ಉತ್ತರ ಪ್ರದೇಶ ಶಿಕ್ಷಕರ ಒಕ್ಕೂಟ ಮತ್ತು ಅದಕ್ಕೆ ಸಂಬಂಧಿಸಿದ ಸಂಘಗಳ ನವೀಕೃತ ಪಟ್ಟಿಯ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ನಡೆದ ಉತ್ತರಪ್ರದೇಶದ ಪಂಚಾಯತ್ ಚುನಾವಣೆಯಲ್ಲಿನ ಕಡ್ಡಾಯ ಕರ್ತವ್ಯದ ನಂತರ ಕೋವಿಡ್ -19 ರಿಂದ ಮೃತಪಟ್ಟ ಶಾಲಾ ಶಿಕ್ಷಕರ ಸಂಖ್ಯೆ ಈಗ 1,621 ಕ್ಕೆ ತಲುಪಿದೆ - ಅವರಲ್ಲಿ 1,181 ಪುರುಷರು ಮತ್ತು 440 ಮಹಿಳೆಯರು. ಪರಿ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಮೃತರ ವಿವರದ ಪೂರ್ಣ ಪಟ್ಟಿಯನ್ನು ಹೊಂದಿದೆ.
ಉತ್ತರಪ್ರದೇಶದ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಚುನಾವಣೆಗಳನ್ನು ಮುಂದೂಡಬೇಕೆಂದು ಶಿಕ್ಷಕರ ಸಂಘಗಳು ಮನವಿ ಮಾಡಿಕೊಂಡರೂ ಅದನ್ನು ನಿರ್ಲಕ್ಷಿಸಿ ಚುನಾವಣೆ ನಡೆಸುವ ಮೂಲಕ ಈ ಮಾನವ ನಿರ್ಮಿತ ದುರಂತಕ್ಕೆ ಕಾರಣವಾದವು. ಆ ಕುರಿತು ಪರಿ ಪ್ರಕಟಿಸಿದ ದುರಂತದ ಸಂಪೂರ್ಣ ವಿವರಗಳಿಂದ ಕೂಡಿದ ವರದಿಯು ಈ ಲೇಖನದ ಕೆಳಭಾಗದಲ್ಲಿದೆ. ಆ ಸಮಯದಲ್ಲಿ ಚುನಾವಣಾ ಕರ್ತವ್ಯಕ್ಕೆ ತೆರಳಿ ಕೋವಿಡ್-19 ಸೋಂಕಿಗೆ ಒಳಗಾಗಿ ಮೃತಪಟ್ಟ ಶಾಲಾ ಶಿಕ್ಷಕರ ಸಂಖ್ಯೆ 713ರಷ್ಟಿತ್ತು. ಅವರಲ್ಲಿ 540 ಪುರುಷರು ಮತ್ತು 173 ಮಹಿಳಾ ಶಿಕ್ಷಕರು.
ಇದು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 8 ಲಕ್ಷ ಶಿಕ್ಷಕರನ್ನು ಹೊಂದಿರುವ ರಾಜ್ಯವಾಗಿದೆ - ಚುನಾವಣಾ ಕರ್ತವ್ಯಕ್ಕಾಗಿ ಅವರಲ್ಲಿ ಸಾವಿರಾರು ಶಿಕ್ಷಕರನ್ನು ಕಳುಹಿಸಲಾಗಿದೆ. ಮತ್ತು ಚುನಾವಣೆ ಕೂಡ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯಿತು. 8 ಲಕ್ಷ ಸ್ಥಾನಗಳಿಗೆ 13 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದರೆ, ಮತದಾರರ ಸಂಖ್ಯೆ 13 ಕೋಟಿಗಳಷ್ಟಿತ್ತು. ಇದಕ್ಕಾಗಿ ಚುನಾವಣಾಧಿಕಾರಿಗಳು (ಶಿಕ್ಷಕರು ಮತ್ತು ಇತರರು) ಲಕ್ಷಾಂತರ ಜನರನ್ನು ಸ್ಪಷ್ಟವಾಗಿ ಸಂಪರ್ಕಿಸಬೇಕಾಗಿತ್ತು, ಆದರೆ ಸುರಕ್ಷತಾ ವ್ಯವಸ್ಥೆಗಳು ತೀರಾ ಕಡಿಮೆಯಿದ್ದವು.
ಉತ್ತರಪ್ರದೇಶದ ಪಂಚಾಯತ್ ಚುನಾವಣೆಗಳನ್ನು ಈ ಹಿಂದೆಯೂ ಮುಂದೂಡಲಾಗಿತ್ತು - ಉದಾಹರಣೆಗೆ, 1994ರ ಸೆಪ್ಟೆಂಬರ್ ತಿಂಗಳಿನಿಂದ 1995ರ ಏಪ್ರಿಲ್ವರೆಗೆ. ಹೀಗಿರುವಾಗ “ಹಿಂದೆಂದೂ ಕಾಣದಷ್ಟು ದೊಡ್ಡ ಸಾಂಕ್ರಾಮಿಕ ಪಿಡುಗು ಮತ್ತು ಮಾನವೀಯ ಬಿಕ್ಕಟ್ಟಿನ ನಡುವೆ ಈ ಅವಸರ ಏಕೆ ಬೇಕಿತ್ತು?” ಎಂದು ಮಾಜಿ ರಾಜ್ಯ ಚುನಾವಣಾ ಆಯುಕ್ತ ಸತೀಶ್ ಕುಮಾರ್ ಅಗರ್ವಾಲ್ ಕೇಳುತ್ತಾರೆ.
ಚುನಾವಣೆ ನಡೆದಿದ್ದಕ್ಕೂ ಮತ್ತು ಶಾಲಾ ಶಿಕ್ಷಕರು ಹಾಗೂ ಇತರ ಸರ್ಕಾರಿ ನೌಕರರ ಸಾವಿನ ನಡುವೆ ಸಂಬಂಧವಿದೆಯೆನ್ನುವದನ್ನು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಳ್ಳಿ ಹಾಕಿದ್ದಾರೆ. "ದೆಹಲಿಯಲ್ಲಿ ಚುನಾವಣೆ ನಡೆದಿದೆಯೇ? ಮಹಾರಾಷ್ಟ್ರದಲ್ಲಿ ಚುನಾವಣೆ ನಡೆದಿದೆಯೇ?" ಅವರು ಮೇ 12ರಂದು ನೋಯ್ಡಾದಲ್ಲಿ ಸುದ್ದಿಗಾರರನ್ನು ಕೇಳಿದರು. ಈ ದುರಂತದ ಜವಾಬ್ದಾರಿಯನ್ನು ಅಲಹಾಬಾದ್ ಹೈಕೋರ್ಟ್ ಮೇಲೆ ಹೊರಿಸಲು ಪ್ರಯತ್ನಿಸಲಾಗಿದೆ. ಸಿಎಂ ಆದಿತ್ಯನಾಥ್ ಸುದ್ದಿಗಾರರಿಗೆ ಹೇಳಿದಂತೆ: "ಹೈಕೋರ್ಟ್‌ನ ನಿರ್ದೇಶನದಂತೆ ಪಂಚಾಯತ್ ಚುನಾವಣೆಗಳು ನಡೆದವು."
ಆದರೆ ಇದು ಭಾಗಶಃ ಸತ್ಯ ಮಾತ್ರ. ಚುನಾವಣೆಯನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಅದು ಖಾಸಗಿ ಅರ್ಜಿಯಾಗಿದ್ದು, ರಾಜ್ಯವು ಸಲ್ಲಿಸಿದ ಅರ್ಜಿಯಾಗಿರಲಿಲ್ಲ. (ಸಾಂವಿಧಾನಿಕ ಅಗತ್ಯದ ಪ್ರಕಾರ, 2021ರ ಜನವರಿ 21ರ ಮೊದಲು ಪಂಚಾಯತ್ ಚುನಾವಣೆಗಳು ಪೂರ್ಣಗೊಂಡಿರಬೇಕಿತ್ತು). ಆದರೆ ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನ್ಯಾಯಾಲಯ ಆದೇಶಿಸಿತ್ತು.
ಏಪ್ರಿಲ್ 6ರಂದು ಅಲಹಾಬಾದ್ ಹೈಕೋರ್ಟ್ ರಾಜ್ಯವು ಎಲ್ಲಾ ಸುರಕ್ಷಾ ನಿಯಮಾವಳಿಗಳನ್ನು ಅನುಸರಿಸುತ್ತದೆ ಎಂಬ ವಿಶ್ವಾಸವಿದೆ ಮತ್ತು ಯುಪಿ ಸರ್ಕಾರವು "ಚುನಾವಣಾ ಪ್ರಚಾರದ ಸಮಯದಲ್ಲಿ ಅನುಸರಿಸಬೇಕಾದ ಶಿಷ್ಟಾಚಾರಗಳನ್ನು" ಘೋಷಿಸಿದೆ ಎಂದು ಹೇಳಿತ್ತು. "ಪಂಚಾಯತ್ ರಾಜ್ ಚುನಾವಣೆಗಳನ್ನು ಸಹ ಜನಸಮೂಹವಿಲ್ಲದ ರೀತಿಯಲ್ಲಿ ನಡೆಸಬೇಕು" ಎಂದು ಅದು ಆದೇಶಿಸಿತ್ತು. ಅದು ನಾಮನಿರ್ದೇಶನ, ಪ್ರಚಾರ ಅಥವಾ ನಿಜವಾದ ಮತದಾನವಾಗಿದ್ದರೂ, ಎಲ್ಲಾ ಕೋವಿಡ್ -19 ಶಿಷ್ಟಾಚಾರಗಳನ್ನು ಅನುಸರಿಸಲಾಗುತ್ತಿದೆಯೆನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.” ಬೇರೆ ರೀತಿಯಲ್ಲಿ ಹೇಳುವುದಾದರೆ, "ಹೈಕೋರ್ಟ್‌ನ ನಿರ್ದೇಶನದಂತೆ" ಚುನಾವಣೆಗಳು ನಡೆದಿಲ್ಲ. ನ್ಯಾಯಾಲಯದ ಸೂಚನೆಗಳ ಉಲ್ಲಂಘನೆಯು ಅವರ ಒಕ್ಕೂಟಗಳ ಪ್ರಕಾರ ಶಿಕ್ಷಕರಿಗೆ ಹಾನಿಕಾರಕವೆನ್ನುವುದು ಸಾಬೀತಾಯಿತು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬರೆದ ಶಿಕ್ಷಕರ ಸಂಘಗಳ ಇತ್ತೀಚಿನ ಪತ್ರವು ಹೀಗೆ ಹೇಳುತ್ತದೆ, “ಗೌರವಾನ್ವಿತ ಸುಪ್ರೀಂ ಕೋರ್ಟ್ ವಿಚಾರಣೆಯ ಸಮಯದಲ್ಲಿ ಸಹ, ಒಕ್ಕೂಟವು ತನ್ನ ಸಲಹೆಯ ಮೂಲಕ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಆದಾಗ್ಯೂ, ಮತ ಎಣಿಕೆಯ ಸಮಯದಲ್ಲಿ ಕೋವಿಡ್ ಸೋಂಕಿನಿಂದ ಜನರನ್ನು ರಕ್ಷಿಸುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಸರ್ಕಾರಿ ವಕೀಲರು ಮಾನ್ಯ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದ್ದರು."
ಬಹಳ ಭಾವನಾತ್ಮಕ ವಾಕ್ಯವೊಂದರಲ್ಲಿ, ಪತ್ರವು ಹೀಗೆ ಹೇಳುತ್ತದೆ: "ಇಷ್ಟು ದೊಡ್ಡ ಸಂಖ್ಯೆಯ ಶಿಕ್ಷಕರ ಸಾವಿನ ಬಗ್ಗೆ ಪ್ರಾಥಮಿಕ ಶಿಕ್ಷಣ ಇಲಾಖೆ ಅಥವಾ ಉತ್ತರ ಪ್ರದೇಶ ಸರ್ಕಾರ ಯಾವುದೇ ದುಃಖವನ್ನು ವ್ಯಕ್ತಪಡಿಸಿಲ್ಲ."
ಏಪ್ರಿಲ್ 26ರಂದು, ನ್ಯಾಯಾಲಯವು ಎಸ್‌ಇಸಿಗೆ ಮಾಸ್ಕ್ ಧರಿಸುವುದನ್ನು ಸೇರಿದಂತೆ ಕೋವಿಡ್ ಸಂಬಂಧಿ ಸುರಕ್ಷಾ ಶಿಷ್ಟಾಚಾರಗಳನ್ನು "ಅನುಸರಿಸದಿರುವುದು" ಮತ್ತು "ಧಾರ್ಮಿಕವಾಗಿ ಪಾಲಿಸಬೇಕಾದ" ಸಾಮಾಜಿಕ ಅಂತರವನ್ನು ಅಳವಡಿಸಿಕೊಳ್ಳದಿರುವುದಕ್ಕಾಗಿ ನೋಟಿಸ್ ನೀಡಿತ್ತು. ನ್ಯಾಯಾಲಯದ ಆದೇಶದ ಬಗ್ಗೆ ಸರ್ಕಾರ ಅಥವಾ ಎಸ್‌ಇಸಿ ಅಸಮಾಧಾನ ಹೊಂದಿದ್ದರೆ, ಅವರು ಆ ಕುರಿತು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಇದಕ್ಕೂ ಮುಂಚೆಯೇ, ಮಾರ್ಚ್ ಕೊನೆಯ ವಾರದಲ್ಲಿ, ಉತ್ತರಪ್ರದೇಶದಲ್ಲಿ ನಡೆದ ಸಾಮೂಹಿಕ ಹೋಳಿ ಆಚರಣೆಯ ಸಂದರ್ಭದಲ್ಲಿಯೂ ಕೋವಿಡ್ -19 ಶಿಷ್ಟಾಚಾರಗಳನ್ನು ಜಾರಿಗೆ ತರಲು ರಾಜ್ಯವು ನಿಜವಾದ ಪ್ರಯತ್ನ ಮಾಡಲಿಲ್ಲ.
ಮುಖ್ಯ ವಿಷಯವೆಂದರೆ, ಮೇ 12ರಂದು ಅಲಹಾಬಾದ್ ಹೈಕೋರ್ಟ್ ರಾಜ್ಯ ಪಂಚಾಯತ್ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಕೋವಿಡ್ -19ರ ಕಾರಣದಿಂದ ಮೃತಪಟ್ಟ ಚುನಾವಣಾ ಅಧಿಕಾರಿಗಳ (ಶಿಕ್ಷಕರು ಮತ್ತು ಇತರ ಸರ್ಕಾರಿ ನೌಕರರ) ಕುಟುಂಬಗಳಿಗೆ ಕನಿಷ್ಠ 1 ಕೋಟಿ ರೂ.ಗಳ ಪರಿಹಾರ ಧನವನ್ನು ನೀಡಬೇಕು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ವರ್ಮಾ ಮತ್ತು ಅಜಿತ್ ಕುಮಾರ್ ಅವರ ನ್ಯಾಯಪೀಠದ ಮಾತುಗಳಲ್ಲಿ: "ಚುನಾವಣೆಯ ಸಮಯದಲ್ಲಿ ಯಾರೂ ಸ್ವಯಂಪ್ರೇರಣೆಯಿಂದ ತಮ್ಮ ಸೇವೆಗಳನ್ನು ಸಲ್ಲಿಸಿಲ್ಲ, ಬದಲಿಗೆ ಚುನಾವಣಾ ಕರ್ತವ್ಯದಲ್ಲಿದ್ದ ಎಲ್ಲರಿಗೂ ಇದನ್ನು ಕಡ್ಡಾಯಗೊಳಿಸಲಾಗಿತ್ತು. ಅವರು ತಮ್ಮ ಹಿಂಜರಿಕೆಯನ್ನು ತೋರಿಸಿದ್ದರೂ ಸಹ."
ಗಮನಿಸಬೇಕಾದ ಸಂಗತಿಯೆಂದರೆ: ಕುಂಭಮೇಳವನ್ನು ಇನ್ನೂ ಒಂದು ವರ್ಷ ವಿಸ್ತರಿಸುವಂತೆ ದೇಶದ ಯಾವುದೇ ನ್ಯಾಯಾಲಯವು ಉತ್ತರಾಖಂಡ ಅಥವಾ ಉತ್ತರ ಪ್ರದೇಶದ ಸರ್ಕಾರಗಳಿಗೆ ಆದೇಶಿಸಿಲ್ಲ. ಹರಿದ್ವಾರದಲ್ಲಿ ಕುಂಭಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು ಮುಂದಿನದು 2022ರಲ್ಲಿ ನಡೆಯಬೇಕಿತ್ತು. ಅದೇನೇ ಇದ್ದರೂ, ಕುಂಭವು ಒಂದು ಪ್ರಮುಖ ಸಾಮೂಹಿಕ ಆಚರಣೆಯಾಗಿದ್ದು, ಈ ವರ್ಷ ನಡೆದ ಪಂಚಾಯತ್ ಚುನಾವಣೆಗಳ ಸಂದರ್ಭದಲ್ಲೇ ಹಲವು ದಿನಗಳು ನಡೆದವು. 2022ರ ಬದಲು 2021ರಲ್ಲೇ ಕುಂಭಮೇಳವನ್ನು ನಡೆಸುವ ಅಗತ್ಯದ ಬಗ್ಗೆ ತೀವ್ರವಾದ ಜ್ಯೋತಿಷ್ಯ ಮತ್ತು ಧಾರ್ಮಿಕ ಚರ್ಚೆಗಳು ನಡೆದವು. ಆದರೆ ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ - ಕುಂಭಮೇಳ ಮತ್ತು ಪಂಚಾಯತ್ ಚುನಾವಣೆಗಳನ್ನು 'ಯಶಸ್ವಿಯಾಗಿ' ನಡೆಸುವ ರಾಜಕೀಯ ಅಗತ್ಯತೆಯ ಬಗ್ಗೆ ಕಡಿಮೆ ಚರ್ಚೆಗಳು ನಡೆದಿವೆ, ಆ ಚುನಾವಣೆಯಲ್ಲಿ ಈ ಘಟನೆಗಳು ಸಂಪೂರ್ಣವಾಗಿ ವಿನಾಶಕಾರಿಯಾಗಿ ನಡೆಯದೆ ಹೋಗಿದ್ದರೆ ಈ ಯಶಸ್ಸನ್ನು ಸಾಧನೆಯಾಗಿ ವರ್ಣಿಸಿಕೊಳ್ಳುವ ಆಲೋಚನೆಯಿತ್ತು.
ಈ ದುರಂತದ ಕುರಿತು ʼಪರಿʼ ಪ್ರಕಟಿಸಿದ್ದ (ಮೇ 10) ಮುಖ್ಯ ವರದಿ:













