ಪೂರ್ವ ಘಟ್ಟದ ಒರಟು ಪರ್ವತಗಳ ತುತ್ತ ತುದಿಯಲ್ಲಿ ಸೂರ್ಯ ಮುಳುಗುತ್ತಿದ್ದಂತೆ, ಪಕ್ಕದ ಕಾಡಿನಲ್ಲಿನ ಕಾಮಳ್ಳಿ (hill mynah) ಹಕ್ಕಿಗಳ ಕೂಗನ್ನು ಅರೆಸೇನಾ ಪಡೆಯ ಸೈನಿಕರ ಶೂಗಳ ಭಾರೀ ಸದ್ದು ಇಲ್ಲವಾಗಿಸುತ್ತವೆ. ಇಂದು, ಅವರು ಮತ್ತೆ ಇಲ್ಲಿನ ಹಳ್ಳಿಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಇಂತಹ ರಾತ್ರಿಗಳಲ್ಲಿ ಆಕೆಗೆ ಭಯವಾಗುವುದು ಹೆಚ್ಚು.
ಆಕೆಗೆ ತನಗೆ ದೇಮತಿಯೆಂದು ಏಕೆ ಹೆಸರಿಡಲಾಗಿದೆಯೆನ್ನುವುದು ತಿಳಿದಿರಲಿಲ್ಲ. "ಆಕೆ ನಮ್ಮ ಹಳ್ಳಿಯ ಧೈರ್ಯವಂತ ಮಹಿಳೆ, ಬ್ರಿಟಿಷ್ ಸೈನ್ಯವನ್ನು ಒಬ್ಬರೇ ಓಡಿಸಿಬಿಟ್ಟಿದ್ದರು" ಎಂದು ಆಕೆಯ ತಾಯಿ ದೇಮತಿಯವರ ಕುರಿತು ಹೆಮ್ಮೆಯಿಂದ ಹೇಳುತ್ತಿದ್ದರು. ಆದರೆ ಅವಳಿಗೆ ದೇಮತಿಗಿದ್ದಷ್ಟು ಧೈರ್ಯವಿದ್ದಿರಲಿಲ್ಲ. ಆಕೆ ಅಂಜುಬುರುಕಿಯಾಗಿದ್ದಳು.
ಅವಳಿಗೆ ಹೊಟ್ಟೆ ನೋವು, ಹಸಿವು, ನೀರು ಸಿಗದ ದಿನಗಳು, ಹಣವಿಲ್ಲದ ಪರಿಸ್ಥಿತಿ, ಅನುಮಾನಾಸ್ಪದ ಕಣ್ಣುಗಳು, ಬೆದರಿಸುವ ಕಣ್ಣುಗಳು, ನಿಯಮಿತ ಬಂಧನಗಳು, ಚಿತ್ರಹಿಂಸೆ, ಸಾಯುತ್ತಿರುವ ಜನರ ಮಧ್ಯೆ ಬದುಕುವುದು ಇವೆಲ್ಲವನ್ನೂ ಕಲಿತಿದ್ದಳು. ಆದರೆ ಈ ಎಲ್ಲದರ ಜೊತೆಗೆ, ಅವಳ ಬಳಿ ಅರಣ್ಯ, ಮರಗಳು ಮತ್ತು ಜಲಪಾತಗಳಿದ್ದವು. ಅವಳು ತನ್ನ ತಾಯಿಯನ್ನು 'ಸಾಲ್' ಹೂವುಗಳ ಪರಿಮಳದಲ್ಲಿ ಕಾಣಬಲ್ಲವಳಾಗಿದ್ದಳು, ಅದೇ ಕಾಡಿನಲ್ಲಿ ತನ್ನ ಅಜ್ಜಿಯ ಹಾಡುಗಳು ಪ್ರತಿಧ್ವನಿಸುವುದನ್ನು ಕೇಳಬಲ್ಲವಳಾಗಿದ್ದಳು. ಇವೆಲ್ಲವೂ ತನ್ನೊಂದಿಗೆ ಇರುವವರೆಗೂ ತಾನು ಯಾವುದೇ ತೊಂದರೆಗಳನ್ನು ಎದುರಿಸಬಲ್ಲೆನೆನ್ನುವ ವಿಶ್ವಾಸವೂ ಆಕೆಗಿತ್ತು.
ಆದರೆ ಈಗ, ಅವಳು ಇಲ್ಲಿಯವಳೆಂದು ತೋರಿಸುವುವದಕ್ಕೆ ಪುರಾವೆಯಾಗಿ ಕಾಗದದ ತುಂಡನ್ನು ತೋರಿಸುವ ತನಕ, ಅವಳು ಇಲ್ಲಿರಬಾರದೆಂದು ಅವರು ಹೇಳುತ್ತಿದ್ದಾರೆ. ಅವಳ ಗುಡಿಸಲಿನಿಂದ, ಅವಳ ಹಳ್ಳಿಯಿಂದ, ಅವಳ ಮಣ್ಣಿನಿಂದ ಅವಳು ದೂರವಿರಬೇಕು ಎನ್ನಲಾಗುತ್ತಿದೆ. ಈ ಕಾಡಿನಲ್ಲಿಯೇ ಆಕೆಯ ತಂದೆ ಅವಳಿಗೆ ವಿವಿಧ ಔಷಧೀಯ ಸಸ್ಯಗಳು, ಪೊದೆಗಳು ಮತ್ತು ಎಲೆಗಳನ್ನು ಹೆಸರಿಸಲು ಕಲಿಸಿದ್ದು. ಇದೇ ಕಾಡಿನಲ್ಲಿ ಪ್ರತಿ ಬಾರಿ ಅವಳು ತನ್ನ ತಾಯಿಯೊಂದಿಗೆ ಹಣ್ಣುಗಳು, ಕಾಯಿಗಳು ಮತ್ತು ಉರುವಲುಗಳನ್ನು ಸಂಗ್ರಹಿಸಲು ಹೋದಾಗ, ಅವಳಿಗೆ ತಾಯಿಯು ತಾನು ಇದೇ ಮರದ ಕೆಳಗೆ ಜನಿಸಿದ್ದಾಗಿ ತೋರಿಸುತ್ತಿದ್ದರು. ಆಕೆಯ ಅಜ್ಜಿ ಈ ಕಾಡಿನ ಬಗ್ಗೆ ಹಾಡುಗಳನ್ನು ಕಲಿಸಿದ್ದರು. ಇದೇ ಕಾಡಿನಲ್ಲಿ ಆಕೆ ತನ್ನ ತಮ್ಮನೊಂದಿಗೆ ಒಡಾಡುತ್ತಾ ಹಕ್ಕಿಗಳ ದನಿ ಆಲಿಸಿದ್ದಳು ಮತ್ತದನ್ನು ಅನುಕರಿಸಿ ಪ್ರತಿಧ್ವನಿಸಿದ್ದಳು.
ಆದರೆ ಅಂತಹ ಜ್ಞಾನ, ಈ ಕಥೆಗಳು, ಈ ಹಾಡುಗಳು ಮತ್ತು ಬಾಲ್ಯದ ಆಟಗಳು ಯಾವುದಕ್ಕಾದರೂ ಪುರಾವೆಯಾಗಬಹುದೇ? ಅವಳು ತನ್ನ ಹೆಸರಿನ ಅರ್ಥವನ್ನು ಹುಡುಕುತ್ತಾ ಕುಳಿತಿದ್ದಳು ಮತ್ತು ತನ್ನ ಹೆಸರಿನ ಮಹಿಳೆಯ ಬಗ್ಗೆ ಯೋಚಿಸುತ್ತಿದ್ದಳು. ದೇಮತಿಯು ಇಂದು ಬದುಕಿದ್ದರೆ ತಾನು ಈ ಕಾಡಿನ ಭಾಗವೆಂದು ಹೇಗೆ ಸಾಬೀತುಪಡಿಸುತ್ತಿದ್ದರು? ಎನ್ನುವುದು ಆಕೆಯ ಮನಸ್ಸನ್ನು ಕೊರೆಯುತ್ತಿದ್ದ ಪ್ರಶ್ನೆಯಾಗಿತ್ತು.



