ಈ ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಚಿತ್ರಗಳನ್ನು ಪಿ.ಸಾಯಿನಾಥ್ ಅವರು 1993ರಿಂದ 2002ರ ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಈ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.
ಸ್ವಚ್ಛತೆ!
ಆಂಧ್ರಪ್ರದೇಶದ ವಿಜಯನಗರಂನಲ್ಲಿ, ಈ ವೃದ್ಧೆ ತನ್ನ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಒಂದೂ ಕಸವಿರದಂತೆ ಸ್ವಚ್ಛವಾಗಿರಿಸಿಕೊಳ್ಳುತ್ತಾರೆ. ಇದು ಮನೆಕೆಲಸ - ಮತ್ತು 'ಮಹಿಳೆಯರ ಕೆಲಸ' ಕೂಡ. ಆದರೆ ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ‘ಸ್ವಚ್ಛಗೊಳಿಸುವ’ ಕೆಲಸವನ್ನು ಹೆಚ್ಚಾಗಿ ಮಹಿಳೆಯರೇ ಮಾಡುತ್ತಾರೆ. ಮತ್ತು ಅವರು ಈ ಕೆಲಸದಲ್ಲಿ ಕಡಿಮೆ ಹಣ, ಹೆಚ್ಚು ಜನರ ಕೋಪವನ್ನು ಹೊರಬೇಕಾಗುತ್ತದೆ. ರಾಜಸ್ಥಾನದ ಜನರು ಇಂತಹ ಪರಿಸ್ಥಿತಿಗಳನ್ನು ಸ್ವಲ್ಪ ಹೆಚ್ಚು ಎದುರಿಸಬೇಕಾಗುತ್ತದೆ, ಈ ಮಹಿಳೆಯಂತೆ. ಆಕೆ ದಲಿತರು. ಈ ಮಹಿಳೆ ಕೈಯಿಂದ ಕಸ ಗುಡಿಸುತ್ತಾರೆ ಮತ್ತು ಜನರ ಮನೆಗಳಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ. ರಾಜಸ್ಥಾನದ ಸಿಕರ್‌ನಲ್ಲಿ ಸುಮಾರು 25 ಮನೆಗಳಲ್ಲಿ ಈಕೆ ಪ್ರತಿದಿನ ಈ ಕೆಲಸವನ್ನು ಮಾಡುತ್ತಾರೆ.
ಪ್ರತಿಯಾಗಿ, ಅವರು ಪ್ರತಿ ಮನೆಯಿಂದ ದಿನಕ್ಕೆ ಒಂದು ರೊಟ್ಟಿಯನ್ನು ಕೂಲಿಯಾಗಿ ಪಡೆಯುತ್ತಾರೆ. ತಿಂಗಳಿಗೊಮ್ಮೆ ಸ್ವಲ್ಪ ಮನೆಯವರು ಒಂದಿಷ್ಟು ಉದಾರಿಯಿದ್ದರೆ ಒಂದಿಷ್ಟು ರೂಪಾಯಿ ಕೊಟ್ಟರೂ ಕೊಡಬಹುದು. ಒಂದು ಮನೆಯಿಂದ ಹತ್ತು ರೂ. ಅಧಿಕಾರಿಗಳು ಅವರನ್ನು 'ಭಂಗಿ' ಎಂದು ಕರೆಯುತ್ತಾರೆ, ಆದರೆ ಅವರು ತನ್ನನ್ನು 'ಮೆಹ್ತರ್' ಎಂದು ಕರೆದುಕೊಳ್ಳುತ್ತಾರೆ. ಈ ಜಾತಿ ಗುಂಪುಗಳಿಗೆ ಸೇರಿದ ಹೆಚ್ಚಿನ ಜನರು ತಮ್ಮನ್ನು 'ಬಾಲ್ಮೀಕಿ' ಎಂದು ಕರೆದುಕೊಳ್ಳುತ್ತಾರೆ.
ಆಕೆ ಮಾನವ ಮಲವನ್ನು ತಲೆಯ ಮೇಲೆ ಹೊತ್ತಿದ್ದಾರೆ. ನಾಗರಿಕ ಸಮಾಜ ಇದನ್ನು ರಾತ್ರಿಯ ಮಣ್ಣು ಎಂದು ಕರೆಯುತ್ತದೆ. ಅವರು ಭಾರತದ ಅತ್ಯಂತ ದುರ್ಬಲ ಮತ್ತು ಶೋಷಿತ ನಾಗರಿಕರಲ್ಲಿ ಒಬ್ಬರು. ಮತ್ತು ಈ ಮಹಿಳೆಯಂತಹ ಸಾವಿರಾರು ಜನರು ರಾಜಸ್ಥಾನದ ಸಿಕಾರ್ ಒಂದರಲ್ಲೇ ಇದ್ದಾರೆ.
ಭಾರತದಲ್ಲಿ ಎಷ್ಟು ಮಲ ಹೊರುವವರಿದ್ದಾರೆ? ನಮಗೆ ಗೊತ್ತಿಲ್ಲ. 1971ರ ಜನಗಣತಿಯವರೆಗೂ, ಇದನ್ನು ಪ್ರತ್ಯೇಕ ಉದ್ಯೋಗ ಎಂದು ಪಟ್ಟಿ ಮಾಡಲಾಗಿಲ್ಲ. ‘ರಾತ್ರಿಯ ಮಣ್ಣನ್ನು’ಸ್ವಚ್ಛಗೊಳಿಸುವ ಕೂಲಿಕಾರ್ಮಿಕರು ಅಸ್ತಿತ್ವದಲ್ಲಿದ್ದಾರೆಂದು ಕೆಲವು ರಾಜ್ಯಗಳ ಸರಕಾರಗಳು ನಂಬಲೂ ಸಿದ್ಧವಿಲ್ಲ. ಆದರೂ, ಅಸ್ತಿತ್ವದಲ್ಲಿರುವ ಕೆಲವು ದೋಷಪೂರಿತ, ಅರ್ಧ-ಬೆಂದ ಮಾಹಿತಿಯು ಸುಮಾರು ಒಂದು ಮಿಲಿಯನ್ ದಲಿತರು ಮಲ ಹೊರುವ ಕೆಲಸ ಮಾಡುತ್ತಾರೆ ಎಂದು ಸೂಚಿಸುತ್ತದೆ. ವಾಸ್ತವಿಕ ಅಂಕಿ ಅಂಶವು ಇದಕ್ಕಿಂತ ಹೆಚ್ಚಿರಬಹುದು. ‘ರಾತ್ರಿಯ ಮಣ್ಣಿಗೆ’ಸಂಬಂಧಿಸಿದ ಕೆಲಸವನ್ನು ಹೆಚ್ಚಾಗಿ ಮಹಿಳೆಯರೇ ಮಾಡುತ್ತಾರೆ.




