ಪ್ರಹ್ಲಾದ್ ಸಿಂಗ್ ತಿಪಾನಿಯಾ ಮತ್ತು [ಕಬೀರ್ ಯೋಜನೆಯ] ಶಬ್ನಮ್ ವಿರ್ಮಾನಿ ಅವರು ಕಬೀರ್ ಭಜನೆಗಳನ್ನು ಹಾಡುವಾಗ ಏಕತಾರಿ ಬಳಸಿ ಹಾಡುತ್ತಾರೆ.
ಏಕತಾರಿ ವಾದ್ಯವು ದೇಶದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ - ಭಜನಾ ಗಾಯಕರು ಮತ್ತು ಅಲೆಮಾರಿ ಕಲಾವಿದರೊಂದಿಗೆ. ಸುಮಾರು 100-120 ಸೆಂಟಿಮೀಟರ್ ಉದ್ದವಿರುವ ಏಕತಾರಿ ಅನೇಕ ಹೆಸರುಗಳನ್ನು ಹೊಂದಿದೆ. ಕರ್ನಾಟಕದಲ್ಲಿ, ಇದನ್ನು ಏಕನಾದ ಎಂದು ಕರೆಯಲಾಗುತ್ತದೆ; ಪಂಜಾಬಿನಲ್ಲಿ ತುಂಬಿ; ಬಂಗಾಳದಲ್ಲಿ ಬೌಲ್; ಮತ್ತು ನಾಗಾಲ್ಯಾಂಡ್ ನಲ್ಲಿ ತತಿ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಇದನ್ನು ಬುರ್ರಾ ವೀಣೆ ಎಂದು ಕರೆಯಲಾಗುತ್ತದೆ. ಛತ್ತೀಸಗಢದ ಆದಿವಾಸಿಗಳು ತಮ್ಮ ಸಂಗೀತ ಮತ್ತು ನೃತ್ಯದಲ್ಲಿ ಏಕತಾರಿಯನ್ನು ಬಳಸುತ್ತಾರೆ.
ಖಂಡವನ್ನು ತೆಗೆದು, ಒಣಗಿದ ಕುಂಬಳಕಾಯಿಯನ್ನು ಏಕ್ತಾರಿಯಲ್ಲಿ ಅನುರಣಕವಾಗಿ ಬಳಸಲಾಗುತ್ತದೆ. ಚರ್ಮದ ತುಂಡು ಅನುರಣಕದ ಕಿರಿದಾದ ಬಾಯಿಯನ್ನು ಮುಚ್ಚುತ್ತದೆ. ಟೊಳ್ಳಾದ ವೇಲು [ಒಂದು ರೀತಿಯ ಬಿದಿರು] ವನ್ನು ಅನುರಣಕದಲ್ಲಿ ಸೇರಿಸಲಾಗುತ್ತದೆ. ಕೆಳಭಾಗದಲ್ಲಿ ಸೋರೆ ಬುರುಡೆಯೊಂದನ್ನು ಕಟ್ಟಲಾಗುತ್ತದೆ. ವೇಲುವಿನ ಆ ತುದಿಯಿಂದ ಈ ತುದಿಗೆ ತಂತಿಯೊಂದನ್ನು ಬಿಗಿಯಲಾಗುತ್ತದೆ. ಆ ತಂತಿಯನ್ನು ತೋರುಬೆರಳು ಅಥವಾ ನಡುಬೆರಳಿನಿಂದ ನುಡಿಸಲಾಗುತ್ತದೆ.
ಏಕತಾರಿ [one-string drone lute] ತಯಾರಿಸುವ ವಿನ್ಯಾಸ ಮತ್ತು ಪ್ರಕ್ರಿಯೆಯು ಇತರ ತಂತಿ ವಾದ್ಯಗಳಿಗಿಂತ ಸರಳವಾದುದು. ಕುಂಬಳಕಾಯಿ, ಮರ, ಬಿದಿರು ಮತ್ತು ದಾರ ಸುಲಭವಾಗಿ ಲಭ್ಯವಿದೆ. ಕುಂಬಳಕಾಯಿಯನ್ನು ಅತ್ಯುತ್ತಮ ಅನುರಣಕವೆಂದು ಪರಿಗಣಿಸಲಾಗಿದೆ. ಇದನ್ನು ಆಫ್ರಿಕನ್ ವಾದ್ಯಗಳಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತದೆ. ಏಕತಾರಿ ಮೂಲ ನೋಟ್ ಮತ್ತು ಮೂಲ ಲಯವನ್ನು ಸಹ ಒದಗಿಸುತ್ತದೆ. ಗಾಯಕರು ತಮ್ಮ ಧ್ವನಿಯನ್ನು ಟ್ಯೂನ್ ಮಾಡಬಹುದು, ಮತ್ತು ಹಾಡನ್ನು ಧ್ವನಿಗೆ ವೇಗಗೊಳಿಸಬಹುದು. ಇದೊಂದು ಪ್ರಾಚೀನ, ಸ್ಥಳೀಯ ವಾದ್ಯ. ಆರಂಭದಲ್ಲಿ, ತಂತಿಯನ್ನು ಪ್ರಾಣಿಗಳ ಚರ್ಮದ ಒಳಪದದಿಂದ ತಯಾರಿಸಲಾಗುತ್ತಿತ್ತು. ಕರ್ನಾಟಕದಲ್ಲಿ, ಯಲ್ಲಮ್ಮನ ಪೂಜೆಯಲ್ಲಿ ಚರ್ಮದ ದಾರ ಹೊಂದಿರುವ ಏಕತಾರಿಯನ್ನು ಈಗಲೂ ನುಡಿಸಲಾಗುತ್ತದೆ. ಇದನ್ನು ಜುಂಬಾರುಕ್ ಎಂದು ಕರೆಯಲಾಗುತ್ತದೆ. ಚರ್ಮದ ದಾರವು ಚರ್ಮದ ತಳಕ್ಕೆ ವಿರುದ್ಧವಾಗಿ ಪ್ರತಿಧ್ವನಿಸಿದಾಗ ಮೊಟ್ಟಮೊದಲ ನೋಟ್ ಮತ್ತು ಮೊದಲ ಲಯವನ್ನು ರಚಿಸಲಾಯಿತು ಎಂದು ನಾವು ಹೇಳಬಹುದು. ಮತ್ತು ಅದು, ಮೊದಲ ಸಂಗೀತ ವಾದ್ಯವಾಗಿತ್ತು. ಕೃಷಿ ಸಮಾಜದಲ್ಲಿ ಲೋಹವನ್ನು ಆವಿಷ್ಕರಿಸಿದ ನಂತರ ಲೋಹದ ತಂತಿಗಳನ್ನು ಬಳಸಲಾಯಿತು. ಪ್ರಪಂಚದಾದ್ಯಂತ, ಅನೇಕ ಏಕ-ತಂತಿ ವಾದ್ಯಗಳನ್ನು ಕಂಡುಹಿಡಿಯಲಾಯಿತು ಮತ್ತು ನುಡಿಸಲಾಯಿತು. ಬೀದಿ ಸಂಗೀತಗಾರರು ಮತ್ತು ಅಲೆಮಾರಿಗಳು ರಚಿಸಿದ ಮತ್ತು ನುಡಿಸುತ್ತಿದ್ದ ವಾದ್ಯಗಳು ಸಹ ಅವರ ಜೀವನ ವಿಧಾನದೊಂದಿಗೆ ನಿಕಟ ಸಂಬಂಧ ಹೊಂದಿದ್ದವು.
ಭಾರತದಲ್ಲಿ ಭಕ್ತಿ ಚಳುವಳಿಯ ಸಂತರು ಮತ್ತು ಕವಿಗಳು ಏಕತಾರಿಯನ್ನು ವ್ಯಾಪಕವಾಗಿ ಬಳಸುತ್ತಿದ್ದರು ಎಂದು ನಂಬಲಾಗಿದೆ. ಆದರೆ, ಐತಿಹಾಸಿಕವಾಗಿ, ಇದು ಪೂರ್ತಿಯಾಗಿ ನಿಜವಲ್ಲ. ಕಬೀರ್, ಮೀರಾಬಾಯಿ ಮತ್ತು ಕೆಲವು ಸೂಫಿ ಸಂತರು ಹಾಡುವಾಗ ಏಕತಾರಿಯನ್ನು ಬಳಸಿದ್ದಾರೆ ಎನ್ನುವುದು ನಮಗೆ ತಿಳಿದಿದೆ, ಆದರೆ ಮಹಾರಾಷ್ಟ್ರದಲ್ಲಿ, ನಾಮದೇವನಿಂದ ತುಕಾರಾಮ್ ತನಕ ಅನೇಕ ಕವಿ-ಸಂತರು ತಾಲ್ (ತಾಳ), ಚಿಪ್ಲಿ (ಲೋಹದ ತಟ್ಟೆಗಳನ್ನು ಹೊಂದಿರುವ ಮರದ ಕೈತಾಳ) ಮತ್ತು ಮೃದಂಗವನ್ನು ಬಳಸಿದ್ದಾರೆ. ಅನೇಕ ರೇಖಾಚಿತ್ರಗಳು ಮತ್ತು ಚಿತ್ರಗಳಲ್ಲಿ, ಸಂತರು ತಮ್ಮ ಕೈಯಲ್ಲಿ ವೀಣೆಯನ್ನು ಹಿಡಿದಿರುವುದನ್ನು ತೋರಿಸಲಾಗಿದೆ.
ಮರಾಠಿ ವಿಶ್ವಕೋಶವು ಹೀಗೆ ಹೇಳುತ್ತದೆ: "ವೀಣೆಯು ಭಾರತೀಯ ಸಂಗೀತದಲ್ಲಿ ಬಳಸಲಾಗುವ ಪ್ರಾಚೀನ ತಂತಿ ವಾದ್ಯವಾಗಿದೆ. ವೈದಿಕ ಮಂತ್ರಗಳನ್ನು ಪಠಿಸುವಾಗ ನೋಟ್‌ಗಳನ್ನು ಎಣಿಸಲು ಇದನ್ನು ಬಳಸಲಾಗುತ್ತಿತ್ತು. ನಾಮದೇವ ಮತ್ತು ತುಕಾರಾಮರಂತಹ ಸಂತರ ಚಿತ್ರಗಳಲ್ಲಿ ನಾವು ಇದನ್ನು ನೋಡುತ್ತೇವೆಯಾದರೂ, ತುಕಾರಾಮನು ಬರೆದ ಯಾವುದೇ ಅಭಂಗಿನಲ್ಲಿ ಅದರ ಉಲ್ಲೇಖವನ್ನು ನಾವು ಕಾಣುವುದಿಲ್ಲ. ಆದರೆ ಇತರ ವಾದ್ಯಗಳ ಹಲವಾರು ಉಲ್ಲೇಖಗಳನ್ನು ನಾವು ಕಾಣುತ್ತೇವೆ: ತಾಳ, ಕೈತಾಳ ಮತ್ತು ಮೃದಂಗ.
ವೀಣೆ ಹಿಡಿದಿರುವ ಸಂತ ತುಕಾರಾಮನ ಚಿತ್ರವು ಬ್ರಾಹ್ಮಣ ಪ್ರತಿನಿಧಿಯಾಗಿದೆ ಎಂದು ನಾವು ಹೇಳಬಹುದು.