ಅನಂತಪುರದಲ್ಲಿನ ರೆಕ್ಸಿನ್ ಸರಕುಗಳನ್ನು ಮಾರಾಟ ಮಾಡುವ ಅಂಗಡಿಗಳಿಂದ ಕೂಡಿದ ಬೀದಿಯು ಆಂಧ್ರ ಪ್ರದೇಶದ ರಾಜಕೀಯದ ಕುರಿತು ಹಲವಾರು ಸುದ್ದಿ ಕೋಣೆಗಳಲ್ಲಿ ಕುಳಿತುಕೊಳ್ಳುವ ಪಂಡಿತರಿಗಿಂತಲೂ ಹೆಚ್ಚು ನಿಖರವಾದ ಒಳನೋಟವನ್ನು ನೀಡುತ್ತದೆ. ಅನಂತಪುರದ ಅನೇಕ ಸಾರ್ವಜನಿಕ ಬುದ್ಧಿಜೀವಿಗಳು ಕಳೆದ ಚುನಾವಣೆಯಲ್ಲಿ ಜಗನ್ಮೋಹನ್ ರೆಡ್ಡಿ ಗೆದ್ದಿದ್ದನ್ನು ನೋಡಿ ಆಶ್ಚರ್ಯಚಕಿತರಾದರು, ಆದರೆ ರೆಕ್ಸಿನ್ ಅಂಗಡಿಗಳಿರುವ ಈ ಪ್ರದೇಶವು ಅದನ್ನು ಮೊದಲೇ ಊಹಿಸಿತ್ತು. "ಚುನಾವಣೆಗೆ ಕೆಲವು ತಿಂಗಳುಗಳ ಮೊದಲೇ ನಾವು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುದ್ರೆಯನ್ನು ಹೊಂದಿರುವ ಹೆಚ್ಚು ಹೆಚ್ಚು ಬೈಕ್‌ನ ಬದಿ ಚೀಲಗಳನ್ನು ಹೊಲಿಯಲು ಆರಂಭಿಸಿದ್ದೆವು" ಎಂದು ರೆಕ್ಸಿನ್ ಅಂಗಡಿ ಮಾಲೀಕ ಡಿ. ನಾರಾಯಣಸ್ವಾಮಿ ಹೇಳುತ್ತಾರೆ.
ಈ ಬೈಕಿನ ಬದಿಚೀಲ (saddlebag) ಹೊಲಿದು ಕೊಡುವ ವ್ಯಾಪಾರಸ್ಥರ ಗುಂಪು ಮುಂದಿನ ಚುನಾವಣೆಯಲ್ಲಿ ಯಾರು ಗೆಲ್ಲಬಹುದೆಂದು ಸರಿಯಾಗಿ ಊಹಿಸಿತ್ತು. ವೈಎಸ್‌ಆರ್ ಪಕ್ಷದ ಬ್ಯಾಗ್‌ಗಳಿಗೆ ಬಂದ ಭಾರೀ ಬೇಡಿಕೆ 2019ರ ವಿಧಾನಸಭಾ ಚುನಾವಣೆಯ ಫಲಿತಾಂಶದ ಮುನ್ಸೂಚನೆಯನ್ನು ನೀಡಿತ್ತು.
1990 ರ ದಶಕದಲ್ಲಿ, ಈ ಅಂಗಡಿಗಳು ಅಗ್ಗದ ಮತ್ತು ಗಟ್ಟಿಮುಟ್ಟಾದ ಶಾಲಾ ಬ್ಯಾಗ್‌ಗಳನ್ನು ಪ್ರತ್ಯೇಕವಾಗಿ ಹೊಲಿದವು. ನಾನೇ ಅವರಿಂದ ಒಂದು ಬ್ಯಾಗ್ ಅಥವಾ ಎರಡು ಖರೀದಿಸಿದ್ದೆ. ಈ ದಶಕ ಕಳೆದಂತೆ, ಶೂ ಮಳಿಗೆಗಳು ಶಾಲಾ ಬ್ಯಾಗ್‌ಗಳನ್ನು ಖರೀದಿಸಲು ಹೆಚ್ಚು ಜನಪ್ರಿಯವಾದ ಸ್ಥಳವಾಯಿತು. ಮತ್ತು ರೆಕ್ಸಿನ್ ಅಂಗಡಿಗಳು ಚಲನಚಿತ್ರ ತಾರೆಯರು ಮತ್ತು ರಾಜಕಾರಣಿಗಳ ಫೋಟೊಗಳೊಂದಿಗೆ ಮೋಟಾರ್ ಬೈಕ್‌ಗಳಿಗಾಗಿ ತಡಿ ಚೀಲಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದವು; ಅಲ್ಲದೆ, ಮೋಟಾರ್ ಸೈಕಲ್-ಆಟೋರಿಕ್ಷಾ-ಸೋಫಾಗಳಿಗೆ ಸೀಟ್ ಕವರ್‌ಗಳು ಮತ್ತು ಕಾರ್ ಕವರ್‌ಗಳನ್ನು ಸಹ ಮಾರಾಟ ಮಾಡಲಾಗುತ್ತಿತ್ತು. ರಾಜಕೀಯ ಡಿಸೈನರ್ ಬ್ಯಾಗ್‌ಗಳ ಮಾರಾಟವು 2019ರ ಚುನಾವಣೆಯ ವೇಳೆಗೆ ವೇಗ ಪಡೆಯಲು ಪ್ರಾರಂಭಿಸಿತು. ಹಿಂದಿನ ಸರ್ಕಾರದ ಲಾಭವನ್ನು ಪಡೆದ ತೆಲುಗು ದೇಶಂ ಪಕ್ಷದ ಮತದಾರರೊಬ್ಬರು 2019ರಲ್ಲಿ ನನಗೆ ಹೇಳಿದ್ದರು: “ನಾವು ಉಪವಾಸವಿರಬೇಕಾಗಿ ಬಂದರೂ ಸರಿಯೇ ನಾವು ನಮ್ಮ ಪಕ್ಷದ ಧ್ವಜದೊಂದಿಗೆ ಸುತ್ತಾಡುತ್ತೇವೆ. ನಮಗೆ ಬೇರೆ ಆಯ್ಕೆಯಿಲ್ಲ." ಅವರು ಓಡಾಡುತ್ತಿದ್ದ ಬೈಕಿನ ಬದಿಯಲ್ಲಿದ್ದ ತೂಗು ಚೀಲದಲ್ಲಿ ಟಿಡಿಪಿ ಪಕ್ಷದ ಚಿತ್ರಗಳಿದ್ದುದು ನನಗೆ ನೆನಪಿದೆ.




