ಈ ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಚಿತ್ರಗಳನ್ನು ಪಿ.ಸಾಯಿನಾಥ್ ಅವರು 1993ರಿಂದ 2002ರ ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಈ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.
ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು
ಆ ಮಹಿಳೆ ಕಡಿದಾದ ಇಳಿಜಾರಿನ ಕಡೆಯಿಂದ ಮೇಲೆ ಏರುತ್ತಿದ್ದರು, ತಲೆಯ ಮೇಲೆ ಭಾರವಾದ ಹೊರೆಯು ಆಕೆಯ ಮುಖವನ್ನು ಮುಚ್ಚಿತ್ತು. ಆಕೆಯ ಕೆಲಸ ಕಾಣುತ್ತಿತ್ತು, ಆದರೆ ಆ ಮಹಿಳೆ ಕಾಣುತ್ತಿರಲಿಲ್ಲ. ಅಂದರೆ, ತಾವು ಮಾಡುವ ರಾಶಿ, ರಾಶಿ ಕೆಲಸಗಳ ನಡುವೆಯೂ ಈ ಮಹಿಳೆಯರು ಅಜ್ಞಾತರು. ಒಡಿಶಾದ ಮಲ್ಕಾನ್‌ಗಿರಿಯ ಈ ಭೂರಹಿತ ಮಹಿಳೆಗೆ ಇದು ಅಂದಿನ ಸಾಮಾನ್ಯ ಕೆಲಸದ ಭಾಗವಾಗಿತ್ತು. ನೀರು ತುಂಬುವುದು, ಉರುವಲು ಮತ್ತು ಮೇವು ಸಂಗ್ರಹಿಸುವುದು ಇವೆಲ್ಲವುಗಳ ಹಾಗೆ. ಈ ಮಹಿಳೆಯರ ಜೀವನದ ಮೂರನೇ ಒಂದು ಭಾಗವು ಈ ಮೂರು ಕೆಲಸಗಳಲ್ಲಿ ಕಳೆದುಹೋಗುತ್ತದೆ. ದೇಶದ ಕೆಲವು ಭಾಗಗಳಲ್ಲಿ, ಮಹಿಳೆಯರು ತಮ್ಮ ಕುಟುಂಬಗಳಿಗೆ ನೀರು ಮತ್ತು ಉರುವಲನ್ನು ಸಂಗ್ರಹಿಸಲು ದಿನಕ್ಕೆ ಏಳು ಗಂಟೆಗಳ ಕಾಲ ಶ್ರಮ ಪಡುತ್ತಾರೆ. ಜಾನುವಾರುಗಳಿಗೆ ಮೇವು ಸಂಗ್ರಹಿಸಲು ದಿನದ ಕೆಲವು ಸಮಯ ಬೇಕಾಗುತ್ತದೆ. ಗ್ರಾಮೀಣ ಭಾರತದ ಹಲವಾರು ಮಹಿಳೆಯರು ಈ ವಸ್ತುಗಳನ್ನು ಸಂಗ್ರಹಿಸಲು ಪ್ರತಿದಿನ ಅನೇಕ ಕಿಲೋಮೀಟರ್‌ಗಳಷ್ಟು ನಡೆಯುತ್ತಾರೆ.
ತಲೆಯ ಮೇಲಿನ ಹೊರೆ ಬಹಳ ಭಾರವಿರುತ್ತದೆ. ಮಲ್ಕಾನ್‌ನಗಿರಿಯಲ್ಲಿ ಬೆಟ್ಟದ ಇಳಿಜಾರು ಹತ್ತುತ್ತಿರುವ ಈ ಬುಡಕಟ್ಟು ಮಹಿಳೆ ಸುಮಾರು 30 ಕೆಜಿ ತೂಕದ ಉರುವಲು ಸೌದೆಯನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾರೆ. ಮತ್ತು ಅವರು ಇನ್ನೂ ಮೂರು ಕಿಲೋಮೀಟರ್ ನಡೆಯಬೇಕಿದೆ. ಅನೇಕ ಮಹಿಳೆಯರು ತಮ್ಮ ಮನೆಗಳಿಗೆ ನೀರು ತರಲು ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ದೂರವನ್ನು ಪ್ರಯಾಣಿಸುತ್ತಾರೆ.






