2019ರಲ್ಲಿ ಪಾರುವನ್ನು ಕುರಿ ಮೇಯಿಸುವ ಕೆಲಸಕ್ಕೆ ಕಳುಹಿಸಲು ಆಕೆಯ ತಂದೆ ತೀರ್ಮಾನಿಸಿದಾಗ ಆಕೆಗೆ ಕೇವಲ ಏಳು ವರ್ಷ ವಯಸ್ಸಾಗಿತ್ತು.
ಇದಾಗಿ ಮೂರು ವರ್ಷಗಳ ನಂತರ, ಆಗಸ್ಟ್ 2022ರ ಕೊನೆಯಲ್ಲಿ, ಅವಳ ಪೋಷಕರು ಅವಳನ್ನು ತಮ್ಮ ಗುಡಿಸಲಿನ ಹೊರಗೆ ನೋಡಿದರು. ಅಲ್ಲಿ ಅವಳನ್ನು ಕಂಬಳಿ ಸುತ್ತಿ ಮಲಗಿಸಲಾಗಿತ್ತು. ಕುತ್ತಿಗೆಯ ಮೇಲೆ ಕತ್ತು ಹಿಸುಕಿದ ಗುರುತುಗಳಿದ್ದವು.
"ಅವಳು ತನ್ನ ಕೊನೆಯ ಉಸಿರು ಇರುವವರೆಗೂ ಒಂದು ಮಾತನ್ನೂ ಆಡಲಿಲ್ಲ. ಏನಾಯಿತು ಎಂದು ನಾವು ಅವಳನ್ನು ಕೇಳಲು ಪ್ರಯತ್ನಿಸಿದೆವು, ಆದರೆ ಅವಳಿಗೆ ಮಾತನಾಡಲು ಸಾಧ್ಯವಾಗಲಿಲ್ಲ," ಎಂದು ಪಾರುವಿನ ತಾಯಿ ಸವಿತಾಬಾಯಿ ಕಣ್ಣೀರು ಒರೆಸಿಕೊಳ್ಳುತ್ತಾ ಹೇಳಿದರು. "ನಮಗೆ ಯಾರೋ ಅವಳ ಮೇಲೆ ಮಾಟ ಮಾಡಿಸಿರಬಹುದೆನ್ನಿಸಿತು. ಹೀಗಾಗಿ ನಾವು ಅವಳನ್ನು ಹತ್ತಿರದ ಮೋರಾ ಬೆಟ್ಟಗಳ ಸಾಲಿನಲ್ಲಿರುವ (ಮುಂಬೈ-ನಾಸಿಕ್ ಹೆದ್ದಾರಿಯಿಂದ) ದೇವಾಲಯಕ್ಕೆ ಕರೆದೊಯ್ದೆವು. ಪುರೋಹಿತನು ಅಂಗಾರ (ಪವಿತ್ರ ಬೂದಿ) ಹಚ್ಚಿದನು. ಅವಳಿಗೆ ಪ್ರಜ್ಞೆ ಮರಳಬಹುದೆಂದು ನಾವು ಕಾಯುತ್ತಲೇ ಇದ್ದೆವು, ಆದರೆ ಆ ಸಮಯ ಬರಲಿಲ್ಲ," ಎಂದು ಸವಿತಾಬಾಯಿ ನೆನಪಿಸಿಕೊಂಡರು. ಆಕೆ ಪತ್ತೆಯಾದ ಐದು ದಿನಗಳ ನಂತರ, ಸೆಪ್ಟೆಂಬರ್ 2, 2022ರಂದು, ಪಾರು ನಾಸಿಕ್ ನಗರದ ಸಿವಿಲ್ ಆಸ್ಪತ್ರೆಯಲ್ಲಿ ತನಗಾದ ಗಾಯಗಳಿಂದ ನಿಧನ ಹೊಂದಿದಳು.
ಪಾರು ತಾನು ಮನೆಯಿಂದ ದೂರವಿದ್ದ ಮೂರು ವರ್ಷಗಳಲ್ಲಿ ಒಮ್ಮೆ ಮಾತ್ರ ಅವಳ ಕುಟುಂಬವನ್ನು ಭೇಟಿಯಾಗಿದ್ದಳು. ಒಂದೂವರೆ ವರ್ಷದ ಹಿಂದೆ ಅವಳನ್ನು ಕೆಲಸಕ್ಕೆ ಕರೆದೊಯ್ದ ಅದೇ ಮಧ್ಯವರ್ತಿ ಅವಳನ್ನು ಮನೆಗೆ ಕರೆತಂದಿದ್ದನು. "ಅವಳು ಏಳರಿಂದ ಎಂಟು ದಿನಗಳ ಕಾಲ ನಮ್ಮೊಂದಿಗೆ ಇದ್ದಳು. ಎಂಟನೇ ದಿನದ ನಂತರ, ಅವನು ಬಂದು ಅವಳನ್ನು ಮತ್ತೆ ಕರೆದೊಯ್ದನು," ಎಂದು ಪಾರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಮರುದಿನವೇ ಸವಿತಾಬಾಯಿ ಮಧ್ಯವರ್ತಿಯ ವಿರುದ್ಧ ದಾಖಲಿಸಿರುವ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.











