“ಸರ್, ಕೆಲವು ಗಿರಾಕಿಗಳು ಇದ್ದಾರೆ ಅವರನ್ನು ಅಟೆಂಡ್ ಮಾಡ್ಲಾ ಪ್ಲೀಸ್? ನನ್ನ ಇಯರ್ ಪೋನ್ ಆನ್ ಇದೆ ನಿಮ್ಮ ಪಾಠ ಕೇಳಿಸಿಕೊಳ್ತಿರ್ತೀನಿ” ತನ್ನ ತರಕಾರಿ ಗಾಡಿಯಲ್ಲಿ ತರಕಾರಿ ಕೊಳ್ಳಲು ಕಾಯುತ್ತಿರುವ ಗ್ರಾಹಕರನ್ನು ವಿಚಾರಿಸಲು ಫೋನ್‌ನ ಮೈಕ್ ಸ್ವಲ್ಪ ಹೊತ್ತು ಅನ್‌ಮ್ಯೂಟ್ ಮಾಡಿ ಹೀಗೆ ಸಂಕೋಚದಿಂದ ತನ್ನ ಶಿಕ್ಷಕರ ಅನುಮತಿ ಕೇಳುತ್ತಾನೆ ಮುಝಾಪರ್. “ತಾಜೀ… ಸಬ್ಜೀ ಲೇ ಲೋ… [ತಾಜಾ ತರಕಾರಿ ಕೊಳ್ಳಿ..]” ಎಂದು ಇನ್ನೊಮ್ಮೆ ಜೋರಾಗಿ ಕೂಗಿ ಅವನು ಮತ್ತೆ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ನಡೆಯುತ್ತಿರುವ ವಿಜ್ಞಾನದ ತರಗತಿಗೆ ಸೇರಿಕೊಳ್ಳುತ್ತಾನೆ.
ಹೀಗಿತ್ತು ಜೂನ್ 15ರಂದು ಮುಝಾಫರ್ ಶೇಖ್‌ನ ಮೊದಲ ಆನ್‌ಲೈನ್ ತರಗತಿ. “ನನಗೆ ಹಿನ್ನೆಲೆಯಲ್ಲಿ ಟ್ರಾಫಿಕ್ ಸದ್ದು, ಗಿರಾಕಿಗಳ ಚರ್ಚೆ, ವ್ಯಾಪಾರದ ಮಾತು ಸದಾ ಕೇಳಿಸುತ್ತಿರುತ್ತದೆ. ಆನ್‌ಲೈನ್ ಕ್ಲಾಸ್ ಕಡೆ ಗಮನ ಕೊಡುವುದೋ ಅಥವಾ ತರಕಾರಿ ಮಾರುವುದರ ಕಡೆ ಗಮನ ಕೊಡುವುದೋ ಎನ್ನುವುದರ ಕುರಿತು ಗೊಂದಲ ಕಾಡುತ್ತದೆ.” ಎನ್ನುತ್ತಾನೆ 8ನೇ ತರಗತಿಯ ವಿದ್ಯಾರ್ಥಿ, 14 ವರ್ಷದ ಮುಝಾಫರ್. ಅವನು ಈ ಆನ್ಲೈನ್ ತರಗತಿಗೆ ʼಹಾಜರಾಗಿದ್ದುʼ ಬೆಳಿಗ್ಗೆ ಹತ್ತು ಗಂಟೆಗೆ ತನ್ನ ತಳ್ಳುಗಾಡಿಯಲ್ಲಿ ಬದನೆಕಾಯಿ, ಬೀಟ್ರೂಟ್, ಸೌತೆಕಾಯಿ ಮತ್ತು ಕ್ಯಾಬೇಜ್ ಮತ್ತು ಇತರ ತರಕಾರಿಗಳನ್ನು ಮಾರುತ್ತಾ ಜನಸಂದಣಿಯಿಂದ ಕೂಡಿದ ಉತ್ತರ ಮುಂಬೈನ ಮಲಡ್‌ನಲ್ಲಿರುವ ಮಲ್ವಾನಿಯ ಮಾರ್ಕೆಟ್ ಒಂದರಲ್ಲಿ.
ಮುಝಾಫರ್ ತನ್ನ ಬಳಿ ಯಾವುದೇ ಸ್ಮಾರ್ಟ್ ಫೋನ್ ಇಲ್ಲದ ಕಾರಣ ಆನ್ಲೈನ್ ಕ್ಲಾಸ್‌ಗಾಗಿ ತನ್ನ ಗೆಳೆಯನೊಬ್ಬನಿಂದ ಕೆಲವು ಗಂಟೆಗಳ ಮಟ್ಟಿಗೆ ಫೋನ್ ಎರವಲು ಪಡೆದಿದ್ದಾನೆ. “ಇದೇ ಸಮಯಕ್ಕೆ ನನ್ನ ಅಣ್ಣ, ಮುಬಾರಕ್ [9ನೇ ತರಗತಿ ವಿದ್ಯಾರ್ಥಿ] ಅವನ ಫ್ರೆಂಡ್ ಮನೆಯಲ್ಲಿ ಆನ್ಲೈನ್ ತರಗತಿಗೆ ಹಾಜರಾಗಿದ್ದ. ಅಪ್ಪ ಕೆಲಸದಲ್ಲಿದ್ದರು. ನಾನು ಗಾಡಿಯನ್ನು ಮುಚ್ಚಿ ಹೋಗುವುದು ಸಾಧ್ಯವಿರಲಿಲ್ಲ. ಯಾಕೆಂದರೆ ನಾವು ಮೊನ್ನೆ ಜೂನ್ 10ರಿಂದಷ್ಟೇ ಮತ್ತೆ ವ್ಯಾಪಾರ ಮಾಡಲು ಪ್ರಾರಂಭಿಸಿದ್ದೇವೆ” ಎನ್ನುತ್ತಾನೆ.
ಹುಡುಗನ ಅಪ್ಪ ಇಸ್ಲಾಮ್ ಜನವರಿಯಲ್ಲಿ ಗಾಡಿಯನ್ನು ಬಾಡಿಗೆಗೆ ಪಡೆದಿದ್ದಾರೆ. ಕುಟುಂಬದ ಖರ್ಚು ಹೆಚ್ಚುತ್ತಿದ್ದಿದ್ದರಿಂದ ಅವರು ಇನ್ನೊಂದು ಆದಾಯ ಮೂಲವನ್ನು ಹುಡುಕಿಕೊಳ್ಳಲೇಬೇಕಿತ್ತು. 40 ವರ್ಷದ ಇಸ್ಲಾಮ್ ಟ್ರಕ್ ಡ್ರೈವರ್ ಒಬ್ಬರ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಆದರೆ ಬಹಳ ಕಡಿಮೆ ಸಂಬಳದ ಕಾರಣ ಆ ಕೆಲಸವನ್ನು ಬಿಟ್ಟುಬಿಟ್ಟಿದ್ದರು. (ಆದರೆ ಜೂನ್ ನಂತರ ಮತ್ತೆ ಸೇರಿಕೊಂಡರು) ಹುಡುಗನ ಅಮ್ಮ ಹೇರ್‌ಕ್ಲಿಪ್ ತಯಾರಿಸುತ್ತಾರೆ ಮತ್ತು ಗೌನ್‌ಗಳನ್ನು ಹೊಲಿಯುತ್ತಾರೆ. ಇವರ ಏಳು ಸದಸ್ಯರ ಕುಟುಂಬದಲ್ಲಿ ಎರಡು ವರ್ಷದ ಹಸ್ನೈನ್, ಎರಡು ಹೆಣ್ಣು ಮಕ್ಕಳಾದ 7ನೇ ತರಗತಿ ಓದುತ್ತಿರುವ 13 ವರ್ಷದ ಫರ್ಝಾನ 6ನೇ ತರಗತಿ ಓದುತ್ತಿರುವ 12 ವರ್ಷದ ಅಫ್ಸಾನ ಇದ್ದಾರೆ.
ಆದರೆ ಗಾಡಿಯನ್ನು ಬಾಡಿಗೆಗೆ ಪಡೆದ ಎರಡು ತಿಂಗಳಿನಲ್ಲಿ ಕೊವಿಡ್-19 ಕಾರಣದಿಂದಾಗಿ ಕುಟುಂಬದ ಹೊಸ ತರಕಾರಿ ವ್ಯವಹಾರವನ್ನು ನಿಲ್ಲಿಸಬೇಕಾಗಿ ಬಂತು. “ಮೊದಲು ಗಾಡಿಯನ್ನು ಅಪ್ಪ ನೋಡಿಕೊಳ್ಳುತ್ತಿದ್ದರು,” ಎಂದು ಮುಝಾಫರ್ ಹೇಳುತ್ತಾನೆ. ಆಗ ಅವನು ಮತ್ತು ಅವನ ಅಣ್ಣ ಮುಬಾರಕ್ ಬೆಳಿಗ್ಗೆ 7ರಿಂದ ಮಧ್ಯಾಹ್ನದ ತನಕ ಶಾಲೆಗೆ ಹೋಗುತ್ತಿದ್ದರು. ಶಾಲೆಯಿಂದ ಬಂದ ನಂತರ ಅಣ್ಣ ತಮ್ಮಂದಿರಿಬ್ಬರೂ ಅಪ್ಪನಿಗೆ ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದರು.










