"ಈಗ, ನಾವು ಪ್ರತಿದಿನ ಕನಿಷ್ಠ 25 ಮನೆಗಳಿಗೆ ಭೇಟಿ ನೀಡಬೇಕಿದೆ, ಪ್ರತಿ ಮನೆಗೆ ತಿಂಗಳಿಗೆ ಕನಿಷ್ಠ ನಾಲ್ಕು ಬಾರಿ" ಎಂದು ಸುನೀತಾ ರಾಣಿ ಹೇಳುತ್ತಾರೆ, "ಕೊರೋನಾ ವೈರಸ್ ಸಮೀಕ್ಷೆ ನಡೆಸಲು." ಅವರು ಈ ತಿರುಗಾಟವನ್ನು ಕಳೆದ 10 ದಿನಗಳಿಂದ ಮಾಡುತ್ತಿದ್ದಾರೆ, ಆದರೆ ಹರಿಯಾಣದಲ್ಲಿ ಪಾಸಿಟಿವ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಏಪ್ರಿಲ್ 14ರ ಹೊತ್ತಿಗೆ, 180ಕ್ಕೂ ಹೆಚ್ಚು ದೃಢಪಟ್ಟ ಪ್ರಕರಣಗಳು ಮತ್ತು ಎರಡು ಸಾವುಗಳು ಸಂಭವಿಸಿವೆ.
"ಜನರು ಈ ರೋಗದಿಂದ ಭಯಭೀತರಾಗಿದ್ದಾರೆ. ಇದು ಸ್ಪರ್ಶದ ಮೂಲಕ ಹರಡುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಮಾಧ್ಯಮಗಳಲ್ಲಿ 'ಸಾಮಾಜಿಕ ಅಂತರ' ಎಂದು ಹೇಳುತ್ತಲೇ ಇರುತ್ತಾರೆ. ಕೊರೋನಾ ವೈರಸ್ ಎಂದರೇನು ಮತ್ತು ಅವರು ಹೇಗೆ ಪ್ರತ್ಯೇಕವಾಗಿರಬೇಕು ಎಂಬುದನ್ನು ನಾನು ವಿವರಿಸಿದ ನಂತರವೂ "ಏಳು ಜನರು ಒಟ್ಟಿಗೆ ವಾಸಿಸುವ 10X10 ಅಡಿ ಮನೆಯಲ್ಲಿ ಸಾಮಾಜಿಕ ಅಂತರವೆಂದರೇನು?" ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಅವರ ಕಣ್ಣಿನಲ್ಲಿ ಕಣ್ಣಿಡುವುದು ನನಗೆ ಕಷ್ಟವಾಗುತ್ತದೆ ಎಂದು ಸುನೀತಾ ಹೇಳುತ್ತಾರೆ.
39 ವರ್ಷದ ಸುನೀತಾ ಹರಿಯಾಣದ ಸೋಣಿಪತ್ ಜಿಲ್ಲೆಯ ನಾಥುಪೂರ್ ಗ್ರಾಮದಲ್ಲಿ ಕೆಲಸ ಮಾಡುತ್ತಿರುವ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ). ಭಾರತದ ಗ್ರಾಮೀಣ ಜನಸಂಖ್ಯೆಯನ್ನು ಅದರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಸಂಪರ್ಕಿಸುವ 10 ಲಕ್ಷಕ್ಕೂ ಹೆಚ್ಚು ಆಶಾಗಳಲ್ಲಿ ಇವರೂ ಒಬ್ಬರು. ಕೋವಿಡ್-19 ಅತಿದೊಡ್ಡ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಬಿಕ್ಕಟ್ಟಿನೊಂದಿಗೆ, ನವಜಾತ ಶಿಶುಗಳಿಗೆ ಲಸಿಕೆ ಹಾಕುವುದರಿಂದ ಹಿಡಿದು ಮಹಿಳೆಯರ ಕಾಳಜಿ ನೋಡಿಕೊಳ್ಳುವುದು ಮತ್ತು ಕುಟುಂಬ ಯೋಜನೆಯ ಬಗ್ಗೆ ಅವರಿಗೆ ಸಲಹೆ ನೀಡುವವರೆಗೆ - 60ಕ್ಕೂ ಹೆಚ್ಚು ಕಾರ್ಯಗಳಲ್ಲಿ ಅವರು ಬಿಡುವಿಲ್ಲದೆ ತೊಡಗಿಸಿಕೊಂಡಿರುತ್ತಾರೆ.
ಹರಿಯಾಣದಲ್ಲಿ ಮಾರ್ಚ್ 17ರಂದು ಗುರುಗ್ರಾಮದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆಯಾದಾಗ ಸೋಣಿಪತ್‌ನ ಆಶಾ ಕಾರ್ಯಕರ್ತರು ರೋಗದ ಬಗ್ಗೆ ತಮ್ಮ ಮೇಲ್ವಿಚಾರಕರಿಂದ ಯಾವುದೇ ಸೂಚನೆಗಳನ್ನು ಸ್ವೀಕರಿಸಿರಲಿಲ್ಲ. ನಾಲ್ಕು ದಿನಗಳ ನಂತರ, ಸೋಣಿಪತ್‌ನಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿತು. ಆಗಲೂ, ಅವರು ಅನುಸರಿಸಬೇಕಾದ ಹೊಸ ಸುರಕ್ಷತಾ ಪದ್ಧತಿಗಳ ಬಗ್ಗೆ ಅಥವಾ ಗ್ರಾಮಸ್ಥರಿಗೆ ಅರಿವು ಮೂಡಿಸುವ ಬಗ್ಗೆ ಅವರ ಮೇಲ್ವಿಚಾರಕರಿಂದ ಯಾವುದೇ ಸೂಚನೆ ಇರಲಿಲ್ಲ. ಏಪ್ರಿಲ್ 2ರಂದು, ಸುನೀತಾ ಮತ್ತು ಸೋಣಿಪತ್‌ನ 1,270 ಆಶಾ ಕಾರ್ಯಕರ್ತರಿಗೆ ಮಾರಣಾಂತಿಕ SARS-CoV-2 (ಸಾರ್ಸ್-ಕೊವಿ-2) ವೈರಸ್ ವಿರುದ್ಧ ಜಾಗೃತಿ ಮೂಡಿಸಲು ಮುಂಚೂಣಿಯಲ್ಲಿ ನಿಲ್ಲಲು ತರಬೇತಿ ನೀಡುತ್ತಿದ್ದಾಗ, ರಾಷ್ಟ್ರವ್ಯಾಪಿ ಲಾಕ್ ಡೌನ್ ನಡೆಯುತ್ತಿತ್ತು ಮತ್ತು ಕೋವಿಡ್-19ರ ನಂತರ ಮೊದಲ ಸಾವನ್ನು ರಾಜ್ಯವೂ ದಾಖಲಿಸಿತ್ತು.
ತನ್ನ ಹಳ್ಳಿಯಲ್ಲಿ ಸುಮಾರು 1,000 ಜನರ ಉಸ್ತುವಾರಿ ವಹಿಸಿರುವ ಸುನೀತಾ ಅವರ ಹೊಸ ಜವಾಬ್ದಾರಿಗಳಲ್ಲಿ, ಕ್ಯಾನ್ಸರ್, ಕ್ಷಯ ಅಥವಾ ಹೃದಯ ಕಾಯಿಲೆಗಳಿರುವ ರೋಗಿಗಳಂತಹ ಕೋವಿಡ್-19 ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯದಲ್ಲಿರುವವರ ಆರೋಗ್ಯ ಸ್ಥಿತಿ ಮತ್ತು ದೇಶದ ಹೊರಗಿನಿಂದ ಯಾರಾದರೂ ಮರಳಿದ್ದಾರೆಯೇ ಎಂಬ ಬಗ್ಗೆ ತಿಳಿದುಕೊಳ್ಳುವುದು, ಅವರ ವ್ಯಾಪ್ತಿಯೊಳಗಿನ ಪ್ರತಿಯೊಂದು ಮನೆಯ ಎಲ್ಲಾ ಕುಟುಂಬ ಸದಸ್ಯರ ವಯಸ್ಸು ಸೇರಿದಂತೆ ವಿವರವಾದ ದಾಖಲೆಯನ್ನು ರಚಿಸುವುದು ಅವರ ಜವಬ್ದಾರಿಯಾಗಿತ್ತು. "ಇನ್‌ಫ್ಲುಯೆನ್ಝಾದಂತಹ ರೋಗಲಕ್ಷಣಗಳು ಅಥವಾ ಕೊರೋನಾ ವೈರಸ್‌ನ ರೋಗಲಕ್ಷಣಗಳನ್ನು ಯಾರು ಹೊಂದಿದ್ದಾರೆಂದನ್ನು ನಾನು ಪರಿಶೀಲಿಸುತ್ತೇನೆ ಮತ್ತು ಟಿಪ್ಪಣಿ ಮಾಡುತ್ತೇನೆ. ಇದೆಲ್ಲವೂ ಕಷ್ಟವಲ್ಲ. ನಾನು ವಿವರವಾದ ದಾಖಲೆ-ನಿರ್ವಹಣೆಯನ್ನು ಅಭ್ಯಾಸ ಮಾಡಿಕೊಂಡಿದ್ದೇನೆ, ಆದರೆ ಪರಿಸ್ಥಿತಿಗಳು ಸಂಪೂರ್ಣವಾಗಿ ಬದಲಾಗಿವೆ" ಎಂದು ಸುನೀತಾ ಹೇಳುತ್ತಾರೆ.
"ನಮಗೆ ಯಾವುದೇ ಮಾಸ್ಕ್‌ಗಳನ್ನು ನೀಡಿಲ್ಲ. ಕೊರೋನಾ ವೈರಸ್ ಕುರಿತು ಏಪ್ರಿಲ್ 2ರಂದು ನಮಗೆ ಮೊದಲ ತರಬೇತಿ ನೀಡಿದಾಗ, ನಾವು ಸುರಕ್ಷತಾ ಸಾಧನಗಳನ್ನು ಕೇಳಿದೆವು. ನಾವು ಮೂಲ ಶಿಕ್ಷಣವನ್ನು ಹೊಂದಿದ್ದೇವೆ, ನಾವು ಸುದ್ದಿಗಳನ್ನು ಓದುತ್ತೇವೆ. ಅವರು ನಮಗೆ ಏನನ್ನೂ ನೀಡಿಲ್ಲ: ಮಾಸ್ಕ್‌ಗಳಿಲ್ಲ, ಹ್ಯಾಂಡ್ ಸ್ಯಾನಿಟೈಝರ್ ಇಲ್ಲ, ಕೈಗವಸುಗಳಿಲ್ಲ. ನಾವು ಒತ್ತಾಯಿಸಿದಾಗ, ಕೆಲವು ಆಶಾ ಕಾರ್ಯಕರ್ತರಿಗೆ ಹತ್ತಿಯ ಮಾಸ್ಕ್‌ಗಳನ್ನು ನೀಡಲಾಯಿತು. ನಾವು ಉಳಿದವರು ನಮ್ಮ ಮನೆಯಲ್ಲಿಯೇ ಅವುಗಳನ್ನು ತಯಾರಿಸಿಕೊಂಡಿದ್ದೇವೆ - ನಮಗಾಗಿ ಮತ್ತು ಹಳ್ಳಿಯ ರೋಗಪೀಡಿತರಾಗಬಹುದಾದ ಜನರಿಗಾಗಿ. ಕೈಗವಸುಗಳನ್ನು ಸಹ ನಾವೇ ಖರೀದಿಸಿದ್ದೇವೆ" ಎಂದು ಸುನೀತಾ ಹೇಳುತ್ತಾರೆ.
ಯಾವುದೇ ರಕ್ಷಣಾತ್ಮಕ ವಸ್ತುಗಳ ಅನುಪಸ್ಥಿತಿಯಲ್ಲಿ, ಕೋವಿಡ್ -19ರ ಪ್ರಾಥಮಿಕ ಸಮೀಕ್ಷೆ ನಡೆಸಲು ಆಶಾ ಕಾರ್ಯಕರ್ತರನ್ನು ಕಳುಹಿಸುವುದು ಸರ್ಕಾರದ ನಿರ್ಲಕ್ಷ್ಯದ ಒಂದು ಭಾಗವಾಗಿದೆ. ಆಶಾ ಕಾರ್ಯಕರ್ತೆಯರಿಗೆ ಹೊಸ ರೋಗ ಮತ್ತು ಇನ್ಫ್ಲುಯೆನ್ಝಾದ ರೋಗಲಕ್ಷಣಗಳ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸುವುದು ಅಥವಾ ಕೊರೋನಾ ವೈರಸ್ ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯದಲ್ಲಿ ಯಾರು ಇರಬಹುದು ಎಂಬುದರ ಬಗ್ಗೆ ಕೇವಲ ಎರಡು ಗಂಟೆಗಳ ಕಾಲ ತರಬೇತಿ ನೀಡಲಾಗಿತ್ತು. ಅದು ಕೂಡಾ ಕೊನೆಯ ಕ್ಷಣದ ಪ್ರಯತ್ನದಂತೆ ಕಾಣುತ್ತದೆ. ಇದರಲ್ಲಿ ಆಶಾ ಕಾರ್ಯಕರ್ತೆಯರಿಗೆ ರೋಗಲಕ್ಷಣಗಳಿಲ್ಲದ ಕೋವಿಡ್-19 ರೋಗಿಗಳ ಕುರಿತು ಯಾವುದೇ ಮೂಲಭೂತ ಮಾಹಿತಿಗಳನ್ನೂ ನೀಡಿರಲಿಲ್ಲ. ಅಥವಾ ಕಾಯಿಲೆಯ ಇತರ ಲಕ್ಷಣಗಳ ಕುರಿತೂ ತಿಳಿಹೇಳಿರಲಿಲ್ಲ.
ಸೋಣಿಪತ್ ಬಹ್ಲ್ ಗಢ್ ಗ್ರಾಮದ ಆಶಾ ಉದ್ಯೋಗಿ ಚಾವಿ ಕಶ್ಯಪ್ (39) ಕೂಡ ಮಾಸ್ಕ್ ಹಾಕದೇ ಇದ್ದವರಲ್ಲಿ ಒಬ್ಬರಾಗಿದ್ದರು. ಅವರಿಗೆ ಸ್ವತಃ ಮಾಸ್ಕ್ ತಯಾರಿಸಿಕೊಳ್ಳುವಂತೆ ಹೇಳಲಾಯಿತು. "ನಾನು ಮನೆಯಲ್ಲಿ ತಯಾರಿಸಿದ ಮಾಸ್ಕ್ ಅನ್ನು ಕೆಲವು ದಿನಗಳವರೆಗೆ ಪ್ರಯತ್ನಿಸಿದೆ, ಆದರೆ ಅದು ಸಾಕಷ್ಟು ಬಿಗಿಯಾಗಿರಲಿಲ್ಲ. ನನಗೆ ಇಬ್ಬರು ಮಕ್ಕಳಿದ್ದಾರೆ ಮತ್ತು ನನ್ನ ಪತಿ ಕೂಡ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ" ಎಂದು ಅವರು ಹೇಳುತ್ತಾರೆ. "ಆದರೆ ನಾನು ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದ ಕಾರಣ ಸೆರಗನ್ನೇ ಮಾಸ್ಕಿನಂತೆ ಬಳಸಲು ಪ್ರಾರಂಭಿಸಿದೆ." ಹರಿಯಾಣದ ಆಶಾ ಸಂಘಟನೆಯ ವಾಟ್ಸಪ್ ಗುಂಪಿನಲ್ಲಿ ವ್ಯಾಪಕವಾಗಿ ಕಳುಹಿಸಲಾದ ವೀಡಿಯೊವನ್ನು ನೋಡಿ, ಸಂಪೂರ್ಣ ಸುರಕ್ಷತೆಗಾಗಿ ತನ್ನ ಮುಖದ ಸುತ್ತ ಸೆರಗನ್ನು (ಚುನ್ನಿ) ಹೇಗೆ ಸುತ್ತುವುದೆಂದು ಅವರು ಕಲಿತರು.
ಆಶಾ ಕಾರ್ಯಕರ್ತೆಯರ ಸಂಘಟನೆಯು ರಾಜ್ಯ ಸರಕಾರಕ್ಕೆ ಸುರಕ್ಷತೆಯ ಸಹಾಯವನ್ನು ಕೋರಿ ಎರಡು ಪತ್ರಗಳನ್ನು ಬರೆಯಿತು. ಅದರ ಪರಿಣಾಮವಾಗಿ ಅವರಲ್ಲಿ ಕೆಲವರಿಗೆ 7ರಿಂದ 9ರ ತನಕ ಬಳಸಿ ಬಿಸಾಡಬಹುದಾದ ಮಾಸ್ಕ್‌ಗಳು ದೊರೆತವು. ಆದರೆ ಒಬ್ಬೊಬ್ಬರಿಗೆ 10 ಮಾಸ್ಕ್ ನೀಡುವುದಾಗಿ ಹೇಳಲಾಗಿತ್ತು. ಮತ್ತು ಸಣ್ಣ ಗಾತ್ರದ ಹ್ಯಾಂಡ್ ಸ್ಯಾನಿಟೈಝರ್ ನೀಡಲಾಯಿತು ಅದೂ ಕೂಡಾ ಅವರ ಕ್ಷೇತ್ರಕಾರ್ಯ ಪ್ರಾರಂಭಗೊಂಡ ಆರು ದಿನಗಳ ನಂತರ.
ಆಶಾ ಕಾರ್ಯಕರ್ತರಿಗೆ ಕೇವಲ ಎರಡು ಗಂಟೆಗಳ ಕಾಲ ತರಬೇತಿ ನೀಡಲಾಯಿತು - ಅದೂ ಕೇವಲ ಒಮ್ಮೆ - ಹೊಸ ರೋಗ ಮತ್ತು ಇನ್ಫ್ಲೂಯೆನ್ಝಾದ ಲಕ್ಷಣಗಳ ನಡುವೆ ವ್ಯತ್ಯಾಸವನ್ನು ಹೇಗೆ ತಿಳಿಯುವುದು ಎನ್ನುವುದರ ಕುರಿತು
ಚಾವಿಯವರಿಗೆ ಒಂಬತ್ತು ಒಂದು ಬಳಕೆಯ ಮಾಸ್ಕ್ ದೊರಕಿತ್ತು - ಮತ್ತು ಕನಿಷ್ಠ ಮೂರು ದಿನಗಳವರೆಗೆ ಒಂದು ಮಾಸ್ಕ್ ಬಳಸುವಂತೆ ಹೇಳಲಾಯಿತು. "ಯಾವುದೇ ಸುರಕ್ಷಾ ವಿಧಾನಗಳಿಲ್ಲದೆ ಅವರು ನಮ್ಮ ಈ ಪಿಡುಗಿನ ಎದುರು ತಳ್ಳುವುದು ಎಷ್ಟು ಸರಿ?" ಎಂದು ಅವರು ಕೇಳುತ್ತಾರೆ. ಅವರು ಶೀಘ್ರದಲ್ಲೇ ತನ್ನ ಚುನ್ನಿಯ ಬಳಕೆಯನ್ನು ಮತ್ತೆ ಪ್ರಾರಂಭಿಸಬೇಕಾಗಬಹುದೆಂದು ಅಂದಾಜಿಸುತ್ತಾರೆ - ತಮ್ಮ ಕೆಂಪು, ಕಾಟನ್ ಚುನ್ನಿಯನ್ನು ಅವರು ಪ್ರತಿ ಬಳಕೆಯ ನಂತರ ಕನಿಷ್ಠ ಎರಡು ಬಾರಿ ಕುದಿಯುವ ನೀರಿನಲ್ಲಿ ತೊಳೆಯುತ್ತಾರೆ. "ಮಾಸ್ಕ್ ಇಲ್ಲದೆ ಹೋಗಬೇಡಿ ಎಂದು ಸರ್ಕಾರ ಹೇಳುತ್ತದೆ. ನಮ್ಮ ಬಳಿ ಯಾವುದೂ ಇಲ್ಲ. ನಾವು ಹೊರಗೆ ಬಂದರೆ ಜನರು ನಮ್ಮನ್ನು ನಿಂದಿಸುತ್ತಾರೆ" ಎಂದು ಛಾವಿ ಹೇಳುತ್ತಾರೆ.
ಆಶಾ ಕಾರ್ಯಕರ್ತರು ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳ ವಿವರಗಳನ್ನು ಆಯಾ ಎಎನ್ಎಂಗಳಿಗೆ (ಸಹಾಯಕ ನರ್ಸ್-ಶುಶ್ರೂಷಕಿಯರು) ವರದಿ ಮಾಡಬೇಕು, ನಂತರ ಅವರು ಮನೆಯಲ್ಲಿ ಅಥವಾ ಅಧಿಕೃತ ಸೌಲಭ್ಯದಲ್ಲಿ ಕ್ವಾರಂಟೈನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲೆಂದು ಹತ್ತಿರದ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರು ಆಗಮಿಸುತ್ತಾರೆ. "ನಂತರ ಕುಟುಂಬವು 'ಅವರ ಕುರಿತು ಹೇಳಿದ್ದಕ್ಕಾಗಿ' ನಮ್ಮನ್ನು ನಿಂದಿಸುತ್ತದೆ. ಹೋಮ್ ಕ್ವಾರಂಟೈನ್‌ಗೆ ಒಳಗಾದವರು ಆಗಾಗ್ಗೆ ನಾವು ಅವರ ಮನೆಯ ಹೊರಗೆ ಹಾಕಿದ ಸ್ಟಿಕ್ಕರ್ ಅನ್ನು ತೆಗೆದುಹಾಕುತ್ತಾರೆ, ಪುನಃ ಅದನ್ನು ಹಾಕಿ ಅವರೊಂದಿಗೆ ಸಂವಹನ ನಡೆಸಬೇಕು" ಎಂದು ಸುನೀತಾ ಹೇಳುತ್ತಾರೆ.
ಅವರು ಸೋಂಕಿಗೆ ಹೆದರುವುದಿಲ್ಲವೇ? ಹೆದರುತ್ತಾರೆ. ಆದರೆ ಅದಕ್ಕಿಂತಲೂ ಹೆಚ್ಚು ಇತರ ವಿಷಯಗಳ ಕುರಿತು ಅವರಿಗೆ ಚಿಂತೆಯಾಗಿದೆ. ಸಂಘಟನೆಯ ನಾಯಕರಾಗಿ, ಅವರು ಇತರ ವಿಷಯಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಅವರು ಪ್ರತಿ ತಿಂಗಳು ಕನಿಷ್ಠ 15 ಮಹಿಳೆಯರಿಗೆ ಜನನ ನಿಯಂತ್ರಣ ಮಾತ್ರೆಗಳನ್ನು ನೀಡುತ್ತಿದ್ದರು. "ಈ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಏನೂ ಬಂದಿಲ್ಲ" ಎಂದು ಅವರು ಹೇಳುತ್ತಾರೆ. "ಕಾಂಡೋಮ್‌ಗಳು ಸಹ ಖಾಲಿಯಾಗಿವೆ. ಕಳೆದ ಕೆಲವು ತಿಂಗಳುಗಳಿಂದ ನಾವು ಹಾಕಿದ ಎಲ್ಲಾ ಶ್ರಮ ವ್ಯರ್ಥವಾಗಿದೆ." ಲಾಕ್‌ಡೌನ್ ನಂತರ ಯೋಜಿತವಲ್ಲದ ಗರ್ಭಧಾರಣೆ ಹೆಚ್ಚಾಗುತ್ತದೆ ಎಂದು ಅವರು ಖಚಿತವಾಗಿ ಹೇಳುತ್ತಾರೆ.
"ಈ ಮೊದಲು ಪುರುಷರು ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದರು. ಮತ್ತು ನಮಗೆ ತಿಳಿದಿರುವ ಮಹಿಳೆಯರೊಂದಿಗೆ ಸಂವಹನ ನಡೆಸಲು ಸಣ್ಣ ಅವಕಾಶಗಳು ದೊರೆಯುತ್ತಿದ್ದವು. ಆದರೆ ಈಗ ನಾವು ಕೊರೊನಾ ವೈರಸ್ ಸಮೀಕ್ಷೆಗೆ ಹೋದಾಗ ಎಲ್ಲಾ ಪುರುಷರು ಮನೆಯಲ್ಲಿರುತ್ತಾರೆ. ಈ ಎಲ್ಲಾ ಪ್ರಶ್ನೆಗಳನ್ನು ಕೇಳಲು ನಾವ್ಯಾರೆಂದು ಕೇಳುತ್ತಾರೆ. ಅವರು ಐಡಿ ಕಾರ್ಡುಗಳನ್ನು ತೋರಿಸುವಂತೆ ಕೇಳುತ್ತಾರೆ. ಸರ್ಕಾರ ನಮ್ಮನ್ನು ಗುರುತಿಸಲು ಮತ್ತು ನಮ್ಮ ಉದ್ಯೋಗಗಳನ್ನು ಸಕ್ರಮಗೊಳಿಸಲು ನಿರಾಕರಿಸುತ್ತದೆ. ನಾವು ಅವರಿಗೆ ಸ್ವಯಂಸೇವಕರು. ಅಲ್ಲದೆ, ಅನೇಕ ಪುರುಷರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸುತ್ತಾರೆ" ಎಂದು ಸುನೀತಾ ಹೇಳುತ್ತಾರೆ.
ಒಂದು ದಿನ ಅವರು ಊರಿನಲ್ಲಿ ಮನೆ ಭೇಟಿಗಳಿಗೆ ಹೋಗುವಾಗ ಅವರ ಪರಿಚಯದ ಹೆಂಗಸರುಗಳು ಹೊರಬಂದರು. "ಅವರಲ್ಲಿ ಒಬ್ಬರು ನನ್ನನ್ನು ಮೊದಲು ಕೇಳಿದ್ದು ನನ್ನ ಬಳಿ ಯಾವುದಾದರೂ ಗರ್ಭನಿರೋಧಕ ಮಾತ್ರೆಗಳು ಇವೆಯೇ ಎಂದಾಗಿತ್ತು. ಅವಳು ನನಗೆ ಹೇಳಿದಳು ' ಅಬ್ ತೋ ಜರೂರತ್ ಬಡ್ ಗಯಿ ಹೈ, ದೀದಿ. ವೋಹ್ ಘರ್ ಪೆ ರೆಹ್ತೆ ಹೈ' ['ಈಗ ಅಗತ್ಯ ಹೆಚ್ಚಾಗಿದೆ, ಅಕ್ಕ. ಅವರು ಮನೆಯಲ್ಲಿದ್ದಾರೆ']. ನಾನು ಅವಳಿಗೆ ಹೇಳಲು ಏನೂ ಇರಲಿಲ್ಲ ಮತ್ತು ಕ್ಷಮೆಯಾಚಿಸಿದೆ. ಅಷ್ಟೊತ್ತಿಗೆ ಅವಳ ಗಂಡ ಹೊರಗೆ ಬಂದು ನನ್ನನ್ನು ಹೊರಹೋಗುವಂತೆ ಹೇಳಿದ."
ತಲೆನೋವು, ಮೈಕೈ ನೋವು, ಜ್ವರ ಮತ್ತು ಗರ್ಭನಿರೋಧಕಗಳ ಮೂಲಭೂತ ಔಷಧಿಗಳ ಕಿಟ್ ಅನ್ನು ಆಶಾ ಕಾರ್ಯಕರ್ತರು ಹೊಂದಿರಬೇಕೆಂದು ನಿರೀಕ್ಷೆಯಿದೆ, ಇವುಗಳನ್ನು ಅಗತ್ಯದ ಆಧಾರದ ಮೇಲೆ ಸಂಗ್ರಹಿಸಲಾಗುತ್ತದೆ. ಕಿಟ್ ಯಾವಾಗಲೂ ಕಾಗದದ ಮೇಲಷ್ಟೇ ಅಸ್ತಿತ್ವದಲ್ಲಿದೆ ಎಂದು ಸುನೀತಾ ಹೇಳುತ್ತಾರೆ - ಆದರೆ ಆ ಕೊರತೆಯ ಪರಿಣಾಮಗಳು ಈಗ ಹೆಚ್ಚು ಗಂಭೀರವಾಗಿವೆ. "ಈ ಲಾಕ್ ಡೌನಿನಲ್ಲಿ ಜನರು ಔಷಧಿಗಳಿಗಾಗಿ ಆಸ್ಪತ್ರೆ ಅಥವಾ ಮೆಡಿಕಲ್ ಸ್ಟೋರಿಗೆ ಹೋಗುವಂತಿಲ್ಲ. ನಾನು ಅವರ ಮನೆಗಳಿಗೆ ಹೋಗುತ್ತೇನೆ ಆದರೆ ಜ್ವರದಿಂದ ಬಳಲುತ್ತಿರುವವರಿಗೆ ನೀಡಲು ನನ್ನ ಬಳಿ ಒಂದು ಪ್ಯಾರಾಸಿಟಮಾಲ್ ಸಹ ಇಲ್ಲ... ನಾನುವಿಶ್ರಾಂತಿ ಪಡೆಯುವಂತೆ ಮಾತ್ರ ಜನರಿಗೆ ಹೇಳಬಲ್ಲೆ. ಗರ್ಭಿಣಿಯರಿಗೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಮಾತ್ರೆಗಳು ದೊರೆಯುತ್ತಿಲ್ಲ. ಅವರಲ್ಲಿ ಹೆಚ್ಚಿನವರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇವುಗಳಿಲ್ಲದೆ, ಅವರ ಹೆರಿಗೆಗಳು ಹೆಚ್ಚು ಜಟಿಲವಾಗುತ್ತವೆ," ಎಂದು ಅವರು ವಿವರಿಸುತ್ತಾರೆ.
ಛಾವಿಯವರೂ ಅದೇ ಸಮಸ್ಯೆಯನ್ನು ಎದುರಿಸಬೇಕಾಯಿತು. ಏಪ್ರಿಲ್ 5ರಂದು, 23 ವರ್ಷದ ಗರ್ಭಿಣಿ ಮಹಿಳೆ ಅವರ ಆರೈಕೆಯಲ್ಲಿ ಮಗುವಿಗೆ ಜನ್ಮ ನೀಡಿದರು. ಕೋವಿಡ್ ಮೊದಲು, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಆಕೆಯನ್ನು ಸುರಕ್ಷಿತವಾಗಿಸುವುದು ಅವರ ಜವಾಬ್ದಾರಿಯಾಗಿತ್ತು. "ಹತ್ತಿರದ ಸಿವಿಲ್ ಆಸ್ಪತ್ರೆ ಸುಮಾರು 8 ಕಿಮೀ ದೂರದಲ್ಲಿದೆ. ನಾನು ಅವಳೊಂದಿಗೆ ಹೋಗಿದ್ದರೆ, ಪೊಲೀಸರು ನನ್ನನ್ನು ಹೋಗಲು ಬಿಡುತ್ತಿದ್ದರು, ಏಕೆಂದರೆ ಇದು ತುರ್ತು ಸಮಯವಾಗಿತ್ತು. ಆದರೆ, ನಾನು ಒಬ್ಬಂಟಿಯಾಗಿ ಬಂದಾಗ ಅವರು ನನ್ನನ್ನು ತಡೆದರೆ ನನಗೆ ತೊಂದರೆಯಾಗುತ್ತದೆ. ಅಗತ್ಯ ಕೆಲಸವೆಂದು ತೋರಿಸಲು ನನ್ನ ಬಳಿ ಏನೂ ಇರುವುದಿಲ್ಲ. ನನ್ನ ಬಳಿ ಸರಳವಾದ ಐಡಿ ಕಾರ್ಡ್ ಕೂಡ ಇಲ್ಲ." ಮಹಿಳೆಯನ್ನು ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಛಾವಿ ಪ್ರಯತ್ನಿಸಿದರು. ಆದರೆ ಯಾರೂ ಬರಲಿಲ್ಲ, ಕೊನೆಗೆ ಆಕೆಯ ಪತಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಟೋ ವ್ಯವಸ್ಥೆ ಮಾಡಬೇಕಾಯಿತು.
ಮಾರ್ಚ್ 30ರಂದು ಗೋಹಾನಾ ತಹಸಿಲ್‌ನಲ್ಲಿ ಪೊಲೀಸರು ಇಬ್ಬರು ಆಶಾ ಕಾರ್ಯಕರ್ತರನ್ನು ಲಾಠಿಗಳಿಂದ ಹೊಡೆದರು ಎಂದು ಅವರು ಹೇಳುತ್ತಾರೆ - ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಗೊಳಿಸುವಾಗ - ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಭೆಗಾಗಿ ಕರೆಸಲಾಗಿದೆ ಎಂದು ಅವರು ಮನವಿ ಮಾಡಿಕೊಂಡರೂ ಸಹ.
ತಲೆನೋವು, ಮೈಕೈ ನೋವು, ಜ್ವರ ಮತ್ತು ಗರ್ಭನಿರೋಧಕಗಳ ಮೂಲಭೂತ ಔಷಧಿಗಳ ಕಿಟ್ ಅನ್ನು ಆಶಾ ಕಾರ್ಯಕರ್ತರು ಹೊಂದಿರಬೇಕೆಂದು ನಿರೀಕ್ಷೆಯಿದೆ, ಇವುಗಳನ್ನು ಅಗತ್ಯದ ಆಧಾರದ ಮೇಲೆ ಸಂಗ್ರಹಿಸಲಾಗುತ್ತದೆ. ಕಿಟ್ ಕಾಗದದ ಮೇಲಷ್ಟೇ ಅಸ್ತಿತ್ವದಲ್ಲಿದೆ
ಕಠಿಣ ಕೋವಿಡ್-19 ಲಾಕ್ ಡೌನ್ ಕಾರಣದಿಂದಾಗಿ ಶಿಶುಗಳಿಗೆ ನಿಯಮಿತ ಲಸಿಕೆಯನ್ನು ಹಾಕುವುದು ಸಹ ನಿಂತಿದೆ, ಅದು ಯಾವಾಗ ಪುನರಾರಂಭವಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿನ ಗರ್ಭಿಣಿ ಮಹಿಳೆಯರು, ಆಗಾಗ್ಗೆ ಆಶಾಗಳೊಂದಿಗೆ ಆಸ್ಪತ್ರೆಗಳಿಗೆ ಹೋಗುತ್ತಾರೆ – ಅಲ್ಲಿನ ಮಹಿಳೆಯರು ಅವರನ್ನು ಬಹು ಮತ್ತು ದೀದಿ ಎಂದು ಕರೆಯುತ್ತಾರೆ - ಕೊನೆಗೆ ಮನೆಯಲ್ಲಿಯೇ ಮಗುವನ್ನು ಹೊಂದುತ್ತಾರೆ. "ಮಾರ್ಗದರ್ಶನವಿಲ್ಲದೆ ಈ ರೀತಿ ಹೆರಿಗೆಯಾಗುವುದು ಅಪಾಯಗಳಿಗೆ ಕಾರಣವಾಗಬಹುದು" ಎಂದು ಸುನೀತಾ ಎಚ್ಚರಿಸುತ್ತಾರೆ.
ಹರಿಯಾಣದಲ್ಲಿ ಕೋವಿಡ್ ಪಿಡುಗಿಗೂ ಮೊದಲು, ಆಶಾಗಳಿಗೆ ರಾಜ್ಯ ಸರ್ಕಾರದಿಂದ ಮಾಸಿಕ 4,000 ರೂ. ಸ್ಟೈಪೆಂಡ್ ಸಿಗುತ್ತಿತ್ತು. ಮತ್ತು ಕೇಂದ್ರ ಸರ್ಕಾರದಿಂದ ಐದು ಪ್ರಮುಖ ಕಾರ್ಯಗಳಿಗೆ (ಒಂದು ಆಸ್ಪತ್ರೆ ಹೆರಿಗೆ, ಶಿಶುವಿನ ಲಸಿಕೆ, ಪ್ರಸವಪೂರ್ವ ಆರೈಕೆ, ಮನೆ ಆಧಾರಿತ ಪ್ರಸವದ ನಂತರದ ಆರೈಕೆ ಮತ್ತು ಕುಟುಂಬ ಯೋಜನಾ ಜಾಗೃತಿ) ಪ್ರೋತ್ಸಾಹಕ ಧನವಾಗಿ 2,000 ರೂ. ಸಿಗುತ್ತಿತ್ತು. ಟ್ಯೂಬೆಕ್ಟಮಿಗಳು ಮತ್ತು ವ್ಯಾಸೆಕ್ಟೋಮಿಗಳನ್ನು ಮಾಡಿಸಿಕೊಳ್ಳುವಂತೆ ಒಪ್ಪಿಸುವುದು ಮತ್ತು ಇತರ ಕಾರ್ಯಗಳಿಗೆ ವೈಯಕ್ತಿಕ ಪ್ರೋತ್ಸಾಹ ಧನಗಳು ಇದ್ದವು.
"ಕೊರೊನಾ ವೈರಸ್ ಮತ್ತು ಲಾಕ್ ಡೌನ್‌ನಿಂದಾಗಿ ನಮ್ಮ ಎಲ್ಲಾ ಕೆಲಸಗಳು ನಿಂತುಹೋಗಿವೆ. ಈ [ಕೊರೋನಾ ವೈರಸ್] ಸಮೀಕ್ಷೆಯನ್ನು ಮಾಡಲು ನಾವು ಮೂರು ತಿಂಗಳಿಗೆ ಕೇವಲ 1,000 ರೂ. ಪಡೆಯುತ್ತಿದ್ದೇವೆ. ನಾವು ಸುಮಾರು ರೂ. 2,500 [ಮಾಸಿಕ] ಕಳೆದುಕೊಳ್ಳುತ್ತಿದ್ದೇವೆ. ಅದರ ಮೇಲೆ ನಾನು ಅಕ್ಟೋಬರ್ 2019ರಿಂದ ಯಾವುದೇ ಪಾವತಿಗಳನ್ನು ಸ್ವೀಕರಿಸಿಲ್ಲ. ಈ ಅತ್ಯಲ್ಪ ಮೊತ್ತವನ್ನು ನಾನು ಯಾವಾಗ ಪಡೆಯುತ್ತೇನೆ? ನಾವು ನಮ್ಮ ಮನೆಗಳನ್ನು ಹೇಗೆ ನಡೆಸಬೇಕು, ನಮ್ಮ ಮಕ್ಕಳಿಗೆ ಏನನ್ನು ತಿನ್ನಿಸಬೇಕು?" ಎಂದು ಸುನೀತಾ ಕೇಳುತ್ತಾರೆ.
ಏಪ್ರಿಲ್ 10ರಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕೋವಿಡ್-19 ವಿರುದ್ಧ ಹೋರಾಡುವಲ್ಲಿ ಭಾಗಿಯಾಗಿರುವ ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರಂತಹ ಮುಂಚೂಣಿ ವೈದ್ಯಕೀಯ ಸಿಬ್ಬಂದಿಯ ವೇತನವನ್ನು ದ್ವಿಗುಣಗೊಳಿಸಿದರು. ಆದರೆ ಆಶಾ ಕಾರ್ಯಕರ್ತರನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಸ್ವಯಂಸೇವಕರು ಎಂದು ಪರಿಗಣಿಸಲಾಗುತ್ತದೆ – ಮತ್ತು ಆ ಕಾರಣಕ್ಕೆ ಅವರನ್ನು ಹೊರಗಿಡಲಾಗಿದೆ. "ನಮ್ಮನ್ನು ಕೆಲಸಗಾರರೆಂದು ಸಹ ಪರಿಗಣಿಸಲಾಗುವುದಿಲ್ಲವೇ?" ಎಂದು ಸುನೀತಾ ಕೇಳುತ್ತಾರೆ. "ಈ ಸಾಂಕ್ರಾಮಿಕ ಪಿಡುಗಿನ ಮಧ್ಯದಲ್ಲಿ ಸರ್ಕಾರ ನಮ್ಮ ಜೀವನ, ಜನರ ಜೀವನದೊಂದಿಗೆ ಆಟವಾಡುತ್ತಿದೆ." ಮತ್ತು ಇದರೊಂದಿಗೆ ನಮ್ಮ ಮಾತುಕತೆ ಕೊನೆಯಾಯಿತು. ಅತ್ತ ಆಕೆಯ ಪತಿ ಮೊದಲ ಬಾರಿಗೆ ಅನ್ನ ಮಾಡುತ್ತಿದ್ದರು. ಸುನೀತಾ ತನ್ನ ಗಂಡ ಅನ್ನವನ್ನು ಸುಟ್ಟು ಹಾಕುತ್ತಾರೋ ಅಥವಾ ತನ್ನನ್ನೇ ಸುಟ್ಟುಕೊಳ್ಳುತ್ತಾರೋ ಎನ್ನುವ ಕಳವಳದಲ್ಲಿದ್ದರು.
ಅನುವಾದ: ಶಂಕರ. ಎನ್. ಕೆಂಚನೂರು