ಸುಖರಾಣಿ ಸಿಂಗ್ ಅವರಿಗೆ ಕಾಡಿಗೆ ಹೋಗಿ ಮಹುವಾ ಹೂವುಗಳನ್ನು ಸಂಗ್ರಹಿಸದಿರುವ ಒಂದು ವರ್ಷವೂ ನೆನಪಿಲ್ಲ. 45 ವರ್ಷದ ಸುಖರಾಣಿ ಹೇಳುತ್ತಾರೆ, “ನಾನು ಚಿಕ್ಕವಳಿದ್ದಾಗ, ನನ್ನ ತಾಯಿಯೊಂದಿಗೆ ಕಾಡಿಗೆ ಹೋಗುತ್ತಿದ್ದೆ. ಈಗ ನಾನು ನನ್ನ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದೇನೆ." ಅವರು ಮಹುವಾವನ್ನು ಸಂಗ್ರಹಿಸಲು ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಹೊರಡುತ್ತಾರೆ. ಮಹುವಾ ಮುಂಜಾನೆಯೇ ಮರದಿಂದ ಉದುರುಲು ಆರಂಭವಾಗುತ್ತದೆ. ಅವರು ಮಧ್ಯಾಹ್ನದವರೆಗೂ ಅಲ್ಲಿಯೇ ಇರುತ್ತಾರೆ ಮತ್ತು ಹೆಚ್ಚುತ್ತಿರುವ ಬಿಸಿಲಿನಲ್ಲೇ ಉದುರುವ ಮಹುವಾ ಹೂಗಳನ್ನು ಸಂಗ್ರಹಿಸುತ್ತಾರೆ. ಮನೆಗೆ ತಲುಪಿದ ನಂತರ, ಅವರು ಅವುಗಳನ್ನು ಬಿಸಿಲಿನಲ್ಲಿ ಒಣಗಲು ನೆಲದ ಮೇಲೆ ಹರಡುತ್ತಾರೆ.
ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಮೀಪದಲ್ಲಿ ವಾಸಿಸುವ ಸುಖರಾಣಿಯವರಂತಹ ಸಣ್ಣ ರೈತರಿಗೆ, ಮಹುವಾ ಹೂವುಗಳು ಅವರ ಖಚಿತ ಆದಾಯದ ಮೂಲವಾಗಿದೆ. ಸುಖರಾಣಿ ಮಾನ್ಪುರ ಬ್ಲಾಕ್‌ನ ಅವರ ಹಳ್ಳಿ ಪರಸಿಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಉಮಾರಿಯಾದ ಬಜಾರಿನಲ್ಲಿ ಮಾರಾಟ ಮಾಡುವ ಮೂಲಕ ಒಂದು ಕಿಲೋಗೆ 40 ರೂ. ಗಳಿಸುತ್ತಾರೆ ಅವರು ಒಂದು ಸೀಸನ್‌ನಲ್ಲಿ 200 ಕೆಜಿಯಷ್ಟು ಮಹುವಾವನ್ನು ಸಂಗ್ರಹಿಸುತ್ತಾರೆ. ಈ ಮಹುವಾ ಋತುವು ಏಪ್ರಿಲ್ ತಿಂಗಳಲ್ಲಿ 2-3 ವಾರಗಳವರೆಗೆ ಇರುತ್ತದೆ. ಸುಖರಾಣಿ ಹೇಳುತ್ತಾರೆ, "ಮಹುವಾ ಮರವು ನಮಗೆ ಅಮೂಲ್ಯವಾದುದು." ಮಹುವಾ ಹೂವುಗಳ ಹೊರತಾಗಿ, ಅದರ ಹಣ್ಣುಗಳು ಮತ್ತು ಮರದ ತೊಗಟೆಯು ಅವುಗಳ ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳಿಗಾಗಿ ಮೌಲ್ಯಯುತವಾಗಿವೆ.
ಮಹುವಾ ಹಂಗಾಮಿನ ಸಮಯದಲ್ಲಿ, ಸುಖರಾಣಿ ಮಧ್ಯಾಹ್ನ 1 ಗಂಟೆಗೆ ಮನೆಗೆ ಹಿಂದಿರುಗಿ ಅಡುಗೆ ಮಾಡುತ್ತಾರೆ, ಅದು ತನ್ನ ಪತಿ ಸೇರಿದಂತೆ ತನ್ನ ಐದು ಮಕ್ಕಳಿಗೆ ಆಹಾರವನ್ನು ನೀಡುತ್ತದೆ. ನಂತರ 3 ಗಂಟೆಯ ಸುಮಾರಿಗೆ ಅವರು ತನ್ನ ಪತಿಯೊಂದಿಗೆ ಗೋಧಿ ಬೆಳೆ ಕೊಯ್ಲು ಮಾಡುವುದು ಮತ್ತು ಸಂಗ್ರಹಿಸಲು ಹೋಗುತ್ತಾರೆ. ಗೊಂಡ ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಖರಾಣಿ ಮತ್ತು ಆಕೆಯ ಪತಿ, ಅವರ ಹೆಸರಿನಲ್ಲಿ ನಾಲ್ಕು ಬಿಘಾ ಭೂಮಿಯನ್ನು (ಸುಮಾರು ಒಂದು ಎಕರೆ) ಹೊಂದಿದ್ದು, ಅಲ್ಲಿ ಅವರು ಮಳೆನೀರಿನ ಸಹಾಯದಿಂದ ಗೋಧಿಯನ್ನು ಬೆಳೆಯುತ್ತಾರೆ. ಸಾಮಾನ್ಯವಾಗಿ ಈ ಧಾನ್ಯವು ಕುಟುಂಬದ ಬಳಕೆಗಾಗಿ ಮಾತ್ರ ಸಾಕಾಗುತ್ತದೆ.











