ಹೆರಿಗೆ ನೋವು ಪ್ರಾರಂಭವಾದಾಗ, 23 ವರ್ಷದ ರಾನೋ ಸಿಂಗ್, ಅವರ ಪತಿ ಮತ್ತು ಅತ್ತೆ ಪರ್ವತದ ಬದಿಯಲ್ಲಿರುವ ತಮ್ಮ ಪುಟ್ಟ ಮನೆಯಿಂದ ಅವಸರದಿಂದ ಹೊರಟರು. ಆಗ ಬೆಳಿಗ್ಗೆ ಸುಮಾರು 5 ಗಂಟೆ. ಅವರ ಮುಂದೆ 1.5 ಕಿಲೋಮೀಟರ್ ಕಡಿದಾದ ಗುಡ್ಡವಿದ್ದು, ಅದು ಅವರನ್ನು ಮುಖ್ಯ ರಸ್ತೆಗೆ ಕರೆದೊಯ್ಯುತ್ತದೆ, ಅಲ್ಲಿ ಬಾಡಿಗೆ ಕಾರೊಂದು ತಮ್ಮ ಗ್ರಾಮವಾದ ಸಿವಾಲಿಯಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ರಾಣಿಖೇತ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಕಾಯುತ್ತಿತ್ತು.
ಅವರು ಡೋಲಿ (ಪಲ್ಲಕ್ಕಿ) ವ್ಯವಸ್ಥೆ ಮಾಡಲು ಪ್ರಯತ್ನಿಸಿದ್ದರು-ಇಲ್ಲಿನ ಠಾಕೂರ್ ಸಮುದಾಯದ ಗರ್ಭಿಣಿಯರನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು, ಪರ್ವತದ ಹಾದಿಯಲ್ಲಿ ಸಾಗಿಸಲಾಗುತ್ತದೆ, ಇದನ್ನು ನಾಲ್ಕು ಮೂಲೆಗಳಿಂದ ಪುರುಷರು ಎತ್ತಿಕೊಳ್ಳುತ್ತಾರೆ. ಡೋಲಿ ಸಾಮಾನ್ಯವಾಗಿ ಆಸ್ಪತ್ರೆಗೆ ಕರೆದೊಯ್ಯುವ ವಾಹನವಿರುವಲ್ಲಿಗೆ ಕರೆದೊಯ್ಯುತ್ತದೆ. ಆದರೆ ಆ ಬೆಳಿಗ್ಗೆ ಯಾವುದೇ ಡೋಲಿ ಲಭ್ಯವಿರಲಿಲ್ಲ, ಆದ್ದರಿಂದ ಅವರು ನಡೆಯಲು ಪ್ರಾರಂಭಿಸಿದರು.
ರಾನೋ ಕಾಲ್ನಡಿಗೆಯಲ್ಲಿ ಅರ್ಧದಷ್ಟು ದಾರಿಯನ್ನು ಮಾತ್ರ ನಡೆಯಲು ಸಾಧ್ಯವಾಯಿತು. "[ನೋವಿನಿಂದಾಗಿ] ನನಗೆ ನಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಯುವ ಹೊತ್ತಿಗೆ ನಾವು ಅರ್ಧದಷ್ಟು ದೂರವನ್ನೂ ಕ್ರಮಿಸಲು ಸಾಧ್ಯವಾಗಲಿಲ್ಲ. ನಾನು ನಡೆಯುವುದನ್ನು ನಿಲ್ಲಿಸಿ ರಸ್ತೆಯಲ್ಲಿ ಕುಳಿತ ಕೂಡಲೇ, ನನ್ನ ಗಂಡನಿಗೆ ಅರ್ಥವಾಯಿತು ಮತ್ತು ಆತುರದಿಂದ ಹತ್ತಿರದ ಕುಟುಂಬದ ಬಳಿ ಓಡಿದರು. ಅವರು ನಮ್ಮ ಪರಿಚಯದವರು, ಮತ್ತು ಚಾಚಿ 10 ನಿಮಿಷಗಳಲ್ಲಿ ಸ್ವಲ್ಪ ನೀರು ಮತ್ತು ಶೀಟ್‌ನೊಂದಿಗೆ ಬಂದರು. ಮತ್ತು ನನ್ನ ಅತ್ತೆ ಮತ್ತು ಚಾಚಿಯ ಸಹಾಯದಿಂದ ನಾನು ಅಲ್ಲಿ ಮಗುವಿಗೆ ಜನ್ಮ ನೀಡಿದೆ. "(ರಾನೋ ಅವರ ಪತಿಗೆ 34 ವರ್ಷ ಮತ್ತು ಪಡಿತರ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುವ ಮೂಲಕ ತಿಂಗಳಿಗೆ 8,000 ರೂ. ಗಳಿಸುತ್ತಾರೆ, ಇದು ಮೂರು ವಯಸ್ಕರು ಮತ್ತು ಒಂದು ಮಗುವಿನ ಕುಟುಂಬಕ್ಕೆ ಇರುವ ಏಕೈಕ ಆದಾಯವಾಗಿದೆ; ಅವರು ಹೆಸರು ಹೇಳಲು ಇಚ್ಛಿಸಲಿಲ್ಲ.)
"ನನ್ನ ಮಗ [ಜಗತ್] ಈ ಕಾಡಿನಲ್ಲಿ ಅರ್ಧದಾರಿಯಲ್ಲೇ ಜನಿಸಿದನು" ಎಂದು ಅವರು ಹೇಳುತ್ತಾರೆ. ಮರಗಳಿಂದ ಆವೃತವಾದ ಕಾಡಿನಲ್ಲಿ ಕಿರಿದಾದ ಹಾದಿಯಲ್ಲಿನ ಹೆರಿಗೆಯ ನೆನಪುಗಳು ಇನ್ನೂ ಅವರನ್ನು ಕಾಡುತ್ತಿವೆ. “ನನ್ನ ಮಗು ಆ ರೀತಿ ಜನಿಸುತ್ತದೆ ಎಂದು ನಾನು ಎಂದೂ ಭಾವಿಸಿರಲಿಲ್ಲ. ಇಂದಿಗೂ, ನೀವು ಅದರ ಬಗ್ಗೆ ಯೋಚಿಸಿದರೆ, ಮೈನವಿರೇಳುತ್ತದೆ. ಆದರೆ ದೇವರ ಅನುಗ್ರಹದಿಂದ, ನನ್ನ ಮಗು ಸುರಕ್ಷಿತವಾಗಿತ್ತು. ಮತ್ತು ಅದು ಅತ್ಯಂತ ಮುಖ್ಯವಾದ ವಿಷಯ.”
ಆ ಫೆಬ್ರವರಿ 2020ರ ಬೆಳಿಗ್ಗೆ, ಜಗತ್ ಜನಿಸಿದ ಕೂಡಲೇ, ರಾನೋ ತನ್ನ ಅತ್ತೆ, 58 ವರ್ಷದ ಪ್ರತಿಮಾ ಸಿಂಗ್ ಅವರೊಂದಿಗೆ, ಮಗುವನ್ನು ಎತ್ತಿಕೊಂಡು ತನ್ನ ಮನೆಗೆ ಹಿಂದಿರುಗಿದರು.










