ಕಳೆದ ವರ್ಷ ಒಸ್ಮಾನಾಬಾದ್‌ನ ಕೃಷಿಭೂಮಿಯಲ್ಲಿ ನಾಲ್ಕು ತಿಂಗಳ ಶ್ರಮವನ್ನು ಹಾಳುಮಾಡಲು ಎರಡು ವಾರಗಳ ಕಾಲ ಸುರಿದ ಧಾರಾಕಾರ ಮಳೆ ಸಾಕಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ಮೋಡಗಳ ತೀವ್ರ ಕುಸಿತ ಮತ್ತು ಆಸ್ಪೋಟದಿಂದಾಗಿ ಭಾರಿ ಮಳೆ ಸುರಿಯಿತು- ಬಿರುಗಾಳಿಯಂತೂ ಮನೆಯ ಛಾವಣಿಗಳನ್ನು ಕಿತ್ತುಹಾಕಿತು, ಪ್ರಾಣಿಗಳು ಸಹಿತ ಸಾವನ್ನಪ್ಪಿದವು ಮತ್ತು ಮೈಲಿಗಳುದ್ದಕ್ಕೂ ಹರಡಿದ್ದ ಬೆಳೆಗಳೆಲ್ಲವೂ ಕೊಚ್ಚಿಕೊಂಡು ಹೋಗಿದ್ದವು.
ಆ ಬೆಳೆಗಳಲ್ಲಿ ಕೆಲವು ಮಹಾರಾಷ್ಟ್ರದ ಒಸ್ಮಾನಾಬಾದ್‌ನ ಮಹಾಲಿಂಗಿ ಗ್ರಾಮದ ಶಾರದಾ ಮತ್ತು ಪಾಂಡುರಂಗ ಗುಂಡ್ ಅವರಿಗೆ ಸೇರಿದ್ದವು. "ನಾವು ಕೊಯ್ಲು ಮಾಡಿದ್ದ ಸುಮಾರು 50 ಕ್ವಿಂಟಾಲ್ ಸೋಯಾಬೀನ್ ಅನ್ನು ನಾವು ಕಳೆದುಕೊಂಡಿದ್ದೇವೆ, ನಮ್ಮ ಜಮೀನಿನಲ್ಲಿ ನೀರು ನಮ್ಮ ಮೊಣಕಾಲಿನವರೆಗೆ ಇತ್ತು. ಅದು ಎಲ್ಲವನ್ನೂ ನಾಶಪಡಿಸಿತು." ಎಂದು 45 ವರ್ಷದ ಶಾರದಾ ಹೇಳುತ್ತಿದ್ದರು.
ಭಾರತೀಯ ಹವಾಮಾನ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಅಕ್ಟೋಬರ್ 2020ರಲ್ಲಿ ಒಸ್ಮಾನಾಬಾದ್ ಜಿಲ್ಲೆಯಲ್ಲಿ 230.4 ಮಿಲಿಮೀಟರ್ ಮಳೆಯಾಗಿದೆ - ಇದು ತಿಂಗಳಿಗೆ ಜಿಲ್ಲೆಯ ಸರಾಸರಿಗಿಂತ ಶೇ 180ರಷ್ಟು ಹೆಚ್ಚು ಎನ್ನಲಾಗಿದೆ.
ಪಾಂಡುರಂಗ ಮತ್ತು ಶಾರದಾರಂತಹ ಹಲವಾರು ರೈತರು ಹೆಚ್ಚಿನ ನಷ್ಟವನ್ನು ಅನುಭವಿಸಿದ್ದಾರೆ.
50ರ ಹರೆಯದ ಪಾಂಡುರಂಗ್ ಅವರು ತಮ್ಮ ಎಲ್ಲ ಬೆಳೆಯೂ ಮಳೆಯಿಂದ ನಾಶವಾಗುವುದನ್ನು ಅಸಹಾಯಕತೆಯಿಂದ ನೋಡುತ್ತಿದ್ದರು, ಇದೇ ವೇಳೆ ಸೋಯಾಬೀನ್ ಕೃಷಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಗೆ ಕನಿಷ್ಠ ಬೆಂಬಲ ಬೆಲೆ 3,880 ರೂ. ದರದಲ್ಲಿ ಮಾರಾಟವಾಗುತ್ತಿತ್ತು, ಇದನ್ನು ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಅವರು ಮತ್ತು ಪತ್ನಿ ಶಾರದಾ 194,000 ರೂ. ಮೌಲ್ಯದ ದಾಸ್ತಾನನ್ನು ಕಳೆದುಕೊಂಡಿದ್ದರು. "ಅಲ್ಲದೆ, ಅದರ ಮೇಲೆ ನಾವು ಸುಮಾರು 80,000 ರೂ.ಖರ್ಚು ಮಾಡಿದ್ದೆವು. ನೀವು ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಮುಂತಾದವುಗಳನ್ನು ಖರೀದಿಸಬೇಕು. ಈ ಬೆಳೆಯನ್ನು ಬೆಳೆಯಲು ನಾಲ್ಕು ತಿಂಗಳಿಂದ ಮೈಮುರಿದು ದುಡಿದ ಶ್ರಮವನ್ನು ನಾನು ಇನ್ನೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.ಅದು ಆಗಿಂದಾಗಲೇ ಸುರಿದ ಮಳೆಯಾಗಿದ್ದರಿಂದ, ನಮಗೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ" ಎನ್ನುತ್ತಾರೆ ಶಾರದಾ.











