“ಪಶ್ಮಿನಾ ಶಾಲುಗಳಿಗೆ ರೇಶಿಮೆಯಂತಹ ನಯವನ್ನು ತರುವವರು ನಾವು.”
ಶ್ರೀನಗರದಲ್ಲಿರುವ ಅಬ್ದುಲ್ ಮಜೀದ್ ಲೋನ್ ಅವರ ಮನೆಯಲ್ಲಿ ಎಲ್ಲೆಡೆ ದಾರದ ಗಂಟುಗಳು ಹರಡಿ ಬಿದ್ದಿದ್ದವು. ಮಜೀದ್ ನೆಲದ ಮೇಲೆ ಕುಳಿತು ಕೈಯಲ್ಲಿ ಒಂದು ವೌಚ್ (ಒಂದು ಬಗೆಯ ಅಗಲವಾದ ಹರಿತವಿರುವ ಕಬ್ಬಿಣದ ಉಪಕರಣ) ಹಿಡಿದು ಅದರ ಮೂಲಕ ಹೊಸದಾಗಿ ನೇಯ್ದ ಪಶ್ಮಿನಾ ಶಾಲಿನಲ್ಲಿದ್ದ ಅನಾವಶ್ಯಕ ದಾರದ ಎಳೆಗಳನ್ನು ಎಚ್ಚರಿಕೆಯಿಂದ ಕತ್ತರಿಸುತ್ತಿದ್ದರು. "ಇಂತಹದ್ದೊಂದು ಕರಕುಶಲತೆ ಅಸ್ತಿತ್ವದಲ್ಲಿದೆ ಎಂದು ಕೆಲವೇ ಜನರಿಗೆ ತಿಳಿದಿದೆ" ಎಂದು ಅವರು ಹೇಳುತ್ತಾರೆ.
ಈ 42 ವರ್ಷದ ಕುಶಲಕರ್ಮಿ ಶ್ರೀನಗರ ಜಿಲ್ಲೆಯ ನವಕಾ ದಾಲ್ ವಾರ್ಡ್ ನಿವಾಸಿ. ಹೆಚ್ಚಿನ ಮೌಲ್ಯದ ಪಶ್ಮಿನಾ ಶಾಲುಗಳಿಂದ ಪರ್ಜ್ (ಜಾಳು ದಾರ) ವನ್ನು ಕೈಯಿಂದ ಕೀಳಲು ವೂಚ್ ಬಳಸುತ್ತಾರೆ. ಈ ಕೆಲಸವನ್ನು ಪುರಸ್ಗಾರಿ ಎಂದು ಕರೆಯಲಾಗುತ್ತದೆ ಮತ್ತು ಶ್ರೀನಗರವೊಂದರಲ್ಲೇ 200ಕ್ಕೂ ಹೆಚ್ಚು ಕುಶಲಕರ್ಮಿಗಳು ಈ ಕೆಲಸ ಮಾಡುತ್ತಿದ್ದಾರೆ. ಅಬ್ದುಲ್ ಎರಡು ದಶಕಗಳಿಂದ ಪುರಸ್ಗಾರ್ ಕುಶಲಕರ್ಮಿಯಾಗಿದ್ದು, ಅವರಿಗೆ ಸರಿಸುಮಾರು ರೂ. ಎಂಟು ಗಂಟೆಗಳ ಕೆಲಸಕ್ಕೆ 200 ರೂ. ಸಂಬಳವಾಗಿ ದೊರೆಯುತ್ತದೆ.
ಎಲ್ಲಾ ಬಗೆಯ ಪಶ್ಮಿನಾ ಶಾಲುಗಳಿಗೆ - ನೇಯ್ದ, ಬಣ್ಣ-ಬಣ್ಣದ ಮತ್ತು ಕಸೂತಿ ಹೊಂದಿರುವ - ಪುರಸ್ಗಾರಿಯನ್ನು ಕೈಯಾರೆ ಮಾಡಲಾಗುತ್ತದೆ. ಇದರ ಬಟ್ಟೆಯ ಸೂಕ್ಷ್ಮ ಸ್ವಭಾವವು ಕುಶಲಕರ್ಮಿಗಳ ಕೌಶಲದ ಬದಲು ಯಂತ್ರವನ್ನು ಬಳಸಲು ಅನುಮತಿಸುವುದಿಲ್ಲ.
ಪುರಸ್ಗಾರರ ಪಾಲಿಗೆ ವೌಚ್ ಬಹಳ ಅಗತ್ಯ ಉಪಕರಣ. . "ನಮ್ಮ ಸಂಪೂರ್ಣ ಗಳಿಕೆಯು ಒಂದು ವೌಚ್ ಮತ್ತು ಅದರ ಗುಣಮಟ್ಟವನ್ನು ಅವಲಂಬಿಸಿರುತ್ತದೆ" ಎಂದು ಅಬ್ದುಲ್ ಹೇಳುತ್ತಾರೆ. ಮರದ ಕೈಮಗ್ಗದಿಂದ ನೇಯಲ್ಪಟ್ಟ ಪಶ್ಮಿನಾ ಶಾಲೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅವರು ಹೇಳುತ್ತಾರೆ, "ಪಶ್ಮಿನಾ ಶಾಲನ್ನು ವೌಚ್ ಇಲ್ಲದೆ ಸಂಸ್ಕರಿಸುವುದು ನಮಗೆ ಕಷ್ಟವಾಗುತ್ತದೆ."














