ಈ ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಚಿತ್ರಗಳನ್ನು ಪಿ.ಸಾಯಿನಾಥ್ ಅವರು 1993ರಿಂದ 2002ರ ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಈ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.
ಅದೇ ಮನೆ, ಅದೇ ಕೆಲಸ…
ಈ ಮಹಿಳೆ ಈಗಾಗಲೇ ಅಡುಗೆ ಮಾಡಿಟ್ಟಿದ್ದಾರೆ. ತಮಿಳುನಾಡಿನಲ್ಲಿ ನೆಲೆಸಿರುವ ಇವರ ಕುಟುಂಬ ಜೀವನೋಪಾಯಕ್ಕಾಗಿ ತಾಳೆಬೆಲ್ಲ ತಯಾರಿಸಿ ಮಾರಾಟ ಮಾಡುತ್ತಾರೆ. ಈ ದೊಡ್ಡ ಪಾತ್ರೆಯಲ್ಲಿ ಅದನ್ನೇ ತಯಾರಿಸುತ್ತಿದ್ದಾರೆ. ಇವರು ಮಾಡುವ ಕೆಲಸದಲ್ಲಿ ಸಣ್ಣ ತಪ್ಪಾದರೂ ಈ ಕುಟುಂಬದ ಮುಂದಿನ ದಿನಗಳ ಆದಾಯವನ್ನೇ ಕಸಿದುಕೊಳ್ಳಬಹುದು.
ಇದು ಮುಗಿಯಲು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಅವರು ಅದೇ ಸಮಯವನ್ನು ಅಡುಗೆಯಲ್ಲಿ ಕಳೆದರು. ದಿನವಿಡೀ ಕೆಲವು ಕೆಲಸಗಳನ್ನು ಮಾಡುವಾಗ ಹೊಗೆಯನ್ನು ಉಸಿರಾಡುತ್ತಾ ಹಲವು ಗಂಟೆಗಳ ಕಾಲ ಕಳೆಯಬೇಕಾಗುತ್ತದೆ. ಮತ್ತು, ಮಹಿಳೆಯಾಗಿ ಆಕೆಗೆ ನೀಡಲಾದ ಎಲ್ಲಾ ಇತರ ಕಾರ್ಯಗಳಲ್ಲಿ, ಈ ಕೆಲಸವು ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಚಿಕ್ಕಂದಿನಿಂದಲೂ ಈ ಕೆಲಸ ಅವರ ಮೇಲೆ ಹೇರಲಾಗಿರುವುದರಿಂದ ಅವರಂತಹ ಲಕ್ಷಗಟ್ಟಲೆ ಹೆಣ್ಣುಮಕ್ಕಳು ಬಹುಬೇಗ ಶಾಲೆ ಬಿಡುತ್ತಾರೆ.









