“ಭಾದೋಹಿ ಹಾಸುಗಂಬಳಿಗೆ ಹೆಸರಾದ ಜಿಲ್ಲೆ. ಆದರೆ, ಇಲ್ಲಿ ಕೆಲಸ ಇಲ್ಲ” ಎಂದು ನಲವತ್ತರ ಹರೆಯದ ನೇಕರ ಅಖ್ತರ್ ಅಲಿ ಹೇಳಿದರು. “ನನ್ನ ಬಾಲ್ಯ ಕಳೆದುದು ಇಲ್ಲಿಯೇ. ಹಾಗಾಗಿಯೇ ನಾನು ಹಾಸುಗಂಬಳಿ ನೇಯುವುದನ್ನು ಕಲಿತೆ”. ಆದರೆ, ನೇಕಾರಿಕೆಯಲ್ಲಿ ಆದಾಯ ಕುಂಟಿತವಾದ ಕಾರಣ ಅಲಿ ಈಗ ಟೈಲರಿಂಗ್ ಮಾಡುತ್ತಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರ್ ವಿಭಾಗದ ಭಾದೊಹಿ ಜಿಲ್ಲೆ ದೇಶದ ಅತಿ ದೊಡ್ಡ ಹಾಸುಗಂಬಳಿ ನೇಕಾರಿಕೆಯ ಕ್ಲಸ್ಟರ್‌ನ ಕೇಂದ್ರ ಸ್ಥಾನ. ಈ ಕ್ಲಸ್ಟರ್ ನೊಳಗೆ ಮಿಜಾಪುರ, ವಾರಣಾಸಿ, ಗಾಝಿಪುರ, ಸೋನಭದ್ರಾ, ಕೌಶಂಭಿ, ಅಲ್ಲಹಾಬಾದ್, ಜಾನ್ಪುರ್, ಚಂದೌಲಿ ಸೇರುತ್ತವೆ. ಈ ಉದ್ಯಮವು ಅಪಾರ ಸಂಖ್ಯೆಯ ಮಹಿಳೆಯರೂ ಸೇರಿದಂತೆ ಸುಮಾರು ಎರಡು ಮಿಲಿಯನ್ ಗ್ರಾಮೀಣ ಕರಕುಶಲ ಕಾರ್ಮಿಕರಿಗೆ ಉದ್ಯೋಗಾವಕಾಶ ಒದಗಿಸುತ್ತದೆ.
ಇಲ್ಲಿನ ನೇಯುವ ವಿಧಾನ ಕೂಡ ವಿಶಿಷ್ಟವಾದುದು. ಕೈಯಿಂದ ಹೆಣೆಯುವ ಈ ಹಾಸುಗಂಬಳಿಗಳನ್ನು ಲಂಬಾಕೃತಿಯ ಮಗ್ಗಗಳನ್ನು ಬಳಸಿ ನೇಯಲಾಗುತ್ತದೆ. ಒಂದು ಚದರ ಇಂಚಿಗೆ 30 ರಿಂದ 300 ಹೆಣಿಕೆ ಹಾಕಲಾಗುತ್ತದೆ. ನೇಯುವ ಪ್ರಕ್ರಿಯೆ ಮತ್ತು ಬಳಸುವ ಕಚ್ಚಾ ವಸ್ತು- ಉಣ್ಣೆ, ಹತ್ತಿ ಮತ್ತು ರೇಶ್ಮೆ ನೂಲು- ಕಳೆದ ಇನ್ನೂರು ವರ್ಷಗಳಿಂದ ಬದಲಾಗಿಲ್ಲ. ಮಗ್ಗದ ಮೇಲೆ ನೂಲು ಹೆಣೆಯುವ ಕಲೆಯನ್ನು ಕಾರ್ಮಿಕರು ತಮ್ಮ ಮಕ್ಕಳಿಗೆ ಕಲಿಸಿಕೊಡುತ್ತಾರೆ.
ವಿಶಿಷ್ಟ ನೇಯ್ಗೆ ವಿಧಾನ ಇಲ್ಲಿ ಅನುಸರಿಸುವ ಕಾರಣ ಭಾದೊಹಿ ಹಾಸುಗಂಬಳಿಗಳಿಗೆ 2010ರಲ್ಲಿ ಜಿಯಾಗ್ರಫಿಕಲ್ ಇಂಡಿಕೇಶನ್ ಪ್ರಮಾಣಪತ್ರ ಲಭಿಸಿದೆ. ಜಿಐ ಟ್ಯಾಗ್ ದೊರೆತ ಬಳಿಕ ಈ ಉದ್ಯಮ ಬೆಳೆಯುತ್ತದೆ ಎಂದು ಆಶಿಸಲಾಗಿತ್ತು. ಆದರೆ, ಅದರಿಂದ ಹಾಸುಗಂಬಳಿ ನೇಕಾರರ ವ್ಯಾಪಾರದಲ್ಲಿ ವೃದ್ಧಿಯೇನೂ ಕಂಡುಬAದಿಲ್ಲ.
ಉದಾಹರಣೆಗೆ, 1935ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದ ಮುಬಾರಕ್ ಅಲಿ ಎಂಡ್ ಸನ್ಸ್ ಮಳಿಗೆ 2016ರಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವ ತನಕ ಇಂಗ್ಲೆAಡ್, ಅಮೇರಿಕಾ ಸಂಯುಕ್ತ ಸಂಸ್ಥಾನ, ಐರೋಪ್ಯ ಒಕ್ಕೂಟ ಮತ್ತು ಜಪಾನ್ ದೇಶಗಳಿಗೆ ಹಾಸುಗಂಬಳಿಗಳನ್ನು ರಫ್ತು ಮಾಡುತ್ತಿತ್ತು. ಮಳಿಗೆಯ ಮಾಜಿ ಮಾಲಕ ಮತ್ತು ಸಂಸ್ಥಾಪಕ ಮುಬಾರಕ್ ಅವರ ಮೊಮ್ಮಗ 67 ವರ್ಷ ಪ್ರಾಯದ ಖಾಲಿದ್ ಖಾನ್ ಹೇಳುವಂತೆ, “ನನ್ನ ಅಜ್ಜ ಮತ್ತು ಅಪ್ಪ ಇದೇ ವ್ಯವಹಾರ ಮಾಡಿಕೊಂಡಿದ್ದರು. ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ನಮ್ಮ ವ್ಯಾಪಾರ ಶುರುವಾಗಿತ್ತು ಮತ್ತು ಆಗ ‘ಮೇಡ್ ಇನ್ ಬ್ರಿಟಿಷ್ ಇಂಡಿಯಾ’ ಎಂಬ ಲೇಬಲ್ ಹೊಂದಿದ್ದ ಹಾಸುಗಂಬಳಿಗಳು ಇಲ್ಲಿಂದ ರಫ್ತಾಗುತ್ತಿದ್ದವು.


