"ನಮ್ಮ ಹಳ್ಳಿಯಲ್ಲಿ ಅಥವಾ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಕೆಲಸವಿಲ್ಲ" ಎನ್ನುತ್ತಾರೆ ಜಂಗಮ್ ಧನಲಕ್ಷ್ಮಿ. "ಇರುವ ಕೃಷಿ ಭೂಮಿಯನ್ನೆಲ್ಲ ಮೀನಿನ ಕೆರೆಗಳಾಗಿ ಪರಿವರ್ತಿಸಲಾಗಿದೆ."

40 ವರ್ಷದ ಧನಲಕ್ಷ್ಮಿ (ಮೇಲಿನ ಮುಖ್ಯ ಚಿತ್ರದಲ್ಲಿ), ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ತಮಿರಿಸ ಗ್ರಾಮದಲ್ಲಿ ಸುಮಾರು 450 ಜನರಿರುವ ಅಂಕೆನಗುಡೆಮ್‌ ಎನ್ನುವ ದಲಿತ ಕುಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರು ತನ್ನ ದೈನಂದಿನ ಕೂಲಿಯಾದ 200 ರೂ.ಗಳ ನಾಲ್ಕನೇ ಒಂದು ಭಾಗವನ್ನು ಒಂದು ಆಟೋರಿಕ್ಷಾ ಬಾಡಿಗೆಗೆ ಖರ್ಚು ಮಾಡುತ್ತಾರೆ, ಕೃಷಿ ಕೆಲಸದ ಸ್ಥಳಗಳಿಗೆಂದು ದಿನಕ್ಕೆ ಸುಮಾರು 60 ಕಿಲೋಮೀಟರ್ ದೂರವನ್ನು ಪ್ರಯಾಣಿಸುತ್ತಾರೆ.

"ಇಷ್ಟೊಂದು ಪ್ರಯಾಣದ ನಂತರವೂ, ನಾವು ವರ್ಷಕ್ಕೆ ಸುಮಾರು 30 ದಿನಗಳಷ್ಟು ಮಾತ್ರವೇ ಕೆಲಸವನ್ನು ಪಡೆಯುತ್ತೇವೆ – ಏಪ್ರಿಲ್‌ ತಿಂಗಳಿನಲ್ಲಿ 10 ದಿನಗಳು, ಆಗಸ್ಟಿನಲ್ಲಿ 10 ದಿನಗಳು ಮತ್ತು ಡಿಸೆಂಬರಿನಲ್ಲಿ ಇನ್ನೂ 10 ದಿನಗಳು," ಎಂದು ಧನಲಕ್ಷ್ಮಿ ಅವರ ನೆರೆಹೊರೆಯವರಾದ 60 ವರ್ಷದ ಗಂಟಾ ಸರೋಜಾ ಹೇಳುತ್ತಾರೆ. ಈ ಊರಿನ ಜನರು ಕೃಷಿ ಕೆಲಸಗಳಿಂದ ವಾರ್ಷಿಕ 5,000-6,000 ರೂ.ಗಳನ್ನು ಮಾತ್ರ ಗಳಿಸಬಹುದಾದ್ದರಿಂದ, ಅನೇಕರು ವಲಸೆ ಹೋಗಿದ್ದಾರೆ. "ಸುಮಾರು 10 ವರ್ಷಗಳ ಹಿಂದೆ, ಈ ಗ್ರಾಮದಲ್ಲಿ 150 ಕುಟುಂಬಗಳು ಇದ್ದವು. ಈಗ, ಕೇವಲ 60 ಕುಟುಂಬಗಳಷ್ಟೇ ಇವೆ" ಎಂದು ಸರೋಜಾ ಅಂದಾಜಿಸುತ್ತಾರೆ. ಕೆಲವರು ಗುಡಿವಾಡಾ, ವಿಜಯವಾಡ ಮತ್ತು ಹೈದರಾಬಾದ್ ಕಡೆ ವಲಸೆ ಹೋಗಿದ್ದಾರೆ, ಮತ್ತೆ ಕೆಲವರು ಕೆಲಸ ಹುಡುಕಿಕೊಂಡು ತಮ್ಮ ಅತ್ತೆ-ಮಾವಂದಿರ ಹಳ್ಳಿಗಳಿಗೆ ಹೋಗಿದ್ದಾರೆ.

ಸುಮಾರು 36,000 ಜನಸಂಖ್ಯೆಯನ್ನು ಹೊಂದಿರುವ ನಂದಿವಾಡಾ ಮಂಡಲದಲ್ಲಿ ಅಂಕೆನಗುಡೆಮ್ ಇದೆ. ನಂದಿವಾಡಾವು ಆಂಧ್ರಪ್ರದೇಶದಲ್ಲಿಯೇ ಎರಡನೇ ಅತಿದೊಡ್ಡ ತಲಾ ಆದಾಯವನ್ನು ಹೊಂದಿದೆ (ವಿಶಾಖಪಟ್ಟಣಂ ಜಿಲ್ಲೆಯ ಅಚ್ಚುತಪುರಂ ಮಂಡಲದ ನಂತರ) ಏಕೆಂದರೆ ಇಲ್ಲಿ ಮೀನು ಕೆರೆಗಳಿಂದ ಹೆಚ್ಚಿನ ಆದಾಯ ಬರುತ್ತದೆ. ಇಲ್ಲಿನ ಮೀನುಗಳನ್ನು ಅಕ್ವಾ ಸಂಸ್ಕರಣಾ ಘಟಕಗಳಲ್ಲಿ ಬಳಸಲಾಗುತ್ತದೆ ಮತ್ತು ನಂತರ ಮುಖ್ಯವಾಗಿ ಪೂರ್ವ ಏಷ್ಯಾ ಮತ್ತು ಯುರೋಪಿಯನ್ ದೇಶಗಳಿಗೆ ರಫ್ತು ಮಾಡಲಾಗುತ್ತದೆ.  2014-15ರಲ್ಲಿ, ರಾಜ್ಯದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ, ನಂದಿವಾಡದಲ್ಲಿ ವಾರ್ಷಿಕ ತಲಾ ಆದಾಯವು 308,371 ರೂ.ಗಳಾಗಿತ್ತು - ಅದೇ ವರ್ಷ ಕೃಷ್ಣಾ ಜಿಲ್ಲೆಯ ಒಟ್ಟಾರೆ ಆದಾಯವು 140,628 ರೂ. ಆಗಿತ್ತು.

PHOTO • Rahul Maganti

ನಂದಿವಾಡಾ ಮಂಡಲದಲ್ಲಿ, ಜಲಚರ ಸಾಕಣೆಯು 2000ರ ದಶಕದ ಹೊತ್ತಿಗೆ ವೇಗಗೊಂಡಿತು, ಇದು ಇಲ್ಲಿನ ಎಲ್ಲಾ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು; ಈಗ ರಫ್ತು ಮಾಡಲು ಸೀಗಡಿಗಳು ಮತ್ತು ಇತರ ಮೀನುಗಳನ್ನು ಇಲ್ಲಿ ಬೆಳೆಯಲಾಗುತ್ತದೆ

ಆದರೆ 2001ರ ಜನಗಣತಿ ಮತ್ತು 2011ರ ಅಂಕಿಅಂಶಗಳ ಪ್ರಕಾರ, 2000ರ ದಶಕದ ಆರಂಭದಿಂದಲೂ ಪ್ರತಿ ವರ್ಷವೂ ಇಲ್ಲಿನ ಜನಸಂಖ್ಯೆ ಕಡಿಮೆಯಾಗುತ್ತಿದೆ. ಕಳೆದ 10 ವರ್ಷಗಳಲ್ಲಿ, ಜನಸಂಖ್ಯೆಯು ಕುಸಿದಿರುವುದರಿಂದ, ಮಂಡಲ್ ಪರಿಷದ್ ಪ್ರಾದೇಶಿಕ ಕ್ಷೇತ್ರದ ಸ್ಥಾನಗಳು (ಇದು ಜನಸಂಖ್ಯೆಯ ಸಂಖ್ಯೆಗಳನ್ನು ಪ್ರತಿಬಿಂಬಿಸುತ್ತದೆ) ಸಹ 12ರಿಂದ 11ಕ್ಕೆ ಇಳಿದಿದೆ.

ಕೃಷಿ ಕಾರ್ಮಿಕರೂ ಆಗಿರುವ ಧನಲಕ್ಷ್ಮಿಯ ಸಹೋದರ ಜಂಗಮ ಯಹೋಶುವಾ, "ಸುಮಾರು 15 ವರ್ಷಗಳ ಹಿಂದೆ, ನಮ್ಮ ಊರು ಸುಮಾರು 370 ಎಕರೆ ಕೃಷಿ ಭೂಮಿಯನ್ನು ಹೊಂದಿತ್ತು. ಹೆಚ್ಚಿನವು ಸುತ್ತಮುತ್ತಲಿನ ಊರುಗಳ ಕಮ್ಮಾ ಮತ್ತು ಯಾದವ ಭೂಮಾಲೀಕರ ಒಡೆತನದಲ್ಲಿದ್ದವು, ಆದರೆ ದಲಿತರು ಕೇವಲ 50 ಎಕರೆಗಳನ್ನು ಹೊಂದಿದ್ದರು. ಭೂಮಾಲಿಕರು ತಮ್ಮ ಕೃಷಿ ಭೂಮಿಯನ್ನು ತ್ವರಿತವಾಗಿ ಹಣ ಸಂಪಾದಿಸಲು ಮೀನಿನ ತೊಟ್ಟಿಗಳಾಗಿ ಪರಿವರ್ತಿಸಿದಾಗ, ಮಣ್ಣಿನ ಫಲವತ್ತತೆಯಲ್ಲಿನ ನಷ್ಟ ಮತ್ತು ನೀರಿನ ಮಾಲಿನ್ಯದಿಂದಾಗಿ ನಾವೂ ಸಹ ಹಾಗೆ ಮಾಡಬೇಕಾದ ಅನಿವಾರ್ಯತೆಗೆ ಒಳಗಾದೆವು."

ಹಳ್ಳಿಯಲ್ಲಿ ದಲಿತರಿಗೆ ಸೇರಿದ 50 ಎಕರೆಗಳಲ್ಲಿ ಹೆಚ್ಚಿನ ಜಮೀನುಗಳನ್ನು ಅಂತಿಮವಾಗಿ ಭೂಮಾಲೀಕರು ಅಗ್ಗದ ದರದಲ್ಲಿ ಖರೀದಿಸಿದರು, ಏಕೆಂದರೆ ದಲಿತ ಕುಟುಂಬಗಳಿಗೆ ತಕ್ಷಣದ ಹಣದ ಅಗತ್ಯವಿತ್ತು. ಇದರ ಪರಿಣಾಮವಾಗಿ, ಯಹೋಶುವಾ ಹೇಳುತ್ತಾರೆ, "ನಮ್ಮ ಊರಿನಲ್ಲಿ ಒಂದು ಎಕರೆ ಕೃಷಿ ಭೂಮಿ ಸಹ ಉಳಿದಿಲ್ಲ. ಇದು ಕೆಲಸದ ಬಿಕ್ಕಟ್ಟನ್ನು ಸೃಷ್ಟಿಸಿತು ಮತ್ತು ನಾವು ಜೀವನೋಪಾಯವನ್ನು ಹುಡುಕಿಕೊಂಡು ಹೊರಗೆ ಹೋಗಬೇಕಾಯಿತು. ಆದರೆ ಸುತ್ತಮುತ್ತಲಿನ ಬಹುತೇಕ ಎಲ್ಲಾ ಹಳ್ಳಿಗಳು ಇದೇ ರೀತಿಯ ಪ್ರವೃತ್ತಿಯನ್ನು ಅನುಸರಿಸಿದ್ದರಿಂದ, ಈ ಪ್ರದೇಶದಲ್ಲಿನ ಕೆಲಸದ ಆಯ್ಕೆಗಳು ತೀವ್ರವಾಗಿ ಕಡಿಮೆಯಾದವು, ಇದು ವಲಸೆಗೆ ಕಾರಣವಾಯಿತು."

PHOTO • Rahul Maganti

ಕೃಷ್ಣಾ ನದಿಯ ಸಣ್ಣ ಉಪನದಿಯಾದ ಬುಡಮೇರುವಿನ ನೀರನ್ನು ಮೀನು ಕೊಳಗಳು ಬಳಸುತ್ತವೆ, ಇದು ಸ್ಥಳೀಯ ಜಲಸಂಪನ್ಮೂಲಗಳು ಮತ್ತಷ್ಟು ಕ್ಷೀಣಿಸುವಂತೆ ಮಾಡುತ್ತದೆ

ಕೆಲಸದ ನಷ್ಟದ ಪ್ರಮಾಣವು ಬಹಳ ದೊಡ್ಡದಾಗಿದೆ: 100 ಎಕರೆ ಕೃಷಿ ಭೂಮಿಯಲ್ಲಿ ವರ್ಷಕ್ಕೆ ಸುಮಾರು 11,000-12,000 ಕೆಲಸದ ದಿನಗಳನ್ನು ಒದಗಿಸುತ್ತದೆ, ಆದರೆ 100 ಎಕರೆ ಮೀನು ಕೆರೆಗಳು ವರ್ಷಕ್ಕೆ ಕೇವಲ 1,000 ಕೆಲಸದ ದಿನಗಳನ್ನು ಮಾತ್ರ ನೀಡುತ್ತವೆ. (ಕೆಲಸದ ದಿನಗಳು ಎಂದರೆ ಕೆಲಸವನ್ನು ಪಡೆಯುವ ಜನರ ಸಂಖ್ಯೆಯನ್ನು ಅವರು ಕೆಲಸವನ್ನು ಪಡೆಯುವ ದಿನಗಳ ಸಂಖ್ಯೆಯಿಂದ ಗುಣಿಸಲಾಗುತ್ತದೆ).

ರೀತಿಯ ಪರಿಸ್ಥಿತಿ ಅಂಕೆನಗುಡೆಮ್‌ನಲ್ಲಿ ಮಾತ್ರವಿಲ್ಲ. "ನಂದಿವಾಡಾ ಮಂಡಲದ ಒಟ್ಟು 32,000 ಎಕರೆ ಭೂಮಿಯಲ್ಲಿ 28,000 ಎಕರೆ ಪ್ರದೇಶದಲ್ಲಿ ಮೀನು ಕೆರೆಳಿವೆ ಎಂಬುದು ನಮ್ಮ ಅಂದಾಜು, ಅವುಗಳಲ್ಲಿ ಹೆಚ್ಚಿನವುಗಳನ್ನು ಜಿಲ್ಲಾ ಅಧಿಕಾರಿಗಳಿಂದ ಸರಿಯಾದ ಅನುಮತಿಯಿಲ್ಲದೆಯೇ ಮಾಡಲಾಗಿದೆ," ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಸಂಯೋಜಿತ ಆಂಧ್ರಪ್ರದೇಶ ಕೃಷಿ ಕಾರ್ಮಿಕರ ಸಂಘದ ಕಾರ್ಯಕರ್ತ 28 ವರ್ಷದ ಮುರಾಲಾ ರಾಜೇಶ್ ಹೇಳುತ್ತಾರೆ. ಈ ಪ್ರದೇಶದಲ್ಲಿನ ಭೂಮಿ ಹೆಚ್ಚಾಗಿ ಆಂಧ್ರಪ್ರದೇಶದಲ್ಲಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಪ್ರಬಲವಾಗಿರುವ ಜಾತಿಯಾದ ಕಮ್ಮ ಸಮುದಾಯದ ಒಡೆತನದಲ್ಲಿದೆ; ಇದನ್ನು ರೆಡ್ಡಿ, ಕಾಪು, ರಾಜಕ ಮತ್ತು ಯಾದವ ಸಮುದಾಯಗಳು ಅನುಸರಿಸುತ್ತವೆ. ಅವರ ಆದಾಯವು ಈಗ ಮುಖ್ಯವಾಗಿ ಮೀನಿನ ಕೆರೆಗಳಿಂದ ಬರುತ್ತದೆ.

ಧನಲಕ್ಷ್ಮಿಯವರ ಮಗ 20 ವರ್ಷದ ಅಜಯ್ ಕಮ್ಮ ಮಾಲೀಕತ್ವದ ಮತ್ತು ಯಾದವ ಸಮುದಾಯದವರು ಗುತ್ತಿಗೆ ಪಡೆದಿರುವ ಮೀನಿನ ಕೆರೆಯೊಂದರಲ್ಲಿ ಕೆಲಸ ಮಾಡುತ್ತಾರೆ. ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಕೆಲಸ ಮಾಡಲು ಅವರಿಗೆ ಸಿಗುವ ಮಾಸಿಕ ವೇತನ 7,500 ರೂ.ಗಳು, ಈ ಸಂಬಳ ಐದು ಜನರ ಕುಟುಂಬವನ್ನು ಪೋಷಿಸಲು ಸಹಾಯ ಮಾಡುತ್ತದೆ. "ನಾವು 10 ವರ್ಷಗಳ ಹಿಂದೆ ದಿನಕ್ಕೆ ಮೂರು ಬಾರಿ ತಿನ್ನುತ್ತಿದ್ದೆವು. ಈಗ, ಎರಡನೇ ಊಟಕ್ಕೆ ನಮ್ಮ ಬಳಿ ಹಣವಿಲ್ಲ," ಎಂದು ಧನಲಕ್ಷ್ಮಿ ಹೇಳುತ್ತಾರೆ.

PHOTO • Rahul Maganti

ಹನುಮನಪುಡಿಯ ವಸಂತರಾವ್ (ಅವರ ಮೊಮ್ಮಗ ಮಹೇಶ್ ಅವರೊಂದಿಗೆ), ಈಗ ಮನೆಯನ್ನು ನಡೆಸಲು ತಮ್ಮ ಪುತ್ರರನ್ನು (ಗುಡಿವಾಡ ಮತ್ತು ಹೈದರಾಬಾದುಗಳಲ್ಲಿ ಕೆಲಸ ಮಾಡುವವರು) ಅವಲಂಬಿಸಿದ್ದಾರೆ

ನಂದಿವಾಡಾದಲ್ಲಿನ ದಲಿತ ಕುಟುಂಬಗಳ ಅನೇಕ ಹಿರಿಯರ ಕಥೆಯಿದು, ಅಲ್ಲಿ 1990ರ ದಶಕದ ಆರಂಭದಲ್ಲಿ ಜಲಕೃಷಿ ಪ್ರಾರಂಭವಾಯಿತು - ನಂತರ 2000ರ ದಶಕದ ಹೊತ್ತಿಗೆ ವೇಗಗೊಂಡು ಎಲ್ಲೆಡೆ ಹರಡಿತು. ಪಕ್ಕದ ಹನುಮನಪುಡಿ ಕುಗ್ರಾಮದ ದಲಿತ ವಿಧವೆ 55 ವರ್ಷದ ಕಾಂತಮ್ಮ 2000ರ ದಶಕದ ಆರಂಭದವರೆಗೆ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. "ನಾನು ದಿನಕ್ಕೆ 100 ರೂಪಾಯಿಗಳನ್ನು ಸಂಪಾದಿಸುತ್ತಿದ್ದೆ ಮತ್ತು ವರ್ಷಕ್ಕೆ ಸುಮಾರು 200 ದಿನಗಳ ಕಾಲ ಕೆಲಸ ಮಾಡುತ್ತಿದ್ದೆ," ಎಂದು ಅವರು ಹೇಳುತ್ತಾರೆ. "ಮೀನು ಕೆರೆಗಳ ಸಂಖ್ಯೆ ಹೆಚ್ಚಾದಂತೆ, ಅವಕಾಶಗಳು ಕಡಿಮೆಯಾದವು ಮತ್ತು ನಾನು ಕೆಲಸವನ್ನು ಹುಡುಕಿಕೊಂಡು ಹೊರಗೆ ಹೋಗಬೇಕಾಯಿತು. ಆದರೆ ನನ್ನ ಆರೋಗ್ಯವು ಅದಕ್ಕೆ ಸಹಕರಿಸಲಿಲ್ಲ..."

ಆಕೆಯ 25 ವರ್ಷದ ಮಗ ಚಂದು ಈಗ ಕಾಂತಮ್ಮನನ್ನು ನೋಡಿಕೊಳ್ಳುತ್ತಿದ್ದಾರೆ. ಅವರು ಹೈದರಾಬಾದಿನ ವೆಲ್ಡಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ತನ್ನ ತಾಯಿಗೆ ಸಹಾಯ ಮಾಡುವ ಚಂದು 7ನೇ ತರಗತಿಯಲ್ಲಿ ಶಾಲೆ ಬಿಟ್ಟರು, ಮತ್ತು ಅವರು ಸಹ ಕೃಷಿ ಕಾರ್ಮಿಕನಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ಆ ಕೆಲಸವು ಬಹುತೇಕ ಇಲ್ಲವಾದಾಗ, ಅವರು ನಾಲ್ಕು ವರ್ಷಗಳ ಹಿಂದೆ ಹೈದರಾಬಾದಿಗೆ ಸ್ಥಳಾಂತರಗೊಂಡರು. "ನಾನು ಈಗ ರೂ. 12,000 ಸಂಪಾದಿಸುತ್ತೇನೆ ಮತ್ತು ಅದರಲ್ಲಿ ಅರ್ಧದಷ್ಟನ್ನು ನನ್ನ ತಾಯಿಗೆ ಕಳಿಸುತ್ತೇನೆ" ಎಂದು ಅವರು ಹೇಳುತ್ತಾರೆ.

ಹನುಮನಪುಡಿ ಗ್ರಾಮದ ವಸಂತರಾವ್ ಅವರು ಕೆಲವು ವರ್ಷಗಳ ಹಿಂದಿನವರೆಗೂ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು, ಪ್ರಸ್ತುತ ಅವರು ಮನೆಯನ್ನು ನಡೆಸಲು ತಮ್ಮ ಮಕ್ಕಳ ಮೇಲೆ ಅವಲಂಬಿತರಾಗಿದ್ದಾರೆ. "ಇಬ್ಬರು ಗುಡಿವಾಡದಲ್ಲಿ (ಹತ್ತಿರದ ಪಟ್ಟಣ, ಏಳು ಕಿಲೋಮೀಟರ್ ದೂರದಲ್ಲಿದೆ) ಕೆಲಸ ಮಾಡುತ್ತಿದ್ದರೆ, ಮೂರನೆಯವನು ಹೈದರಾಬಾದಿನಲ್ಲಿ ಕೆಲಸ ಮಾಡುತ್ತಾನೆ," ಎಂದು ಅವರು ಹೇಳುತ್ತಾರೆ. ತನ್ನ ಕುಗ್ರಾಮದ 50 ದಲಿತ ಕುಟುಂಬಗಳ ಪೈಕಿ ಕನಿಷ್ಠ 30 ಜನರ ಮಕ್ಕಳು ಈ ಎರಡು ಸ್ಥಳಗಳಿಗೆ ವಲಸೆ ಹೋಗಿದ್ದಾರೆ ಎಂದು ವಸಂತ ಅಂದಾಜು ಮಾಡುತ್ತಾರೆ.

ತಲಾದಾಯ ಅಧಿಕವಾಗಿದ್ದರೂ ಮಂಡಲದ ಜನಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಚಂದುಗೆ ಆಶ್ಚರ್ಯವಿಲ್ಲ. "ಹೆಂಗಸರು ಇಲ್ಲಿಯೇ ಇರುತ್ತಾರೆ [ಮತ್ತು ಮನೆಯ ಕೆಲಸವನ್ನು ನೋಡಿಕೊಳ್ಳುತ್ತಾರೆ, ಏಕೆಂದರೆ ಹತ್ತಿರದಲ್ಲಿ ಯಾವುದೇ ಕೂಲಿ ಕೆಲಸ ಲಭ್ಯವಿಲ್ಲ]. ಪುರುಷರು ಹತ್ತಿರದ ಇತರ ಹಳ್ಳಿಗಳಿಗೆ ಪ್ರಯಾಣಿಸುವಷ್ಟು ಆರೋಗ್ಯಕರವಾಗಿದ್ದರೆ ಅವರು ಸಾಂದರ್ಭಿಕವಾಗಿ ಕೆಲಸವನ್ನು ಪಡೆಯುತ್ತಾರೆ. ಹೆಣ್ಣುಮಕ್ಕಳನ್ನು ಮದುವೆಯಾದ ನಂತರ ಅವರ ಅತ್ತೆ-ಮಾವನ ಹಳ್ಳಿಗಳಿಗೆ ಕಳುಹಿಸಲಾಗುತ್ತದೆ. ಮಕ್ಕಳು ಗುಡಿವಾಡ ಮತ್ತು ಹೈದರಾಬಾದ್ ಗೆ ಹೋಗುತ್ತಾರೆ, ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾರೆ, ಆಟೋರಿಕ್ಷಾಗಳನ್ನು ಓಡಿಸುತ್ತಾರೆ, ಕಟ್ಟಡ ಕಾರ್ಮಿಕರು ಮತ್ತು ಪೇಂಟರುಗಳಾಗಿ ಕೆಲಸ ಮಾಡುತ್ತಾರೆ - ಮತ್ತು ಅಂತಹ ಶೋಚನೀಯ ಜೀವನವನ್ನು ನಡೆಸುತ್ತಲೇ ತಮ್ಮ ಹೆತ್ತವರಿಗೆ ಹಣವನ್ನು ಕಳುಹಿಸುತ್ತಾರೆ, ಹೀಗಿರುವಾಗ ಮಂಡಲದ ಜನಸಂಖ್ಯೆ ಕಡಿಮೆಯಾಗದೆ ಇನ್ನೇನಾಗುತ್ತದೆ?" ಎಂದು ಅವರು ಕೇಳುತ್ತಾರೆ.

PHOTO • Rahul Maganti

ಅಂಕೆನಗುಡೆಮ್ ಊರಿನ ದಲಿತರು ಇನ್ನು ಮುಂದೆ ಕಲುಷಿತ ಕುಡಿಯುವ ನೀರಿನ ಕೊಳವನ್ನು (ಎಡಕ್ಕೆ) ಬಳಸಲು ಸಾಧ್ಯವಿಲ್ಲ; ತಮಿರಿಸದಲ್ಲಿರುವ ಮೇಲ್ಜಾತಿಯವರು ಬಳಸುತ್ತಿದ್ದ (ಬಲ) ಕೊಳವು ತುಲನಾತ್ಮಕವಾಗಿ ಉತ್ತಮ ಸ್ಥಿತಿಯಲ್ಲಿದೆ

ಚಂದು ಅವರ ಸ್ನೇಹಿತ ಮಟ್ಟುಪಲ್ಲಿ ಜೋಸೆಫ್ ಕೆಲಸ ಸಿಕ್ಕಾಗಲೆಲ್ಲಾ ಮೀನು ಕೆರೆಗಳಲ್ಲಿ ಕೆಲಸ ಮಾಡುತ್ತಾರೆ. ತನ್ನ ವಯಸ್ಸಾದ ಹೆತ್ತವರನ್ನು ನೋಡಿಕೊಳ್ಳುವ ಸಲುವಾಗಿ ಅವರು ಹಳ್ಳಿಯಲ್ಲಿಯೇ ಉಳಿಯಲು ನಿರ್ಧರಿಸಿದರು. "ಎಂಜಿಎನ್ಆರ್‌ಇಜಿಎ (ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ಇಲ್ಲಿ ಅನುಷ್ಠಾನಗೊಳ್ಳದಿದ್ದರೆ ಅದರ ಉದ್ದೇಶವೇನು? ನರೇಗಾ ಮೂಲಕ ನಮಗೆ ಕೆಲವು ಕೆಲಸಗಳನ್ನು ನೀಡುವಂತೆ ನಾವು ಆಗಾಗ್ಗೆ ಅಧಿಕಾರಿಗಳನ್ನು ಕೇಳಿದ್ದೇವೆ, ಆದರೆ ಕಾಯ್ದೆಯನ್ನು ಅಂಗೀಕರಿಸಿದ ನಂತರ (2005ರಲ್ಲಿ) ಒಮ್ಮೆಯೂ ನಮಗೆ ಕೆಲಸ ಸಿಕ್ಕಿಲ್ಲ. ಒಂದು ದಿನ, ನಾನು ನನ್ನ ವಯಸ್ಸಾದ ಹೆತ್ತವರನ್ನು ಹಳ್ಳಿಯಲ್ಲಿ ಬಿಟ್ಟು ಯಾವುದೋ ನಗರಕ್ಕೆ ಹೋಗಿ ಅಲ್ಲಿ ಕಾರ್ಮಿಕನಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಈಡಾಗುತ್ತೇನೆ," ಎಂದು ಜೋಸೆಫ್ ಹೇಳುತ್ತಾರೆ, ಹೀಗೆ ಹೇಳುವಾಗ ಅವರ ಮುಖದಲ್ಲಿ ನೋವು ಮತ್ತು ಕೋಪ ಎದ್ದು ಕಾಣುತ್ತಿತ್ತು.

ಏತನ್ಮಧ್ಯೆ, ಈ ಜಲಕೃಷಿಯು ಊರಿನಲ್ಲಿನ ಅಂತರ್ಜಲ ಮತ್ತು ಕುಡಿಯುವ ನೀರಿನ ಕೊಳಗಳನ್ನು ಕಲುಷಿತಗೊಳಿಸಿದೆ ಮತ್ತು ನೀರಾವರಿ ಕಾಲುವೆಗಳು ಮತ್ತು ತೊರೆಗಳಂತಹ ಇತರ ಮೇಲ್ಮೈ ಜಲ ಸಂಪನ್ಮೂಲಗಳನ್ನು ಸಹ ಕಲುಷಿತಗೊಳಿಸಿದೆ. "ಪಂಚಾಯತ್ ನಲ್ಲಿಯಿಂದ ಬರುವ ಕುಡಿಯುವ ನೀರು ಹಸಿರಾಗಿ ಕಾಣುತ್ತದೆ. ನಾವು 20 ಲೀಟರ್ ಕುಡಿಯುವ ನೀರಿನ ಕ್ಯಾನ್ ಅನ್ನು 15 ರೂ.ಗಳಿಗೆ ಖರೀದಿಸುತ್ತೇವೆ [ತಮಿರಿಸದಲ್ಲಿನ ಪಂಚಾಯತ್ ಕಚೇರಿ ಬಳಿಯ ಅಂಗಡಿಗಳಿಂದ]. ಮತ್ತು ನಮಗೆ ತಿಂಗಳಿಗೆ ಕನಿಷ್ಠ ೨೦ ಕ್ಯಾನ್ ನೀರು ಬೇಕು. ಇಲ್ಲಿನ ದಲಿತರು ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಿಸಲಾಗಿದೆ, ಆದರೆ ಭೂಮಾಲಿಕ ಜಾತಿಗಳು ಪ್ರಕೃತಿಯ ಕ್ರೋಧದಿಂದ ಪಾರಾಗುತ್ತವೆಯೇ?" ಎಂದು ಸರೋಜಾ ಪ್ರಶ್ನಿಸುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Rahul Maganti

Rahul Maganti is an independent journalist and 2017 PARI Fellow based in Vijayawada, Andhra Pradesh.

Other stories by Rahul Maganti
Editor : Sharmila Joshi

ਸ਼ਰਮਿਲਾ ਜੋਸ਼ੀ ਪੀਪਲਸ ਆਰਕਾਈਵ ਆਫ਼ ਰੂਰਲ ਇੰਡੀਆ ਦੀ ਸਾਬਕਾ ਸੰਪਾਦਕ ਹਨ ਅਤੇ ਕਦੇ ਕਦਾਈਂ ਲੇਖਣੀ ਅਤੇ ਪੜ੍ਹਾਉਣ ਦਾ ਕੰਮ ਵੀ ਕਰਦੀ ਹਨ।

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru