ಈ ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಚಿತ್ರಗಳನ್ನು ಪಿ.ಸಾಯಿನಾಥ್ ಅವರು 1993ರಿಂದ 2002ರ ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಈ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.
ಇಟ್ಟಿಗೆಗಳು, ಕಲ್ಲಿದ್ದಲು ಮತ್ತು ಕಲ್ಲು
ಅವರು ಬರಿಗಾಲಿನಲ್ಲಿ ನಡೆಯುತ್ತಿರುವುದಷ್ಟೇ ಅಲ್ಲ, ಅವರ ತಲೆಯ ಮೇಲೆ ಬಿಸಿ ಇಟ್ಟಿಗೆಗಳ ಹೊರೆಯೂ ಇದೆ. ಮರದ ಅಟ್ಟಣಿಗೆಯಂತಹ ಸೇತುವೆಯ ಮೇಲೆ ಸಾಲಾಗಿ ಸಾಗುತ್ತಿರುವ ಈ ಮಹಿಳೆಯರು ಒರಿಸ್ಸಾ ಮೂಲದ ಕೂಲಿ ಕಾರ್ಮಿಕರು. ಇಲ್ಲಿ ಆಂಧ್ರಪ್ರದೇಶದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಇಲ್ಲಿನ ತಾಪಮಾನವು 49 ಡಿಗ್ರಿ ಸೆಲ್ಸಿಯಸ್ ಇದೆ. ಇಟ್ಟಿಗೆ ಭಟ್ಟಿಯ ಸುತ್ತ ಈ ತಾಪಮಾನವು ಇನ್ನಷ್ಟು ಹೆಚ್ಚಿರುತ್ತದೆ, ಈ ಮಹಿಳೆಯರು ಹೆಚ್ಚಿನ ಕೆಲಸವನ್ನು ಅಲ್ಲೇ ಮಾಡುತ್ತಾರೆ.
ದಿನವಿಡೀ ದುಡಿದ ನಂತರ ಪ್ರತಿ ಮಹಿಳೆಗೆ ಪ್ರತಿಫಲವಾಗಿ 10-12 ರೂಪಾಯಿ ಕೂಲಿ ಸಿಗುತ್ತದೆ, ಇದು ಪುರುಷರ ದೈನಂದಿನ ಕರುಣಾಜನಕವೆನ್ನಿಸುವ ಸಂಬಳವಾದ 15-20 ರೂಪಾಯಿಗಿಂತ ಕಡಿಮೆ. ಗುತ್ತಿಗೆದಾರರು ಇಂತಹ ವಲಸೆ ಕಾರ್ಮಿಕರ ಇಡೀ ಕುಟುಂಬವನ್ನು 'ಮುಂಗಡ' ಪಾವತಿಸಿ ಇಲ್ಲಿಗೆ ಕರೆತರುತ್ತಾರೆ. ಈ ಸಾಲಗಳಿಂದಾಗಿ, ಈ ವಲಸೆ ಕಾರ್ಮಿಕರು ಗುತ್ತಿಗೆದಾರರೊಂದಿಗೆ ಬಂಧಿಸಲ್ಪಟ್ಟಿದ್ದಾರೆ ಮತ್ತು ಆಗಾಗ್ಗೆ ಅವರ ಜೀತದಾಳುಗಳಂತಾಗಿಬಿಡುತ್ತಾರೆ. ಇಲ್ಲಿಗೆ ಬರುವ ಶೇಕಡ 90ರಷ್ಟು ಜನರು ಭೂರಹಿತರು ಅಥವಾ ಸಣ್ಣ-ಬಡ ರೈತರು.







