"ಮಗಳು ಗಂಟೆಗಟ್ಟಲೆ ತನ್ನ ತಾಯಿಯನ್ನು ಕರೆತರುವಂತೆ ಹಟ ಹಿಡಿದು ಅಳುತ್ತಾಳೆ" ಎಂದು ಏಳು ವರ್ಷದ ನವ್ಯಾಳ ತಂದೆಯಾದ ಶಿಶುಪಾಲ್ ನಿಷಾದ್ ಹೇಳುತ್ತಾರೆ. "ಆದರೆ ನಾನು ಅವಳನ್ನು ಎಲ್ಲಿಂದ ಕರೆತರಲಿ? ನಾವು ನಿದ್ರೆ ಮಾಡದೆ ಹಲವು ವಾರಗಳಾಗಿವೆ. ನನ್ನ ಮನಸ್ಸೇ ನನ್ನ ಕೈಯಲ್ಲಿಲ್ಲ" ಎಂದು ಉತ್ತರ ಪ್ರದೇಶದ ಸಿಂಗ್ತಾಯುಲಿ ಗ್ರಾಮದ 38 ವರ್ಷದ ಕಾರ್ಮಿಕರಾದ ನಿಷಾದ್ ಹೇಳುತ್ತಾರೆ.
ಶಿಶುಪಾಲ್ ಅವರ ಪತ್ನಿ ಮಂಜು - ನವ್ಯಾಳ ತಾಯಿ - ಜಲೌನ್ ಜಿಲ್ಲೆಯ ಕುಥಾಂಡ್ ಬ್ಲಾಕ್ ನ ಸಿಂಗ್ತಾಯುಲಿ ಪ್ರಾಥಮಿಕ ಶಾಲೆಯಲ್ಲಿ 'ಶಿಕ್ಷಾ ಮಿತ್ರ' ಅಥವಾ ಪ್ಯಾರಾ-ಟೀಚರ್ ಆಗಿದ್ದರು. ಉತ್ತರ ಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಕಡ್ಡಾಯ ಕರ್ತವ್ಯ ನಿರ್ವಹಿಸಿದ ನಂತರ ಕೋವಿಡ್-19ರಿಂದ ನಿಧನರಾದ 1,621 ಶಾಲಾ ಶಿಕ್ಷಕರ ಪಟ್ಟಿಯಲ್ಲಿ ಅವರದು 1,282ನೇ ಸ್ಥಾನ. ಆದರೆ ಅವರ ಮರಣದವರೆಗೂ ಐದು ಸದಸ್ಯರ ಕುಟುಂಬದ ಭಾಗವಾಗಿದ್ದ ಮಂಜು ನಿಷಾದ್, ಅವರ ಕುಟುಂಬದ ಪಾಲಿಗೆ ಕೇವಲ ಸಂಖ್ಯೆಯಷ್ಟೇ ಆಗಿರಲಿಲ್ಲ.
ಅವರು ಮೂರು ಮಕ್ಕಳ ಪಾಲಿಗೆ ತಾಯಿಯಾಗಿದ್ದರು ಮತ್ತು ಕುಟುಂಬದ ಏಕೈಕ ಸಂಪಾದನೆದಾರಳಾಗಿದ್ದರು, ತಿಂಗಳಿಗೆ ಕೇವಲ 10,000 ರೂ.ಗಳನ್ನು ಮನೆಗೆ ತರುತ್ತಿದ್ದರು – ಇದು ಒಪ್ಪಂದದ ಮೇಲೆ ಕೆಲಸ ಮಾಡುವ ಮತ್ತು ಅಧಿಕಾರಾವಧಿಯ ಭದ್ರತೆಯಿಲ್ಲದ ಶಿಕ್ಷಾ ಮಿತ್ರರಿಗೆ ಪಾವತಿಸಲಾಗುವ ಕರುಣಾಜನಕ ಮೊತ್ತ. 19 ವರ್ಷಗಳ ಕಾಲ ಕೆಲಸ ಮಾಡಿದ ಮಂಜು ಅವರಂತಹವರಿಗೂ ಸಹ ಅದೇ ಸಂಬಳ. ಶಿಕ್ಷಾ ಮಿತ್ರಗಳು ತರಗತಿಗಳಲ್ಲಿ ಪಾಠ ಮಾಡುತ್ತಾರೆ, ಆದರೆ ಬೋಧನಾ ಸಹಾಯಕ (ಅಥವಾ ಶಿಕ್ಷಕರ ಸಹಾಯಕ) ಎಂದು ಅವರನ್ನು ವರ್ಗೀಕರಿಸಲಾಗಿದೆ.
ಶಿಶುಪಾಲ್ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಕಾಮಗಾರಿಯಲ್ಲಿ ದಿನಕ್ಕೆ 300 ರೂ.ಗಳಿಗೆ ಕೂಲಿ ಕೆಲಸ ಮಾಡುತ್ತಿದ್ದರು, "ನಾನು ಕೆಲಸ ಮಾಡುತ್ತಿದ್ದ ಎಕ್ಸ್ ಪ್ರೆಸ್ ವೇಯ ಹಂತವು ಎರಡು ತಿಂಗಳ ಹಿಂದೆ ಪೂರ್ಣಗೊಂಡಿತು. ನಂತರ ಹತ್ತಿರದಲ್ಲಿ ಬೇರೆ ಯಾವುದೇ ನಿರ್ಮಾಣ ಕೆಲಸಗಳು ನಡೆಯುತ್ತಿಲ್ಲ. ಕಳೆದ ತಿಂಗಳುಗಳಲ್ಲಿ ನನ್ನ ಹೆಂಡತಿಯ ಸಂಪಾದನೆಯಿಂದಲೇ ಮನೆ ನಡೆಯುತ್ತಿತ್ತು."
ಏಪ್ರಿಲ್ 15, 19, 26 ಮತ್ತು 29ರಂದು ನಡೆದ ಉತ್ತರ ಪ್ರದೇಶದ ನಾಲ್ಕು ಹಂತದ ಬೃಹತ್ ಪಂಚಾಯತ್ ಚುನಾವಣೆಯಲ್ಲಿ ಸಾವಿರಾರು ಶಿಕ್ಷಕರಿಗೆ ಚುನಾವಣಾ ಕರ್ತವ್ಯವನ್ನು ನಿಯೋಜಿಸಲಾಯಿತು. ಶಿಕ್ಷಕರು ಮೊದಲು ಒಂದು ದಿನದ ತರಬೇತಿಗೆ ಹೋದರು, ನಂತರ ಎರಡು ದಿನಗಳ ಮತದಾನ ಕೆಲಸಕ್ಕಾಗಿ - ಒಂದು ದಿನ ಸಿದ್ಧತೆಗಾಗಿ ಮತ್ತು ಎರಡನೆಯದು ಮತದಾನದ ದಿನ. ನಂತರ, ಮೇ 2ರಂದು ಮತಗಳನ್ನು ಎಣಿಸಲು ಸಾವಿರಾರು ಜನರು ಮತ್ತೆ ವರದಿ ಮಾಡಿಕೊಳ್ಳಬೇಕಾಯಿತು. ಈ ಕಾರ್ಯಗಳನ್ನು ಪೂರೈಸುವುದು ಕಡ್ಡಾಯವಾಗಿತ್ತು ಮತ್ತು ಮತದಾನವನ್ನು ಮುಂದೂಡುವಂತೆ ಶಿಕ್ಷಕರ ಸಂಘಗಳು ಸಲ್ಲಿಸಿದ್ದ ಮನವಿಗಳನ್ನು ನಿರ್ಲಕ್ಷಿಸಲಾಗಿತ್ತು.
ಯುಪಿ ಶಿಕ್ಷಕರ ಒಕ್ಕೂಟವು ಒಟ್ಟು 1,621 ಶಿಕ್ಷಕರನ್ನು ಪಟ್ಟಿ ಮಾಡಿದೆ. ಈ ಪೈಕಿ 193 ಶಿಕ್ಷಾ ಮಿತ್ರರು. ಮಂಜುವಿನಂತಹ ಇತರ 72 ಮಹಿಳೆಯರು ಈ ಪಟ್ಟಿಯಲ್ಲಿದ್ದಾರೆ. ಆದರೆ ಮೇ 18ರಂದು ಉತ್ತರ ಪ್ರದೇಶದ ಪ್ರಾಥಮಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕೆಲಸದಲ್ಲಿ ಮೃತಪಟ್ಟ ಮೂವರು ಶಿಕ್ಷಕರ ಕುಟುಂಬಗಳು ಚುನಾವಣಾ ಆಯೋಗದ ಮಾನದಂಡಗಳ ಪ್ರಕಾರ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಇದರ ಅರ್ಥವೇನೆಂದರೆ, ಅವರು ತಮ್ಮ ಕೆಲಸದ ಸ್ಥಳಕ್ಕೆ ಅಥವಾ ಮನೆಗೆ ಹಿಂದಿರುಗುವಾಗ ಸಾಯುವ ಶಿಕ್ಷಕರು ಮಾತ್ರ ಪರಿಹಾರಕ್ಕೆ ಅರ್ಹರು. ಪತ್ರಿಕಾ ಹೇಳಿಕೆಯು ಹೇಳುವಂತೆ: "ಈ ಅವಧಿಯಲ್ಲಿ ಒಬ್ಬ ವ್ಯಕ್ತಿಯು ಯಾವುದೇ ಕಾರಣದಿಂದ ಸತ್ತರೆ ಪರಿಹಾರದ ಹಣ ನೀಡಲಾಗುತ್ತದೆ, ಅದನ್ನು ರಾಜ್ಯ ಚುನಾವಣಾ ಆಯೋಗವು ಮಂಜೂರು ಮಾಡುತ್ತದೆ."








