ನಿಮ್ಮ ಯೂನಿವರ್ಸಿಟಿಯು, ಅಥವಾ ಅದರ ಒಂದು ಭಾಗವು ಹಲವು ಬಾರಿ ಒಕ್ಕಲೆಬ್ಬಿಸಲ್ಪಟ್ಟ ಊರಿನ ಜನರ ಮನೆಗಳ ಮೇಲೆ ನಿಂತಿದೆ. ಅದಕ್ಕೆ ನೀವು ಕಾರಣಕರ್ತರು ಅಥವಾ ಹೊಣೆಗಾರರಲ್ಲವಾದರೂ, ಅವರ ಕುರಿತು ಗೌರವದ ಭಾವನೆಯನ್ನು ನೀವು ಹೊಂದಿರಬೇಕು. ಎಂದು ನಾನು 2011ರಲ್ಲಿ ಅಲ್ಲಿದ್ದವರಿಗೆ ಹೇಳಿದ್ದೆ.
ಒಡಿಶಾದ ಕೊರಾಪುಟ್‌ನ ಕೇಂದ್ರೀಯ ವಿಶ್ವವಿದ್ಯಾಲಯದ ಸೂಕ್ಷ್ಮ ಮನೋಭಾವವನ್ನು ಹೊಂದಿರುವ ವಿದ್ಯಾರ್ಥಿಗಳಿಗೆ, ಮುಖ್ಯವಾಗಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದವರಿಗೆ ಆ ಜನರ ಕುರಿತು ಗೌರವ ಇತ್ತಾದರೂ, ಅವರಿಗೆ ನನ್ನ ಮಾತುಗಳು ಆಘಾತ ನೀಡಿದವು. ಚಿಕಾಪರದ ಕತೆಯು ಅವರನ್ನು ವಿಚಲಿತಗೊಳಿಸಿತ್ತು. ಅದು ಮೂರು ಬಾರಿ ನಿಷ್ಕರುಣೆಯ ಒಕ್ಕಲೆಬ್ಬಿಸಲ್ಪಟ್ಟ ಊರಾಗಿತ್ತು. ಮತ್ತು ಪ್ರತಿಬಾರಿಯೂ ಅವರನ್ನು ʼಅಭಿವೃದ್ಧಿʼಯ ಹೆಸರಿನಲ್ಲಿ ಒಕ್ಕಲೆಬ್ಬಿಸಲಾಗಿತ್ತು.
ಮತ್ತು ನನ್ನ ಮನಸ್ಸು 1993ರ ಕೊನೆಯಲ್ಲಿ - 1994ರ ಆರಂಭದಲ್ಲಿ, ಗದಬ ಆದಿವಾಸಿಯಾದ ಮುಕ್ತಾ ಕದಮ್ (ತನ್ನ ಮೊಮ್ಮಗನೊಂದಿಗೆ ಮೇಲಿನ ಮುಖ್ಯ ಫೋಟೋದಲ್ಲಿ) 1960ರ ದಶಕದಲ್ಲಿ ಬಿರುಸು ಮಳೆಯ ರಾತ್ರಿಯಲ್ಲಿ ತಮ್ಮನ್ನು ಊರಿನಿಂದ, ಮನೆಯಿಂದ ಹೊರಹಾಕಿದ ಸಂದರ್ಭದ ಕರಾಳ ನೆನಪನ್ನು ಹಂಚಿಕೊಂಡಿದ್ದು ನೆನಪಾಯಿತು. ಅಂದು ತನ್ನ ಐದು ಮಕ್ಕಳನ್ನು ಕರೆದುಕೊಂಡು, ಮಕ್ಕಳ ತಲೆಯ ಮೇಲೆ ಮನೆಯ ಸಾಮಾಗ್ರಿಗಳನ್ನು ಹೊರಿಸಿ ಸುರಿವ ಮಳೆಯಲ್ಲೇ ಮಕ್ಕಳಿಗೆ ದಾರಿ ತೋರಿಸುತ್ತಾ ರಾತ್ರಿಯ ದಟ್ಟ ಕತ್ತಲೆಯಲ್ಲಿ ಮನೆಯಿಂದ ಹೊರಬಿದ್ದಿದ್ದರು. "ನಮಗೆ ಎಲ್ಲಿಗೆ ಹೋಗುವುದೆಂದು ತಿಳಿದಿರಲಿಲ್ಲ. ಸಾಬ್ ಲೋಗ್‌ಗಳು ತೆರಳುವಂತೆ ಹೇಳಿದ್ದರಿಂದ ನಾವು ಹೊರಟಿದ್ದೆವು. ಆ ರಾತ್ರಿ ಭಯಾನಕವಾಗಿತ್ತು."
ಅವರು ಒಡಿಶಾದಲ್ಲಿ ಎಂದಿಗೂ ಸಂಪೂರ್ಣವಾಗಿ ಬಂದಿಲ್ಲದ ಅಥವಾ ಜಾರಿಗೊಳ್ಳದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮಿಗ್ ಫೈಟರ್ ಯೋಜನೆಗೆ ದಾರಿ ಮಾಡಿಕೊಡುತ್ತಿದ್ದರು. ಯೋಜನೆ ಜಾರಿಗೊಳ್ಳದಿದ್ದರೂ ಸರಕಾರ ಭೂಮಿಯನ್ನು ಜನರಿಗೆ ಮರಳಿಸಲಿಲ್ಲ. ಪರಿಹಾರ? "ನನ್ನ ಕುಟುಂಬವು 60 ಎಕರೆ ಭೂಮಿಯನ್ನು ಹೊಂದಿತ್ತು" ಎಂದು ದಲಿತರೂ ಮತ್ತು ಹೋರಾಟಗಾರರೂ ಆಗಿರುವ ಜ್ಯೋತಿರ್ಮಯ್ ಖೋರಾ ಹೇಳುತ್ತಾರೆ, ಅವರು ಸ್ಥಳಾಂತರಗೊಂಡ ಚಿಕಾಪರದ ನಿವಾಸಿಗಳಿಗೆ ನ್ಯಾಯ ಕೊಡಿಸುವ ಹೋರಾಟವನ್ನು ಮುಂದುವರೆಸಿದ್ದರು. “ಮತ್ತು, ಹಲವು, ಹಲವು ವರ್ಷಗಳ ನಂತರ, ನಮಗೆ 60 ಎಕರೆಗೆ ರೂ. 15,000 [ಒಟ್ಟು] ಪರಿಹಾರವಾಗಿ ದೊರಕಿತು.” ಹೀಗೆ ಒಕ್ಕಲೆಬ್ಬಿಸಲ್ಪಟ್ಟ ಜನರು ತಮ್ಮದೇ ಸ್ವಂತ ಭೂಮಿಯಲ್ಲಿ ಸರ್ಕಾರದ ನೆರವಿಲ್ಲದೆ ಹೊಸ ಊರನ್ನು ಕಟ್ಟಿಕೊಂಡರು. ಮತ್ತದಕ್ಕೆ ತಮ್ಮ ಹಳೆಯ ಊರಿನ ನೆನಪಿನಲ್ಲಿ ಚಿಕಪಾರ ಎಂದು ಹೆಸರಿಟ್ಟರು.




