ಬೀಸುತ್ತಿರುವ ಚಳಿಗಾಲದ ಗಾಳಿ. ಮಳೆ ರಸ್ತೆಯ ಧೂಳನ್ನು ಕೆಸರಾಗಿ ಪರಿವರ್ತಿಸಿದೆ. ಸಿಂಘುವಿನಲ್ಲಿ ಪ್ರತಿಭಟನಾ ಸ್ಥಳದೆಡೆಗೆ ತೆರೆದುಕೊಂಡಿರುವ ಕಿರಿದಾದ ಹಾದಿಯ ಕೆಲವು ಭಾಗಗಳಲ್ಲಿ ನೀರು ಸಂಗ್ರಹವಾಗಿದೆ. ಜನರು ಒದ್ದೆಯಾದ ಹೊಂಡಗಳ ಮೂಲಕ ನಡೆಯುವುದನ್ನು ತಪ್ಪಿಸಲು ಸಾಧ್ಯವಿಲ್ಲ - ಮತ್ತು ಹಾಗೆ ನಡೆಯುವಾ ಅವರ ಬೂಟುಗಳು ಮತ್ತು ಸ್ಯಾಂಡಲ್‌ಗಳು ಮಣ್ಣಿನಿಂದ ಆವೃತವಾಗುತ್ತವೆ.
ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘು ಪ್ರತಿಭಟನಾ ಸ್ಥಳದಲ್ಲಿರುವ ವಿವಿಧ ರೈತ ಸಂಘಟನೆಗಳ ಸಾಮೂಹಿಕ ಕಿಸಾನ್ ಮೋರ್ಚಾದ ವೇದಿಕೆಯನ್ನು ದಾಟಿದ ನಂತರ ಅವರಿಗೆ ಸ್ವಲ್ಪ ಸಮಾಧಾನವಾಗುತ್ತದೆ. ಯಾಕೆಂದರೆ ಅಲ್ಲಿಂದ ಸುಮಾರು 100 ಮೀಟರ್ ಮುಂದೆ, ಜಸ್ವಿಂದರ್ ಸಿಂಗ್ ಸೈನಿ ಮತ್ತು ಪ್ರಕಾಶ್ ಕೌರ್ ತಮ್ಮ ಸೇವೆಯಲ್ಲಿದ್ದಾರೆ, ಅವರು ಶೂಗಳನ್ನು ಸ್ವಚ್ಛಗೊಳಿಸಿ ಪಾಲಿಶ್ ಮಾಡಿ ಕೊಡುತ್ತಾರೆ.
"1986ರಲ್ಲಿ ದೇವರು ನಮಗೆ ಮಗುವಿನ ರೂಪದಲ್ಲಿ ಆಶೀರ್ವದಿಸಿದ ದಿನ, ನಾನು ನನ್ನ ಬದುಕನ್ನು ಮಾನವೀಯ ಕೆಲಸಗಳಿಗೆ ಅರ್ಪಿಸಲು ನಿರ್ಧರಿಸಿದೆ" ಎಂದು ಕರಕುಶಲ ವಸ್ತುಗಳನ್ನು ರಫ್ತು ಮಾಡುವ ಉದ್ಯಮಿ 62 ವರ್ಷದ ಜಸ್ವಿಂದರ್ ಹೇಳುತ್ತಾರೆ.
ಹೀಗೆ ಸುಮಾರು 35 ವರ್ಷಗಳಿಂದ, ದಂಪತಿಗಳು ಸೇವೆ ಸಲ್ಲಿಸಲು ಗುರುದ್ವಾರಗಳಿಗೆ ಹೋಗುತ್ತಿದ್ದಾರೆ, ವಿಶೇಷವಾಗಿ ಅಲ್ಲಿಗೆ ಬರುವ ಭಕ್ತರ ಬೂಟುಗಳನ್ನು ಸ್ವಚ್ಛಗೊಳಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಈಗ ದೆಹಲಿಯಲ್ಲಿ ವಾಸಿಸುತ್ತಿರುವ ಅವರ ನಾಲ್ಕು ಸದಸ್ಯರ ಕುಟುಂಬ, ಹರಿಯಾಣದ ಅಂಬಾಲಾ ಜಿಲ್ಲೆಯ ನರೈನ್‌ಗಢದಲ್ಲಿ 20 ಎಕರೆ ಭೂಮಿಯನ್ನು ಹೊಂದಿದೆ.
ದಶಕಗಳಿಂದ ಸೇವಾದಾರ್‌ಗಳಾಗಿ (ಗುರುದ್ವಾರಗಳಲ್ಲಿ ಅಥವಾ ಸಮುದಾಯ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸುವ ಸ್ವಯಂಸೇವಕರು) ಸೇವೆ ಸಲ್ಲಿಸುತ್ತಿರುವುದರ ಕುರಿತಾಗಿ ಹೇಳುತ್ತಾ ಅವರು "ನನ್ನ ಪತ್ನಿ, ಸಂಗಾತಿ ಯಾರೂ ಊಹಿಸಲೂ ಸಾಧ್ಯವಿಲ್ಲದಷ್ಟು ಸೇವೆ ಸಲ್ಲಿಸಿದ್ದಾರೆ." ಎಂದು ಹೇಳುತ್ತಾರೆ. ಅವರು ಇದನ್ನು ಹೇಳುತ್ತಿರುವಾಗ ತನ್ನ 50ರ ಹರೆಯದಲ್ಲಿರುವ ಪ್ರಕಾಶ್, ಒಂದು ಜೋಡಿ ಶೂಗಳನ್ನು ಪಾಲಿಶ್ ಮಾಡುವುದರಲ್ಲಿ ಮಗ್ನರಾಗಿದ್ದರು.






