ರಮೇಶ್ ಶರ್ಮಾ ಅವರಿಗೆ ಕೊನೆಯ ಬಾರಿಗೆ ಪೂರ್ಣ ವರ್ಷವನ್ನು ತಮ್ಮ ಮನೆಯಲ್ಲಿ ಕಳೆದಿದ್ದು ಯಾವಾಗಲೆನ್ನುವುದು ಮರೆತೇ ಹೋಗಿದೆ. "ನಾನು ಕಳೆದ 15-20 ವರ್ಷಗಳಿಂದ ಹೀಗೇ ಮಾಡುತ್ತಿದ್ದೇನೆ" ಎಂದು ಹರಿಯಾಣದ ಕರ್ನಾಲ್ ಜಿಲ್ಲೆಯ ಗಗಾಸಿನಾ ಗ್ರಾಮದಲ್ಲಿರುವ ಹೊಲವೊಂದರಲ್ಲಿ ಕಬ್ಬು ಕಟಾವು ಮಾಡುತ್ತಾ ಹೇಳುತ್ತಾರೆ.

ವರ್ಷದ ಆರು ತಿಂಗಳುಗಳು - ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ - 44 ವರ್ಷದ ರಮೇಶ್ ತನ್ನ ಗ್ರಾಮವಾದ ಬಿಹಾರದ ಅರೇರಿಯಾ ಜಿಲ್ಲೆಯ ಶೋಯಿರ್‌ಗಾಂವ್‌ನಿಂದ ಹರಿಯಾಣ ಮತ್ತು ಪಂಜಾಬ್‌ಗೆ ವಲಸೆ ಬಂದು ಅಲ್ಲಿ ಕೃಷಿ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ. "ನಾನು ಬಿಹಾರದಲ್ಲಿ ಬೇಸಾಯದಲ್ಲಿ ಸಂಪಾದಿಸುವುದಕ್ಕಿಂತ ಹರಿಯಾಣದಲ್ಲಿ ಕೃಷಿ ಕಾರ್ಮಿಕನಾಗಿ ಕೆಲಸ ಮಾಡುವ ಮೂಲಕವೇ ಹೆಚ್ಚು ಹಣವನ್ನು ಗಳಿಸುತ್ತೇನೆ" ಎಂದು ಅವರು ಹೇಳುತ್ತಾರೆ.

ರಮೇಶ್ ಅವರು ಶೋಯಿರ್‌ಗಾಂವ್‌ನಲ್ಲಿ ಮೂರು ಎಕರೆ ಭೂಮಿಯನ್ನು ಹೊಂದಿದ್ದು, ಅದರಲ್ಲಿ ಅವರು ವರ್ಷದ ಆರು ತಿಂಗಳು ಬೇಸಾಯ ಮಾಡುತ್ತಾರೆ. ಅವರು ಖಾರಿಫ್ ಋತುವಿನಲ್ಲಿ (ಜೂನ್ - ನವೆಂಬರ್) ಭತ್ತವನ್ನು ಬೆಳೆಯುತ್ತಾರೆ. ಕಟಾವು ಮಾಡುತ್ತಿದ್ದ ಕಬ್ಬಿನಿಂದ ಕಣ್ಣು ಕೀಲಿಸದೆ "ಬೆಳೆದಿದ್ದರಲ್ಲಿ ಹೆಚ್ಚಿನದು ಮನೆ ಬಳಕೆಗೇ ಬೇಕಾಗುತ್ತದೆ" ಎನ್ನುತ್ತಾರೆ ರಮೇಶ್.

ಶರ್ಮಾರ ವರ್ಷದ ಪ್ರಮುಖ ನಗದು ಬೆಳೆ ಮೆಕ್ಕೆಜೋಳ, ಅವರು ಇದನ್ನು ರಬಿ ಋತುವಿನಲ್ಲಿ (ಡಿಸೆಂಬರ್-ಮಾರ್ಚ್) ಬೆಳೆಯುತ್ತಾರೆ. ಆದರೆ ಅವರು ಈ ಬೆಳೆಯಿಂದ ಅವರಿಗೆ ಹೆಚ್ಚು ಹಣ ದೊರೆಯುವುದಿಲ್ಲ. "ಕಳೆದ ವರ್ಷ [2020] ಕ್ವಿಂಟಾಲ್ ಒಂದಕ್ಕೆ 900 ರೂಗಳಂತೆ ಮಾರಾಟ ಮಾಡಿದ್ದೇನೆ" ಎಂದು ಅವರು ಹೇಳಿದರು. 60 ಕ್ವಿಂಟಾಲ್ ಮೆಕ್ಕೆಜೋಳ ಕೊಯ್ಲು ಮಾಡಿದ ನಂತರ “ಕಮಿಷನ್ ಏಜೆಂಟ್ ಬಂದು ಅದನ್ನು ನಮ್ಮಿಂದ ಊರಿನಲ್ಲಿಯೇ ಖರೀದಿಸಿದರು. ಇದು ವರ್ಷಗಳಿಂದ ನಡೆಯುತ್ತಿದೆ."

ರಮೇಶ್ ತನ್ನ ಫಸಲಿಗೆ ಪಡೆದ ಬೆಲೆ 2019-20ರಲ್ಲಿ ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗಿಂತ ಸುಮಾರು 50 ಪ್ರತಿಶತ ಕಡಿಮೆಯಾಗಿದೆ - 2019-20ರಲ್ಲಿ ಪ್ರತಿ ಕ್ವಿಂಟಲ್‌ಗೆ 1,760 ರೂ ನಿಗದಿಪಡಿಸಲಾಗಿದೆ. ಬಿಹಾರದಲ್ಲಿ ಸರ್ಕಾರಿ ನಿಯಂತ್ರಿತ ಮಂಡಿಗಳಲ್ಲಿ ಎಂಎಸ್‌ಪಿಯಲ್ಲಿ ಮಾರಾಟ ಮಾಡುವ ಆಯ್ಕೆ ಅಲ್ಲಿನ ರೈತರಿಗಿಲ್ಲ, ಆದ್ದರಿಂದ ಶರ್ಮಾ ಅವರಂತಹ ಸಣ್ಣ ರೈತರು ನೇರವಾಗಿ ಕಮಿಷನ್ ಏಜೆಂಟರೊಂದಿಗೆ ವ್ಯವಹಾರ ನಡೆಸಬೇಕಾಗುತ್ತದೆ.

2006ರಲ್ಲಿ, ಬಿಹಾರದ ರಾಜ್ಯ ಸರ್ಕಾರವು ಬಿಹಾರ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ 1960 ಅನ್ನು ರದ್ದುಗೊಳಿಸಿತು. ಇದರೊಂದಿಗೆ ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಂಡಿ ವ್ಯವಸ್ಥೆಯನ್ನೂ ರದ್ದುಪಡಿಸಲಾಯಿತು. ಈ ಕ್ರಮವು ರೈತರಿಗೆ ಖಾಸಗಿ ಒಡೆತನದ ವಾಣಿಜ್ಯ ವ್ಯವಹಾರ ಪ್ರದೇಶಗಳಿಗೆ ಪ್ರವೇಶ ನೀಡುವ ಮೂಲಕ ಕೃಷಿ ಕ್ಷೇತ್ರವನ್ನು ಉದಾರೀಕರಣಗೊಳಿಸುತ್ತದೆ ಎಂದು ಹೇಳಿಕೊಂಡಿತ್ತು. ಆದರೆ ಎಪಿಎಂಸಿಯನ್ನು ರದ್ದುಪಡಿಸಿದ್ದರಿಂದಾಗಿ ಮಧ್ಯವರ್ತಿಗಳು ಮತ್ತು ವ್ಯಾಪಾರಿಗಳು ನಿಗದಿಪಡಿಸಿದ ಬೆಲೆಗಳ ಮೇಲೆ ಹೆಚ್ಚು ಅವಲಂಬಿತರಾದ ಬಿಹಾರದ ರೈತರಿಗೆ ಅದರಿಂದ ಉತ್ತಮ ಲಾಭ ದೊರೆಯಲಿಲ್ಲ.

Ramesh Sharma makes more money as a farm labourer in Haryana than he does cultivating his land in Bihar's Shoirgaon village
PHOTO • Parth M.N.
Ramesh Sharma makes more money as a farm labourer in Haryana than he does cultivating his land in Bihar's Shoirgaon village
PHOTO • Parth M.N.

ರಮೇಶ್ ಶರ್ಮಾ ಅವರು ಬಿಹಾರದ ಶೋಯಿರ್‌ಗಾಂವ್‌ನಲ್ಲಿ ತಮ್ಮ ಭೂಮಿಯಲ್ಲಿ ಬೇಸಾಯ ಮಾಡಿ ಸಂಪಾದಿಸುವುದಕ್ಕಿಂತ ಹೆಚ್ಚಿನ ಹಣವನ್ನು ಹರಿಯಾಣದಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುವ ಮೂಲಕ ಗಳಿಸುತ್ತಾರೆ

ಈಶಾನ್ಯ ಬಿಹಾರದಲ್ಲಿ ಭತ್ತ ಮತ್ತು ಗೋಧಿಯ ಜೊತೆಗೆ, ಮೆಕ್ಕೆ ಜೋಳವು ಒಂದು ಪ್ರಮುಖ ಧಾನ್ಯ ಬೆಳೆಯಾಗಿದೆ, ಇದನ್ನು ಭಾರತದ ಹೆಚ್ಚಿನ ಭಾಗಗಳಿಗಿಂತ ಭಿನ್ನವಾಗಿ ಈ ಪ್ರದೇಶದಲ್ಲಿ ಚಳಿಗಾಲದಲ್ಲಿ ಬೆಳೆಯಲಾಗುತ್ತದೆ. ನವದೆಹಲಿಯ ಮೆಕ್ಕೆ ಜೋಳದ ಸಂಶೋಧನಾ ನಿರ್ದೇಶನಾಲಯದ ವರದಿಯ ಪ್ರಕಾರ, ಈ ಪ್ರದೇಶದಲ್ಲಿ ರಬಿ ಋತುವಿನಲ್ಲಿ ಬೆಳೆದ ಮೆಕ್ಕೆಜೋಳವು ಖಾರಿಫ್ ಋತುವಿನ ಬೆಳೆಗಿಂತಲೂ ಉತ್ತಮವಾಗಿದೆ. ವರದಿಯೊಂದರ ಪ್ರಕಾರ, ಈ ಚಳಿಗಾಲದ ಬೆಳೆ ಮೆಕ್ಕೆಜೋಳದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ಮೇವು ಮತ್ತು ಕೈಗಾರಿಕಾ ಬಳಕೆಗಾಗಿ.

ಹವಾಮಾನ ಅನುಕೂಲಕರವಾಗಿದ್ದಾಗ, ರಮೇಶ್‌ ತಮ್ಮ ಪ್ರತಿ ಎಕರೆ ಭೂಮಿಯಲ್ಲಿ ಸುಮಾರು 20 ಕ್ವಿಂಟಾಲ್ ಮೆಕ್ಕೆ ಜೋಳವನ್ನು ಕೊಯ್ಲು ಮಾಡುತ್ತಾರೆ. ಅವರ ಶ್ರಮವನ್ನು ಹೊರತುಪಡಿಸಿ ಎಕರೆಗೆ 10,000 ರೂ. ಖರ್ಚು ಬರುತ್ತದೆ. "ಈ ಖರ್ಚು ಬೀಜಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳ ವೆಚ್ಚವನ್ನು ಮಾತ್ರ ಒಳಗೊಳ್ಳುತ್ತದೆ" ಎಂದು ಅವರು ಹೇಳುತ್ತಾರೆ. "ನಾಲ್ಕು ತಿಂಗಳ ಕಠಿಣ ಪರಿಶ್ರಮದ ನಂತರ ಬೆಳೆಯನ್ನು ಪ್ರತಿ ಕ್ವಿಂಟಲ್‌ಗೆ 900 ರೂಪಾಯಿಗಳಂತೆ ಖರೀದಿ ಮಾಡುತ್ತಾರೆ. ಎಕರೆಗೆ ಹದಿನೆಂಟು ಸಾವಿರ ಸಿಗುತ್ತದೆ, ಅದು ಯಾವುದಕ್ಕೂ ಸಾಲುವುದಿಲ್ಲ."

ಒಂದು ವೇಳೆ ಅವರಿಗೆ ಕನಿಷ್ಟ ಬೆಂಬಲ ಬೆಲೆಯ ಸೌಕರ್ಯ ದೊರಕಿದ್ದರೆ ಅವರು ಎಕರೆಗೆ 35,200 ರೂಗಳನ್ನು ಸಂಪಾದಿಸಬಹುದಿತ್ತು. ಆದರೆ ಕಳೆದ ವರ್ಷ ಎಂಎಸ್‌ಪಿಗಿಂತ ಕಡಿಮೆ ದರದಲ್ಲಿ ರಮೇಶ್ ಮೆಕ್ಕೆಜೋಳವನ್ನು ಕ್ವಿಂಟಲ್‌ಗೆ 860 ರೂಪಾಯಿಗಳಿಗೆ ಮಾರಾಟ ಮಾಡುವ ಮೂಲಕ ಎಕರೆಗೆ 17,200 ರೂಗಳನ್ನಷ್ಟೇ ಸಂಪಾದಿಸಲು ಸಾಧ್ಯವಾಯಿತು. "ನಾನು ಏನು ಮಾಡಲಿ? ನಮಗೆ ಬೇರೆ ಆಯ್ಕೆಗಳಿಲ್ಲ. ದಲ್ಲಾಳಿ ಬೆಲೆಯನ್ನು ನಿಗದಿಪಡಿಸುತ್ತಾನೆ. ನಾವದನ್ನು ಒಪ್ಪಿಕೊಳ್ಳಬೇಕು."

ಅರೇರಿಯಾದ ಕುರ್ಸಕಟ್ಟಾ ಬ್ಲಾಕ್‌ನಲ್ಲಿರುವ ಶೋಯಿರ್‌ಗಾಂವ್ ಗ್ರಾಮವು ನೆರೆಯ ಪೂರ್ಣಿಯಾ ಜಿಲ್ಲೆಯ ಗುಲಾಬ್ ಬಾಗ್ ಮಂಡಿಯಿಂದ 60 ಕಿಲೋಮೀಟರ್ ದೂರದಲ್ಲಿದೆ. ಆ ಮಾರುಕಟ್ಟೆಯು ಮೆಕ್ಕೆಜೋಳ ಖರೀದಿಯ ಪ್ರಮುಖ ಕೇಂದ್ರವಾಗಿದೆ. “ಎಪಿಎಂಸಿ ಕಾಯ್ದೆ ರದ್ದುಗೊಂಡ ನಂತರ ಮಂಡಿಯನ್ನು ಸಂಪೂರ್ಣವಾಗಿ ಖಾಸಗಿ ವ್ಯಾಪಾರಿಗಳು ನಡೆಸುತ್ತಿದ್ದಾರೆ. ಈಗ, ಪೂರ್ಣಿಯಾ ಮತ್ತು ಹತ್ತಿರದ ಜಿಲ್ಲೆಗಳ ರೈತರು ತಮ್ಮ ಮೆಕ್ಕೆಜೋಳದ ಫಸಲನ್ನು ಮಂಡಿ ಮತ್ತು ಸುತ್ತಮುತ್ತಲಿನ ಕಮಿಷನ್ ಏಜೆಂಟರಿಗೆ ಮಾರಾಟ ಮಾಡುತ್ತಾರೆ”‌ ಎಂದು ಪೂರ್ಣಿಯಾದ ಅಖಿಲ ಭಾರತೀಯ ಕಿಸಾನ್ ಮಹಾಸಭಾ [ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನಿಸ್ಟ್) ಲಿಬರೇಷನ್ ಇದರ ಅಂಗಸಂಸ್ಥೆ ]. ಜಿಲ್ಲಾಧ್ಯಕ್ಷ ಮೊಹಮ್ಮದ್ ಇಸ್ಲಾಮುದ್ದೀನ್ ಹೇಳುತ್ತಾರೆ.

ಗುಲಾಬ್ ಬಾಗ್ ಮಾರುಕಟ್ಟೆಯು ಈ ಪ್ರದೇಶದ ಮೆಕ್ಕೆಜೋಳದ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಇಸ್ಲಾಮುದ್ದೀನ್ ಹೇಳುತ್ತಾರೆ. "ಖಾಸಗಿ ವ್ಯಾಪಾರಿಗಳು ಅವರದೇ ಆದ ದರವನ್ನು ನಿಗದಿಪಡಿಸುತ್ತಾರೆ. ಈ ವ್ಯಾಪಾರಿಗಳು, ಬೆಳೆ ತೂಗುವಾಗ, ರೈತ ಬೆಳೆದ ಬೆಳೆಯ ತೂಕವನ್ನು ಕಡಿಮೆ ಅಂದಾಜು ಮಾಡುತ್ತಾರೆ. ರೈತರು ಈ ಕುರಿತು ಹೆಚ್ಚೇನು ಮಾಡಲು ಸಾಧ್ಯವಿಲ್ಲ ಏಕೆಂದರೆ ಅವರಿಗೆ ತಮ್ಮ ಬೆಳೆಯನ್ನು ಮಾರಾಟ ಮಾಡಲು ಬೇರೆಡೆ ಹೋಗಲು ಸಾಧ್ಯವಿಲ್ಲ."

ಇದಲ್ಲದೆ, ದೊಡ್ಡ ರೈತರು ಹೆಚ್ಚು ಸುಲಭವಾಗಿ ಗುಲಾಬ್‌ಬಾಗ್ ತಲುಪಬಹುದು, ಏಕೆಂದರೆ ಅವರು ಸಾಮಾನ್ಯವಾಗಿ ತಮ್ಮದೇ ಆದ ಟ್ರಾಕ್ಟರುಗಳನ್ನು ಹೊಂದಿರುತ್ತಾರೆ, ಅದರಲ್ಲಿ ಅವರು ತಮ್ಮ ಹೆಚ್ಚಿನ ಬೆಳೆಗಳನ್ನು ಸಾಗಿಸಬಹುದು. "ಸಣ್ಣ ರೈತರು ತಮ್ಮ ಬೆಳೆಯನ್ನು ಹಳ್ಳಿಯ ಕಮಿಷನ್ ಏಜೆಂಟರಿಗೆ ಮಾರುತ್ತಾರೆ, ಅವರು ಹಳ್ಳಿಯಲ್ಲಿ ಬೆಳೆಗಳನ್ನು ಬಹಳ ಕಡಿಮೆ ದರದಲ್ಲಿ ಖರೀದಿಸಿ ನಂತರ ಗುಲಾಬ್‌ಬಾಗ್‌ಗೆ ತರುತ್ತಾರೆ" ಎಂದು ಇಸ್ಲಾಮುದ್ದೀನ್ ಹೇಳುತ್ತಾರೆ.

Farmer Rajmahal Mandal from Bihar's Barhuwa village cuts sugarcane in Gagsina village, Haryana, to earn more and take care of his family
PHOTO • Parth M.N.
Farmer Rajmahal Mandal from Bihar's Barhuwa village cuts sugarcane in Gagsina village, Haryana, to earn more and take care of his family
PHOTO • Parth M.N.

ತಮ್ಮ ಕುಟುಂಬ ಪೋಷಣೆಗಾಗಿ ಹೆಚ್ಚಿನ ಹಣವನ್ನು ಸಂಪಾದಿಸಲೆಂದು ಬಿಹಾರದ ಬಧುವಾ ಗ್ರಾಮದ ರೈತರು, ರಾಜಮಹಲ್ ಮಂಡಲ್ ಹರಿಯಾಣದ ಗಗಸಿನಾ ಗ್ರಾಮದಲ್ಲಿ ಕಬ್ಬನ್ನು ಕಟಾವು ಮಾಡುವ ಕೆಲಸಕ್ಕೆ ಹೋಗುತ್ತಾರೆ.

2019ರಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (ಎನ್‌ಸಿಎಇಆರ್) ಪ್ರಕಟಿಸಿದ ಬಿಹಾರದ ಕೃಷಿ ಸಮಸ್ಯೆಗಳ ಅಧ್ಯಯನ ವರದಿಯಲ್ಲಿ ಬಿಹಾರದಲ್ಲಿ ಶೇ. 90ರಷ್ಟು ಬೆಳೆಗಳನ್ನು ಗ್ರಾಮದೊಳಗಿನ ಕಮಿಷನ್ ಏಜೆಂಟರು ಮತ್ತು ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು ಹೇಳಿದೆ. "2006ರಲ್ಲಿ ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸಿದರೂ, ಹೊಸ ಮಾರುಕಟ್ಟೆಗಳನ್ನು ನಿರ್ಮಿಸಲು ಮತ್ತು ಅಸ್ತಿತ್ವದಲ್ಲಿರುವ ಮಾರುಕಟ್ಟೆಗಳಲ್ಲಿ ಸೌಲಭ್ಯಗಳನ್ನು ಬಲಪಡಿಸಲು ಬಿಹಾರದಲ್ಲಿ ಖಾಸಗಿ ಹೂಡಿಕೆ ಹರಿದು ಬಂದಿಲ್ಲ, ಇದು ಮಾರುಕಟ್ಟೆ ಸಾಂದ್ರತೆ ಕಡಿಮೆಯಾಗಲು ಕಾರಣವಾಯಿತು" ಎಂದು ವರದಿ ಹೇಳುತ್ತದೆ.

ಭತ್ತ ಮತ್ತು ಗೋಧಿ - ಬಿಹಾರದ ಇತರ ಎರಡು ಪ್ರಮುಖ ಬೆಳೆಗಳು - ಸಣ್ಣ ರೈತರು ಇವುಗಳಿಗೂ ಕನಿಷ್ಟ ಬೆಂಬಲ ಬೆಲೆಗಳಿಗಿಂತಲೂ ಬಹಳ ಕಡಿಮೆ ಬೆಲೆಯನ್ನು ಪಡೆಯುತ್ತಾರೆ.

ಕೇಂದ್ರ ಸರ್ಕಾರವು ಸೆಪ್ಟೆಂಬರ್ 2020ರಲ್ಲಿ ಪರಿಚಯಿಸಿದ ಮೂರು ಹೊಸ ಕಾನೂನುಗಳಲ್ಲಿ : ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ಸಹ ಒಂದು. ಬಿಹಾರ ಯಾವ ಕಾರಣಗಳಿಗಾಗಿ ಮಂಡಿ ವ್ಯವಸ್ಥೆಯನ್ನು ರದ್ದುಗೊಳಿಸಿತೋ ಅದೇ ಕಾರಣಗಳಿಗಾಗಿ ಸರಕಾರ ಈ ಕಾನೂನನ್ನು ತಂದಿದೆ. ಈ ಹೊಸ ಕಾನೂನುಗಳು ಎಪಿಎಂಸಿ ಕಾನೂನುಗಳನ್ನು ಅಪ್ರಸ್ತುತಗೊಳಿಸಲಿವೆ. ಇವುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು , ಮುಖ್ಯವಾಗಿ 2020ರ ನವೆಂಬರ್ 26ರಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟಿಸುತ್ತಿರುವವರು, ಈ ಕಾನೂನುಗಳು ಎಮ್‌ಎಸ್‌ಪಿ, ಸರ್ಕಾರಿ ಖರೀದಿ, ಎಪಿಎಂಸಿ ಸೇರಿದಂತೆ ಕೃಷಿಕರಿಗೆ ನೀಡಲಾಗುವ ಬೆಂಬಲಗಳನ್ನು ದುರ್ಬಲಗೊಳಿಸುತ್ತವಯೆಂದು ಅಭಿಪ್ರಾಯಪಡುತ್ತಾರೆ.

ಕಡಿಮೆ ಬೆಲೆಯೊಡನೆ ಹೆಣಗಾಡುತ್ತಿರುವ, ಗ್ರಾಮೀಣ ಬಿಹಾರದ ಲಕ್ಷಾಂತರ ರೈತರು ಮತ್ತು ಕೃಷಿ ಕಾರ್ಮಿಕರು ತಮ್ಮ ಆದಾಯವನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಬಿಹಾರಕ್ಕೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿರುವ ಹರಿಯಾಣ ಮತ್ತು ಪಂಜಾಬ್‌ಗಳಿಗೆ ವಲಸೆ ಹೋಗುತ್ತಿದ್ದಾರೆ.

ರಮೇಶ್ ಶರ್ಮಾ ಕೆಲಸ ಮಾಡುತ್ತಿರುವ ಗಗಸಿನಾದ ಕಬ್ಬಿನ ಹೊಲಗಳಲ್ಲಿ ಬಿಹಾರದ ಇನ್ನೂ 13 ಕಾರ್ಮಿಕರು ಕಬ್ಬು ಕಟಾವು ಮಾಡುತ್ತಿದ್ದಾರೆ. ಅರೇರಿಯಾದಿಂದ 1,400 ಕಿ.ಮೀ ಪ್ರಯಾಣಿಸಿದ ನಂತರ, ಅವರು ಕರ್ನಾಲ್ ತಲುಪಿ, ಅಲ್ಲಿ ಅವರು ಒಂದು ಕ್ವಿಂಟಾಲ್ ಕಬ್ಬನ್ನು ಕಟಾವು ಮಾಡಿದರೆ 45 ರೂಪಾಯಿಗಳನ್ನು ಕೂಲಿಯಾಗಿ ಪಡೆಯುತ್ತಾರೆ. “ನಾನು ದಿನಕ್ಕೆ 12-15 ಕ್ವಿಂಟಾಲ್ ಕತ್ತರಿಸುತ್ತೇನೆ. ಇದು ದಿನಕ್ಕೆ 540-675 ರೂ. ಆದಾಯವನ್ನು ತರುತ್ತದೆ” ಎಂದು 45 ವರ್ಷದ ರಾಜಮಹಲ್ ಮಂಡಲ್ ಹೇಳುತ್ತಾರೆ, ಅವರು ಮಾತನಾಡುವಾಗಲೂ ಕುಡಗೋಲಿನಿಂದ ಕಬ್ಬನ್ನು ಕತ್ತರಿಸುತ್ತಲೇ ಇದ್ದರು.

After months of backbreaking work cutting sugarcane, Kamaljit Paswan's body aches for days when he returns home to Bihar
PHOTO • Parth M.N.
After months of backbreaking work cutting sugarcane, Kamaljit Paswan's body aches for days when he returns home to Bihar
PHOTO • Parth M.N.

ಹಲವು ತಿಂಗಳ ಬೆನ್ನು ಮುರಿದಂತಹ ಅನುಭವ ತರಿಸುವ ಕಬ್ಬಿನ ಕಟಾವು ಮುಗಿಸಿ, ಬಿಹಾರದ ತನ್ನ ಮನೆಗೆ ಹಿಂದಿರುಗಿದ ನಂತರವೂ ಅವರನ್ನು ಮೈಕೈ ನೋವು ಕಾಡುತ್ತದೆನ್ನುವುದು ಕಮಲ್ಜಿತ್ ಪಾಸ್ವಾನ್ ಅವರ ಅನುಭವ

"ಇಲ್ಲಿನ [ಹರಿಯಾಣ] ರೈತರು ನಮಗೆ ಉತ್ತಮ ಸಂಬಳದ ಉದ್ಯೋಗವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ಅರೇರಿಯಾದ ಬಧುವಾ ಗ್ರಾಮದಿಂದ ಬಂದಿರುವ ಮಂಡಲ್ ಹೇಳುತ್ತಾರೆ. "ಬಿಹಾರದಲ್ಲಿ ಇದೆಲ್ಲ ಸಾಧ್ಯವಿಲ್ಲ. ನಾನು ಕೂಡ ಒಬ್ಬ ರೈತ, ನನ್ನ ಬಳಿ ಮೂರು ಎಕರೆ ಭೂಮಿಯಿದೆ. ನಾನೇ ಹೆಚ್ಚುವರಿ ಹಣ ಸಂಪಾದಿಸಲು ಇಲ್ಲಿಗೆ ಬರುತ್ತೇನೆ, ಇನ್ನು ನನ್ನ ಜಮೀನಿನಲ್ಲಿ ಕಾರ್ಮಿಕರನ್ನು ಹೇಗೆ ನೇಮಿಸಿಕೊಳ್ಳಲು ಸಾಧ್ಯ? "

ರಾಜಮಹಲ್‌ ಅವರು ಭತ್ತದ ಕೊಯ್ಲಿನ ಹಂಗಾಮು ಶುರುವಾಗುವ ಅಕ್ಟೋಬರ್ - ನವೆಂಬರ್ ವೇಳೆಗೆ ತನ್ನ ಹಳ್ಳಿಯನ್ನು ಬಿಟ್ಟು ಹೊರಡುತ್ತಾರೆ. "ಪಂಜಾಬ್‌ ಮತ್ತು ಹರಿಯಾಣದಲ್ಲಿ ಕೃಷಿ ಕಾರ್ಮಿಕರಿಗೆ ಸಾಕಷ್ಟು ಬೇಡಿಕೆಯಿದೆ. ನಾವು ಮೊದಲ ಎರಡು ತಿಂಗಳು ಭತ್ತದ ಗದ್ದೆಗಳಲ್ಲಿ ಕೊಯ್ಲಿನ ಕೆಲಸ ಮಾಡುತ್ತೇವೆ. ಮುಂದಿನ ನಾಲ್ಕು ತಿಂಗಳು ಕಬ್ಬಿನ ಹೊಲಗಳಲ್ಲಿ ಕಬ್ಬು ಕತ್ತರಿಸುವ ಕೆಲಸ ಮಾಡುತ್ತೇವೆ. ನಾವು ಈ ಆರು ತಿಂಗಳಿನಲ್ಲಿ ಸುಮಾರು ಒಂದು ಲಕ್ಷ ರೂಪಾಯಿಗಳಷ್ಟನ್ನು ಗಳಿಸುತ್ತೇವೆ. ಇದು ನಿಶ್ಚಿತ ಆದಾಯ ಮತ್ತು ಇದು ನನ್ನ ಕುಟುಂಬದ ಪೋಷಣೆಗೆ ಸಹಾಯ ಮಾಡುತ್ತದೆ ” ಎಂದು ಮಂಡಲ್ ಹೇಳುತ್ತಾರೆ.

ಆದರೆ, ಈ ಆದಾಯಕ್ಕಾಗಿ ಅವರು ತೆರಬೇಕಿರುವ ಬೆಲೆಯೂ ದೊಡ್ಡದೇ ಆಗಿದೆ. ಬೆಳಗಿನ ಏಳು ಗಂಟೆಗೆ ಶುರುವಾಗುವ ಕೆಲಸ ಮುಗಿಯುವಾಗ ಸೂರ್ಯ ಮನೆಗೆ ಹೊರಟಿರುತ್ತಾನೆ. "ಇದು ಬಹಳ ಶ್ರಮದ ಕೆಲಸವಾಗಿದ್ದು ದಿನದ ಹದಿನಾಲ್ಕು ಗಂಟೆಗಳ ಕಾಲ ಕೇವಲ ಒಂದು ಊಟದ ವಿರಾಮದೊಂದಿಗೆ ಕೆಲಸ ಮಾಡಬೇಕಿರುತ್ತದೆ." ಶೋಯಿರ್‌ಗಾಂವ್ ನಿವಾಸಿ ಕಮಲ್ಜೀತ್ ಪಾಸ್ವಾನ್ (22) ಹೇಳುತ್ತಾರೆ. "ಇಂತಹ ಕೆಲಸದ ದಿನಗಳು ತಿಂಗಳುಗಳ ಕಾಲ ಇರುತ್ತದೆ. ನಾನು ಬಿಹಾರಕ್ಕೆ ಹಿಂದಿರುಗಿದ ನಂತರವೂ ಹಲವು ದಿನಗಳ ತನಕ ಬೆನ್ನು, ಭುಜಗಳು, ತೋಳುಗಳು ಮತ್ತು ಕಾಲುಗಳ ಸ್ನಾಯುಗಳು ನೋಯುತ್ತಿರುತ್ತವೆ."

ಗಗಸಿನಾದಲ್ಲಿ, ಈ ಕಾರ್ಮಿಕರು ಅಡಿಗೆ ಅಥವಾ ಶೌಚಾಲಯದಂತಹ ಯಾವುದೇ ಸೌಲಭ್ಯಗಳಿಲ್ಲದೆ ಕಬ್ಬಿನ ಹೊಲಗಳ ಬಳಿ ಇಕ್ಕಟ್ಟಾದ, ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಅವರು ಅಲ್ಲಿಯೇ ತಮ್ಮ ಆಹಾರವನ್ನು ತೆರೆದ ಸ್ಥಳದಲ್ಲಿ, ಉರುವಲು ಬಳಸಿ ಬೇಯಿಸಿಕೊಳ್ಳುತ್ತಾರೆ.

ಪಾಸ್ವಾನ್ ಅವರ ಕುಟುಂಬವು ಯಾವುದೇ ಭೂಮಿಯನ್ನು ಹೊಂದಿಲ್ಲ, ಮತ್ತು ಅವರ ಐದು ಜನರ ಕುಟುಂಬದಲ್ಲಿ ಅವರ ಪೋಷಕರು ಮತ್ತು ಇಬ್ಬರು ತಂಗಿಯರು ಸೇರಿದ್ದಾರೆ. ಪಾಸ್ವಾನ್‌, ಅವರ ಕುಟುಂಬದಲ್ಲಿ ಹಣ ಗಳಿಸುವ ಏಕೈಕ ಸದಸ್ಯ. "ನನ್ನ ಮೇಲೆ ಒಂದು ಕುಟುಂಬವನ್ನು ಸಲಹಬೇಕಾದ ಜವಬ್ದಾರಿಯಿದೆ. ಇಲ್ಲಿಗೆ ಬಂದಾಗ ಅವರು ನೆನಪುಗಳು ಕಾಡುತ್ತವೆ, ಅವರೊಡನೆ ವರ್ಷದಲ್ಲಿ ಆರು ತಿಂಗಳು ಮಾತ್ರ ಕಳೆಯಲು ಸಾಧ್ಯವಾಗುತ್ತದೆ.” ಎಂದು ಅವರು ಹೇಳುತ್ತಾರೆ. "ನಮಗೆ ಏನು ಸಿಗುತ್ತದೆಯೋ ಅದರೊಡನೆ ಬದುಕು ಕಳೆಯಬೇಕು, ಬದುಕು ಇರುವುದೇ ಹಾಗೆ"

ಅನುವಾದ: ಶಂಕರ ಎನ್. ಕೆಂಚನೂರು

Parth M.N.

ਪਾਰਥ ਐੱਮ.ਐੱਨ. 2017 ਤੋਂ ਪਾਰੀ ਦੇ ਫੈਲੋ ਹਨ ਅਤੇ ਵੱਖੋ-ਵੱਖ ਨਿਊਜ਼ ਵੈੱਬਸਾਈਟਾਂ ਨੂੰ ਰਿਪੋਰਟਿੰਗ ਕਰਨ ਵਾਲੇ ਸੁਤੰਤਰ ਪੱਤਰਕਾਰ ਹਨ। ਉਨ੍ਹਾਂ ਨੂੰ ਕ੍ਰਿਕੇਟ ਅਤੇ ਘੁੰਮਣਾ-ਫਿਰਨਾ ਚੰਗਾ ਲੱਗਦਾ ਹੈ।

Other stories by Parth M.N.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru