"ಈ ಹೋರಾಟವು ಕೇವಲ ರೈತರ ಹೋರಾಟ ಮಾತ್ರವಲ್ಲ, ಇದು ಕೃಷಿ ಕಾರ್ಮಿಕರ ಪರವಾದ ಹೋರಾಟವೂ ಹೌದು" ಎಂದು ರೇಷಮ್ ಮತ್ತು ಬಿಯಂತ್ ಕೌರ್ ಹೇಳುತ್ತಾರೆ. "ಈ ಕೃಷಿ ಕಾನೂನುಗಳನ್ನು ಜಾರಿಗೊಳಿಸಿದರೆ, ಅದು ರೈತರ ಮೇಲೆ ಮಾತ್ರವಲ್ಲದೆ ಜೀವನೋಪಾಯಕ್ಕಾಗಿ ರೈತರನ್ನು ಅವಲಂಬಿಸಿರುವ ಕೃಷಿ ಕಾರ್ಮಿಕರ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ."
ಹೀಗಾಗಿ ಜನವರಿ 7ರ ಮಧ್ಯಾಹ್ನ, ಈ ಇಬ್ಬರು ಸಹೋದರಿಯರು ರಾಷ್ಟ್ರ ರಾಜಧಾನಿಯ ಹೊರವಲಯದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಸೇರಲು ಪಂಜಾಬ್‌ನ ಮುಕ್ತಸರ್ ಜಿಲ್ಲೆಯಿಂದ ಪ್ರಯಾಣಿಸಿದರು.
ಪಂಜಾಬ್ ಕೃಷಿ ಕಾರ್ಮಿಕರ ಒಕ್ಕೂಟವು ಕನಿಷ್ಠ 20 ಬಸ್‌ಗಳಲ್ಲಿ ಕನಿಷ್ಠ 1,500 ಜನರಿಗೆ ಅವಕಾಶ ದೆಹಲಿಗೆ ಬರುವ ಕಲ್ಪಿಸಿತ್ತು. ಈ ಬಸ್ಸುಗಳು ಪಶ್ಚಿಮ ದೆಹಲಿಯ ಟಿಕ್ರಿ ಗಡಿಗೆ ಬಂದವು. ಮೂರು ಕೃಷಿ ಕಾನೂನುಗಳ ವಿರುದ್ಧದ ಹೋರಾಟ ಇಲ್ಲಿ ಭರದಿಂದ ಸಾಗಿದೆ. ಬಟಿಂಡಾ, ಫರೀದ್‌ಕೋಟ್, ಜಲಂಧರ್, ಮೊಗಾ, ಮುಕ್ತಸರ್, ಪಟಿಯಾಲ ಮತ್ತು ಸಂಗ್ರೂರ್‌ನಿಂದ ಜನರು ಇಲ್ಲಿಗೆ ಬಂದರು. ರೇಷಮ್ ಮತ್ತು ಬಿಯಂತ್ ಮುಕ್ತಸರ್ ಜಿಲ್ಲೆಯ ತಮ್ಮ ಚನ್ನು ಎಂಬ ಹಳ್ಳಿಯ ಬಳಿ ಬಸ್ ಹತ್ತಿದರು.
ನವೆಂಬರ್ 26ರಿಂದ, ಅನೇಕ ರೈತರು ಟಿಕ್ರಿ ಮತ್ತು ದೆಹಲಿಯ ಸುತ್ತಮುತ್ತಲಿನ ಇತರ ಸ್ಥಳಗಳಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ, ಇನ್ನೂ ಹಲವರು ಕೆಲವು ದಿನಗಳ ಕಾಲ ಇಲ್ಲಿದ್ದು ಮತ್ತೆ ತಮ್ಮ ಊರುಗಳಿಗೆ ಹಿಂದಿರುಗಿ ಇಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಜನರಿಗೆ ತಿಳಿಸುತ್ತಾರೆ. "ಈ ಹೊಸ ಕೃಷಿ ಕಾನೂನುಗಳು ಕೃಷಿ ಕಾರ್ಮಿಕರ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂದು ನಮ್ಮ ಹಳ್ಳಿಯಲ್ಲಿರುವ ಅನೇಕರಿಗೆ ತಿಳಿದಿಲ್ಲ" ಎಂದು 24 ವರ್ಷದ ರೇಷಮ್ ಹೇಳುತ್ತಾರೆ. "ಮತ್ತು ವಾಸ್ತವವಾಗಿ, ರೈತರು ಮತ್ತು ಕೃಷಿ ಕಾರ್ಮಿಕರ ಅನುಕೂಲಕ್ಕಾಗಿ ಈ ಕಾನೂನುಗಳನ್ನು ಮಾಡಲಾಗಿದೆಯೆಂದು ಊರಿನಲ್ಲಿ ಪ್ರಸಾರವಾಗುವ ಸುದ್ದಿ ವಾಹಿನಿಗಳು ಹೇಳುತ್ತಿವೆ. ಈ ಕಾನೂನುಗಳನ್ನು ಜಾರಿಗೊಳಿಸಿದ ನಂತರ ಕಾರ್ಮಿಕರಿಗೆ ಭೂಮಿಯನ್ನು ನೀಡಲಾಗುವುದು ಮತ್ತು ಉತ್ತಮ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳುತ್ತಾರೆ.”
ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತಂದಿದೆ. ಆ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.





