ಸೀತಾಪುರದ ಆಸ್ಪತ್ರೆಯ ಆಕ್ಸಿಜನ್ ಬೆಡ್ ಮೇಲೆ ಮಲಗಿ ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗಲೂ ರಿತೇಶ್ ಮಿಶ್ರಾ ಅವರ ಸೆಲ್ ಫೋನ್ ರಿಂಗಣಿಸುತ್ತಲೇ ಇತ್ತು. ಮೇ 2ರಂದು ನಡೆಯಲಿರುವ ಉತ್ತರ ಪ್ರದೇಶದ ಪಂಚಾಯತ್ ಚುನಾವಣೆಗಳ ಮತ ಎಣಿಕೆಯಂದು ಕರ್ತವ್ಯಕ್ಕೆ ತಮ್ಮ ಹಾಜರಿಯನ್ನು ಖಾತರಿಗೊಳಿಸಬೇಕೆನ್ನುವುದು ಆ ಕರೆಗಳ ಆಗ್ರಹವಾಗಿತ್ತು. ಹೀಗೆ ಸಾವಿನ ಮನೆಯ ಬಾಗಿಲಿನಲ್ಲಿದ್ದ ರಿತೇಶ್ ಮಿಶ್ರಾ ಅವರಿಗೆ ಒಂದರ ಹಿಂದೆ ಒಂದರಂತೆ ಕರೆ ಮಾಡುತ್ತಿದ್ದವರು ರಾಜ್ಯ ಚುನಾವಣಾ ಆಯೋಗ ಮತ್ತು ಸರ್ಕಾರಿ ಅಧಿಕಾರಿಗಳು.
"ಆ ಫೋನ್ ರಿಂಗ್ ನಿಲ್ಲುವುದೇ ಇಲ್ಲ" ಎಂದ ಅವರ ಪತ್ನಿ ಅಪರ್ಣಾ "ನಾನು ಕರೆ ಸ್ವೀಕರಿಸಿ ಮಾತನಾಡಿ, ರಿತೇಶ್ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಅವರು ಆಸ್ಪತ್ರೆ ಸೇರಿದ್ದಾರೆಂದು ಹೇಳಿದಾಗ ಆ ಕಡೆಯಿಂದ ಮಾತನಾಡುತ್ತಿದ್ದ ವ್ಯಕ್ತಿ ಪುರಾವೆಯಾಗಿ ರಿತೇಶ್ ಹಾಸಿಗೆಯ ಮೇಲೆ ಮಲಗಿರುವ ಫೋಟೊ ತೆಗೆದು ಕಳಿಸುವಂತೆ ಕೇಳಿದರು. ನಂತರ ನಾನು ಫೋಟೊ ತೆಗೆದು ಕಳಿಸಿದೆ. ಆ ಫೋಟೊವನ್ನು ನಿಮಗೂ ಕಳಿಸುತ್ತೇನೆ" ಎಂದು ʼಪರಿʼಗೆ ತಿಳಿಸಿದ ಅವರು ನಂತರ ಆ ಫೋಟೊ ನಮಗೆ ಕಳಿಸಿದರು.
ಅಪರ್ಣಾ ಮಿಶ್ರಾ, (34) ಹೆಚ್ಚು ಒತ್ತಿ ಹೇಳುವುದು ತಾನು ತನ್ನ ಗಂಡನಿಗೆ ಚುನಾವಣಾ ಕರ್ತವ್ಯಕ್ಕೆ ಹೋಗದಂತೆ ಎಷ್ಟು ಬಲವಾಗಿ ಒತ್ತಾಯಿಸಿದ್ದೆನೆನ್ನುವ ಕುರಿತು. "ಅವರ ಡ್ಯೂಟಿ ರೋಸ್ಟರ್ ಬಂದ ಕ್ಷಣದಿಂದ ಕೆಲಸಕ್ಕೆ ಹೋಗುವುದು ಬೇಡವೆಂದು ಅವರನ್ನು ಒತ್ತಾಯಿಸುತ್ತಿದ್ದೆ" ಎಂದು ಅವರು ಹೇಳುತ್ತಾರೆ. "ಆದರೆ ಅವರು, ಚುನಾವಣಾ ಕರ್ತವ್ಯವನ್ನು ಕ್ಯಾನ್ಸಲ್ ಮಾಡಿಸಲು ಆಗುವುದಿಲ್ಲವೆಂದು ಮತ್ತೆ ಮತ್ತೆ ಹೇಳುತ್ತಿದ್ದರು. ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಅಧಿಕಾರಿಗಳು ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಬಹುದೆಂದೂ ಹೇಳುತ್ತಿದ್ದರು."
ರಿತೇಶ್ ಏಪ್ರಿಲ್ 29ರಂದು ಕೋವಿಡ್ -19 ಸೋಂಕಿನಿಂದ ಮೃತರಾದರು. ಪಂಚಾಯತ್ ಚುನಾವಣೆಯ ಕರ್ತವ್ಯಕ್ಕೆಂದು ತೆರಳಿ ಕೊವಿಡ್‌ನಿಂದ ನಿಧನರಾದ 700 ಕ್ಕೂ ಹೆಚ್ಚು ಯುಪಿ ಶಾಲಾ ಶಿಕ್ಷಕರಲ್ಲಿ ಇವರೂ ಒಬ್ಬರು. ʼಪರಿʼಯು ಮೃತ ಶಿಕ್ಷಕರ ಸಂಪೂರ್ಣ ಪಟ್ಟಿಯನ್ನು ಹೊಂದಿದ್ದು, ಪ್ರಸ್ತುತ ಒಟ್ಟು 713 ಮಂದಿ ಮೃತಪಟ್ಟಿದ್ದು ಅವರಲ್ಲಿ 540 ಪುರುಷರು ಮತ್ತು 173 ಮಹಿಳಾ ಶಿಕ್ಷಕರು. ಈ ಸಂಖ್ಯೆ ಇನ್ನೂ ಹೆಚ್ಚುತ್ತಿದೆ. ಉತ್ತರ ಪ್ರದೇಶವು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 8 ಲಕ್ಷ ಶಿಕ್ಷಕರನ್ನು ಹೊಂದಿರುವ ರಾಜ್ಯವಾಗಿದೆ - ಅವರಲ್ಲಿ ಹತ್ತಾರು ಸಾವಿರ ಜನರನ್ನು ಚುನಾವಣಾ ಕರ್ತವ್ಯಕ್ಕೆ ಕಳುಹಿಸಲಾಗಿದೆ.
ಸಹಾಯಕ ಶಿಕ್ಷಕರಾದ ರಿತೇಶ್ ತನ್ನ ಕುಟುಂಬದೊಡನೆ ಸೀತಾಪುರ ಜಿಲ್ಲಾ ಕೇಂದ್ರದಲ್ಲಿ ವಾಸಿಸುತ್ತಿದ್ದರು ಆದರೆ ಲಕ್ನೋದ ಗೋಸಾಯಿ ಗಂಜ್ ಬ್ಲಾಕ್‌ನ ಪ್ರಾಥಮಿಕ ಶಾಲೆಯಲ್ಲಿ ಕಲಿಸುತ್ತಿದ್ದರು. ಏಪ್ರಿಲ್ 15, 19, 26 ಮತ್ತು 29ರಂದು ನಡೆದ ನಾಲ್ಕು ಹಂತದ ಪಂಚಾಯತ್ ಚುನಾವಣೆಯಲ್ಲಿ ಹತ್ತಿರದ ಹಳ್ಳಿಯ ಶಾಲೆಯಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕೆಲಸ ಮಾಡಲು ಅವರನ್ನು ನಿಯೋಜಿಸಲಾಗಿತ್ತು.












