ಒಂದು ಕಾಲದಲ್ಲಿ ಕ್ಯಾಥರೀನ್ ಕೌರ್, ಬೋಧಿ ಮುರ್ಮು ಮತ್ತು ಮೊಹಮ್ಮದ್ ತುಳಸಿರಾಮ್ ಎನ್ನುವವರು ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. ಕ್ಯಾಥಿ ಓರ್ವ ರೈತ ಮಹಿಳೆ; ಬೋಧಿ ಸೆಣಬಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಮೊಹಮ್ಮದ್ ಒಬ್ಬ ದನಗಾಹಿಯಾಗಿದ್ದ. ಆ ಸಮಯದಲ್ಲಿ ನಗರದಲ್ಲಿ ಅನೇಕ ಕಲಿತ ಜನರು ಸಂವಿಧಾನದ ಕುರಿತು ಚರ್ಚಿಸುತ್ತಿದ್ದರು. ಆದರೆ ಈ ಮೂವರಿಗೆ ಈ ದೊಡ್ಡ ಪುಸ್ತಕದ ಕುರಿತು ನಿರ್ಣಯಕ್ಕೆ ಬರಲು ಕಷ್ಟವಾಗುತ್ತಿತ್ತು. ಕ್ಯಾಥಿಗೆ ಇದು ನಿಷ್ಪ್ರಯೋಜಕ ಎನ್ನಿಸಿದರೆ, ಬೋಧಿ ಬಹುಶಃ ಅದು ದೈವಿಕವಾದ ಪುಸ್ತಕವಿರಬಹುದೆಂದು ಭಾವಿಸಿದ. ಮೊಹಮ್ಮದನನ್ನು ಕಾಡಿದ ಪ್ರಶ್ನೆಯೆಂದರೆ, "ಈ ಪುಸ್ತಕದಿಂದ ನನ್ನ ಮಕ್ಕಳಿಗೆ ಅನ್ನ ಹುಟ್ಟುತ್ತದೆಯೇ?"
ಗಡ್ಡದವನೊಬ್ಬ ರಾಜನಾಗಿ ಚುನಾಯಿತನಾಗಿದ್ದಾನೆ ಎನ್ನುವ ಸಂಗತಿ ಆ ಮೂವರ ಆಸಕ್ತಿಯನ್ನು ಕೆರಳಿಸುವಲ್ಲಿ ವಿಫಲವಾಯಿತು. "ಅಷ್ಟಕ್ಕೂ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವಷ್ಟು ಸಮಯವಾದರೂ ಯಾರ ಬಳಿಯಿತ್ತು?" ನಂತರದ ದಿನಗಳಲ್ಲಿ ಮಳೆ ಬಾರದೆ ಹೋಯಿತು. ಸಾಲ ಬೆಳೆಯತೊಡಗಿತು. ಈ ನಡುವೆ ಕ್ಯಾತರೀನ್ ತನ್ನದೇ ಹೆಸರನ್ನು ಹೊಂದಿರುವ ಕೀಟನಾಶಕದ ಬಾಟಲಿ ಕೊಂಡಳು. ಒಂದು ದಿನ ಸೆಣಬಿನ ಗಿರಣಿ ದಿವಾಳಿಯಾಯಿತು. ಪ್ರತಿಭಟನಾ ನಿರತ ಕಾರ್ಮಿಕರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು ಮತ್ತು ಬೋಧಿ ಮುರ್ಮು ಕಾರ್ಮಿಕರನ್ನು ಸಂಘಟಿಸಿದ್ದಕ್ಕಾಗಿ ಅವರ ಮೇಲೆ ಭಯೋತ್ಪಾದನೆಯ ಆರೋಪಗಳನ್ನು ಹೊರಿಸಲಾಯಿತು. ಕೊನೆಗೆ ಮೊಹಮ್ಮದ್ ತುಳಸಿರಾಮ್ ಸರದಿ ಬಂದಿತು. ಒಂದು ಒಳ್ಳೆಯ ಸನಾತನ ಸಂಜೆಯಂದು ಎರಡು ಕಾಲಿನ ಕಡಸುಗಳು ಅವನ ಮನೆಯ ಮುಂದೆ ಬಂದು "ಜೈ ಶ್ರೀ ರಾಮ್, ಜೈ ಶ್ರೀರಾಮ್" ಎಂದು ಕೂಗತೊಡಗಿದವು.
ರಾಕ್ಷಸ ಘೋಷಣೆಗಳ ನಡುವೆ, ಎಲ್ಲೋ ಕೆಲವು ಪುಟಗಳು ಸದ್ದು
ಮಾಡಿದವು, ನೀಲಿ ಸೂರ್ಯ ಉದಯಿಸಿದನು, ತತ್ತರಿಸುತ್ತಿರುವ ಪಿಸುಮಾತು ಕೇಳಿಸಿತು:
"ನಾವು, ಭಾರತದ ಜನರು, ಗಂಭೀರವಾಗಿ ನಿರ್ಧರಿಸಿದಂತೆ...
ಒಂದು ಸಾಂವಿಧಾನಿಕ ಗೋಳಾಟ
1.
ನಮ್ಮ ನೆಲ
ಸಾರ್ವಭೌಮ
ಅದೂ ನಮ್ಮ ದಾಹದಂತೆ
ಕೆಂಪು ತುಕ್ಕಿನ ಬಣ್ಣದ ಮೋಡದೊಳಗೆ ಸಿಲುಕಿದೆ.
2.
ಸಮಾಜವಾದಿ
ಗೆಳೆಯ
ನಾವ್ಯಾಕೆ ಕನಸುತ್ತಿದ್ದೇವೆ?
ಲೋಕದ ಕಾರ್ಮಿಕರು ಬಸವಳಿದಿದ್ದಾರೆ.
3.
ಮಂದಿರ, ಮಸೀದಿ, ಚರ್ಚುಗಳ ನಡುವೆ
ಜಾತ್ಯಾತೀತೆಯ
ಸಮಾಧಿಯ
ಮೇಲೆ ತ್ರಿಶೂಲ ನಗುತ್ತಿದೆ.
4.
ಓ
ಪ್ರಜಾಪ್ರಭುತ್ವವೇ
!
ʼಸಾವೆನ್ನುವುದು ಸಾಲʼವೆಂದು
ಬರೆಯುತ್ತಿದ್ದಾರೆ ಪಂಡಿತರು.
5.
ಒಂದು ಕಾಲದ
ಗಣರಾಜ್ಯದಲ್ಲಿ
ಈಗ ರಾಜನ ದರ್ಬಾರು
ಬುದ್ಧತ್ವ ಪತನಗೊಂಡು ಬಂದೂಕು ಹಾಡತೊಡಗಿದೆ.
6.
ನ್ಯಾಯದ
ಕಣ್ಣಿಗೆ ಕಟ್ಟಿದ್ದ
ಬಟ್ಟೆಯಡಿ ನ್ಯಾಯವಿತ್ತು
ಈಗ ಅದು ಉಳಿದಿಲ್ಲ.
7.
ಈಗಷ್ಟೇ ಕಟಾವು ಮಾಡಿದ
ಸ್ವಾತಂತ್ರ್ಯ
ಮಾಲುಗಳಲ್ಲಿ ಲಭ್ಯವಿದೆ
ಫಾಲಿಡಾಲಿನ ಸಿಹಿ ಹೊಂದಿರುವ ಡಬ್ಬಿಗಳಲ್ಲಿ.
8.
ಹಸುಗಳು ಪವಿತ್ರ
ಮತ್ತು ಸುಟ್ಟು ಕರಕಲಾದ ಮಾಂಸ
ಇದು
ಸಮಾನತೆ
ನಮಗಾಗಿ ಸುಡುತ್ತಿರುವ ರೊಟ್ಟಿ.
9.
ಸಹೋದರತ್ವ
ಗೋಧಿಯ ಹೊಲದಲ್ಲಿ ಶೂದ್ರ ನಿಟ್ಟುಸಿರಿಡುತ್ತಿದ್ದಾನೆ
ಬ್ರಾಹ್ಮಣ ಬೊಗಳುತ್ತಿದ್ದಾನೆ.
ಈ ಕವಿತೆಯ ಬರವಣಿಗೆಗೆ ಕಾರಣವಾದ ಕೆಲವು ಉತ್ತೇಜಕ ಸಂಭಾಷಣೆಗಳಿಗಾಗಿ ಕವಿ ಸ್ಮಿತಾ ಖಾಟೋರ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು