ಈ ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಚಿತ್ರಗಳನ್ನು ಪಿ.ಸಾಯಿನಾಥ್ ಅವರು 1993ರಿಂದ 2002ರ ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಈ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.
ಸಂತೆಯಿಂದ ಸಂತೆಗೆ...
ಈ ಬಿದಿರುಗಳ ಉದ್ದವು ಇವುಗಳನ್ನು ಇಲ್ಲಿಗೆ ಹೊತ್ತು ತಂದ ಮಹಿಳೆಯರಿಗಿಂತ ಸುಮಾರು ಮೂರು ಪಟ್ಟು ಹೆಚ್ಚು. ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯ ಈ ವಾರದ ಮಾರುಕಟ್ಟೆ (ಸಂತೆ)ಗೆ, ಪ್ರತಿ ಮಹಿಳೆ ಒಂದು ಅಥವಾ ಅದಕ್ಕಿಂತಲೂ ಹೆಚ್ಚು ಬಿದಿರುಗಳನ್ನು ಹೊತ್ತು ತಂದಿದ್ದಾರೆ. ಇಲ್ಲಿಗೆ ತಲುಪಲು, ಕೆಲವು ಮಹಿಳೆಯರು ತಮ್ಮ ತಲೆ ಅಥವಾ ಭುಜದ ಮೇಲೆ ಬಿದಿರನ್ನು ಹಿಡಿದು 12 ಕಿಲೋಮೀಟರ್‌ಗಳಷ್ಟು ನಡೆಯಬೇಕು. ನಿಸ್ಸಂಶಯವಾಗಿ, ಇದನ್ನು ಹೊತ್ತು ತರುವ ಮೊದಲು, ಅವರು ಕಾಡಿನಿಂದ ಬಿದಿರು ಕತ್ತರಿಸಿ ತರುವಲ್ಲಿ ಗಂಟೆಗಳ ಕಾಲ ಕೆಲಸ ಮಾಡಿರಬೇಕು.
ಇಷ್ಟು ಕಷ್ಟಪಟ್ಟು, ಅದೃಷ್ಟವಿದ್ದರೆ, ದಿನದ ಅಂತ್ಯದ ವೇಳೆಗೆ ಅವರು 20 ರೂಪಾಯಿ ಗಳಿಸಬಹುದು. ಕೆಲವು ಮಹಿಳೆಯರು ಗೊಡ್ಡಾದಲ್ಲಿಯೇ ಮತ್ತೊಂದು ಸಂತೆಗೆ ಹೋಗುತ್ತಿದ್ದಾರೆ, ಅಲ್ಲಿ ಅವರಿಗೆ ಕಡಿಮೆ ಹಣ ಸಿಗುತ್ತದೆ. ತಲೆಯ ಮೇಲೆ ಎತ್ತರದ ಎಲೆ ಹೊರೆಗಳನ್ನು ತರುತ್ತಿರುವ ಮಹಿಳೆಯರು ಸಹ ಈ ಎಲೆಗಳನ್ನು ಸಂಗ್ರಹಿಸಿ, ಒಟ್ಟಿಗೆ ಜೋಡಿಸಿ ಹೊಲಿಗೆ ಹಾಕಿ ಮಾರುಕಟ್ಟೆಗೆ ತಂದಿದ್ದಾರೆ. ಒಮ್ಮೆ ಬಳಸಿದ ನಂತರ ಎಸೆಯುವ ಈ ಎಲೆಗಳಿಂದ ಅತ್ಯುತ್ತಮವಾದ 'ತಟ್ಟೆ'ಗಳನ್ನು ತಯಾರಿಸಲಾಗುತ್ತದೆ. ಟೀ ಅಂಗಡಿಗಳು, ಹೋಟೆಲ್‌ಗಳು ಮತ್ತು ಕ್ಯಾಂಟೀನ್‌ಗಳು ಅವುಗಳನ್ನು ನೂರಾರು ಸಂಖ್ಯೆಯಲ್ಲಿ ಖರೀದಿಸುತ್ತವೆ. ಬಹುಶಃ ಈ ಮಹಿಳೆಯರು ರೂ.15-20 ಗಳಿಸಬಹುದು. ಮುಂದಿನ ಬಾರಿ ನೀವು ಈ ತಟ್ಟೆಯಲ್ಲಿ ರೈಲ್ವೇ ನಿಲ್ದಾಣದಲ್ಲಿ ತಿನ್ನುವಾಗ ಈ ಮಹಿಳೆಯರ ಕೆಲಸ ನೆನಪಾಗಬಹುದು.









