುತ್ತಿದೆ ಎಂದು ಕೇಳುವುದು ಸೂಕ್ತವಲ್ಲ. ಹಿಂದುಗಡೆ ಕೈಗಳನ್ನು ಕಟ್ಟಿ ಅವರ ಮುಂದೆ ಊಟವನ್ನು ಇಟ್ಟು ಊಟ ಹ್ಯಾಗಿದೆ ಎಂದು ಕೇಳಿದರೆ ಹೇಗೆ? ಅದರ ಬದಲಾಗಿ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ ಎಲ್ಲಿಗೆ ಬಂದು ತಲುಪಿದೆ ಎಂದು ಕೇಳಿ, ಈ ಸರ್ಕಾರದಿಂದ ಆಗಿರುವ ತೊಂದರೆ ಏನು? ಯಾಕೆ ರೈತರ ಮೇಲೆ ಹರಿಹಾಯಲಾಯಿತು ಎನ್ನುವುದನ್ನು ಕೇಳಿ” ಎಂದು ವಿನಂತಿಸಿಕೊಂಡರು.

From the left: Harbansh Singh and Pal Singh, from Patiala district, and Ravinder Pal, from Ludhiana district, Punjab
From the left: Harbansh Singh and Pal Singh, from Patiala district, and Ravinder Pal, from Ludhiana district, Punjab
From the left: Harbansh Singh and Pal Singh, from Patiala district, and Ravinder Pal, from Ludhiana district, Punjab

ಎಡದಿಂದ : ಪಟಿಯಾಲಾ ಜಿಲ್ಲೆಯ ಹರ್ಬನ್ಶ್ ಸಿಂಗ್ ಮತ್ತು ಪಾಲ್ ಸಿಂಗ್ , ಮತ್ತು ಪಂಜಾಬ್ ಲುಧಿಯಾನಾ ಜಿಲ್ಲೆಯಿಂದ ರವೀಂದರ್ ಪಾಲ್

ಜಗದೀಪ್ ಮೆಡಿಕಲ್ ವೈದ್ಯರಾಗಿದ್ದಾರೆ ಮತ್ತು ಅವರ ಕಿರಿಯ ಸಹೋದರ ದೇಶದ ಗಡಿಯಲ್ಲಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಾದ ಸಶಸ್ತ್ರ ಸೀಮಾ ಬಲ್ ದಲ್ಲಿದ್ದಾರೆ.“ನಾವು ದೇಶಕ್ಕಾಗಿ ಸೇವೆ ಮಾಡುತ್ತೇವೆ.‌ ತಂದೆಯನ್ನು ಕಳೆದುಕೊಳ್ಳುವುದೆಂದರೆ ಏನು ಎನ್ನುವುದನ್ನು ಮಗನ ಹತ್ತಿರ ಕೇಳಿ.” ಎಂದು ಜಗದೀಪ್ ಆಕ್ರೋಶದಿಂದ ಹೇಳಿದರು.

ಮನ್‌ಪ್ರೀತ್ ಸಿಂಗ್ ಅವರು ಕೂಡ ಡಿಸೆಂಬರ್ 4, 2020ರಂದು ಅಪಘಾತದಲ್ಲಿ ತಮ್ಮ ತಂದೆ ಸುರೇಂದರ್ ಸಿಂಗ್ ಅವರನ್ನು ಕಳೆದುಕೊಂಡರು. 64 ವರ್ಷದ ಸುರೇಂದರ್ ಶಾಹಿದ್ ಭಗತ್ ಸಿಂಗ್ ನಗರದ ಬಾಲಚೌರ್ ತೆಹಸಿಲ್‌ನಲ್ಲಿರುವ ಹಾಸನಪುರ ಖುರ್ದ್ ಗ್ರಾಮದಿಂದ ಪ್ರತಿಭಟನೆಯಲ್ಲಿ ಸೇರಲು ದೆಹಲಿಗೆ ತೆರಳುತ್ತಿದ್ದರು. ಆಗ ಹರಿಯಾಣದ ಸೋನಿಪತ್‌ನಲ್ಲಿ ಈ ದುರ್ಘಟನೆ ನಡೆಯಿತು. “ನನಗೆ ದುಃಖವಾಗಿದೆ, ತೀವ್ರ ದುಃಖವಾಗಿದೆ, ಆದರೆ ಅದರ ಜೊತೆಗೆ ಹೆಮ್ಮೆ ಕೂಡ ಇದೆ. ಏಕೆಂದರೆ ಅವರು ಇಡೀ ಚಳುವಳಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅವರು ಹುತಾತ್ಮರಾಗಿ ಸಾವನ್ನಪ್ಪಿದ್ದಾರೆ, ಸೋನಿಪತ್‌ನಲ್ಲಿರುವ ಪೊಲೀಸ್ ಅಧಿಕಾರಿಗಳು ನನ್ನ ತಂದೆಯ ದೇಹವನ್ನು ಪಡೆಯಲು ನನಗೆ ಸಹಾಯ ಮಾಡಿದರು." ಎಂದು 29 ವರ್ಷದ ಮನ್‌ಪ್ರೀತ್ ಹೇಳಿದರು.

73 ವರ್ಷದ ಹರ್ಬನ್ಶ್ ಸಿಂಗ್, ಪಂಜಾಬ್‌ನ ಪಟಿಯಾಲ ಜಿಲ್ಲೆಯ ರೈತರಲ್ಲಿ ಒಬ್ಬರಾಗಿದ್ದರು, ಅವರು ಚಳುವಳಿಯು ದೆಹಲಿಯ ಗಡಿಗೆ ತೆರಳುವ ಮೊದಲು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯನ್ನು ಪ್ರಾರಂಭಿಸಿದರು. ಭಾರತಿ ಕಿಸಾನ್ ಯೂನಿಯನ್ (ಸಿಧುಪುರ್) ಸದಸ್ಯರಾದ ಹರ್ಬನ್ಶ್ ಅವರು ಪಟಿಯಾಲ ತಹಸಿಲ್‌ನಲ್ಲಿರುವ ಮೆಹಮೂದ್‌ಪುರ್ ಜತ್ತನ್ ಎಂಬ ಹಳ್ಳಿಯಲ್ಲಿ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಳೆದ ವರ್ಷ ಅಕ್ಟೋಬರ್ 17 ರಂದು ಭಾಷಣ ಮಾಡುವಾಗ ಕುಸಿದು ಬಿದ್ದಿದ್ದರು. "ಅವರು ಸಭಿಕರಿಗೆ ಕೃಷಿ ಕಾನೂನುಗಳ ಬಗ್ಗೆ ವಿವರಿಸುವಾಗ ಅವರು ಏಕಾಏಕಿ ಕುಸಿದು ಬಿದ್ದು ಹೃದಯಾಘಾತದಿಂದಾಗಿ ನಿಧನರಾದರು,” ಎಂದು ಅವರ 29 ವರ್ಷದ ಮಗ ಜಗತಾರ್ ಸಿಂಗ್ ಹೇಳಿದರು.

"ಈಗ ಮೃತಪಟ್ಟವರು ಕೊನೆಯುಸಿರೆಳೆಯದೇ ಇದ್ದಿದ್ದರೆ, ನಾವು ಸಂತಸದಿಂದ ಇರುತ್ತಿದ್ದೆವು” ಎಂದು ಜಗ್ತಾರ್ ಹೇಳುತ್ತಾರೆ.

ಪಟಿಯಾಲದ ನಭಾ ತೆಹಸಿಲ್‌ನ ಸಹೌಲಿ ಗ್ರಾಮದಲ್ಲಿ 1.5 ಎಕರೆ ಜಮೀನು ಹೊಂದಿರುವ 58 ವರ್ಷದ ರೈತ ಪಾಲ್ ಸಿಂಗ್, ದೆಹಲಿಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮನೆಯಿಂದ ಹೊರಟಾಗ, "ಅವರು ಜೀವಂತವಾಗಿ ಹಿಂತಿರುಗುತ್ತಾರೆ ಎಂದು ನಿರೀಕ್ಷಿಸಬೇಡಿ ಎಂದು ಅವರು ನಮಗೆ ಹೇಳಿದ್ದರು" ಎಂದು ಅವರ ಸೊಸೆ ಅಮನದೀಪ್ ಕೌರ್ ಹೇಳಿದರು. ಅವರು ಡಿಸೆಂಬರ್ 15, 2020 ರಂದು ಸಿಂಘುವಿನಲ್ಲಿ ಹೃದಯಾಘಾತದಿಂದ ನಿಧನರಾದರು. "ಹೋದವರನ್ನು ಯಾರೂ ಮರಳಿ ತರಲು ಸಾಧ್ಯವಿಲ್ಲ,” ಎಂದು ಕಾಲೇಜಿನಲ್ಲಿ ಲೈಬ್ರರಿ ಮ್ಯಾನೇಜ್‌ಮೆಂಟ್ ಅಧ್ಯಯನ ಮಾಡಿರುವ 31 ವರ್ಷದ ಅಮನದೀಪ್ ಎಲ್ಲವನ್ನು ವಿವರಿಸುತ್ತಿದ್ದರು. ಆದರೆ ರೈತರು ದೆಹಲಿ ತಲುಪಿದ ದಿನವೇ ಈ ಕಾನೂನನ್ನು ರದ್ದುಗೊಳಿಸಬೇಕಿತ್ತು. ಬದಲಾಗಿ, ಅವರು [ಸರ್ಕಾರ ಮತ್ತು ಪೊಲೀಸರು] ರೈತರನ್ನು ತಡೆಯಲು ತಮ್ಮ ಕೈಲಾದಷ್ಟು ಪ್ರಯತ್ನ  ಮಾಡಿದರು. ಅವರು ಬ್ಯಾರಿಕೇಡ್‌ಗಳನ್ನು ಹಾಕಿದ್ದಲ್ಲದೆ ಮತ್ತು ಕಂದಕಗಳನ್ನು ತೋಡಿದ್ದರು.

ಸಾಲದ ಹೊರೆಯಲ್ಲಿ ಸಿಲುಕಿರುವ ನಾಲ್ವರ ಕುಟುಂಬದಲ್ಲಿ ಪಾಲ್ ಸಿಂಗ್ ಪ್ರಮುಖ ಆದಾಯದ ಸದಸ್ಯರಾಗಿದ್ದರು ಎಂದು ಅಮನದೀಪ್ ಹೇಳುತ್ತಾರೆ. ಅವರು ಟೈಲರಿಂಗ್ ಕೆಲಸವನ್ನು ಮಾಡುತ್ತಾರೆ. ಇನ್ನೊಂದೆಡೆಗೆ ಅವರ ಗಂಡ ಕೂಡ ಕೆಲಸ ಮಾಡುವುದಿಲ್ಲ ಮತ್ತು ಅವರ ಅತ್ತೆ ಗೃಹಿಣಿಯಾಗಿದ್ದಾರೆ. “ಅವರು ಸಾಯುವ ಹಿಂದಿನ ರಾತ್ರಿ, ಅವರು [ಪಾಲ್ ಸಿಂಗ್] ಬೂಟುಗಳನ್ನು ಧರಿಸಿಯೇ ಮಲಗಲು ಹೋದರು. ಅವರು ಬೆಳಿಗ್ಗೆ ಬೇಗ ಹೊರಟು ಮನೆಗೆ ಬರಲು ಬಯಸಿದ್ದರು, ಆದರೆ ಕೊನೆಗೆ ಅವರ ದೇಹ ಮನೆಗೆ ಬಂತು ಹೊರತು ಅವರು ಬರಲಿಲಿಲ್ಲ.” ಎಂದು ನನಗೆ ಅಮನದೀಪ್ ಹೇಳಿದರು.

From the left: Malkit Kaur, from Mansa district, Punjab; Raman Kashyap, from Kheri district, UP; Gurjinder Singh, from Hoshiarpur district, Punjab
From the left: Malkit Kaur, from Mansa district, Punjab; Raman Kashyap, from Kheri district, UP; Gurjinder Singh, from Hoshiarpur district, Punjab
From the left: Malkit Kaur, from Mansa district, Punjab; Raman Kashyap, from Kheri district, UP; Gurjinder Singh, from Hoshiarpur district, Punjab

ಎಡದಿಂದ : ಪಂಜಾಬ್ ಮಾನ್ಸಾ ಜಿಲ್ಲೆಯ ಮಲ್ಕಿತ್ ಕೌರ್ ; ಉತ್ತರ ಪ್ರದೇಶದ ಖೇರಿ ಜಿಲ್ಲೆಯ ರಾಮನ್ ಕಶ್ಯಪ್ ; ಪಂಜಾಬ್ ಹೋಶಿಯಾರ್ ಪುರ ಜಿಲ್ಲೆಯ ಗುರ್ಜಿಂದರ್ ಸಿಂಗ್

ಪಂಜಾಬ್‌ನ ಲುಧಿಯಾನ ಜಿಲ್ಲೆಯ ಖನ್ನಾ ತಹಸಿಲ್‌ನ ಇಕೋಲಾಹಾದ ನಿವಾಸಿಯಾಗಿದ್ದ 67 ವರ್ಷದ ರವೀಂದರ್ ಪಾಲ್ ಅವರು ಡಿಸೆಂಬರ್ 6, 2020 ರಂದು ಆಸ್ಪತ್ರೆಯಲ್ಲಿ ನಿಧನರಾದರು. ಡಿಸೆಂಬರ್ 3 ರಂದು ಸಿಂಘು ಅವರ ವೀಡಿಯೊ ರೆಕಾರ್ಡಿಂಗ್ ನಲ್ಲಿ, ಅವರು ಕ್ರಾಂತಿಕಾರಿ ಗೀತೆಗಳನ್ನು ಹಾಡುವುದನ್ನು ಮತ್ತು ಇತರರನ್ನು ಪ್ರೇರೇಪಿಸುವುದನ್ನು ತೋರಿಸುತ್ತದೆ. ಅವರು ಧರಿಸಿದ್ದ ಉದ್ದನೆಯ ಬಿಳಿ ಕುರ್ತಾದಲ್ಲಿ ಕೆಂಪು ಶಾಯಿಯಲ್ಲಿ 'ಪರ್ನಾಮ್ ಶಹೀದಾನ್ ಕೋ' (ಹುತಾತ್ಮರಿಗೆ ನಮನ), ಮತ್ತು 'ನಾ ಪಗ್ಡಿ ನಾ ಟಾಪ್, ಭಗತ್ ಸಿಂಗ್ ಏಕ್ ಸೋಚ್' (ಟರ್ಬನ್ ಅಥವಾ ಟೋಪಿಗಲ್ಲ, ಭಗತ್ ಸಿಂಗ್ ಅವರ ಚಿಂತನೆಗಳಿಗೊಂದು ನಮನ) ಎಂಬ ಘೋಷಣೆಗಳನ್ನು ಬರೆಯಲಾಗಿತ್ತು)

ಅದೇ ದಿನ, ರವೀಂದರ್ ಅವರ ಆರೋಗ್ಯ ಸ್ಥಿತಿಯು ಹದಗೆಟ್ಟಿತು. ಅವರನ್ನು ಡಿಸೆಂಬರ್ 5ರಂದು ಲುಧಿಯಾನಕ್ಕೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಮರುದಿನ ನಿಧನರಾದರು."ಅವರು ಇತರರ ಪ್ರಜ್ಞೆಯನ್ನು ಜಾಗೃತಗೊಳಿಸಿದಂತವರು, ಆದರೆ ಈಗ ಅವರು ಶಾಶ್ವತವಾಗಿ ಚಿರನಿದ್ರೆಗೆ ಹೋಗಿದ್ದಾರೆ" ಎಂದು 42 ವರ್ಷದ ಅವರ ಮಗ ರಾಜೇಶ್ ಕುಮಾರ್ ಹೇಳಿದರು. ಅವರ ಕುಟುಂಬವು ಯಾವುದೇ ಜಮೀನನ್ನು ಹೊಂದಿಲ್ಲ. "ನನ್ನ ತಂದೆ ಕೃಷಿ ಕೂಲಿಕಾರರ ಸಂಘದ ಸದಸ್ಯರಾಗಿದ್ದರು ಮತ್ತು ನಿರಂತರವಾಗಿ ಅವರ ಒಗ್ಗಟ್ಟಿಗಾಗಿ ಶ್ರಮಿಸಿದರು" ಎಂದು ರಾಜೇಶ್ ವಿವರಿಸಿದರು.

60 ನೇ ವಯಸ್ಸಿನಲ್ಲಿ, ಮಲ್ಕಿತ್ ಕೌರ್ ಮಾನ್ಸಾದಲ್ಲಿ ಮಜ್ದೂರ್ ಮುಕ್ತಿ ಮೋರ್ಚಾದ ಸಕ್ರಿಯ ಸದಸ್ಯರಾಗಿದ್ದರು, ಕಾರ್ಮಿಕರ ಹಕ್ಕುಗಳ ಪರವಾಗಿ ಪ್ರಚಾರ ಮಾಡಿದರು. ದಲಿತ ಸಮುದಾಯಕ್ಕೆ ಸೇರಿದ ಅವರಿಗೆ ಯಾವುದೇ ಜಮೀನು ಇರಲಿಲ್ಲ. ಡಿಸೆಂಬರ್ 16, 2020 ರಂದು, ಮಲ್ಕಿತ್ ದೆಹಲಿಯ ಕಡೆಗೆ ಬರುತ್ತಿದ್ದ 1,500 ರೈತರ ಗುಂಪಿನೊಂದಿಗೆ ಇದ್ದರು. “ಅವರನ್ನು ಹರಿಯಾಣದ ಫತೇಹಾಬಾದ್‌ನಲ್ಲಿ ಲಂಗರ್‌ [ಸಮುದಾಯ ಅಡುಗೆ ಮನೆಯಲ್ಲಿ ಊಟ] ನಲ್ಲಿಯೇ ನಿಲ್ಲಿಸಿದರು. ಅವರು ರಸ್ತೆ ದಾಟುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದಾಗಿ ಆಗ ಅವರು ಸ್ಥಳದಲ್ಲಿಯೇ ಮೃತಪಟ್ಟರು” ಎಂದು ರೈತ ಸಂಘಟನೆಯ ಸ್ಥಳೀಯ ಮುಖ್ಯಸ್ಥ ಗುರ್ಜಂತ್ ಸಿಂಗ್ ಹೇಳುತ್ತಿದ್ದರು.

ಲಖೀಂಪುರ ಖೇರಿ ಘಟನೆಯಲ್ಲಿ ಹತ್ಯೆಯಾದ 34 ವರ್ಷದ ಪತ್ರಕರ್ತ ರಮಣ್ ಕಶ್ಯಪ್. ಎರಡು ಮಕ್ಕಳ ತಂದೆಯಾಗಿದ್ದು, ಅವರು ಖೇರಿಯ ನಿಘಸನ್ ತಹಸಿಲ್‌ ನಲ್ಲಿ ಸಾಧನಾ ಪ್ಲಸ್ ಎಂಬ ಟಿವಿ ಸುದ್ದಿ ವಾಹಿನಿಯ ಪ್ರಾದೇಶಿಕ ವರದಿಗಾರರಾಗಿದ್ದರು. "ಅವರು ಯಾವಾಗಲೂ ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿದ್ದರು" ಎಂದು ಅವರ ಸಹೋದರ ಪವನ್ ಕಶ್ಯಪ್ ಹೇಳುತ್ತಾರೆ. ಅವರು ಮತ್ತು ರಾಮನ್ ಅವರು ತಮ್ಮ ಮೂರನೇ ಸಹೋದರನೊಂದಿಗೆ ನಿಘಾಸನ್‌ನಲ್ಲಿ ಸುಮಾರು ನಾಲ್ಕು ಎಕರೆ ಜಂಟಿ ಜಮೀನನ್ನು ಹೊಂದಿದ್ದಾರೆ. “ಅವರು ವಾಹನದ ಚಕ್ರಕ್ಕೆ ಸಿಕ್ಕಿ ಬಿದ್ದಿದ್ದರು. ನಂತರ ಮೂರು ಗಂಟೆಗೂ ಹೆಚ್ಚು ಕಾಲ ಅದೇ ಸ್ಥಳದಲ್ಲಿಯೇ ಬಿಡಲಾಗಿತ್ತು. ನಂತರ ಅವರ ದೇಹವನ್ನು ನೇರವಾಗಿ ಶವಪರೀಕ್ಷೆಗಾಗಿ ಕಳುಹಿಸಲಾಯಿತು” ಎಂದು ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿರುವ 32 ವರ್ಷದ ಪವನ್ ಹೇಳಿದರು. “ನಾನು ಅವರನ್ನು ಶವಾಗಾರದಲ್ಲಿ ನೋಡಿದೆ. ಅವರಿಗೆ ಟೈರ್ ಮತ್ತು ಜಲ್ಲಿಕಲ್ಲುಗಳಿಂದ ಮೂಗೇಟುಗಳಾಗಿತ್ತು. ಒಂದು ವೇಳೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಅವರನ್ನು ರಕ್ಷಿಸಬಹುದಿತ್ತು.” ಎನ್ನುತ್ತಾರೆ.

ಈಗ ಮಕ್ಕಳನ್ನು ಕಳೆದುಕೊಂಡು ಕುಟುಂಬಕ್ಕೆ ತೊಂದರೆಯಾಗಿದೆ. ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಗಢಶಂಕರ್ ತಾಂಡಾದ ಗುರ್ಜಿಂದರ್ ಸಿಂಗ್ ಅವರಿಗೆ ಕೇವಲ 16 ವರ್ಷ ವಯಸ್ಸು. ಅವರು ಡಿಸೆಂಬರ್ 16, 2020ರಂದು ದೆಹಲಿಯ ಬಳಿ ಪ್ರತಿಭಟನಾ ಸ್ಥಳಕ್ಕೆ ಹೋಗುತ್ತಿದ್ದಾಗ, ಕರ್ನಾಲ್ ಬಳಿ ತಾವು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್‌ನಿಂದ ಬಿದ್ದಿದ್ದಾರೆ. “ನಮ್ಮ ಕುಟುಂಬ ನಾಶವಾಗಿದೆ. ಸರ್ಕಾರ ಏಕೆ ಈ ಭೀಕರ ಕಾನೂನುಗಳನ್ನು ತಂದಿತು? ಎಂದು ಅವರ ತಾಯಿ 38 ವರ್ಷದ ಕುಲ್ವಿಂದರ್ ಕೌರ್ ಪ್ರಶ್ನಿಸುತ್ತಾರೆ. ಅದಕ್ಕೂ ಸುಮಾರು 10 ದಿನಗಳ ಮೊದಲು, ಡಿಸೆಂಬರ್ 6ರಂದು, ಹರಿಯಾಣದ ಕೈತಾಲ್ ಜಿಲ್ಲೆಯ ಗುಹ್ಲಾ ತೆಹಸಿಲ್‌ನ ಮಸ್ತಗಢದಿಂದ ಜಸ್ಪ್ರೀತ್ ಸಿಂಗ್ (18) ಸಿಂಘುಗೆ ಹೋಗುತ್ತಿದ್ದರು. ಮಾರ್ಗಮಧ್ಯೆ ಕಾಲುವೆಗೆ ವಾಹನ ಬಿದ್ದು ಮೃತಪಟ್ಟಿದ್ದಾರೆ. ಜಸ್ಪ್ರೀತ್ ಅವರ ಚಿಕ್ಕಪ್ಪ, 50 ವರ್ಷ ವಯಸ್ಸಿನ ಪ್ರೇಮ್ ಸಿಂಗ್ ಅವರು ನನ್ನೊಡನೆ, "ಕುಟುಂಬಗಳೆಲ್ಲವೂ ಈಗ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವಾಗ ಕಾನೂನುಗಳನ್ನು ರದ್ದುಗೊಳಿಸಿದರೇನು ಅಥವಾ ಗೊಳಿಸದಿದ್ದರೇನು ಅದೇಗೆ ಅವರಿಗೆ ಮುಖ್ಯವಾಗುತ್ತದೆ ಹೇಳಿ?” ಎಂದು ಪ್ರಶ್ನಿಸಿದರು.

ಮೃತಪಟ್ಟಿರುವ ತಮ್ಮ ಸಂಬಂಧಿಕರಿಗಾಗಿ ದುಃಖಿಸುತ್ತಿರುವ ಕುಟುಂಬಗಳೊಂದಿಗೆ ಮಾತನಾಡುವಾಗ, ನಾನು ಸಾವಿಗೆ ಸಂಬಂಧಿಸಿದಂತೆ ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಲು ಪ್ರಾರಂಭಿಸಿದೆ: ರಸ್ತೆ ಅಪಘಾತಗಳು, ಮಾನಸಿಕ ಒತ್ತಡ ಮತ್ತು ದೆಹಲಿಯ ಭೀಕರ ಹವಾಮಾನದಲ್ಲಿನ ದೈಹಿಕ ತೊಂದರೆಗಳು.ಅನೇಕ ಅನಿಶ್ಚಿತತೆಗಳಿಗೆ ಕಾರಣವಾದ ಹೊಸ ಕೃಷಿ ಕಾನೂನುಗಳಿಗೆ ಸಂಬಂಧಿಸಿದ ವೇದನೆ-  ಮತ್ತು ಸರ್ಕಾರ ಮತ್ತು ಮಾಧ್ಯಮಗಳಿಂದ ರೈತರು ಅನುಭವಿಸಿದ ನಿರಾಸಕ್ತಿಗಳೆಲ್ಲವೂ ಕೂಡ ಆತ್ಮಹತ್ಯೆಯಂತಹ ಸಾವುಗಳಿಗೆ ಕಾರಣವೆನ್ನಬಹುದು.

From the left: Jaspreet Singh, from Kaithal district, Haryana; Gurpreet Singh, from Fatehgarh Sahib district, Punjab; Kashmir Singh, from Rampur district, UP
From the left: Jaspreet Singh, from Kaithal district, Haryana; Gurpreet Singh, from Fatehgarh Sahib district, Punjab; Kashmir Singh, from Rampur district, UP
From the left: Jaspreet Singh, from Kaithal district, Haryana; Gurpreet Singh, from Fatehgarh Sahib district, Punjab; Kashmir Singh, from Rampur district, UP

ಎಡದಿಂದ : ಹರಿಯಾಣದ ಕೈತಾಲ್ ಜಿಲ್ಲೆಯ ಜಸ್ಪ್ರೀತ್ ಸಿಂಗ್ ; ಪಂಜಾಬ್ ಫತೇಘರ್ ಸಾಹಿಬ್ ಜಿಲ್ಲೆಯ ಗುರುಪ್ರೀತ್ ಸಿಂಗ್ ; ಉತ್ತರ ಪ್ರದೇಶದ ರಾಮ್ ಪುರ ಜಿಲ್ಲೆಯ ಕಾಶ್ಮೀರ ಸಿಂಗ್

ನವೆಂಬರ್ 10, 2021ರಂದು, 45 ವರ್ಷದ ಗುರುಪ್ರೀತ್ ಸಿಂಗ್ ಸಿಂಘುವಿನಲ್ಲಿ ಪ್ರತಿಭಟನಾ ಶಿಬಿರದ ಬಳಿ ಸ್ಥಳೀಯ ಉಪಾಹಾರ ಗೃಹದ ಮುಂದೆ ಅವರ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ಕಂಡುಬಂದಿತು. ಅವರ ಎಡಗೈಯಲ್ಲಿ ಜಿಮ್ಮೆದಾರ್ (ಜವಾಬ್ದಾರಿ) ಎಂಬ ಒಂದೇ ಪದವನ್ನು ಬರೆಯಲಾಗಿದೆ ಎಂದು ಅವರ ಪುತ್ರ ಲವ್‌ಪ್ರೀತ್ ಸಿಂಗ್ ಹೇಳುತ್ತಾರೆ. ಪಂಜಾಬ್‌ನ ಫತೇಘರ್ ಸಾಹಿಬ್ ಜಿಲ್ಲೆಯ ಅಮ್ಲೋಹ್ ತಹಸಿಲ್‌ನ ರೂರ್ಕಿ ಗ್ರಾಮದಲ್ಲಿ ಗುರುಪ್ರೀತ್ ಅರ್ಧ ಎಕರೆ ಜಮೀನನ್ನು ಹೊಂದಿದ್ದು, ಇದು ಕುಟುಂಬದ ಜಾನುವಾರುಗಳಿಗೆ ಮೇವನ್ನು ಒದಗಿಸುತ್ತಿತ್ತು. ಅವರು ಸುಮಾರು 18 ಕಿಲೋಮೀಟರ್ ದೂರದಲ್ಲಿರುವ ಮಂಡಿ ಗೋಬಿಂದಗಢದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಮೂಲಕ ಜೀವನ ಸಾಗಿಸುತ್ತಿದ್ದರು. "ಸರ್ಕಾರವು 10 ದಿನಗಳ ಹಿಂದೆ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದರೆ, ನನ್ನ ತಂದೆ ಈಗ ನಮ್ಮೊಂದಿಗೆ ಇರುತ್ತಿದ್ದರು" ಎಂದು ಮಂಡಿ ಗೋಬಿಂದ್‌ಗಢ್‌ನಲ್ಲಿರುವ ದೇಶ್ ಭಗತ್ ವಿಶ್ವವಿದ್ಯಾಲಯದ 21 ವರ್ಷದ ಬಿಕಾಂ ವಿದ್ಯಾರ್ಥಿ ಲವ್‌ಪ್ರೀತ್ ಹೇಳಿದರು. ರೈತರ ಎಲ್ಲ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಳ್ಳಬೇಕು, ಆ ಮೂಲಕ ನನ್ನ ತಂದೆ ಇಟ್ಟಂತಹ ಹೆಜ್ಜೆಯನ್ನು ಯಾರೂ ಬಲವಂತವಾಗಿ ಇಡುವಂತಾಗಬಾರದು” ಎಂದು ಹೇಳುತ್ತಾರೆ.

ಆಧುನಿಕ ಭಾರತವು ಬ್ರಿಟಿಷ್ ರಾಜ್‌ನಿಂದ ಸ್ವಾತಂತ್ರ್ಯ ಪಡೆದ ದಿನವಾದ ಆಗಸ್ಟ್ 15, 1947ರಂದು ಜನಿಸಿದ ಕಾಶ್ಮೀರ ಸಿಂಗ್ ಅವರು ತಮ್ಮ ಆತ್ಮಹತ್ಯೆಯ ಟಿಪ್ಪಣಿಯಲ್ಲಿ "ನಾನು ಕೃಷಿ ಕಾನೂನುಗಳನ್ನು ವಿರೋಧಿಸಲು ನನ್ನ ದೇಹವನ್ನು ತ್ಯಾಗ ಮಾಡುತ್ತಿದ್ದೇನೆ.” ಎಂದು ಬರೆದಿದ್ದಾರೆ. ಅವರು ಜನವರಿ 2, 2021ರಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದರು. ಯುಪಿಯ ರಾಂಪುರ ಜಿಲ್ಲೆಯ ಸುವಾರ್ ಬ್ಲಾಕ್‌ನಲ್ಲಿರುವ ಪಸಿಯಾಪುರದ ರೈತ ಕಾಶ್ಮೀರ ಸಿಂಗ್ ಅವರು ಗಾಜಿಪುರದ ಸಮುದಾಯ ಅಡುಗೆ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

"700 ಹುತಾತ್ಮರ ಕುಟುಂಬಗಳಿಗೆ ಈಗ ಏನು ಅನಿಸಿರಬೇಕು?” ಎಂದು ಕಾಶ್ಮೀರ್ ಸಿಂಗ್ ಅವರ ಮೊಮ್ಮಗ ಗುರ್ವಿಂದರ್ ಸಿಂಗ್ ನನ್ನನ್ನು ಕೇಳಿದರು. “ಕಾನೂನುಗಳನ್ನು ರದ್ದುಗೊಳಿಸಿದರೂ, ನಮ್ಮ 700 ರೈತರು ಹಿಂತಿರುಗುವುದಿಲ್ಲ. 700 ಮನೆಗಳಲ್ಲಿ ಬೆಳಕು ಆರಿಹೋಗಿದೆ” ಎಂದು ಹೇಳಿದರು.

ಈ ವರ್ಷ ಡಿಸೆಂಬರ್ 11 ರಂದು ದೆಹಲಿಯ ಸುತ್ತಮುತ್ತಲಿನ ಪ್ರತಿಭಟನಾ ಸ್ಥಳಗಳನ್ನು ಖಾಲಿ ಮಾಡಲಾಗಿತ್ತು, ಆದರೆ 2020-2021ರ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಎಂಎಸ್‌ಪಿ ಮತ್ತು ಪರಿಹಾರದ ಕಾನೂನು ಖಾತರಿಗಾಗಿ ರೈತರು ತಮ್ಮ ಬೇಡಿಕೆಗೆ ಬದ್ಧರಾಗಿದ್ದಾರೆ. ಆದರೆ, ಡಿಸೆಂಬರ್ 1, 2021ರಂದು ಸಂಸತ್ತಿಗೆ ನೀಡಿರುವ ಲಿಖಿತ ಉತ್ತರದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರ ಸಾವಿನ ಬಗ್ಗೆ ಯಾವುದೇ ದಾಖಲೆಯನ್ನು ಸರ್ಕಾರ ಹೊಂದಿಲ್ಲದ ಕಾರಣ ಪರಿಹಾರವನ್ನು ನೀಡುವ ಪ್ರಶ್ನೆಯೇ ಇಲ್ಲವೆಂದು ಹೇಳಿದ್ದಾರೆ.

ಸರಕಾರ ಇತ್ತಕಡೆ ಗಮನ ಹರಿಸಿದ್ದರೆ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬುದು ಗೊತ್ತಾಗುತ್ತಿತ್ತು ಎನ್ನುತ್ತಾರೆ ಗುರ್ವಿಂದರ್.“ರೈತರು ಹೆದ್ದಾರಿಗಳಲ್ಲಿ ಕುಳಿತಿದ್ದರು, ಆದರೆ ಸರ್ಕಾರವು ಮಾತ್ರ ತನ್ನ ಮಹಲುಗಳಲ್ಲಿ ಆರಾಮಾಗಿ ವಿಶ್ರಾಂತಿ ಪಡೆಯುತ್ತಿತ್ತು.” ಎಂದು ಅವರು ಹೇಳಿದರು. ಮಜ್ದೂರ್ ಮುಕ್ತಿ ಮೋರ್ಚಾದ ಗುರ್ಜಂತ್ ಸಿಂಗ್ ಅವರು “ತಂತ್ರಜ್ಞಾನ ಮತ್ತು ಡಾಟಾ ಸುಲಭವಾಗಿ ಲಭ್ಯವಿರುವಾಗ, ಚಳುವಳಿಯಲ್ಲಿ ಮೃತಪಟ್ಟವರ ವಿವರಗಳನ್ನು ಪಡೆಯುವುದು ಅದೇಗೆ ಅಸಾಧ್ಯ ಹೇಳಿ?” ಎಂದು ಅವರು ಪ್ರಶ್ನಿಸುತ್ತಾರೆ.

ಗುರ್ ಪ್ರೀತ್ ಸಿಂಗ್ ಅವರಿಗೆ ಮತ್ತೊಂದು ಭಾಷಣ ಮಾಡಲು ಸಾಧ್ಯವಾಗಲಿಲ್ಲ. ಅವರಂತಹ 700 ಕ್ಕೂ ಅಧಿಕ ರೈತರು ದೆಹಲಿಯ ಗಡಿಯಲ್ಲಿ ನಿರ್ಮಿಸಿದ ಇತಿಹಾಸದ ಅಂತಿಮ ಅಧ್ಯಾಯಕ್ಕೆ ಸಾಕ್ಷಿಯಾಗಲಿಲ್ಲ. ಅವರ್ಯಾರೂ ಕೂಡ ಇಲ್ಲಿ ಈಗ ಕಣ್ಣೀರು ಒರೆಸುವುದಕ್ಕಾಗಲಿ ಅಥವಾ ತಮ್ಮ ಸಹ ಪ್ರತಿಭಟನಾಕಾರರೊಂದಿಗೆ ಗೆಲುವಿನ ಸವಿಯನ್ನು ಅನುಭವಿಸುವುದಕ್ಕೆ ಸಾಧ್ಯವಿಲ್ಲ. ಬಹುಶಃ ಅವರು ಈಗ ಆಗಸದಲ್ಲಿ ಈ ಯಶಸ್ಸಿನ ಭಾವುಟವನ್ನು ಹಿಡಿದಿರಬೇಕು, ಮತ್ತು ಭೂಮಿಯಿಂದ ರೈತರು ಅವರಿಗೆ ನಮಸ್ಕರಿಸುವುದನ್ನು ನೋಡುತ್ತಿರಬೇಕು ಎಂದೆನಿಸುತ್ತದೆ.

ಎಲ್ಲಾ ಫೋಟೋಗಳನ್ನು ಹುತಾತ್ಮ ರೈತರ ಕುಟುಂಬಗಳು ಒದಗಿಸಿವೆ . ಮುಖಪುಟದ ಚಿತ್ರ ಅಮೀರ್ ಮಲಿಕ್ ಅವರದ್ದು .

ನೀವು ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದರೆ ಅಥವಾ ತೊಂದರೆಯಲ್ಲಿರುವ ಯಾರನ್ನಾದರೂ ತಿಳಿದಿದ್ದರೆ , ದಯವಿಟ್ಟು ರಾಷ್ಟ್ರೀಯ ಸಹಾಯವಾಣಿ ' ಕಿರಣ್ ' 1800-599-0019 (24/7 ಟೋಲ್ ಫ್ರೀ ) ಅಥವಾ ಹತ್ತಿರದ ಈ ಸಹಾಯವಾಣಿಗಳಲ್ಲಿ ಯಾವುದಾದರೂ ಸಂಖ್ಯೆಗೆ ಕರೆ ಮಾಡಿ . ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಮತ್ತು ಸೇವೆಗಳ ಕುರಿತು ಮಾಹಿತಿಗಾಗಿ , ದಯವಿಟ್ಟು SPIF ನ ಮಾನಸಿಕ ಆರೋಗ್ಯ ನಿರ್ದೇಶಿಕೆಯನ್ನು ನೋಡಿ .

ಅನುವಾದ: ಎನ್.ಮಂಜುನಾಥ್

Amir Malik

ਆਮਿਰ ਮਿਲਕ ਇੱਕ ਸੁਤੰਤਰ ਪੱਤਰਕਾਰ ਹਨ ਤੇ 2022 ਦੇ ਪਾਰੀ ਫੈਲੋ ਹਨ।

Other stories by Amir Malik
Translator : N. Manjunath