ಉತ್ತರ-ಮಧ್ಯ ಬಿಹಾರದ ಚೌಮುಖ್ ಎಂಬ ತಮ್ಮ ಗ್ರಾಮದ ಪಾಳುಬಿದ್ದ ಮನೆಯ ವರಾಂಡದಲ್ಲಿ ಕುಳಿತಿದ್ದ ರಾಜೀವ್ ಕುಮಾರ್ ಓಜಾಗೆ ಉತ್ತಮ ಫಸಲನ್ನು ಪಡೆಯುವುದು ಒತ್ತಡದ ಕೆಲಸವೋ ಅಥವಾ ಹಾಗೆ ಕಷ್ಟಪಟ್ಟು ಗಳಿಸಿದ ಇಳುವರಿಯನ್ನು ಒಳ್ಳೆಯ ಬೆಲೆಗೆ ಮಾರುವುದು ಹೆಚ್ಚು ಒತ್ತಡದ ಕೆಲಸವೋ ಎನ್ನುವ ಗೊಂದಲ ಅವರನ್ನು ಕಾಡುತ್ತಿತ್ತು. “ನಿಮಗಿದು ತಮಾಷೆಯೆನ್ನಿಸಬಹುದು, ಆದರೆ, ನನ್ನ ಸಮಸ್ಯೆಗಳು ಸಾಮಾನ್ಯವಾಗಿ ಕೊಯ್ಲಿನ ಋತುವಿನ ಕೊನೆಯಲ್ಲಿ ಉತ್ತಮ ಫಸಲನ್ನು ಪಡೆದಾಗಲೇ ಆರಂಭವಾಗುತ್ತವೆ,” ಎಂದು ಹೇಳುತ್ತಾರೆ.
“ಮುಜಾಫರ್‌ಪುರ ಜಿಲ್ಲೆಯ ಬೊಚಾಹಾ ತಾಲ್ಲೂಕಿನ ಗ್ರಾಮವೊಂದರಲ್ಲಿ ಐದು ಎಕರೆ ಕೃಷಿ ಭೂಮಿಯನ್ನು ಹೊಂದಿರುವ 47 ವರ್ಷದ ಓಜಾ, ಖಾರಿಫ್ ಋತುವಿನಲ್ಲಿ (ಜೂನ್-ನವೆಂಬರ್) ಭತ್ತವನ್ನು ಬೆಳೆಯುತ್ತಾರೆ, ಮತ್ತು ರಾಬಿಯ ಸಮಯದಲ್ಲಿ (ಡಿಸೆಂಬರ್-ಮಾರ್ಚ್) ಗೋದಿ ಮತ್ತು ಮೆಕ್ಕೆ ಜೋಳವನ್ನು ಬೆಳೆಯುತ್ತಾರೆ. ಉತ್ತಮ ಫಸಲನ್ನು ಪಡೆಯಲು ಹವಾಮಾನ, ನೀರು, ಶ್ರಮ ಮತ್ತು ಇನ್ನೂ ಅನೇಕ ಸಂಗತಿಗಳು ನಮ್ಮ ಪರವಾಗಿರಬೇಕು" ಎಂದು ಅವರು ನನಗೆ ನವೆಂಬರ್ 2020ರಲ್ಲಿ ಹೇಳಿದ್ದರು. “ಆದರೆ ಅದಾದ ನಂತರವೂ ಮಾರುಕಟ್ಟೆಯಿಲ್ಲ. ನನ್ನ ದಾಸ್ತಾನನ್ನು ಹಳ್ಳಿಯ ಕಮಿಷನ್ ಏಜೆಂಟರಿಗೆ ಮಾರಾಟ ಮಾಡಬೇಕು, ಅವರು ಅದಕ್ಕೆ ನಿಗದಿಪಡಿಸಿದ ಬೆಲೆಗೆ ನಾನು ಮಾರಾಟ ಮಾಡಬೇಕು.” ಅದನ್ನು ಸಗಟು ವ್ಯಾಪಾರಿಗಳಿಗೆ ದಳ್ಳಾಲಿಗಳು ಕಮಿಷನ್ ಗೆ ಮಾರುತ್ತಾರೆ.
2019ರಲ್ಲಿ, ಓಜಾ ತನ್ನ ಕಚ್ಚಾ ಭತ್ತದ ದಾಸ್ತಾನು ಕ್ವಿಂಟಲ್‌ಗೆ 1,100 ರೂ.ಗಳಿಗೆ ಮಾರಾಟ ಮಾಡಿದ್ದರು– ಆಗ ಇದು 1815 ರೂ.ಗಳ ಕನಿಷ್ಠ ಬೆಂಬಲ ಬೆಲೆಗಿಂತ ಶೇ 39ರಷ್ಟು ಕಡಿಮೆಯಾಗಿತ್ತು. “ನನಗೆ ಬೇರೆ ಯಾವುದೇ ಆಯ್ಕೆಗಳು ಇದ್ದಿರಲಿಲ್ಲ. ಏಜೆಂಟರು ಯಾವಾಗಲೂ ಕಡಿಮೆ ದರದಲ್ಲಿ ಖರೀದಿಸುತ್ತಾರೆ, ಏಕೆಂದರೆ ಅವರಿಗೆ ನಾವು ಬೇರೆಲ್ಲಿಯೂ ಮಾರಾಟ ಮಾಡಲು ಸಾಧ್ಯವಿಲ್ಲ ಎನ್ನುವುದು ತಿಳಿದಿದೆ. ಇದರಿಂದಾಗಿ ನಮಗೆ ಯಾವುದೇ ಲಾಭ ಸಿಗುವುದಿಲ್ಲ” ಎನ್ನುತ್ತಾರೆ.
ಬಿಹಾರದ ರೈತರೊಬ್ಬರು ಎಕರೆ ಭತ್ತದ ಮೇಲೆ 20,000 ರೂ ಬಂಡವಾಳವನ್ನು ಹೂಡುತ್ತಾರೆ ಎಂದು ಓಜಾ ಹೇಳುತ್ತಾರೆ. ”ನಾನು ಎಕರೆಗೆ 20-25 ಕ್ವಿಂಟಾಲ್ ಫಸಲನ್ನು ಪಡೆಯುತ್ತೇನೆ. ಕ್ವಿಂಟಲ್‌ಗೆ 1,100 ರೂಪಾಯಿಗಳಾದರೆ ಆರು ತಿಂಗಳ ಕಠಿಣ ಪರಿಶ್ರಮದ ನಂತರ ಎಕರೆಗೆ 2,000-7,000 ರೂಪಾಯಿಗಳ ಲಾಭವನ್ನು ಗಳಿಸಬಹುದು. ಇದನ್ನು ನೀವು ನ್ಯಾಯಯುತ ಒಪ್ಪಂದವೆಂದು ಭಾವಿಸುತ್ತೀರಾ?” ಎಂದು ಅವರು ಪ್ರಶ್ನಿಸುತ್ತಾರೆ.
ಬಿಹಾರದಲ್ಲಿ ಓಜಾರಂತೆಯೇ, ಅನೇಕ ರೈತರು 2006ರಲ್ಲಿ ವಿಶೇಷವಾಗಿ ಬಿಹಾರ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ 1960 ಅನ್ನು ರದ್ದುಗೊಳಿಸಿದ ನಂತರ ತಮ್ಮ ಫಸಲುಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಹೆಣಗಾಡುತ್ತಿದ್ದಾರೆ. ಇದರ ಜೊತೆಗೆ ಬಿಹಾರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಂಡಿ ವ್ಯವಸ್ಥೆಯನ್ನು ರದ್ದುಪಡಿಸಲಾಯಿತು.








