ಆಜಾದ್ ಮೈದಾನದಲ್ಲಿದ್ದ ದೊಡ್ಡ ಜನಸಂದಣಿಯನ್ನು ಕೈಲಾಶ್ ಖಂಡಗಲೆ ಕಣ್ಣಿನಲ್ಲೇ ಅಳತೆ ಮಾಡುತ್ತಿದರು. 38 ವರ್ಷದ ಭೂರಹಿತ ಕಾರ್ಮಿಕರಾದ ಅವರು "ಇಲ್ಲಿ ಸಾಕಷ್ಟು ಸಂಖ್ಯೆಯ ರೈತರಿದ್ದಾರೆ" ಎಂದು ಮೈದಾನದ ಸುತ್ತಲೂ ನೋಡುತ್ತಾ ಹೇಳಿದರು.
ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಆಂದೋಲನವನ್ನು ಬೆಂಬಲಿಸಲು ಮುಂಬೈನ ಆಜಾದ್ ಮೈದಾನದಲ್ಲಿ ಸಾವಿರಾರು ರೈತರು ಜಮಾಯಿಸಿದ್ದರು. ಜನವರಿ 24 ರಂದು ಕೈಲಾಶ್ ಕೂಡ ಅವರೊಂದಿಗೆ ಸೇರಿಕೊಂಡರು. "ಮೂರು ಕಾನೂನುಗಳ ವಿರುದ್ಧ ಪ್ರತಿಭಟಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಈ ಕಾನೂನುಗಳು ನನ್ನ ಕುಟುಂಬಕ್ಕೆ ಪಡಿತರವನ್ನು ಪಡೆಯುವ ಸೌಲಭ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ನಾನು ಕೇಳಿದ್ದೇನೆ,” ಎಂದು ಅವರು ಹೇಳುತ್ತಾರೆ. ಅವರ ಸಮುದಾಯದ ಸದಸ್ಯರು ಮುಖ್ಯವಾಗಿ ಟೊಮೆಟೊ, ಈರುಳ್ಳಿ, ಸಜ್ಜೆ ಮತ್ತು ಭತ್ತವನ್ನು ತಮ್ಮ ಒಂದರಿಂದ ಐದು ಎಕರೆಯವರೆಗಿನ ಹೊಲಗಳಲ್ಲಿ ಬೆಳೆಯುತ್ತಾರೆ.
ಜನವರಿ 24ರಿಂದ 26ರವರೆಗೆ ಸಂಯುಕ್ತ ಶೆತಕರಿ ಕಾಮಗಾರ್ ಮೋರ್ಚಾ ಆಯೋಜಿಸಿದ್ದ ಧರಣಿಯಲ್ಲಿ ಭಾಗವಹಿಸಿದ ಅಹ್ಮದ್‌ನಗರ ಜಿಲ್ಲೆಯ ಕೋಲಿ ಮಹಾದೇವ್ ಬುಡಕಟ್ಟು ಜನಾಂಗದ ಸುಮಾರು 500 ಜನರಲ್ಲಿ ಅವರೂ ಒಬ್ಬರಾಗಿದ್ದರು. ಅಕೋಲಾ, ಪಾರ್ನರ್ ಮತ್ತು ಸಂಗಮ್ನರ್ ತಾಲ್ಲೂಕಿನ ಬುಡಕಟ್ಟು ಸಮುದಾಯದ ರೈತರು ಮುಂಬೈಗೆ ಹೋಗಲು ಸುಮಾರು 300 ಕಿ.ಮೀ ದೂರದ ಪ್ರಯಾಣಕ್ಕಾಗಿ 35 ವ್ಯಾನ್‌ಗಳನ್ನು ಬಾಡಿಗೆಗೆ ಪಡೆದು, ತಲಾ 200 ರೂಪಾಯಿಗಳನ್ನು ನೀಡಿ ಅವುಗಳ ಬಾಡಿಗೆಯನ್ನು ಭರಿಸಿದ್ದಾರೆ.
ಸಂಗಮ್ನರ್ ತಾಲೂಕಿನ ಖಂಬೆ ಎನ್ನುವ ಊರಿನಲ್ಲಿ ತನ್ನ ವೃದ್ಧ ಪೋಷಕರು, ಮೂರು ಮಕ್ಕಳು ಮತ್ತು ಪತ್ನಿ ಭಾವನಾ ಜೊತೆ ವಾಸಿಸುವ ಕೈಲಾಶ್ ಅವರು ತನ್ನ ಕುಟುಂಬದ ಏಕೈಕ ಹಣ ಗಳಿಸುವ ಸದಸ್ಯ. "ನಾನು ಬೇರೆಯವರ ಹೊಲಗಳಲ್ಲಿ ಕೂಲಿ ಮಾಡುವ ಮೂಲಕ ದಿನಕ್ಕೆ 250 ರೂಪಾಯಿಗಳನ್ನು ಸಂಪಾದಿಸುತ್ತೇನೆ. ಆದರೆ ನನ್ನ ಕಾಲುಗಳಿಂದಾಗಿ ನನಗೆ ವರ್ಷಕ್ಕೆ 200 ದಿನಗಳಿಗಿಂತ ಹೆಚ್ಚು ಕಾಲ ದುಡಿಯಲು ಸಾಧ್ಯವಿಲ್ಲ." ಎಂದು ಅವರು ಹೇಳಿದರು. ಕೈಲಾಶ್ ಅವರ ಎಡಗಾಲಿಗೆ ಅವರ 13ನೇ ವಯಸ್ಸಿನಲ್ಲಿ ಗಾಯವಾಗಿದ್ದು, ಕಾಲಾನಂತರದಲ್ಲಿ ಸಾಕಷ್ಟು ವೈದ್ಯಕೀಯ ಆರೈಕೆಯ ಕೊರತೆಯಿಂದಾಗಿ ಅದು ಕುಂಟಾಯಿತು. ಬಲಗೈಯಲ್ಲಿನ ದೋಷದಿಂದಾಗಿ ಭಾವನಾ ಅವರಿಗೂ ಕಠಿಣ ಪರಿಶ್ರಮದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ.
ಅಲ್ಪ ಮತ್ತು ಅಸ್ಥಿರ ಆದಾಯದ ಕಾರಣ, ಖಂಡಗಲೆ ಕುಟುಂಬದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪಡಿತರ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ - ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅಡಿಯಲ್ಲಿ ಪಡಿತರ ಪಡೆಯಲು ಅರ್ಹತೆ ಪಡೆದ 80 ಕೋಟಿ ಜನರಲ್ಲಿ ಖಂಡಗಲೆ ಕುಟುಂಬವೂ ಸೇರಿದೆ. ಈ ಕಾಯ್ದೆಯು ಅರ್ಹ ಕುಟುಂಬಗಳಿಗೆ ತಿಂಗಳಿಗೆ ಒಟ್ಟು ಐದು ಕಿಲೋಗ್ರಾಂಗಳಷ್ಟು ಧಾನ್ಯವನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಅನುವು ಮಾಡಿಕೊಡುತ್ತದೆ - ಅಕ್ಕಿ ಕೆಜಿಗೆ 3 ರೂ., ಗೋಧಿ ಕೆಜಿಗೆ 2 ರೂ. ಮತ್ತು ಧಾನ್ಯಗಳು ಕೆಜಿಗೆ 1 ರೂ.
ಆದರೆ ಕೈಲಾಶ್‌ರ ಏಳು ಸದಸ್ಯರ ಕುಟುಂಬಕ್ಕೆ ಪ್ರತಿ ತಿಂಗಳು ಕೇವಲ 15 ಕೆಜಿ ಗೋಧಿ ಮತ್ತು 10 ಕೆಜಿ ಅಕ್ಕಿ ಸಿಗುತ್ತದೆ - ಇದು ಅವರಿಗೆ ಸಿಗಬೇಕಿರುವುದಕ್ಕಿಂತ 10 ಕೆಜಿ ಕಡಿಮೆ - ಅವರ ಇಬ್ಬರು ಚಿಕ್ಕ ಮಕ್ಕಳ ಹೆಸರುಗಳು ಅವರ ಬಿಪಿಎಲ್ (ಬಡತನದ ರೇಖೆಯ ಕೆಳಗೆ) ಪಡಿತರ ಚೀಟಿಯಿಂದ ಕಾಣೆಯಾಗಿದೆ.
“ಈ 25 ಕಿಲೋ ರೇಷನ್ 15 ದಿನಗಳಲ್ಲಿ ಮುಗಿದು ಹೋಗುತ್ತವೆ. ನಂತರ ನಾವು ನಮ್ಮ ಹಸಿವನ್ನು ನಿಗ್ರಹಿಸಬೇಕು ”ಎಂದು ಕೈಲಾಶ್ ಹೇಳುತ್ತಾರೆ, ಅವರು ಸ್ಥಳೀಯ ಪಿಡಿಎಸ್ ಅಂಗಡಿಗೆ ಒಟ್ಟು ನಾಲ್ಕು ಕಿಲೋಮೀಟರ್ ನಡೆದು ಪ್ರತಿ ತಿಂಗಳು ಕುಟುಂಬದ ಪಡಿತರವನ್ನು ಸಂಗ್ರಹಿಸುತ್ತಾರೆ. “ನಾವು ಎಣ್ಣೆ, ಉಪ್ಪು ಮತ್ತು ಮಕ್ಕಳ ಶಿಕ್ಷಣಕ್ಕೂ ಹಣ ಖರ್ಚು ಮಾಡಬೇಕಾಗುತ್ತದೆ. ಕಿರಾನಾ [ಕಿರಾಣಿ] ಅಂಗಡಿಯಿಂದ ದುಬಾರಿ ಧಾನ್ಯಗಳನ್ನು ಖರೀದಿಸಲು ಹಣ ಎಲ್ಲಿಂದ ತರುವದು? ”





