ಧಡ್ಗಾಂವ್ ಪ್ರದೇಶದ ಅಕ್ರಾನಿ ತಾಲ್ಲೂಕಿನಲ್ಲಿ ಒಂದು ಉರಿ ಬಿಸಿಲಿನ ಮದ್ಯಾಹ್ನ, ಶೆವಂತಾ ತಡ್ವಿ ತನ್ನ ಸಣ್ಣ ಮೇಕೆಗಳ ಹಿಂಡಿನ ಹಿಂಡಿನ ಹಿಂದೆ ಓಡುತ್ತಿದ್ದಾರೆ, ತನ್ನ ತಲೆಯನ್ನುಸೆರಗಿನಿಂದ ಮುಚ್ಚಿಕೊಂಡ ಅವರು ಮೇಕೆಯೊಂದು ಪೊದೆಯೊಳಗೆ ಹೋದಾಗ ಅಥವಾ ಪಕ್ಕದ ಜಮೀನಿಗೆ ಹೋದರೆ ತನ್ನ ಕೋಲಿನಿಂದ ನೆಲಕ್ಕೆ ಬಡಿದು ಅವುಗಳನ್ನು ವಾಪಸ್ ಕರೆಯುತ್ತಾರೆ. "ನಾನು ಅವುಗಳತ್ತ ನಿಗಾ ಇಡ್ಬೇಕು. ಸಣ್ಣ ಮರಿಗಳದು ತುಂಟಾಟ ಹೆಚ್ಚು. ಅವು ಎಲ್ಲೆಂದರಲ್ಲಿ ಹೋಗಿಬಿಡುತ್ತವೆ." ಎಂದು ನಗುತ್ತಾರೆ. "ಈಗ ಅವುಗಳೇ ನನಗೆ ಮಕ್ಕಳಿದ್ದಂತೆ"
ಶೆವಂತಾ ನಂದೂರ್‌ಬಾರ್ ಜಿಲ್ಲೆಯ ಹರಂಕುರಿ ಗ್ರಾಮದ ಸಣ್ಣ ಹಳ್ಳಿ ಮಹಾರಾಜಪದದಲ್ಲಿರುವ ತನ್ನ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕಾಡಿನತ್ತ ನಡೆದು ಬಂದಿದ್ದಾರೆ. ಇಲ್ಲಿ ಅವರು ತನ್ನ ಆಡುಗಳು, ಚಿಲಿಪಿಲಿಗುಟ್ಟುವ ಹಕ್ಕಿಗಳು ಮತ್ತು ಎಲೆಗಳ ಸದ್ದು ಹೊರಡಿಸುವ ಮರಗಳ ನಡುವೆ ಒಂಟಿಯಾಗಿ ಮತ್ತು ಮುಕ್ತವಾಗಿ ಇರುತ್ತಾರೆ. ಇಲ್ಲಿ ಅವಳು ತನ್ನ ಆಡುಗಳು, ಚಿಲಿಪಿಲಿ ಹಕ್ಕಿಗಳು ಮತ್ತು ತುಕ್ಕು ಹಿಡಿಯುವ ಮರಗಳ ನಡುವೆ ಒಂಟಿಯಾಗಿ ಮತ್ತು ಮುಕ್ತಳಾಗಿರುತ್ತಾಳೆ. ವಾನ್ಜೋಟಿ (ಬಂಜರು ಮಹಿಳೆ), ದಾಲ್ಭಾದ್ರಿ (ಶಾಪಗ್ರಸ್ತ ಮಹಿಳೆ) ಮತ್ತು ದುಷ್ಟ್ (ದುಷ್ಟ) ಮೊದಲಾದ ಮೂದಲಿಕೆಯ ಮಾತುಗಳಿಂದಲೂ ಮುಕ್ತವಾಗಿರುತ್ತಾರೆ. ಅವರು ಇಂತಹ ಮೂದಲಿಕೆ ಮತ್ತು ದೌರ್ಜನ್ಯವನ್ನು ಮದುವೆಯಾದ ಹನ್ನೆರಡು ವರ್ಷಗಳಿಂದ ಅನುಭವಿಸುತ್ತಾ ಬಂದಿದ್ದಾರೆ. ಈ ಸ್ಥಳ ಇದೆಲ್ಲವನ್ನೂ ಮರೆಸುತ್ತದೆ.
"ಮಕ್ಕಳಾಗದ ಗಂಡಸರಿಗೆ ಅಂತಹ ಅವಹೇಳನಕಾರಿ ಪದಗಳು ಏಕಿಲ್ಲ?" ಎಂದು ಕೇಳುತ್ತಾರೆ ಶೆವಂತಾ.
ಪ್ರಸ್ತುತ 25ರ ಹರೆಯದ ಶೆವಂತಾ (ಹೆಸರು ಬದಲಿಸಲಾಗಿದೆ)ತನ್ನ 14ನೇ ವಯಸ್ಸಿನಲ್ಲಿ ಮದುವೆಯಾದರು. ಅವರ ಪತಿ 32 ವರ್ಷದ ರವಿ ಕೃಷಿ ಕಾರ್ಮಿಕನಾಗಿದ್ದು ದಿನಕ್ಕೆ 150 ರೂಪಾಯಿ ದುಡಿಯುತ್ತಾರೆ. ರವಿ ಮದ್ಯವ್ಯಸನಿಯೂ ಹೌದು. ಅವರು ಆದಿವಾಸಿಗಳೇ ಹೆಚ್ಚಾಗಿರುವ ಮಹಾರಾಷ್ಟ್ರದ ಈ ಜಿಲ್ಲೆಯ ಭಿಲ್ ಸಮುದಾಯಕ್ಕೆ ಸೇರಿದವರು. ಹಿಂದಿನ ರಾತ್ರಿ ಕೂಡ ರವಿ (ಹೆಸರು ಬದಲಿಸಲಾಗಿದೆ) ಹೊಡೆದಿದ್ದಾಗಿ ಶೆವಂತಾ ಹೇಳುತ್ತಾರೆ. "ಇದರಲ್ಲಿ ಹೊಸತೇನೂ ಇಲ್ಲ" ಎಂದು ನಿಡುಸುಯ್ಯುತ್ತಾರೆ. "ನಾನು ಅವರಿಗೆ ಮಗುವನ್ನು ಹೆತ್ತು ಕೊಡಲು ಸಾಧ್ಯವಿಲ್ಲ. ನನ್ನ ಗರ್ಭಕೋಶದಲ್ಲಿ ತೊಂದರೆಯಿರುವುದರಿಂದ ನಾನು ಮತ್ತೆ ಗರ್ಭ ಧರಿಸಲು ಸಾಧ್ಯವಿಲ್ಲ ಎಂದು ಡಾಕ್ಟರ್ ಹೇಳಿದ್ದಾರೆ"
2100ರಲ್ಲಿ ಧಡ್ಗಾಂವ್ ಗ್ರಾಮೀಣ ಆಸ್ಪತ್ರೆಯಲ್ಲಿ ಗರ್ಭಪಾತವಾದಾಗ ಅಲ್ಲಿ ಆಕೆಗೆ ಪಾಲಿಸಿಸ್ಟಿಕ್ ಒವೆರಿಯನ್ ಸಿಂಡ್ರೋಮ್ (ಪಿಸಿಓಎಸ್) ಇರುವುದು ಕಂಡುಬಂದಿತ್ತು. ಅದನ್ನೇ ಶೆವಂತಾ ತನ್ನ ಗರ್ಭಕೋಶದಲ್ಲಿ ದೋಷವಿದೆ ಎಂದು ಹೇಳುವುದು. ಈ ವಿಷಯ ತಿಳಿದಾಗ ಆಕೆಗೆ ಕೇವಲ 15 ವರ್ಷ ಪ್ರಾಯವಾಗಿತ್ತು ಮತ್ತು ಮೂರು ತಿಂಗಳ ಗರ್ಭಿಣಿಯಾಗಿದ್ದರು.







