24ರ ವಯಸ್ಸಿನ ನೇಹ ತೋಮರ್ (ಆಕೆಯ ಹೆಸರನ್ನು ಬದಲಿಸಲಾಗಿದೆ) ಮುಂಜಾನೆ, ತನ್ನ ಪತಿಯು ಕೆಲಸಕ್ಕೆ ತೆರಳುವ ಮೊದಲು ಆತನ ಪಾದಗಳಿಗೆ ನಮಸ್ಕರಿಸಿದಳು. ಇದು ದಿನನಿತ್ಯದ ವಿದ್ಯಮಾನವಲ್ಲ. ಪ್ರಮುಖ ಕೆಲಸಗಳ ಸಲುವಾಗಿ ಆಕೆ ಮನೆಯಿಂದ ಹೊರಗೆ ತೆರಳುವ ದಿನಗಳಿಗೆ ಮಾತ್ರ ಇದು ಸೀಮಿತ. ಭೆತುಅ ಕ್ಷೇತ್ರದ ಸಮುದಾಯ ಆರೋಗ್ಯ ಕೇಂದ್ರದ ಪ್ರಾಂಗಣದಲ್ಲಿ ಕುಳಿತ ನೇಹ, ‘ನಾನು ಹೆತ್ತವರ ಮನೆಗೆ ತೆರಳುವಾಗಲೂ’ ಇದನ್ನು ಅನುಸರಿಸಲಾಗುತ್ತದೆ ಎಂಬುದಾಗಿ ತಿಳಿಸಿದಳು.

ನೇಹ, ತನ್ನ ಅತ್ತೆಯೊಂದಿಗೆ ಅಮೇಥಿ ತೆಹ್ಸಿಲ್ಲಿನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದಳು. ಆಕೆಯ ಅತ್ತೆಯು ಇನ್ನೂ ಹೆಸರಿಡದ 3 ತಿಂಗಳ ಗಂಡು ಮಗುವನ್ನು ಮಡಿಲಲ್ಲಿರಿಸಿಕೊಂಡಿದ್ದರು. ಇದು ಆಕೆಯ ನಾಲ್ಕನೇ ಮಗು. ಉತ್ತರ ಪ್ರದೇಶದ ಸುಲ್ತಾನ್ಪುರ್ ಜಿಲ್ಲೆಯ ಭೆತುಅ ಹಳ್ಳಿಯಿಂದ ಅವರು ಇಲ್ಲಿಗೆ ಬಂದಿದ್ದರು. ನೇಹ ಮತ್ತು ಕೃಷಿ ಕಾರ್ಮಿಕನಾದ ಆಕೆಯ ಪತಿ ಆಕಾಶ್ (ಹೆಸರನ್ನು ಬದಲಿಸಿದೆ) ಕೊನೆಗೂ ತಮಗಿನ್ನು ಮಕ್ಕಳು ಬೇಡವೆಂದು ನಿರ್ಧರಿಸಿದ್ದರು. “ಇತ್ನಿ ತೊ ಹಮಾರಿ ಮರ್ಜಿ ಹೋನಿ ಚಾಹಿಯೆ”, ಎಂದಳು ನೇಹ. ಒಂದಾದ ಮೇಲೊಂದರಂತೆ ನಾಲ್ಕು ಮಕ್ಕಳು ಜನಿಸಿದ ನಂತರವಾದರೂ ದಂಪತಿಗಳು ಈ ಆಯ್ಕೆಗೆ ಅರ್ಹರು ಎಂಬುದನ್ನು ಆಕೆ ಒತ್ತಿ ಹೇಳಿದಳು. ಅಂದಹಾಗೆ ಅವರಿಗೆ ಈ ಮಗುವಿಗೂ ಮೊದಲು, 5 ಮತ್ತು 4ರ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳು ಮತ್ತು ಒಂದೂವರೆ ವರ್ಷದ ಗಂಡು ಮಗುವಿತ್ತು.

The camp approach to sterilisation gave way to 'fixed-day services' at CHCs
PHOTO • Anubha Bhonsle

ಸಂತಾನಶಕ್ತಿಹರಣ ವಿಧಾನದೆಡೆಗಿರುವ ಹಾದಿಯು ಸಮುದಾಯ ಆರೋಗ್ಯ ಕೇಂದ್ರಗಳ ‘ನಿಶ್ಚಿತ ದಿನದ ಸೇವೆಗಳಿಗೆ’ ದಾರಿಮಾಡಿದೆ

ಆರು ವರ್ಷಗಳ ತನ್ನ ಬಹುತೇಕ ವೈವಾಹಿಕ ಬದುಕಿನಲ್ಲಿ ಗರ್ಭನಿಯಂತ್ರಣ ಅಥವ ಮಕ್ಕಳ ಜನನದ ನಡುವೆ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ ಯಾವುದೇ ಸಂದರ್ಭಗಳಿಲ್ಲ. “ನನಗೆ ವಿವಾಹವಾದಾಗ ಯಾರೂ ಏನೂ ತಿಳಿಸಲಿಲ್ಲ. ನನ್ನ ಪತಿ ಹಾಗೂ ಆತನ ಮನೆಯವರ ಮಾತುಗಳನ್ನು ನಾನು ಪಾಲಿಸಬೇಕಿತ್ತು”, ಎಂಬುದಾಗಿ ನೇಹ ತಿಳಿಸಿದಳು. ಋತುಸ್ರಾವವು ಆರಂಭಗೊಂಡ ಎರಡು ವಾರಗಳ ನಂತರ ಗರ್ಭಧರಿಸುವ ಸಾಧ್ಯತೆಯಿರುವ ದಿನಗಳಲ್ಲಿ (ಅಂಡೋತ್ಪತ್ತಿಯ ಅವಧಿಯಲ್ಲಿ) ಸಂಭೋಗದಿಂದ ದೂರವುಳಿದಲ್ಲಿ, ಮತ್ತೊಮ್ಮೆ ಗರ್ಭಧರಿಸುವ ಸಾಧ್ಯತೆಯನ್ನು ತಗ್ಗಿಸಬಹುದೆಂದು ಆಕೆಗೆ ತಿಳಿದುಬಂದದ್ದು ಮೊದಲ ಎರಡು ಗರ್ಭಾವಸ್ಥೆಯ ನಂತರವಷ್ಟೇ. “ಹೊಟ್ಟೆನೋವಿನ ಸೋಗು ಹಾಕತೊಡಗಿದೆ ಅಥವ ರಾತ್ರಿಯ ಕೆಲಸಗಳನ್ನು ನಿಧಾನಿಸತೊಡಗಿದೆ. ಆದರೆ ನನ್ನ ಅತ್ತೆಗೆ ಇದು ತಿಳಿದುಹೋಯಿತು”, ಎಂಬುದಾಗಿ ನೇಹ ತಿಳಿಸಿದಳು.

ಹಿಂದೆಗೆಯುವುದು, ನಿರ್ದಿಷ್ಟ ಅವಧಿಗಳಲ್ಲಿ ವರ್ಜನೆ, ಲಯಬದ್ಧತೆ ಅಥವ ನೇಹಾಳು ಪಾಲಿಸುತ್ತಿರುವ ಸುರಕ್ಷಿತ ಅವಧಿಯ ಅನುಸರಣೆಯಂತಹ ಸಾಂಪ್ರದಾಯಿಕ ಗರ್ಭನಿರೋಧಕ ವಿಧಾನಗಳು ದೇಶದ ಇತರೆ ಭಾಗಗಳಿಗಿಂತಲೂ ಉತ್ತರಪ್ರದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ನ್ಯಾಶನಲ್ ಫ್ಯಾಮಿಲಿ ಹೆಲ್ತ್ ಸರ್ವೆ (ಎನ್.ಎಫ್.ಹೆಚ್.ಎಸ್-4, 2015-16) ದತ್ತಾಂಶದ ಮಾಹಿತಿಯಂತೆ, Reproductive Health ನಿಯತಕಾಲಿಕೆಯ 2019ರ ಸುದ್ದಿಹಾಳೆಯ (paper) ಅನುಸಾರ, ಈ ವಿಧಾನಗಳು ರಾಷ್ಟ್ರದಲ್ಲಿ ಶೇ.9ರಷ್ಟಿದ್ದು; ಇದಕ್ಕೆ ಹೋಲಿಸಿದಲ್ಲಿ, ರಾಜ್ಯದಲ್ಲಿನ ಎಲ್ಲ ಗರ್ಭನಿಯಂತ್ರಣಗಳಲ್ಲಿ ಇವುಗಳ ಪ್ರಮಾಣ ಶೇ. 22ರಷ್ಟಿದೆ. ಪ್ರಸ್ತುತ ಕೇವಲ ಶೇ.50ರಷ್ಟು ಉತ್ತರ ಪ್ರದೇಶದ ವಿವಾಹಿತ ಮಹಿಳೆಯರು ಶಿಶ್ನಕವಚ (condom), ಮಾತ್ರೆ ಮತ್ತು ಸಂತಾನಶಕ್ತಿ ಹರಣದಂತಹ ಆಧುನಿಕ ಗರ್ಭನಿರೋಧಕ ವಿಧಾನಗಳನ್ನು ಬಳಸುತ್ತಿದ್ದಾರೆ. ಇದರ ರಾಷ್ಟ್ರೀಯ ಬಳಕೆಯ ಪ್ರಮಾಣ ಶೇ.72ರಷ್ಟಿದೆ.

ಅಪಘಾತದ ನಂತರ ಆಕಾಶನ ಕಾಲು ಮುರಿದು, ಕೆಲಸಮಾಡಲು ಹಾಗೂ ಹಣವನ್ನು ಸಂಪಾದಿಸಲು ಆತನು ಅಸಮರ್ಥನಾದಾಗ ನೇಹಾಳು ಧೈರ್ಯವನ್ನು ಒಟ್ಟುಗೂಡಿಸಿ, ‘ನಸ್ಬಂದಿಯ’ ಬಗ್ಗೆ ಮಾತನಾಡಲು ಬಯಸಿದಳು. ಮಹಿಳೆಯ ಗರ್ಭಾಶಯ ನಾಳವನ್ನು ಮುಚ್ಚಿ, ನಾಳವನ್ನು ಬಂಧಿಸುವ ಮೂಲಕ ಮಹಿಳೆಯು ಗರ್ಭವತಿಯಾಗುವುದನ್ನು ತಪ್ಪಿಸುವ ಸಂತಾನಶಕ್ತಿ ಹರಣ ವಿಧಾನಕ್ಕೆ ಇದು ಸಾರ್ವತ್ರಿಕವಾಗಿ ಬಳಕೆಯಲ್ಲಿರುವ ಪದವಾಗಿದೆ. ಈ ಬಗ್ಗೆ ಮನವರಿಕೆಯಾಗದ ನೇಹಾಳ ಅತ್ತೆಯು ಆಕೆಯೊಂದಿಗೆ ತಾವೂ ಆಸ್ಪತ್ರೆಗೆ ಬಂದರು. “ಭಗವಾನ್ ಔರ್ ಬಚ್ಚೇಕೆ ಬೀಚ್ ಮೆ ಕಭೀ ನಹೀ ಆನಾ ಚಾಹಿಯೆ” (ಗರ್ಭಧಾರಣೆ ಹಾಗೂ ದೇವರ ಇಚ್ಛೆಯ ಮಧ್ಯೆ ಯಾರೂ ಪ್ರವೇಶಿಸಬಾರದು) ಎಂಬುದಾಗಿ ಆಕೆ ತನಗೆ ತಾನೇ ಅಥವ ನೇಹ ಹಾಗೂ ಹತ್ತಿರದ ಬಂಡೊಯಿಯ, ನೌಗಿರ್ವ, ಸನಹ ಮತ್ತು ಟಿಕ್ರಿ ಗ್ರಾಮಗಳಿಂದ ಬಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಟ್ಟುಗೂಡಿದ್ದ  22 ಇತರೆ ಮಹಿಳೆಯರನ್ನು ಉದ್ದೇಶಿಸಿ ಗೊಣಗುತ್ತಿದ್ದರು.

ಆಗ 10ರ ಸಮಯ. ನವೆಂಬರಿನ ಮುಂಜಾನೆ ಆಹ್ಲಾದಕರವಾಗಿತ್ತು. ಬಹುತೇಕ ಮಹಿಳೆಯರು 9 ಗಂಟೆಯ ಹೊತ್ತಿಗೆ ಅಲ್ಲಿಗೆ ತಲುಪಿದ್ದರು. ಸಮಯ ಕಳೆಯುತ್ತಿದ್ದಂತೆ ಹೆಚ್ಚು ಜನರು ಬರತೊಡಗಿದರು. “ವಿಶೇಷವಾಗಿ ಅಕ್ಟೋಬರಿನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ, ಮಹಿಳಾ ನಸ್ಬಂದಿ (ಮಹಿಳೆಯರ ಸಂತಾನಶಕ್ತಿ ಹರಣ) ದಿನದಂದು ಸರಾಸರಿ ಸುಮಾರು 30-40 ಜನರು ಬರುತ್ತಾರೆ. ಈ ತಿಂಗಳುಗಳಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಯಸುತ್ತಾರೆ. ಆಗ ಶೀತದ ವಾತಾವರಣವಿದ್ದು ಹೊಲಿಗೆಯು ಬೇಗ ಒಣಗುತ್ತದೆ. ಟಾಂಕೆ ಪಕ್ತೆ ನಹಿ ಹೈ (ಸೋಂಕು ಉಂಟಾಗುವ ಸಾಧ್ಯತೆ ಕಡಿಮೆ)”, ಎಂಬುದಾಗಿ ಭೆತುಅ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ, ಡಾ ಅಭಿಮನ್ಯು ವರ್ಮ ತಿಳಿಸಿದರು.

'About 30-40 come in on on mahila nasbandi day'
PHOTO • Anubha Bhonsle

“ಮಹಿಳಾ ನಸ್ಬಂದಿಯ ದಿನದಂದು ಸುಮಾರು 30-40 ಜನರು ಬರುತ್ತಾರೆ”

ಛತ್ತೀಸಘರ್‍ ರಾಜ್ಯದ ಬಿಲಾಸ್ಪುರ್‍ ಜಿಲ್ಲೆಯ ತಖತ್ಪುರ್‍ ಕ್ಷೇತ್ರದಲ್ಲಿ 2014ರ ನವೆಂಬರ್‍ 8ರ ದುರಂತದ ನಂತರ ಸಂತಾನಶಕ್ತಿಹರಣ ‘ಶಿಬಿರದ’ ಬಗ್ಗೆ ಅಸಮಾಧಾನವಿದೆ. 13 ಸ್ತ್ರೀಯರು ಮರಣಿಸಿ, ಹಲವರು ಆಸ್ಪತ್ರೆಗೆ ದಾಖಲಾದರು

ಛತ್ತೀಸ್ಘರ್ ರಾಜ್ಯದಲ್ಲಿನ ಬಿಲಾಸ್ಪುರ್ ಜಿಲ್ಲೆಯ ತಖತ್ಪುರ್ ಕ್ಷೇತ್ರದಲ್ಲಿ 2014ರ ನವೆಂಬರ್ 8ರಂದು ಸಂಭವಿಸಿದ ದುರಂತದ ನಂತರ ಸಂತಾನಶಕ್ತಿ ಹರಣದೆಡೆಗಿನ ‘ಶಿಬಿರದ’ ಸನ್ನಿಕರ್ಷವನ್ನು (approach) ಕುರಿತಂತೆ ವ್ಯಾಪಕ ಅಸಮಾಧಾನವು ಕಂಡುಬಂದಿತು. ಜಿಲ್ಲೆಯ ಶಸ್ತ್ರವೈದ್ಯನೊಬ್ಬನು ಪರಿತ್ಯಕ್ತ ಸ್ಥಿತಿಯಲ್ಲಿದ್ದ, ರೋಗಾಣುರಹಿತಗೊಳಿಸದ ಕಟ್ಟಡವೊಂದರಲ್ಲಿ 90 ನಿಮಿಷದಲ್ಲಿ, 83 ಮಹಿಳಾ ನಸ್ಬಂದಿಯನ್ನು ನಡೆಸಿದ ಸಂದರ್ಭದಲ್ಲಿ 13 ಮಹಿಳೆಯರು ಸಾವಿಗೀಡಾದರಲ್ಲದೆ, ಇತರೆ ಅನೇಕರು ಆಸ್ಪತ್ರೆಗೆ ದಾಖಲಾದರು. ಶಸ್ತ್ರವೈದ್ಯನು ಏಕೈಕ ಲ್ಯಾಪರೊಸ್ಕೊಪ್ ಬಳಸಿದ್ದನಲ್ಲದೆ, ಬ್ಯಾಕ್ಟೀರಿಯಾಗಳಿಲ್ಲದಂತೆ ಯಾವುದೇ ಎಚ್ಚರಿಕೆಗಳನ್ನೂ ವಹಿಸಿರಲಿಲ್ಲ.

ಇದು ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿಯಿಲ್ಲದ ಸಾಮೂಹಿಕ ಶಸ್ತ್ರಚಿಕಿತ್ಸೆಯ ಪ್ರಥಮ ಶಿಬಿರವೇನಲ್ಲ. 2012ರ ಜನವರಿ 7ರಂದು ಬಿಹಾರ್ ರಾಜ್ಯದ ಅರರಿಯ ಜಿಲ್ಲೆಯ ಕುರ್ಸಕಂತ ಕ್ಷೇತ್ರದ ಕಪರ್ಫೋರ ಎಂಬ ಸಣ್ಣ ಹಳ್ಳಿಯಲ್ಲಿ, ಇಂತಹುದೇ ಅನಾರೋಗ್ಯಕರ ಪರಿಸ್ಥಿತಿಯಲ್ಲಿ, ಶಾಲಾ ಕಟ್ಟಡವೊಂದರಲ್ಲಿ, ಪಂಜಿನ ಬೆಳಕಿನಲ್ಲಿ, 53 ಮಹಿಳೆಯರ ಸಂತಾನಶಕ್ತಿ ಹರಣಗೊಳಿಸಲಾಯಿತು.

ಅರರಿಯ ಪ್ರಕರಣದ ನಂತರ 2012ರಲ್ಲಿ ದೇವಿಕ ಬಿಸ್ವಾಸ್ ಎಂಬ ಆರೋಗ್ಯ ಹಕ್ಕುಗಳ ಕಾರ್ಯಕರ್ತೆಯು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ಹೂಡಿದರು. ಮೂರು ವರ್ಷಗಳಲ್ಲಿ ಎಲ್ಲ ಸಾಮೂಹಿಕ ಸಂತಾನಶಕ್ತಿ ಹರಣ ಶಿಬಿರಗಳನ್ನು ನಿಲ್ಲಿಸಿ, ಇದಕ್ಕೆ ಬದಲಾಗಿ ಆರೋಗ್ಯದ ಸೌಲಭ್ಯಗಳನ್ನು ಮತ್ತು ಕುಟುಂಬ ಯೋಜನಾ ಕಾರ್ಯಕ್ರಮದ ಸೇವೆಗಳ ಲಭ್ಯತೆಯನ್ನು ಸುಧಾರಿಸಬೇಕೆಂದು 2016ರ ಸೆಪ್ಟೆಂಬರ್ 14ರಂದು ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿತು. ಸುಪ್ರೀಂಕೋರ್ಟಿನ ನ್ಯಾಯವಿಚಾರಣೆಯ ಸಂದರ್ಭಗಳಲ್ಲಿ, ಇತರೆ ರಾಜ್ಯಗಳಾದ ಕೇರಳ, ರಾಜಾಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿಯೂ ಸಂತಾನಶಕ್ತಿ ಹರಣ ಶಿಬಿರಗಳ ಸುರಕ್ಷತೆಯನ್ನು ಕುರಿತ ಗುಣಮಟ್ಟದಲ್ಲಿನ ಕೊರತೆಯು ಬೆಳಕಿಗೆ ಬಂದಿತು.

ನಂತರ ಸಂತಾನಶಕ್ತಿ ಹರಣ ‘ಶಿಬಿರದ’ ವ್ಯವಸ್ಥೆಗಳ ಅಂತ್ಯವಾಗಿ ‘ನಿಗದಿತ ದಿನದ ಸೇವೆಗೆ’ ದಾರಿಮಾಡಿತು. ಸಂತಾನಶಕ್ತಿ ಹರಣವನ್ನು ಬಯಸುವ ಪುರುಷ ಅಥವ ಸ್ತ್ರೀಯರು ನಿಗದಿತ ದಿನದಂದು ನಿರ್ದಿಷ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬಹುದಾದ ಸೌಲಭ್ಯವನ್ನು ಕಲ್ಪಿಸಲಾಯಿತು. ಈ ವ್ಯವಸ್ಥೆಯ ಮೂಲಕ ಪರಿಸ್ಥಿತಿಗಳ ಸೂಕ್ತ ಮೇಲ್ವಿಚಾರಣೆ ಹಾಗೂ ನಿಯಂತ್ರಣವನ್ನು ಸಾಧಿಸಬಹುದೆಂದು ಭಾವಿಸಲಾಯಿತು. ನಿಗದಿತ ದಿನದಂದು ವ್ಯಾಪಕ ನಸ್ಬಂದಿಯನ್ನು ಕೈಗೊಳ್ಳುವ ಉದ್ದೇಶವಿದ್ದಿತಾದರೂ, ಪುರುಷರು ನಸ್ಬಂದಿಗಾಗಿ ಅಪರೂಪವಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಹೀಗಾಗಿ ಈ ದಿನವು ಅನಧಿಕೃತವಾಗಿ ಮಹಿಳಾ ನಸ್ಬಂದಿ ದಿನವೆಂಬ ಹೆಸರು ಪಡೆಯಿತು.

ನ್ಯಾಯಾಲಯದ ಆಜ್ಞೆಯ ಹೊರತಾಗಿಯೂ, ನಸ್ಬಂದಿಯು ಅದರಲ್ಲೂ ವಿಶೇಷವಾಗಿ ಮಹಿಳಾ ನಸ್ಬಂದಿಯು ಸಂತಾನ ನಿಯಂತ್ರಣದ ಕೇಂದ್ರಬಿಂದುವಾಯಿತು.

Medical supplies on a table in a CHC waiting room. The operating room had been prepared and was ready since earlier that morning
PHOTO • Anubha Bhonsle

ಸಮುದಾಯ ಆರೋಗ್ಯ ಕೇಂದ್ರದ ನಿರೀಕ್ಷಾ ಕೊಠಡಿಯ ಮೇಜಿನ ಮೇಲಿರುವ ವೈದ್ಯಕೀಯ ಸರಬರಾಜುಗಳು. ಶಸ್ತ್ರಚಿಕಿತ್ಸಾ ಕೊಠಡಿಯನ್ನು ಅಣಿಗೊಳಿಸಿ, ಮುಂಜಾನೆಯಿಂದಲೇ ಸಿದ್ಧವಾಗಿರಿಸಲಾಗಿದೆ

2017ರ ರಾಷ್ಟ್ರೀಯ ಸ್ವಾಸ್ಥ್ಯ ಮಿಶನ್ ವರದಿಯ 11ನೇ Common Review Mission ವರದಿಯು, ಭಾರತದಾದ್ಯಂತ ಶೇ. 93.1ರಷ್ಟು ಸಂತಾನಶಕ್ತಿ ಹರಣ ಪ್ರಕ್ರಿಯೆಯು ಮಹಿಳೆಯರನ್ನು ಕುರಿತದ್ದಾಗಿದೆ ಎಂಬುದಾಗಿ ತಿಳಿಸುತ್ತದೆ. ಇತ್ತೀಚಿಗೆ 2016-17ರಲ್ಲಿ, ಭಾರತವು ತನ್ನ ಕುಟುಂಬ ಯೋಜನಾ ನಿಧಿಯ ಶೇ. 85 ರಷ್ಟನ್ನು ಮಹಿಳಾ ಸಂತಾನಶಕ್ತಿ ಹರಣದ ನಿಟ್ಟಿನಲ್ಲಿ ವ್ಯಯಿಸಿದೆ. Reproductive Health ನ  2019ರ ಸುದ್ದಿಹಾಳೆಯು (paper) ಉತ್ತರ ಪ್ರದೇಶದಲ್ಲಿ ಈ ಪ್ರಕ್ರಿಯೆಯ ಉಪಯೋಗವು ಕ್ಷೀಣಿಸಿದ್ದಾಗ್ಯೂ, (1998-99ಕ್ಕೆ ಹೋಲಿಸಿದಲ್ಲಿ) ಹೆಚ್ಚಿನ ಪ್ರಜನನವನ್ನುಳ್ಳ ಜಿಲ್ಲೆಗಳ ಶೇ.33ರಷ್ಟು ಗರ್ಭನಿರೋಧಕ ಬಳಕೆದಾರರಲ್ಲಿ ಮತ್ತು ಕಡಿಮೆ ಪ್ರಜನನವನ್ನುಳ್ಳ ಜಿಲ್ಲೆಗಳ ಶೇ.41ರಷ್ಟು ಗರ್ಭನಿರೋಧಕ ಬಳಕೆದಾರರಲ್ಲಿ ಪ್ರಾಥಮಿಕ ವಿಧಾನವಾಗಿ, ಮಹಿಳಾ ನಸ್ಬಂದಿಯನ್ನು ಆಯ್ಕೆಮಾಡಲಾಗುತ್ತಿದೆ ಎಂಬುದಾಗಿ ತಿಳಿಸುತ್ತದೆ.

ಸುಲ್ತಾನಪುರ ಜಿಲ್ಲೆಯಲ್ಲಿ ಸಂತಾನಶಕ್ತಿ ಹರಣ ಪ್ರಕ್ರಿಯೆಯನ್ನು ಕೈಗೊಳ್ಳುವ ಸಂಪೂರ್ಣ ಹೊರೆಯನ್ನು ಎರಡರಿಂದ ಮೂವರು ವೈದ್ಯರು ನಿಭಾಯಿಸಬೇಕಿತ್ತು. ಕುಟುಂಬ ಯೋಜನಾ ಸಮನ್ವಯಕರ್ತರು ಸಿದ್ಧಪಡಿಸಿದ ತೆಹ್ಸಿಲ್ ಅಥವ ಜಿಲ್ಲಾ ಮಟ್ಟದ ಸರದಿ ಪಟ್ಟಿಯ ಅನುಸಾರ ಇವರು ಆಸ್ಪತ್ರೆಗಳು ಮತ್ತು 12ರಿಂದ 15 ಕ್ಷೇತ್ರಗಳಲ್ಲಿ ಹರಡಿರುವ ಆರೋಗ್ಯ ಕೇಂದ್ರಗಳಿಗೆ ಪ್ರಯಾಣಿಸಿ, ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದರು. ಪ್ರತಿಯೊಂದು ಸಮುದಾಯ ಆರೋಗ್ಯ ಕೇಂದ್ರವೂ ಸರಿಸುಮಾರು ತಿಂಗಳಿಗೊಮ್ಮೆ ನಸ್ಬಂದಿ ದಿವಸವನ್ನು ಆಯೋಜಿಸುತ್ತಿದ್ದು, ಪುರುಷರು ಹಾಗೂ ಮಹಿಳೆಯರು ಇಲ್ಲಿ ಸದರಿ ಪ್ರಕ್ರಿಯೆಗೆ ಒಳಪಡಬಹುದಾಗಿದೆ.

ಭೆತುಅ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಇಂತಹುದೊಂದು ದಿನದಲ್ಲಿ, ಸದರಿ ಪ್ರಕ್ರಿಯೆಗೆ ನಿಗದಿಪಡಿಸಿರುವ ದಿನಗಳ ಸಂಖ್ಯೆಯು ಬೇಡಿಕೆಗೆ ಅನುಗುಣವಾಗಿಲ್ಲವೆಂಬುದು ಸ್ಪಷ್ಟವಾಯಿತು. ಶಸ್ತ್ರವೈದ್ಯನು ತಾನು ಹಾಜರಾಗಬೇಕಿದ್ದ ಸರ್ಕಾರಿ ಸ್ವಾಸ್ಥ್ಯ ಮೇಳದಿಂದಾಗಿ, ಸರದಿ ಪಟ್ಟಿಯ ಸ್ಥಳವನ್ನು 4 ಗಂಟೆಯ ಸುಮಾರಿಗೆ ತಲುಪಿದಾಗ, ನಿರ್ವಹಿಸಬೇಕಾದ ಮಹಿಳೆಯರ ಸಂಖ್ಯೆ 30ಕ್ಕೇರಿತ್ತು. ಪ್ರಾರಂಭಿಕ ತಪಾಸಣೆಯ ನಂತರ ಇಬ್ಬರು ಮಹಿಳೆಯರು ಗರ್ಭವತಿಯರೆಂದು ತಿಳಿದುಬಂದ ಕಾರಣ ಅವರನ್ನು ವಾಪಸ್ಸು ಕಳುಹಿಸಲಾಯಿತು.

ಮಧ್ಯಾಹ್ನದಿಂದಲೇ ಕಟ್ಟಡದ ಕೊನೆಯ ಭಾಗದಲ್ಲಿ ಶಸ್ತ್ರಕ್ರಿಯೆಯನ್ನು ನಡೆಸಬಹುದಾದ ಕೊಠಡಿಯನ್ನು ಅಣಿಗೊಳಿಸಲಾಗಿತ್ತು. ದೊಡ್ಡ ಕಿಟಕಿಯೊಂದರ ತೆಳು ಪರದೆಯ ಮೂಲಕ ಸೂರ್ಯನ ಕಿರಣಗಳು ಒಳನುಸುಳುತ್ತಿದ್ದವಾದರೂ, ಶೀತದ ವಾತಾವರಣವಿತ್ತು. ಕೊಠಡಿಯ ಮಧ್ಯೆ ಮೂರು ‘ಶಸ್ತ್ರಕ್ರಿಯೆಯ ಮೇಜುಗಳನ್ನು’ ಸಾಲಾಗಿ ಇರಿಸಲಾಗಿತ್ತು. ಶಸ್ತ್ರವೈದ್ಯನಿಗೆ ಶಸ್ತ್ರಕ್ರಿಯೆಯನ್ನು ಸೂಕ್ತವಾಗಿ ನಿರ್ವಹಿಸಲು ಅನುವಾಗುವಂತೆ, ಇಟ್ಟಿಗೆಗಳ ಆಸರೆಯಲ್ಲಿ ಅವನ್ನು ಒಂದು ಕೋನದಲ್ಲಿ ಎತ್ತರಕ್ಕೆ ವಾಲಿಸಿಡಲಾಗಿತ್ತು.

An 'operation theatre' at a CHC where the sterilisation procedures will take place, with 'operating tables' tilted at an angle with the support of bricks to help surgeons get easier access during surgery
PHOTO • Anubha Bhonsle

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂತಾನಶಕ್ತಿ ಹರಣ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವ ಶಸ್ತ್ರಕ್ರಿಯೆಯ ಕೊಠಡಿ. ಶಸ್ತ್ರವೈದ್ಯನಿಗೆ ಶಸ್ತ್ರಕ್ರಿಯೆಯನ್ನು ಸೂಕ್ತವಾಗಿ ನಿರ್ವಹಿಸಲು ಅನುವಾಗುವಂತೆ, ಶಸ್ತ್ರಕ್ರಿಯೆಯ ಮೇಜುಗಳನ್ನು ಇಟ್ಟಿಗೆಗಳ ಆಸರೆಯಲ್ಲಿ ಒಂದು ಕೋನದಲ್ಲಿ ಎತ್ತರಕ್ಕೆ ವಾಲಿಸಿಡಲಾಗಿದೆ

ಇಟ್ಟಿಗೆಗಳನ್ನು ತೋರಿಸುತ್ತಾ ಡಾ. ರಾಹುಲ್ ಗೋಸ್ವಾಮಿ; “ವೈದ್ಯಕೀಯ ಕಾಲೇಜಿನಲ್ಲಿ, Trendelenburg  ಸೌಲಭ್ಯವುಳ್ಳ ಶಸ್ತ್ರಕ್ರಿಯಾ ಮೇಜುಗಳ ಬಗ್ಗೆ ನಾವು ಕಲಿತಿದ್ದೆವು. ಅವನ್ನು ವಾಲಿಸಬಹುದು. ಇಲ್ಲಿನ ನನ್ನ ಐದು ವರ್ಷಗಳ ಸೇವೆಯಲ್ಲಿ ಅಂಥದ್ದನ್ನು ನಾನಿನ್ನೂ ನೋಡಿಯೇ ಇಲ್ಲ”, ಎಂಬುದಾಗಿ ತಿಳಿಸಿದರು. “ಅಸಮರ್ಪಕ ಭಂಗಿಯಿಂದಾಗಿ ಶಸ್ತ್ರಕ್ರಿಯೆಯಲ್ಲಿ ಗೊಂದಲಗಳು ಉಂಟಾಗಬಹುದು”, ಎಂದು ಸಹ ಅವರು ತಿಳಿಸಿದರು.

ಶಸ್ತ್ರಕ್ರಿಯೆಗಾಗಿ ಕೊಠಡಿಗೆ ಕರೆತಂದ ಮೊದಲ ಮೂರು ಮಹಿಳೆಯರಲ್ಲಿ ನೇಹಾಳೂ ಒಬ್ಬಳು. ಆಕೆಯ ಅತ್ತೆಗೆ ಹೊರಗೆ ಕಾದಿರುವಂತೆ ತಿಳಿಸಲಾಯಿತು. ಈ ಮೂವರಲ್ಲಿ ಯಾರೂ ಆಧುನಿಕ ಗರ್ಭನಿರೋಧಕ ವಿಧಾನಗಳನ್ನೆಂದಿಗೂ ಬಳಸಿರಲಿಲ್ಲ. ನೇಹಾಳಿಗೆ ಅವುಗಳ ಬಗ್ಗೆ ತಿಳಿದಿತ್ತಾದರೂ ಅವುಗಳ ಬಳಕೆಯ ಕುರಿತಂತೆ ಆಕೆಗೆ ಭರವಸೆಯಿರಲಿಲ್ಲ. “ನನಗೆ ಅವುಗಳ ಬಗ್ಗೆ ತಿಳಿದಿದೆ. ಮಾತ್ರೆಗಳು ವಾಕರಿಕೆ ಬರಿಸುತ್ತವೆ. ಗರ್ಭಾಶಯದಲ್ಲಿ ಅಳವಡಿಸುವ ಸಾಧನವನ್ನು (IUD) ಉಲ್ಲೇಖಿಸುತ್ತ; ಕಾಪರ್-ಟಿ ದಿಗಿಲು ಹುಟ್ಟಿಸುತ್ತದೆ. ಅದರ ಕಡ್ಡಿ ಉದ್ದವಾಗಿದೆ”, ಎಂದಳು ಆಕೆ.

ಇತರೆ ಇಬ್ಬರು ಮಹಿಳೆಯರೊಂದಿಗಿದ್ದ, ಅಧಿಕೃತ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾದ ದೀಪ್‍ಲತ ಯಾದವ್ ಈ ಮಾತಿಗೆ ಮುಗುಳ್ನಕ್ಕರು. “ಗರ್ಭಾಶಯದಲ್ಲಿ ಅಳವಡಿಸುವ ಸಾಧನದ (ಕಾಪರ್ IUD) ಬಗ್ಗೆ ಅವರಿಗೆ ತಿಳಿಸಿದಾಗಲೆಲ್ಲ, ಇಂತಹ ಮಾತನ್ನು ಅವರಿಂದ ಕೇಳುವುದು ಸರ್ವೇಸಾಮಾನ್ಯ. ಒಳಭಾಗದಲ್ಲಿರುವ ಈ ಸಾಧನವು ಬಹಳ ಚಿಕ್ಕದಾಗಿದ್ದು, ‘ಟಿ’ ಆಕಾರದಲ್ಲಿದ್ದಾಗ್ಯೂ, ಅದರ ಭಾಂಗಿಯು (packaging) ಉದ್ದವಾಗಿದೆಯಾದ್ದರಿಂದ ಅವರು ಇದನ್ನು ಸಂಪೂರ್ಣವಾಗಿ ಒಳಸೇರಿಸಲಾಗುತ್ತದೆಂದು ತಿಳಿಯುತ್ತಾರೆ”, ಎಂಬುದಾಗಿ ತಿಳಿಸಿದರು. ಆಕೆಯ ಈ ದಿನದ ಕಾರ್ಯವು ಮುಗಿದಿದ್ದು ಆಕೆಯು ಕರೆತಂದ ಪ್ರತಿಯೊಬ್ಬ ಮಹಿಳೆಗೆ ಪ್ರತಿಯಾಗಿ 200 ರೂ.ಗಳನ್ನು ನೀಡಲಾಗುತ್ತದೆ. ಆದಾಗ್ಯೂ ಯಾದವ್, ಬಹಳ ಸಮಯದವರೆಗೂ ಅಲ್ಲಿದ್ದು ಇಬ್ಬರು ಮಹಿಳೆಯರಿಗೆ ಹಾಸಿಗೆಗೆ ಹತ್ತಲು ಸಹಕರಿಸಿ, ಅರಿವಳಿಕೆಯು ತನ್ನ ಪ್ರಭಾವ ಬೀರುವುದನ್ನು ಕಾಯುತ್ತಿದ್ದಾರೆ.

ವೈದ್ಯರು ಪ್ರತಿ ಮೇಜಿನ ಬಳಿಗೆ ಹೋಗುತ್ತಿದ್ದಂತೆಯೇ ಮಹಿಳೆಯರು ಭಯ ಮತ್ತು ಬೇಸರದಿಂದ ತಲೆಯನ್ನು ವಾಲಿಸುತ್ತಿದ್ದರು. ಸದರಿ ಪ್ರಕ್ರಿಯೆಯಿಂದಾಗಿ ಅವರೆಲ್ಲರನ್ನು ಒಂದೇ ಕೊಠಡಿಯಲ್ಲಿ ಅತ್ಯಂತ ನಿಕಟವಾಗಿ ಇರಿಸುವುದು ಅನಿವಾರ್ಯವಾಗಿದೆ. ಆದರೆ ಈ ಯಾವುದರ ಬಗ್ಗೆಯೂ ಯೋಚಿಸಲು ಸಮಯವಿರಲಿಲ್ಲ. ಈ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದಾಗಲೂ ಶಸ್ತ್ರಚಿಕಿತ್ಸಾ ಕೊಠಡಿಯ ಬಾಗಿಲು ಅನೇಕ ಬಾರಿ ತೆರೆದು, ಮುಚ್ಚಲ್ಪಡುತ್ತಿತ್ತು. ಆ ಮಹಿಳೆಯರ ಏಕಾಂತಕ್ಕೆ ಅಲ್ಲಿ ಯಾವುದೇ ಅವಕಾಶಗಳಿರಲಿಲ್ಲ.

ಅವರ ಉಸಿರಾಟ ಮತ್ತು ಸಲಕರಣೆಗಳ ಅನುರಣನಗಳೊಂದಿಗೆ ಕೊಠಡಿಯು ಸ್ಪಂದಿಸುತ್ತಿತ್ತು. ಸಹಾಯಕರು ಮಹಿಳೆಯರ ಭಂಗಿಯನ್ನು ಪರಿಶೀಲಿಸಿ, ವೈದ್ಯರಿಗೆ ಛೇದನಕ್ಕೆ ಅನುವಾಗುವಂತೆ ಅವರ ಸೀರೆಯನ್ನು ಸರಿಪಡಿಸಿದರು.

The women who have undergone the procedure rest here for 60 to 90 minutes before an ambulance drops them to their homes
PHOTO • Anubha Bhonsle

ಈ ಪ್ರಕ್ರಿಯೆಗೊಳಪಟ್ಟ ಮಹಿಳೆಯರನ್ನು ಅಂಬುಲೆನ್ಸಿನಲ್ಲಿ ಅವರ ಮನೆಗೆ ತಲುಪಿಸುವ ಮೊದಲು ಅವರು ಇಲ್ಲಿ 60ರಿಂದ 90 ನಿಮಿಷಗಳವರೆಗೆ ವಿಶ್ರಾಂತಿ ಪಡೆಯುತ್ತಾರೆ

“ಛೇದನ, ಮುಚ್ಚುವಿಕೆ ಹಾಗೂ ಲ್ಯಾಪರೊಸ್ಕೊಪಿಕ್ ಸಲಕರಣೆಯೊಂದಿಗೆ ಅಂಡಾಣುವಾಹಿ ನಾಳಗಳ ನಿರ್ವಹಣೆಗೆ ಸೂಕ್ತ ಬೆಳಕು ಅವಶ್ಯ”, ಎನ್ನುತ್ತಾರೆ ಗೋಸ್ವಾಮಿ. ಕೊಠಡಿಯಲ್ಲಿನ ಬೆಳಕು ಸಾಲುತ್ತಿರಲಿಲ್ಲ. ಆದರೆ ಯಾರೊಬ್ಬರೂ ತುರ್ತುಪರಿಸ್ಥಿತಿಗೆಂದು ಲಭ್ಯವಿದ್ದ ಲೈಟುಗಳನ್ನು ಹಾಕಲಿಲ್ಲ.

ಐದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಒಂದು ಪ್ರಕ್ರಿಯೆಯು ಮುಕ್ತಾಯಗೊಂಡು, ವೈದ್ಯರು ಮುಂದಿನ ಮೇಜಿಗೆ ತೆರಳುತ್ತ “ಹೋ ಗಯಾ, ಮುಗಿಯಿತು” ಎಂದರು. ಸಹಾಯಕ ಮತ್ತು ಆಶಾ ಕಾರ್ಯಕರ್ತರು ಮಹಿಳೆಗೆ ಮೇಜಿನಿಂದ ಇಳಿಯಲು ಸಹಕರಿಸಿ, ಮುಂದಿನ ಗುಂಪನ್ನು ಸಿದ್ಧಪಡಿಸಲು ಇದು ಸೂಚನೆ ನೀಡಿತು.

ಪಕ್ಕದಲ್ಲಿನ ಕೊಠಡಿಯೊಂದರಲ್ಲಿ ಹಾಸಿಗೆಗಳನ್ನು ಹಾಸಲಾಗಿತ್ತು. ಹಳದಿ ಗೋಡೆಗಳು ತೇವ ಹಾಗೂ ಪಾಚಿಯ ಕಲೆಗಳಿಂದ ತುಂಬಿತ್ತು. ಪಕ್ಕದ ಶೌಚಾಲಯದ ಬಾಗಿಲಿನಿಂದ ದುರ್ವಾಸನೆಯು ಹೊರಸೂಸುತ್ತಿತ್ತು. ಪ್ರಕ್ರಿಯೆಯು ಮುಕ್ತಾಯಗೊಳ್ಳುತ್ತಿದ್ದಂತೆಯೇ, ಅಂಬುಲೆನ್ಸಿನಲ್ಲಿ ನೇಹಾ ಹಾಗೂ ಇತರರನ್ನು ಮನೆಗೆ ತಲುಪಿಸುವ ಮೊದಲು ಮಲಗಿ ವಿಶ್ರಾಂತಿ ಪಡೆಯಲು ಕರೆತರಲಾಯಿತು. ಇದೆಲ್ಲವೂ ಬಹಳ ತ್ವರಿತವಾಗಿ ನಡೆದುಹೋಯಿತಲ್ಲದೆ ಆಕೆಗೆ ಅರಿವಳಿಕೆಯು ಸಂಪೂರ್ಣವಾಗಿ ಪ್ರಭಾವ ಬೀರಿರಲಿಲ್ಲ. ಬಹುಶಃ ಈ ಕಾರಣಗಳಿಂದಾಗಿ, ಅರ್ಧ ಗಂಟೆಯ ತರುವಾಯ ಆಂಬುಲೆನ್ಸ್ ಹತ್ತುವಾಗ ನೇಹಾ ಭ್ರಮನಿರಸನಕ್ಕೊಳಗಾದವಳಂತೆ ಕಾಣುತ್ತಿದ್ದಳು.

ಅವರು ಮನೆ ತಲುಪಿದಾಗ ಆಕೆಯ ಅತ್ತೆಯ ಜೊತೆಗೆ ಆಕಾಶನೂ ಅವರಿಗಾಗಿ ಕಾಯುತ್ತಿದ್ದನು. “ಪುರುಷರು ತಾವು ಬಂದಾಗ ತಾಯಿ, ಹೆಂಡತಿ, ಮಕ್ಕಳು ಹಾಗೂ ತಮ್ಮ ನಾಯಿ ನಮಗಾಗಿ ಕಾಯುತ್ತಿರಬೇಕೆಂದು ಬಯಸುತ್ತಾರೆಯೇ ಹೊರತು ಬೇರೇನನ್ನೋ ಅಲ್ಲ”, ಎಂಬ ಟೀಕೆಯೊಂದಿಗೆ ಆಕೆ, ನೇಹಾಳಿಗೆ ಚಹಾ ತಯಾರಿಸಲೆಂದು ಮನೆಯ ಚಿಕ್ಕ ಮೂಲೆಗೆ ಅರ್ಥಾತ್ ಅಡಿಗೆ ಕೋಣೆಗೆ ನಡೆದಳು.

ಚೌಕಾಕಾರದ ಬ್ಯಾಂಡೇಜಿನ ತುಂಡಿನಿಂದ ಛೇದನವನ್ನು ಮುಚ್ಚಿದ್ದ ಹೊಟ್ಟೆಯನ್ನು ಹಿಡಿದುಕೊಂಡು, “ಚುಚ್ಚುಮದ್ದಿನ ನಂತರವೂ ನೋವಾಗುತ್ತಿತ್ತು” ಎಂದು ಆಕೆ ತಿಳಿಸಿದಳು.

ಎರಡು ದಿನಗಳ ತರುವಾಯ ಅಡಿಗೆ ಕೋಣೆಗೆ ವಾಪಸ್ಸಾದ ನೇಹಾ, ನಡು ಬಗ್ಗಿಸಿ ಕುಳಿತು ಅಡಿಗೆ ಕೆಲಸಗಳಲ್ಲಿ  ತೊಡಗಿದಳು. ಬ್ಯಾಂಡೇಜು ಇನ್ನೂ ಅದರ ಜಾಗದಲ್ಲೇ ಇತ್ತಲ್ಲದೆ, ಆಕೆಯ ಮುಖದಲ್ಲಿ ಅಸ್ವಸ್ಥತೆಯನ್ನು ಕಾಣಬಹುದಾಗಿತ್ತು. ಹೊಲಿಗೆಗಳು ಇನ್ನೂ ಒಣಗುವುದರಲ್ಲಿದ್ದವು. “ಪರ್ ಝಂಝಟ್ ಖತಂ (ಆದರೆ ಸಮಸ್ಯೆ ಬಗೆಹರಿಯಿತು)”, ಎಂದಳು ನೇಹ.

ಮುಖಪುಟ ಸಚಿತ್ರ ವಿವರಣೆ: ಅರ್ಥ ಮತ್ತು ಅಭಿವ್ಯಕ್ತಿಯ ಹೊಸ ರೂಪಗಳನ್ನು ಅನ್ವೇಷಿಸಲು ತಂತ್ರಜ್ಞಾನದೊಂದಿಗೆ ಪ್ರಯೋಗದಲ್ಲಿ ತೊಡಗಿರುವ, ನೂತನ ಮಾಧ್ಯಮದ (new media) ಕಲಾಕಾರರಾದ ಪ್ರಿಯಾಂಕ ಬೊರರ್‍, ಕಲಿಕೆ ಹಾಗೂ ಕ್ರೀಡೆಗಳಿಗಾಗಿ ಅನುಭವಗಳನ್ನು ವಿನ್ಯಾಸಗೊಳಿಸುತ್ತಾರೆ. ಸಂವಾದಾತ್ಮಕ ಮಾಧ್ಯಮದೊಂದಿಗೆ ಕೈಜೋಡಿಸುವ ಇವರು, ಪಾರಂಪರಿಕ ಲೇಖನಿ ಹಾಗೂ ಕಾಗದಗಳೊಂದಿಗೆ ಸಹಜತೆಯನ್ನು ಕಾಣುತ್ತಾರೆ.

ಪರಿ ಹಾಗೂ ಕೌಂಟರ್‍ ಮೀಡಿಯ ಟ್ರಸ್ಟ್ನ ವತಿಯಿಂದ, ದೇಶಾದ್ಯಂತ ಗ್ರಾಮೀಣ ಭಾರತದ ಕಿಶೋರಿಯರು ಹಾಗೂ ಯುವತಿಯರ ಪರಿಸ್ಥಿತಿಗಳನ್ನು ಕುರಿತಂತೆ ವರದಿಯನ್ನು ತಯಾರಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ. ಸದರಿ ಯೋಜನೆಯು, ಪಾಪ್ಯುಲೇಶನ್‍ ಫೌಂಡೇಶನ್‍ ಆಫ್‍ ಇಂಡಿಯ ಬೆಂಬಲಿತ ಉಪಕ್ರಮದ (initiative) ಒಂದು ಭಾಗವಾಗಿದ್ದು, ಅಂಚಿಗೆ ತಳ್ಳಲ್ಪಟ್ಟ ಈ ಪ್ರಮುಖ ಸಮುದಾಯಗಳ ಪರಿಸ್ಥಿತಿಗಳನ್ನು, ಸಾಮಾನ್ಯ ಜನರ ಅನುಭವ ಹಾಗೂ ಹೇಳಿಕೆಗಳ ಹಿನ್ನೆಲೆಯಲ್ಲಿ ಅನ್ವೇಷಿಸಲಾಗುತ್ತಿದೆ.

ಈ ಲೇಖನವನ್ನು ಪುನಃ ಪ್ರಕಟಿಸಲು ಬಯಸಿದಲ್ಲಿ, [email protected] ಗೆ ಬರೆದು, ಅದರ ಪ್ರತಿಯನ್ನು [email protected] ಗೆ ಸಲ್ಲಿಸಿ.

ಅನುವಾದ: ಶೈಲಜ ಜಿ. ಪಿ.

ਅਨੁਭਾ ਭੋਂਸਲੇ 2015 ਦੀ ਪਾਰੀ ਫੈਲੋ, ਇੱਕ ਸੁਤੰਤਰ ਪੱਤਰਕਾਰ, ਇੱਕ ਆਈਸੀਐਫਜੇ ਨਾਈਟ ਫੈਲੋ, ਅਤੇ ਮਨੀਪੁਰ ਦੇ ਮੁਸ਼ਕਲ ਇਤਿਹਾਸ ਅਤੇ ਆਰਮਡ ਫੋਰਸਿਜ਼ ਸਪੈਸ਼ਲ ਪਾਵਰਜ਼ ਐਕਟ ਦੇ ਪ੍ਰਭਾਵ ਬਾਰੇ ਇੱਕ ਕਿਤਾਬ 'ਮਾਂ, ਕਿੱਥੇ ਮੇਰਾ ਦੇਸ਼?' ਦੀ ਲੇਖਿਕਾ ਹਨ।

Other stories by Anubha Bhonsle
Illustration : Priyanka Borar

ਪ੍ਰਿਯੰਗਾ ਬੋਰਾਰ ਨਵੇਂ ਮੀਡਿਆ ਦੀ ਇੱਕ ਕਲਾਕਾਰ ਹਨ ਜੋ ਅਰਥ ਅਤੇ ਪ੍ਰਗਟਾਵੇ ਦੇ ਨਵੇਂ ਰੂਪਾਂ ਦੀ ਖੋਜ ਕਰਨ ਲਈ ਤਕਨੀਕ ਦੇ ਨਾਲ਼ ਪ੍ਰਯੋਗ ਕਰ ਰਹੀ ਹਨ। ਉਹ ਸਿੱਖਣ ਅਤੇ ਖੇਡ ਲਈ ਤਜਰਬਿਆਂ ਨੂੰ ਡਿਜਾਇਨ ਕਰਦੀ ਹਨ, ਇੰਟਰੈਕਟਿਵ ਮੀਡਿਆ ਦੇ ਨਾਲ਼ ਹੱਥ ਅਜਮਾਉਂਦੀ ਹਨ ਅਤੇ ਰਵਾਇਤੀ ਕਲਮ ਅਤੇ ਕਾਗਜ਼ ਦੇ ਨਾਲ਼ ਵੀ ਸਹਿਜ ਮਹਿਸੂਸ ਕਰਦੀ ਹਨ।

Other stories by Priyanka Borar
Editor : Hutokshi Doctor
Series Editor : Sharmila Joshi

ਸ਼ਰਮਿਲਾ ਜੋਸ਼ੀ ਪੀਪਲਸ ਆਰਕਾਈਵ ਆਫ਼ ਰੂਰਲ ਇੰਡੀਆ ਦੀ ਸਾਬਕਾ ਸੰਪਾਦਕ ਹਨ ਅਤੇ ਕਦੇ ਕਦਾਈਂ ਲੇਖਣੀ ਅਤੇ ਪੜ੍ਹਾਉਣ ਦਾ ਕੰਮ ਵੀ ਕਰਦੀ ਹਨ।

Other stories by Sharmila Joshi
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.