ಬೆಳ್ಳಂಬೆಳಗ್ಗೆ ಕಷ್ಟಪಟ್ಟು ಹಾಸಿಗೆಯಿಂದ ಮೇಲೆದ್ದ ಸುನೀತಾ ಸಾಹು “ಮಕ್ಕಳೆಲ್ಲಿ?” ಎಂದರು. ಅವರ ಗಂಡ ಬೋಧರಾಮ್ ಅವರು ಮಲಗಿದ್ದಾರೆ ಎಂದರು. ನಿಟ್ಟುಸಿರು ಬಿಟ್ಟರು ಸುನೀತಾ. ರಾತ್ರಿಯಿಡೀ ಸುನೀತಾ ನಿದ್ದೆ ಮಾಡಿರಲಿಲ್ಲ. ಬೋಧರಾಮರಿಗೆ ಆತಂಕ. ನಿಂತಲ್ಲಿ ಕುಂತಲ್ಲಿ ತೂಕಡಿಸಿ ಬಿದ್ದೀಯಾ ಜೋಕೆ, ಎಂದು ಬೋಧರಾಮ್ ಆಗಾಗ್ಗೆ ಗೇಲಿ ಮಾಡುತ್ತಿದ್ದರು.
ಆದರೆ ಏಪ್ರಿಲ್ 28ರ ಆ ರಾತ್ರಿ, ಬೋಧರಾಮ್ ಮತ್ತು ಸುನೀತಾ ಸಾಹುರವರ ಮೂವರು ಮಕ್ಕಳು (12ರಿಂದ 20 ವಯಸ್ಸಿನೊಳಗಿನವರು) ಬೆಚ್ಚಗಿನ ಸಾಸಿವೆ ಎಣ್ಣೆಯಿಂದ ತಮ್ಮ ತಾಯಿಯ ಕೈ, ಕಾಲು, ತಲೆ ಮತ್ತು ಹೊಟ್ಟೆಗೆ ಸರತಿಯ ಮೇಲೆ ತಿಕ್ಕುತ್ತಿದ್ದರೆ, ಅವರು ನೋವಿನಿಂದ ನರಳುತ್ತಿದ್ದರು. “ನನಗೇನೋ ಆಗುತ್ತಿದೆ,” ಎಂದು ಗೊಣಗುತ್ತಿದ್ದರು – ಬೆಳಿಗ್ಗೆ ಬೋಧರಾಮ್ ನೆನೆಸಿಕೊಂಡರು.
ಈ ಸಾಹು ಕುಟುಂಬವು ಲಕ್ನೋ ಜಿಲ್ಲೆಯ ಖರಗಪುರ ಜಾಗೀರಿನ ಜೋಪಡಿಯೊಂದರಲ್ಲಿ ವಾಸ ಮಾಡುತ್ತಿದ್ದಾರೆ. ಛತ್ತೀಸಗಡದ ಬೆಮೆತ್ರ ಜಿಲ್ಲೆಯ ಮಾರೋ ಎಂಬ ಹಳ್ಳಿಯಿಂದ ಎರಡು ದಶಕಗಳ ಕೆಳಗೆ ಚಿನ್ಹಾತ ತಾಲ್ಲೂಕಿನ ಈ ಹಳ್ಳಿಗೆ ಬಂದವರು. ಬೋಧರಾಮ್, 42 ವ, ಕಟ್ಟಡಗಳ ಗಾರೆಕೆಲಸ ಮಾಡುತ್ತಾರೆ; ಸುನೀತಾ, 39 ವ, ಮನೆಗೆಲಸ ಮಾಡಿಕೊಂಡಿದ್ದಾರೆ.
ಉತ್ತರಪ್ರದೇಶದಲ್ಲಿ ಕೋವಿಡ್- 19 ಸಾಂಕ್ರಾಮಿಕದ ಎರಡನೇ ಅಲೆ ಭೀಕರತೆ ಸೃಷ್ಟಿಸಿದ್ದು ಏಪ್ರಿಲ್ ತಿಂಗಳಿನಲ್ಲೇ. ಏಪ್ರಿಲ್ 24ರಂದು, ರಾಜ್ಯದಲ್ಲಿ ಒಂದೇ ದಿನ 38,055 ಹೊಸ ಪ್ರಕರಣಗಳು ವರದಿಯಾದವು- ಉತ್ತರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ತೋರಿಸಲಾಗುತ್ತಿದೆ ಎಂಬ ಅನುಮಾನಗಳಿದ್ದರೂ ಅದು ಗರಿಷ್ಟ ಸಂಖ್ಯೆಯಾಗಿತ್ತು.
“ನೈಜ ಪ್ರಕರಣಗಳ ಸಂಖ್ಯೆ ನಾಲ್ಕರಿಂದ ಐದು ಪಟ್ಟು ಹೆಚ್ಚಿರಬಹುದು. ರೋಗವನ್ನು ಅವಮಾನದಂತೆ ನೋಡುತ್ತಿರುವ ಜನರು ಪರೀಕ್ಷೆ ಮಾಡಿಸಲು ಹಿಂಜರಿಯುತ್ತಿರುವುದರಿಂದ ಕಡಿಮೆ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ನೈಜ ಚಿತ್ರಣ ಪಡೆಯುವುದು ಕಷ್ಟ” ಎನ್ನುತ್ತಾರೆ ಲಕ್ನೋದ ರಾಮಮನೋಹರ ಲೋಹಿಯಾ ಇನ್ಸಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸನ ಕಮ್ಯುನಿಟಿ ಮೆಡಿಸಿನನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ರಶ್ಮಿಕುಮಾರಿ.
ಸುನೀತಾರು ಕರೋನಾ ವೈರಸ್ ಸೋಂಕಿನ ಲಕ್ಷಣಗಳಾದ ಜ್ವರ, ಮೈಕೈ ನೋವು ಮತ್ತು ಅತಿಸಾರ – ಇವುಗಳಿಂದ ಬಳಲುತ್ತಿದ್ದರೂ, ಮನೆಯಲ್ಲಿ ಬೇರೆ ಯಾರಿಗೂ ಸೋಂಕು ಇಲ್ಲದೇ ಇರುವುದರಿಂದ ಸುನೀತಾರಿಗೆ ಬಂದಿರುವುದು ಕೋವಿಡ್ -19 ಅಲ್ಲ ಎಂದು ಖಚಿತವಾಗಿ ಅಂದುಕೊಂಡಿದ್ದರು.












