ಈ ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಚಿತ್ರಗಳನ್ನು ಪಿ.ಸಾಯಿನಾಥ್ ಅವರು 1993ರಿಂದ 2002ರ ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಈ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.
ಬದುಕನ್ನು ಒಟ್ಟುಗೂಡಿಸುವ ಯತ್ನದಲ್ಲಿ
ಆಕೆ ಬೆಳಗಿನ ಜಾವ 4:30ರ ಹೊತ್ತಿಗೆಲ್ಲ ಎದ್ದುಬಿಡುತ್ತಾರೆ. ಮತ್ತು ಒಂದು ಗಂಟೆಯ ನಂತರ, ಛತ್ತೀಸ್‌ಗಢದ ಸರ್ಗುಜಾ ಅರಣ್ಯದಲ್ಲಿ ತೆಂಡೂ ಎಲೆಗಳನ್ನು ಕೀಳತೊಡಗುತ್ತಾರೆ. ಈ ಸಮಯದಲ್ಲಿ ರಾಜ್ಯದಾದ್ಯಂತ ಅವರಂತಹ ಸಾವಿರಾರು ಆದಿವಾಸಿಗಳು ಇದೇ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಬೀಡಿ ತಯಾರಿಕೆಯಲ್ಲಿ ಬಳಸುವ ಈ ಎಲೆಗಳನ್ನು ಕೀಳಲು ಇಡೀ ಕುಟುಂಬ ಒಂದು ಘಟಕವಾಗಿ ಕೆಲಸ ಮಾಡುತ್ತದೆ.
ದಿನವು ಉತ್ತಮವಾಗಿದ್ದರೆ, ಅವರ ಆರು ಸದಸ್ಯರ ಕುಟುಂಬವು ರೂ.90ರವರೆಗೆ ಗಳಿಸಬಹುದು. ತೆಂಡೂ ಸೀಸನ್‌ನ ಅತ್ಯುತ್ತಮ ಎರಡು ವಾರಗಳಲ್ಲಿ ಅವರು ಗಳಿಸುವದನ್ನು ಮುಂದಿನ ಮೂರು ತಿಂಗಳಲ್ಲಿ ಗಳಿಸುವುದಿಲ್ಲ. ಹಾಗಾಗಿ ಈ ಎಲೆಗಳು ಇರುವವರೆಗೆ, ಅವುಗಳಿಂದ ಸಾಧ್ಯವಾದಷ್ಟು ಗಳಿಸಲು ಪ್ರಯತ್ನಿಸುತ್ತಾರೆ. ಆರು ವಾರಗಳ ನಂತರ, ಅವರು ಜೀವನೋಪಾಯಕ್ಕಾಗಿ ಹೊಸ ತಂತ್ರವನ್ನು ರೂಪಿಸಬೇಕಾಗುತ್ತದೆ. ಈ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬವೂ ಈ ಸಮಯದಲ್ಲಿ ಕಾಡಿನಲ್ಲಿ ಕಂಡುಬರುತ್ತದೆ. ಬುಡಕಟ್ಟು ಆರ್ಥಿಕತೆಗೆ ತೆಂಡೂ ಎಲೆಗಳು ಬಹಳ ಮುಖ್ಯ.






