ಈ ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಚಿತ್ರಗಳನ್ನು ಪಿ.ಸಾಯಿನಾಥ್ ಅವರು 1993ರಿಂದ 2002ರ ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಈ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.
ಮಣ್ಣು, ತಾಯಂದಿರು ಮತ್ತು ʼಕೆಲಸದ ಗಂಟೆಗಳುʼ (man hours)
ಆಂಧ್ರಪ್ರದೇಶದ ವಿಜಯನಗರದಲ್ಲಿ ಭೂರಹಿತ ಕಾರ್ಮಿಕರೊಂದಿಗಿನ ಸಭೆಯನ್ನು ಬೆಳಗ್ಗೆ 7 ಗಂಟೆಗೆ ಸ್ವಲ್ಪ ಮೊದಲು ಎಂದು ನಿರ್ಧರಿಸಲಾಗಿತ್ತು. ದಿನವಿಡೀ ಅವರ ಕೆಲಸಗಳನ್ನು ತಿಳಿದುಕೊಳ್ಳುವ ಆಲೋಚನೆಯೊಂದಿಗೆ ನಾವು ಹಾಗೆ ಮಾಡಲು ನಿರ್ಧರಿಸಿದ್ದೆವು. ಆದರೂ ನಾವು ನಿಗದಿಪಡಿಸಿದ್ದ ಸಮಯ ತಡವಾಗಿತ್ತು. ನಾವು ಅಲ್ಲಿಗೆ ತಲುಪುವ ಹೊತ್ತಿಗೆ ಆ ಮಹಿಳೆಯರು ಅಂದಿನ ಮೂರು ಗಂಟೆಗಳ ಕೆಲಸವನ್ನು ಮುಗಿಸಿಯಾಗಿತ್ತು. ಅವರೆಲ್ಲರೂ ಅಲ್ಲಿನ ತಾಳೆಮರದ ತೋಪಿನಲ್ಲಿ ಅಗೆಯಲಾಗಿದ್ದ ಗುಂಡಿಯಲ್ಲಿನ ಮಣ್ಣು ತೆಗೆಯಲೆಂದು ಕೆಲಸದ ಸ್ಥಳದಲ್ಲಿ ಸೇರಿರುವ ತಮ್ಮ ಜೊತೆಗಾರರನ್ನು ಕೂಡಿಕೊಳ್ಳಲು ನಡೆದು ಹೋಗುತ್ತಿದ್ದರು.
ಈ ಮಹಿಳೆಯರಲ್ಲಿ ಅನೇಕರು ಈಗಾಗಲೇ ಅಡುಗೆ, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಮತ್ತು ಇತರ ಕೆಲವು ಮನೆಕೆಲಸಗಳನ್ನು ಮುಗಿಸಿ ಬಂದಿದ್ದರು. ಮಕ್ಕಳನ್ನು ಶಾಲೆಗೆ ಹೊರಡಿಸಿ ಬಂದಿದ್ದರು. ಕುಟುಂಬದ ಎಲ್ಲರಿಗೂ ತಿಂಡಿ ನೀಡಿ, ಎಂದಿನಂತೆ ಮಹಿಳೆಯರು ಕೊನೆಯದಾಗಿ ಊಟ ಮಾಡಿದ್ದರು. ಆದರೆ ಸರ್ಕಾರಿ ಉದ್ಯೋಗ ಖಾತ್ರಿ ಸೈಟ್‌ನಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ವೇತನ ನೀಡುತ್ತಿರುವುದು ಸ್ಪಷ್ಟವಾಗಿದೆ.
ಇಲ್ಲಿ ಕನಿಷ್ಠ ವೇತನ ಕಾಯ್ದೆಯನ್ನು ಪುರುಷರು ಮತ್ತು ಮಹಿಳೆಯರು ಇಬ್ಬರ ವಿಷಯದಲ್ಲೂ ಉಲ್ಲಂಘಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿರುವಂತೆ. ಆದರೂ, ಮಹಿಳಾ ಕಾರ್ಮಿಕರು ಪುರುಷರು ಪಡೆಯುವ ವೇತನದ ಅರ್ಧ ಅಥವಾ ಮೂರನೇ ಎರಡರಷ್ಟು ಪಡೆಯುತ್ತಾರೆ, ಇದು ಎಲ್ಲೆಡೆಯ ಕಥೆ.







