ಫೂಲ್‌ವತಿಯಾಳ 12 ವರ್ಷದ ತಮ್ಮ ಆ ದಿನದ ಕೊನೆಯ ಸೈಕಲ್ ಸವಾರಿಯಾಗಿ ಹತ್ತಿರದ ಬೇವಿನ ಮರದ ಬಳಿಗೆ ಹೋಗುತ್ತಿದ್ದಾನೆ. "ನಾನೂ ಒಂದು ಸಣ್ಣ ರೌಂಡ್ ಹೋಗಿ ಬೇಗ ಬರುತ್ತೇನೆ" ಎಂದು 16 ವರ್ಷದ ಫೂಲ್‌ವತಿಯಾ ಹೇಳುತ್ತಾಳೆ. "ಇನ್ನು ನಾಳೆಯಿಂದ ಐದು ದಿನಗಳವರೆಗೆ ನನಗೆ ಸೈಕಲ್ ಓಡಿಸಲು ಸಾಧ್ಯವಿಲ್ಲ. ಬಟ್ಟೆ ಬಳಸುವಾಗ ಸೈಕಲ್ ಬಳಸುವುದು ಬಹಳ ಕಷ್ಟ" ಎಂದು ರಸ್ತೆಬದಿಯ ನಾಯಿ ಮರಿಯನ್ನು ಮುದ್ದು ಮಾಡುತ್ತಾ ಹೇಳುತ್ತಾಳೆ.
ಫೂಲ್ವಾತಿಯಾ ನಾಳಿನ ತನ್ನ ಮುಟ್ಟಿನ ದಿನದ ನಿರೀಕ್ಷೆಯಲ್ಲಿದ್ದಾಳೆ. (ಹೆಸರು ಬದಲಾಯಿಸಲಾಗಿದೆ) ಆದರೆ ಅವಳು ಈ ತಿಂಗಳು ಹಿಂದಿನ ತಿಂಗಳಿನಂತೆ ತನ್ನ ಶಾಲೆಯಲ್ಲಿ ನೀಡಲಾಗುವ ಸ್ಯಾನಿಟರಿ ನ್ಯಾಪಿಕಿನ್ ಪಡೆಯಲು ಸಾಧ್ಯವಿಲ್ಲ. "ಸಾಮಾನ್ಯವಾಗಿ ನಮ್ಮ ಮುಟ್ಟಿನ ದಿನಗಳಲ್ಲಿ ಶಾಲೆಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಪಡೆಯುತ್ತಿದ್ದೆವು. ಆದರೆ ಈ ತಿಂಗಳು ಬಟ್ಟೆಯನ್ನೇ ಬಳಸಬೇಕು."
ಕೋವಿಡ್ -19 ಲಾಕ್‌ಡೌನ್‌ನಿಂದಾಗಿ ಇತರೆಲ್ಲೆಡೆಯಂತೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲಿರುವ ಅವಳ ಶಾಲೆಯನ್ನೂ ಮುಚ್ಚಲಾಗಿದೆ.
ಫೂಲ್ವಾತಿಯಾ ಕಾರ್ವಿ ತಹಸಿಲ್‌ನ ತಾರೌಹಾ ಗ್ರಾಮದಲ್ಲಿರುವ ಸೋನೆಪುರ ಎಂಬ ಕುಗ್ರಾಮದಲ್ಲಿ ತನ್ನ ಹೆತ್ತವರು ಮತ್ತು ಇಬ್ಬರು ಸಹೋದರರೊಂದಿಗೆ ವಾಸಿಸುತ್ತಿದ್ದಾಳೆ. ಆಕೆಗೆ ಇಬ್ಬರು ಸಹೋದರಿಯರಿದ್ದು ಮದುವೆಯಾಗಿ ಬೇರಡೆ ವಾಸಿಸುತ್ತಿದ್ದಾರೆ. ಮಾರ್ಚ್ 24 ರಂದು ಲಾಕ್ ಡೌನ್ ಘೋಷಿಸಿದಾಗ ಅವರು 10 ನೇ ತರಗತಿ ಪರೀಕ್ಷೆಗಳನ್ನು ಮುಗಿಸಿದ್ದಳು. ಹತ್ತು ದಿನಗಳ ವಿರಾಮದ ನಂತರ ಮತ್ತೆ ಶಾಲೆಗೆ ಹೊರಟಿದ್ದಳು. ಅವಳು ಕಾರ್ವಿ ಬ್ಲಾಕ್‌ನ ರಾಜ್ಕಿಯಾ ಬಾಲಿಕಾ ಇಂಟರ್ ಕಾಲೇಜಿನ ವಿದ್ಯಾರ್ಥಿನಿ.
"ಈ ದಿನಗಳಲ್ಲಿ ನಾನು ಬೇರೆ ಯಾವುದಕ್ಕೂ ಬಳಸದ ಬಟ್ಟೆಯ ತುಂಡನ್ನು ಹುಡುಕಿ ಅದನ್ನು ಬಳಸಿ ನಂತರ ಎರಡನೇ ಬಾರಿಗೆ ಅದನ್ನು ಬಳಸುವ ಮೊದಲು ಅದನ್ನು ತೊಳೆದುಕೊಳ್ಳುತ್ತೇನೆ" ಎಂದು ಫೂಲ್ವಾತಿಯಾ ಹೇಳುತ್ತಾಳೆ. ಬಹುಶಃ ಬರಿಗಾಲಿನಲ್ಲಿ ನಡೆದಿದ್ದರಿಂದ ಇರಬೇಕು, ಅವಳ ಗುಲಾಬಿ ಉಗುರು ಬಣ್ಣ ಹಚ್ಚಿದ ಕಪ್ಪು ಕಾಲುಗಳು ಧೂಳಿನಿಂದ ಕೂಡಿತ್ತು.







