ಸಧ್ಯದ ಪರಿಸ್ಥಿತಿಯಲ್ಲಿ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಮೀನಾಳ ಮದುವೆ ನಡೆದುಹೋಗಿಬಿಡಬಹುದು. ಮೀನಾ ಅದಕ್ಕೆ ಕಾರಣವನ್ನು ವಿವರಿಸುತ್ತಾ “ಕೆಲವು ತಿಂಗಳುಗಳಿಂದ ನಾನು ಎಲ್ಲರಿಗೂ ಸಮಸ್ಯೆಯಾಗಿ ಪರಿಣಮಿಸಿದ್ದೇನೆ” ಎನ್ನುತ್ತಾಳೆ. ಮೀನಾಳ ತಂಗಿಯೂ ಅದಾದ ಕೆಲವೇ ದಿನಗಳಲ್ಲಿ “ಸಮಸ್ಯೆಯಾದಳು,” ಅವಳಿಗೂ ಸದ್ಯದಲ್ಲೇ ಮದುವೆ ಮಾಡಿಸಲಿದ್ದಾರೆ. ಆ ಸಮಸ್ಯೆಯೆಂದರೆ ಇಂತಹ ಹೆಣ್ಣುಮಕ್ಕಳು ವಯೋಸಹಜವಾಗಿ ಮುಟ್ಟಾಗಲು ಪ್ರಾರಂಭವಾಗುವುದು.
14 ವರ್ಷದ ಮೀನಾ ಮತ್ತು 13 ವರ್ಷದ ಸೋನು, ಹಗ್ಗದ ಮಂಚದ (ಚಾರ್ಪಾಯ್) ಮೇಲೆ ಕುಳಿತು ಮಾತನಾಡುತ್ತಿದ್ದರು. ಅವರು ಮಾತನಾಡುವಾಗ ಒಬ್ಬರ ಮುಖವನ್ನೊಬ್ಬರು ನೋಡುತ್ತಿದ್ದರು. ಮೀನಾ ಹೆಚ್ಚಾಗಿ ನೆಲದ ಮೇಲಿದ್ದ ಮರಳಿನತ್ತಲೇ ನೋಡುತ್ತಿದ್ದಳು. ಅವಳು ತನ್ನಲ್ಲಾಗಿರುವ ಮುಟ್ಟಾಗವಂತಹ ದೈಹಿಕ ಬದಲಾವಣೆಗಳ ಕುರಿತು ಇನ್ನೊಬ್ಬರ ಮಾತನಾಡಲು ಒಂದಷ್ಟು ನಾಚುತ್ತಿದ್ದಳು. ಅವರ ಹಿಂದಿದ್ದ ಕೋಣೆಯಲ್ಲಿ ಸಣ್ಣ ಕುರಿಮರಿಯೊಂದನ್ನು ಗೂಟಕ್ಕೆ ಕಟ್ಟಲಾಗಿತ್ತು. ಉತ್ತರ ಪ್ರದೇಶದ ಕೊರಾನ್ ಬ್ಲಾಕಿನಲ್ಲಿರುವ ಬೈತಕ್ವಾ ಎನ್ನುವ ಈ ಹಳ್ಳಿಯ ಸುತ್ತಮುತ್ತ ಕಾಡುಪ್ರಾಣಿಗಳ ಭಯವಿರುವುದರಿಂದ ಅದನ್ನು ಹೊರಗೆ ಬಿಟ್ಟಿಲ್ಲ ಎಂದು ಅಲ್ಲಿದ್ದವರಲ್ಲಿ ಒಬ್ಬರು ಹೇಳಿದರು.
ಈ ಹೆಣ್ಣುಮಕ್ಕಳು ತಿಂಗಳ ಮುಟ್ಟೆಂದರೆ ಅದು ನಾಚಿಕೆಪಡುವಂತಹ ವಿಚಾರವೆಂದೂ ಅದರ ಕುರಿತು ಭಯವನ್ನೂ ಇಟ್ಟುಕೊಳ್ಳಬೇಕೆಂದು ಅವರು ತಮ್ಮ ಪೋಷಕರಿಂದ ಕಲಿತಿದ್ದಾರೆ. ಪ್ರಯಾಗ್ ರಾಜ್ (ಹಿಂದಿನ ಅಹಮದಾಬಾದ್) ಬಳಿಯಿರುವ ಈ ಹಳ್ಳಿಯಲ್ಲಿ ಸರಿಯಾದ ಭದ್ರತೆಯಿಲ್ಲದ ಕಾರಣ ಪೋಷಕರು ತಮ್ಮ ಹೆಣ್ಣು ಮಕ್ಕಳು ಎಲ್ಲಿ ಮದುವೆಗೂ ಮೊದಲೇ ಗರ್ಭಿಣಿಯರಾಗಿಬಿಡುತ್ತಾರೋ ಎನ್ನುವ ಭಯಕ್ಕೆ ಸಣ್ಣ ಪ್ರಾಯದಲ್ಲೇ ಮದುವೆ ಮಾಡಿಸಿಬಿಡುತ್ತಾರೆ.
“ಬಸಿರಾಗಬಲ್ಲ ವಯಸ್ಸಾದ ನಂತರ ಹೆಣ್ಣುಮಕ್ಕಳನ್ನು ನಾವು ಹೇಗೆ ಮನೆಯಲ್ಲಿ ಸುರಕ್ಷಿತವಾಗಿರಿಸಿಕೊಳ್ಳುವುದು?” ಎಂದು ಕೇಳುತ್ತಾರೆ ಮೀನಾಳ 27 ವರ್ಷದ ತಾಯಿ ರಾಣಿ. ರಾಣಿಯವರಿಗೆ ಅವರು 15 ವರ್ಷದವರಿರುವಾಗಲೇ ಮದುವೆ ಮಾಡಿಸಲಾಗಿತ್ತು. ಸೋನುವಿನ ತಾಯಿ ಚಂಪಾ ಕೂಡಾ ಸುಮಾರು 27 ವರ್ಷದ ಆಸುಪಾಸಿನಲ್ಲಿದ್ದಾರೆ. ಅವರಿಗೆ ತಾನು 13 ವರ್ಷದವಳಿರುವಾಗಲೇ ಮದುವೆಯಾಗಿದ್ದು ಕೂಡಾ ನೆನಪಿದೆ. ಅಲ್ಲಿ ನೆರೆದಿದ್ದ ಆರು ಜನ ಹೆಂಗಸರೂ 13 ಅಥವಾ 14ನೇ ವಯಸ್ಸಿಗೆ ಮದುವೆಯಾಗುವುದು ವಾಡಿಕೆ. ಅದರಲ್ಲಿ ತಪ್ಪೇನಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. “ನಮ್ಮ ಊರು ಈಗಲೂ ಬೇರೊಂದು ಯುಗದಲ್ಲಿ ಬದುಕುತ್ತಿದೆ. ನಮ್ಮ ಕೈಯಲ್ಲಿ ಏನೂ ಇಲ್ಲ. ನಾವು ಏನೂ ಮಾಡಲು ಸಾಧ್ಯವಿಲ್ಲ,” ಎಂದು ರಾಣಿ ಹೇಳುತ್ತಾರೆ.
ದೇಶದ ಮಧ್ಯ ಮತ್ತು ಉತ್ತರ ಭಾಗದ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಬಾಲ್ಯವಿವಾಹಗಳು ಹೆಚ್ಚಿನ ಪ್ರಮಾಣದಲ್ಲಿವೆ. 2015ರಲ್ಲಿ ಐಸಿಆರ್‌ಡಬ್ಲ್ಯೂ (ಇಂಟರ್ನ್ಯಾಷನಲ್ ಸೆಂಟರ್ ಫಾರ್ ರಿಸರ್ಚ್ ಆನ್ ವುಮೆನ್) ಮತ್ತು ಯುನಿಸೆಫ್ ನಡೆಸಿದ ಜಂಟಿ ಜಿಲ್ಲಾ ಮಟ್ಟದ ಅಧ್ಯಯನದ ಪ್ರಕಾರ, "ರಾಜ್ಯದ ಮೂರನೇ ಎರಡರಷ್ಟು ಜಿಲ್ಲೆಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮಹಿಳೆಯರಿಗೆ ಕಾನೂನುಬದ್ಧ ವಯಸ್ಸಿಗಿಂತಲೂ ಮೊದಲೇ ಮದುವೆ ಮಾಡಿಸಲಾಗಿದೆ."
ಬಾಲ್ಯವಿವಾಹ ತಡೆ ಕಾಯಿದೆ, 2006ರ ಪ್ರಕಾರ 18 ವರ್ಷಕ್ಕಿಂತ ಕೆಳಗಿನ ಹೆಣ್ಣು ಮಕ್ಕಳಿಗೆ ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳಿಗೆ ಮದುವೆ ಮಾಡಿಸುವುದನ್ನು ನಿಷೇಧಿಸಲಾಗಿದೆ. ಹಾಗೆ ಮದುವೆ ಮಾಡಿಕೊಟ್ಟರೆ ಅಥವಾ ಅದಕ್ಕೆ ಸಹಾಯ ಮಾಡಿದರೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷದವರೆಗೆ ದಂಡ ವಿಧಿಸಬಹುದು.












