ಪ್ರತಿದಿನ ಸಂಜೆ 5 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮರಳಿದ ನಂತರ, ಡಾ.ಶಬ್ನಮ್ ಯಾಸ್ಮಿನ್ ನೇರವಾಗಿ ತನ್ನ ಹಳದಿ-ಕಂದು ಬಣ್ಣದ ಮನೆಯ ತಾರಸಿಗೆ ಹೋಗುತ್ತಾರೆ. ಅಲ್ಲಿ ತನ್ನ ಕೆಲಸದ ಸ್ಥಳಕ್ಕೆ ಒಯ್ದಿದ್ದ ಪೆನ್ನು, ಡೈರಿ ಒಳಗೊಂಡಂತೆ ಎಲ್ಲವನ್ನೂ ಸ್ಯಾನಿಟೈಝ್ ಮಾಡುತ್ತಾರೆ. ಅನಂತರ ಬಟ್ಟೆಗಳನ್ನು ಒಗೆದು ಸ್ನಾನ ಮಾಡಿದ ಮೇಲೆಯೇ (ತಾರಸಿಯಲ್ಲಿ ಇದೆಲ್ಲದಕ್ಕೂ ವ್ಯವಸ್ಥೆಯಿದೆ) ಅವರು ಕೆಳಗೆ ವಾಸಿಸುವ ತನ್ನ ಕುಟುಂಬದೊಡನೆ ಸೇರಿಕೊಳ್ಳುತ್ತಾರೆ. ಕಳೆದ ಒಂದು ವರ್ಷದಿಂದ ಅವರು ಅತ್ಯಂತ ಎಚ್ಚರಿಕೆಯಿಂದ ಈ ದಿನಚರಿಯನ್ನು ಅನುಸರಿಸುತ್ತಿದ್ದಾರೆ.
"ಲಾಕ್‌ಡೌನ್ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲವನ್ನೂ ಮುಚ್ಚಿದಾಗಲೂ, ನಾನು ಪೂರ್ಣ ಸಮಯ ಕೆಲಸ ಮಾಡಿದ್ದೆ. ಕೋವಿಡ್ ಪರೀಕ್ಷೆಯಲ್ಲಿ ಎಂದೂ ನನಗೆ ಪಾಸಿಟಿವ್ ಬಂದಿರಲಿಲ್ಲ, ಆದರೆ ನನ್ನ ಕೆಲವು ಸಹೋದ್ಯೋಗಿಗಳು ಸೋಂಕಿಗೆ ಒಳಗಾಗಿದ್ದರು. ಹಾಗೆ ನೋಡಿದರೆ ನಾವು ಆಸ್ಪತ್ರೆಯಲ್ಲಿ ಇಬ್ಬರು ಕೋವಿಡ್-19 ಪಾಸಿಟಿವ್ ಹೊಂದಿದ್ದ ಗರ್ಭಿಣಿ ಮಹಿಳೆಯರಿಗೆ ಉತ್ತಮ ಚಿಕಿತ್ಸೆ ನೀಡಿದ್ದೇವೆ." ಎನ್ನುತ್ತಾರೆ ಡಾ. ಯಾಸ್ಮಿನ್, (45). ಅವರು ಈಶಾನ್ಯ ಬಿಹಾರದ ಕಿಶನ್ ಗಂಜ್ ಪಟ್ಟಣದಲ್ಲಿರುವ ತನ್ನ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಸದರ್ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞೆ ಮತ್ತು ಸರ್ಜನ್.
ಶಬ್ನಮ್ ಅವರು ತಾನು ರೋಗವಾಹಕರಾಗದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಿತ್ತು. ಅವರು ತನ್ನನ್ನು ತಾನು ಅಪಾಯಕ್ಕೆ ಒಡ್ಡಿಕೊಂಡೂ ಮನೆಯಲ್ಲಿದ್ದ ಹಿರಿಯರಾದ ತಾಯಿ ಮತ್ತು 18ರಿಂದ 12 ವರ್ಷ ವಯಸ್ಸಿನ ಇಬ್ಬರು ಪುತ್ರರು ಮತ್ತು ಕಿಡ್ನಿ ಸಮಸ್ಯೆಯಿಂದ ಈಗಷ್ಟೇ ಗುಣಮುಖರಾಗುತ್ತಿರುವ ಪತಿ ಇರ್ತಝಾ ಹಸನ್ ಕುರಿತು ಅವರು ತುಸು ಹೆಚ್ಚೇ ಕಾಳಜಿ ತೆಗೆದುಕೊಳ್ಳಬೇಕಿತ್ತು. "ನನ್ನ ತಾಯಿ ಅಜ್ರಾ ಸುಲ್ತಾನಾರ ಕಾರಣ ನಾನು (ಕಳೆದ ವರ್ಷ) ಕೆಲಸ ಮಾಡಲು ಸಾಧ್ಯವಾಯಿತು. ಅವರು ಎಲ್ಲಾ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡರು, ಇಲ್ಲದಿದ್ದರೆ ನಾನು ಡಾಕ್ಟರ್, ಗೃಹಿಣಿ, ಶಿಕ್ಷಕಿ, ಟ್ಯೂಟರ್ ಈ ಎಲ್ಲಾ ಪಾತ್ರಗಳನ್ನು ಒಟ್ಟಿಗೆ ನಿರ್ವಹಿಸಬೇಕಿತ್ತು" ಯಾಸ್ಮಿನ್ ಹೇಳಿದರು.
ಅವರು 2007ರಲ್ಲಿ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದಾಗಿನಿಂದಲೂ ಅವರ ಬದುಕು ಹೀಗೆಯೇ ಸಾಗುತ್ತಿದೆ. "ನಾನು MBBS ಅಂತಿಮ ವರ್ಷದಲ್ಲಿದ್ದಾಗ ಗರ್ಭಿಣಿಯಾಗಿದ್ದೆ. ನನ್ನ ಮದುವೆಯ ನಂತರ ಸುಮಾರು ಆರು ವರ್ಷಗಳವರೆಗೆ, ನಾನು ಎಂದಿಗೂ ನನ್ನ ಕುಟುಂಬದೊಂದಿಗೆ ವಾಸಿಸುತ್ತಿರಲಿಲ್ಲ. ನನ್ನ ಪತಿ ವಕೀಲರಾಗಿ ಕೆಲಸ ಮಾಡುತ್ತಿದ್ದರು, ಅವರು ಪಾಟ್ನಾದಲ್ಲಿ ಅಭ್ಯಾಸ ಮಾಡುತ್ತಿದ್ದರು. ನನ್ನನ್ನು ನಿಯೋಜಿಸಲಾದ ಸ್ಥಳದಲ್ಲಿ ನಾನು ಅಭ್ಯಾಸ ಮಾಡುತ್ತಿದ್ದೆ" ಎಂದು ಯಾಸ್ಮಿನ್ ಹೇಳುತ್ತಾರೆ.
ಸದರ್ ಆಸ್ಪತ್ರೆಗೆ ನಿಯೋಜನೆಗೊಳ್ಳುವ ಮೊದಲು, ಡಾ ಶಬ್ನಮ್ ಅವರನ್ನು 2011ರಲ್ಲಿ ಠಾಕೂರ್‌ಗಂಜ್ ಬ್ಲಾಕ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ನೇಮಿಸಲಾಯಿತು, ಇದು ಅವರ ಮನೆಯಿಂದ 45 ಕಿಮೀ ದೂರದಲ್ಲಿದೆ. 2003ರಲ್ಲಿ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಎಂಬಿಬಿಎಸ್ ಪದವಿ ಮತ್ತು 2007ರಲ್ಲಿ ಪಾಟ್ನಾ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಕೆಲವು ವರ್ಷಗಳ ಕಾಲ ವೈದ್ಯರಾಗಿ ಖಾಸಗಿ ಅಭ್ಯಾಸ ಮಾಡಿದ ನಂತರ ಅವರು ಈ ಸರ್ಕಾರಿ ಕೆಲಸವನ್ನು ಪಡೆದರು. ಠಾಕೂರ್‌ಗಂಜ್ ಪಿಎಚ್‌ಸಿ ತಲುಪಲು, ಅವರು ತನ್ನ ನವಜಾತ ಶಿಶುವನ್ನು ತನ್ನ ತಾಯಿಯೊಂದಿಗೆ ಬಿಟ್ಟು ಸ್ಥಳೀಯ ಬಸ್‌ನಲ್ಲಿ ಪ್ರಯಾಣಿಸಬೇಕಾಯಿತು. ಇದು ಕಠಿಣವಾಗಿತ್ತು ಮತ್ತು ಸಂಕಟ ತರುವಂತಹದ್ದಾಗಿತ್ತು, ಹೀಗಾಗಿ ಒಂಬತ್ತು ತಿಂಗಳ ನಂತರ ಅವರು ತಾಯಿ ಮತ್ತು ಮಕ್ಕಳೊಂದಿಗೆ ಠಾಕೂರ್‌ಗಂಜ್‌ಗೆ ಸ್ಥಳಾಂತರಗೊಂಡರು. ಅವರ ಪತಿ ಇರ್ತಝಾ ಪಾಟ್ನಾದಲ್ಲಿ ವಾಸಿಸುತ್ತಿದ್ದರು ಮತ್ತು ಪ್ರತಿ ತಿಂಗಳು ಅವರಿರುವಲ್ಲಿಗೆ ಬರುತ್ತಿದ್ದರು.







