"ಮೇ ತೇಜ್ ದೌಡ್ ಕೇ ಆವೂಂಗಾ, ಔರ್ ಕೂನೊ ಮೇ ಬಸ್ ಜಾವೂಂಗಾ [ನಾನು ವೇಗವಾಗಿ ಓಡಿ ಬಂದು ಕೂನೊದಲ್ಲಿ ನೆಲೆಯನ್ನು ಸ್ಥಾಪಿಸುತ್ತೇನೆ]."
ಇದು ಚಿಂಟು ಎನ್ನುವ ಚೀತಾ ತನ್ನ ಚಿತ್ರವಿರುವ ಪೋಸ್ಟರನ್ನು ಓದಬಲ್ಲವರಿಗೆ ಸಾರುತ್ತಿರುವ ಸಂದೇಶ.
ಈ ಪೋಸ್ಟರ್ ಅನ್ನು ಆರು ತಿಂಗಳ ಹಿಂದೆ ಮಧ್ಯಪ್ರದೇಶದ ಅರಣ್ಯ ಇಲಾಖೆಯ ಮೇಲಧಿಕಾರಿಗಳ ಅಧಿಕೃತ ಆದೇಶದ ಮೇರೆಗೆ ಹಾಕಲಾಗಿತ್ತು. ಇದು ಕೂನೊ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ ಎಲ್ಲಾ ಹಳ್ಳಿಗಳಿಗೆ ತನ್ನ ವ್ಯಾಪ್ತಿಯನ್ನು ಚಾಚಿದೆ, ಈ ಪ್ರದೇಶದಲ್ಲಿ ಪೋಸ್ಟರಿನಲ್ಲಿರುವ ಸ್ನೇಹಪರ ಪಾತ್ರವಾದ 'ಚಿಂಟು ಚೀತಾ' ತನ್ನ ಮನೆಯನ್ನು ನಿರ್ಮಿಸಲು ಯೋಜಿಸುತ್ತಿದೆ.
ಚಿಂಟು ತನ್ನ ಮನೆಯನ್ನು 50 ನಿಜ ಜೀವನದ ಆಫ್ರಿಕನ್ ಚೀತಾಗಳೊಂದಿಗೆ ಹಂಚಿಕೊಳ್ಳಲಿದೆ. ಆದರೆ ಬಾಗ್ಚಾ ಗ್ರಾಮದ 556 ಜನರು ಈ ಚಿರತೆಗೆಳಿಗಾಗಿ ಸ್ಥಳಾಂತರಗೊಳ್ಳಲು ಮತ್ತು ಬೇರೆಡೆ ನೆಲೆಗೊಳ್ಳಲು ಸಜ್ಜಾಗಿದ್ದಾರೆ. ಮುಖ್ಯವಾಗಿ ಇದು ಅಲ್ಲಿನ ಕಾಡಿನೊಡನೆ ಬಹಳ ನಿಕಟವಾಗಿ ಬದುಕನ್ನು ಬೆಸೆದುಕೊಂಡಿರುವ ಸಹಾರಿಯ ಆದಿವಾಸಿ ಜನರ ಪಾಲಿಗೆ ಅವರ ಬದುಕು ಮತ್ತು ಜೀವನೋಪಾಯವನ್ನು ಕಸಿದುಕೊಳ್ಳುವ ಗಡಿಪಾರಾಗಿದೆ.
ಇನ್ನು ಮುಂದೆ ಈ ರಾಷ್ಟ್ರೀಯ ಉದ್ಯಾನವನಕ್ಕೆ ಹೆಚ್ಚಿನ ಬೆಲೆಯ ಸಫಾರಿ ಟಿಕೇಟುಗಳನ್ನು ಕೊಂಡು ಆಮದು ಮಾಡಲಾದ ಚಿರತೆಗಳನ್ನು ನೋಡಲು ಬರುವ ಜನರಿಗಷ್ಟೇ ಪ್ರವೇಶವಿರಲಿದೆ. ಇದು ಪೂರ್ವನಿಯೋಜಿತವಾಗಿ, ಸ್ಥಳೀಯ ನಿವಾಸಿಗಳನ್ನು ಹೊರಗಿಡುತ್ತದೆ, ಅವರಲ್ಲಿ ಹೆಚ್ಚಿನವರು ಬಡತನ ರೇಖೆಗಿಂತ ಕೆಳಗಿದ್ದಾರೆ.
ಈ ನಡುವೆ ʼಮುದ್ದು ಹುಟ್ಟಿಸುವʼ ಈ ಚುಕ್ಕಿಯುಳ್ಳ ದೊಡ್ಡ ಬೆಕ್ಕಿನ ಚಿತ್ರವು ಎಂಟು ವರ್ಷದ ಸತ್ಯನ್ ಜಾಟವ್‌ನಂತಹವರನ್ನು ಗೊಂದಲಕ್ಕೆ ದೂಡಿದೆ. ಅವನು ಅಪ್ಪನ ಬಳಿ “ಇದೇನು ಮೇಕೆಯೇ?” ಎಂದು ಕೇಳಿದರೆ, ಅವನ ತಮ್ಮ ನಾಲ್ಕು ವರ್ಷದ ಅನುರೋಧ್ ಪ್ರಕಾರ ಅದೊಂದು ನಾಯಿಯ ಚಿತ್ರ ಎನ್ನುತ್ತಾನೆ. ಈ ಮಕ್ಕಳು ವಾಸವಿರುವುದು ಅಭಯಾರಣ್ಯದ ಹೊರಗೆ 20 ಕಿಲೋಮೀಟರ್ ದೂರದಲ್ಲಿರುವ ಪೈರಾ ಜಾಟವ್ ಎನ್ನುವ ಕೊಪ್ಪಲಿನವರು.














