ನನ್ನ ಎಸ್‌ಎಸ್‌ಸಿ (ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್) ಫಲಿತಾಂಶ ಬರುವುದರಲ್ಲಿತ್ತು ಆಗ ನನ್ನ ಸ್ಥಿತಿ ಹೇಗಿತ್ತೆಂದರೆ, ಬ್ಯಾಟ್‌ಮ್ಯಾನ್ ಒಬ್ಬನಿಂದ ಹೊಡೆಸಿಕೊಂಡ ಚೆಂಡಿನಂತಿತ್ತು ನನ್ನ ಪರಿಸ್ಥಿತಿ. ಆ ಚೆಂಡನ್ನು ಎಲ್ಲರೂ ಹೇಗೆ ಕುತೂಹಲದಿಂದ ಗಮನಿಸುತ್ತಿರುತ್ತಾರೆಂದು ನಿಮಗೆ ತಿಳಿದರಬಹುದು. ಅದು ಸಿಕ್ಸ್ ಹೋಗುತ್ತದೋ, ಫೋರ್ ಹೋಗುತ್ತದೋ ಎನ್ನುವುದರತ್ತಲೇ ಎಲ್ಲರ ಗಮನವಿರುತ್ತದೆ. ಒಂದು ವೇಳೆ ನಾನು ಫೇಲ್ ಆಗಿದ್ದರೆ ಏನಾಗಿರುತ್ತಿತ್ತು? ನನ್ನ ತಂದೆ ನನಗೆ ತಕ್ಷಣ ಮದುವೆ ಮಾಡಿಸುತ್ತಿದ್ದರು.
ಫಲಿತಾಂಶ ಹೊರಬಂದಾಗ ನಾನು ನಾನು 79.06 ಶೇಕಡಾ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದೆ ಮತ್ತು ಕೇವಲ ಒಂದು ಅಂಕದಿಂದ ಶಾಲೆಯಲ್ಲಿ ಹೆಚ್ಚು ಅಂಕ ಪಡೆದವರಲ್ಲಿ ಮೂರನೇ ಅತ್ಯುನ್ನತ ಸ್ಥಾನವನ್ನು ಕಳೆದುಕೊಂಡಿದ್ದೆ. ನನ್ನ ಈ ಯಶಸ್ಸು ನನ್ನಲ್ಲಿ ಬಹಳ ಸಂತೋಷವನ್ನು ಮೂಡಿಸಿತು. ನಮ್ಮ ನಾಥ್‌ಜೋಗಿ ಅಲೆಮಾರಿ ಸಮುದಾಯದಲ್ಲಿ 10 ನೇ ತರಗತಿ ಉತ್ತೀರ್ಣಳಾದ ಮೊದಲ ವಿದ್ಯಾರ್ಥಿನಿಯಾಗಿದ್ದೆ ನಾನು.
ನಾನು ಜಲ್ಗಾಂವ್ ಜಾಮೋದ್ ತಹಸಿಲ್, ಬುಲ್ಡಾನಾ ಜಿಲ್ಲೆಯ ನವ್ ಖ ಎನ್ನುವ ಸಣ್ಣ ಹಳ್ಳಿಯೊಂದರ ನಿವಾಸಿ ಇಲ್ಲಿ ನನ್ನ ಸಮುದಾಯದ ಜನರು ಮಾತ್ರ ವಾಸಿಸುತ್ತಾರೆ. ಇಲ್ಲಿನ ಅನೇಕ ಜನರು ಪುಣೆ, ಮುಂಬೈ ಮತ್ತು ನಾಗ್ಪುರಕ್ಕೆ ಹೋಗಿ ಅಲ್ಲಿ ಭಿಕ್ಷೆ ಬೇಡುತ್ತಾರೆ. ಉಳಿದವರು ನನ್ನ ಅಪ್ಪ ಅಮ್ಮನಂತೆ ದಿನಗೂಲಿಗಳಾಗಿ ಕೆಲಸ ಮಾಡುತ್ತಾರೆ.
ನನ್ನ ಹೆತ್ತವರು - ಭಾವುಲಾಲ್ ಸಾಹೇಬರಾವ್ ಸೋಳಂಕೆ, ವಯಸ್ಸು 45 ಮತ್ತು ತಾಯಿ ದ್ರೌಪದ ಸೋಳಂಕೆ, ವಯಸ್ಸು 36 - ಅವರು ಊರಿನ ಇತರರ ಹೊಲಗಳಲ್ಲಿ ಕೆಲಸಕ್ಕೆ ಹೋಗುತ್ತಾರೆ. ಗೋಧಿ, ಜೋಳ, ಹತ್ತಿ ಅಥವಾ ಸೋಯಾಬೀನ್ ಬೀನ್ ಹೊಲಗಳಲ್ಲಿ ದುಡಿಯುತ್ತಾರೆ. ದಿನದ ಎಂಟು ಗಂಟೆ ದುಡಿದರೆ ತಲಾ ಇನ್ನೂರು ರೂಪಾಯಿಗಳ ದಿನಗೂಲಿ ದೊರೆಯುತ್ತದೆ. ಈಗಂತೂ ಎಲ್ಲರೂ ಕೆಲಸ ಹುಡುಕುತ್ತಿದ್ದಾರೆ, ನನ್ನ ಪೋಷಕರಿಗೆ ತಿಂಗಳಿಗೆ ಅಂದಾಜು ಹತ್ತರಿಂದ ಹನ್ನೆರಡು ಕೆಲಸ ಸಿಕ್ಕಿದರೆ ಹೆಚ್ಚು. ಈಗ ಕೆಲಸದ ಲಭ್ಯತೆ ಕಡಿಮೆಯಾಗಿದೆ.
ನನ್ನ ತಂದೆ 5ನೇ ತರಗತಿಯ ತನಕ ಓದಿ ನಂತರ ಕೆಲಸ ಮಾಡಲು ಪ್ರಾರಂಭಿಸಿದರು. ನನಗೆ ಇಬ್ಬರು ಅಕ್ಕಂದಿರಿದ್ದಾರೆ ದೊಡ್ಡ ಅಕ್ಕ ರುಕ್ಮಾ, 24 ವರ್ಷ, ಅವಳು ಶಾಲೆಗೆ ಹೋಗಿಲ್ಲ. 22 ವರ್ಷದ ಕಿರಿಯ ಅಕ್ಕ ನೀನಾ 5ನೇ ತರಗತಿ ಓದಿದ್ದಾಳೆ. 20 ವರ್ಷದ ಅಣ್ಣ ದೇವಲಾಲ್ ಕೂಲಿ ಕೆಲಸ ಮಾಡುತ್ತಿದ್ದು ಅವನು 9ನೇ ತರಗತಿಗೆ ಶಾಲೆ ಬಿಟ್ಟನು. ನಾನು 10 ವರ್ಷದವಳಿರುವಾಗ ನನ್ನ ತಂದೆ "ನೀನಿನ್ನು ಓದಿದ್ದು ಸಾಕು ಕೆಲಸಕ್ಕೆ ಹೋಗು." ಎಂದಿದ್ದರು. ಅಪ್ಪನಷ್ಟೇ ಅಲ್ಲ ನಾನು ದಿನಾಲೂ ಶಾಲೆಗೆ ಹೋಗುವ ದಾರಿಯಲ್ಲಿ ಸಿಗುವ ಹಿರಿಯ ಮಹಿಳೆಯೊಬ್ಬರು ಕೂಡಾ "ನಿನ್ನ ಅಕ್ಕಂದಿರು ಓದಿಲ್ಲ ನಿನಗೆ ಮಾತ್ರ ಶಾಲೆ ಯಾಕೆ? ನೀನು ಓದಿದ ತಕ್ಷಣ ನಿನಗೆ ಕೆಲಸ ಸಿಗುತ್ತೆ ಅಂದುಕೊಂಡಿದ್ದೀಯಾ" ಎಂದು ಗದರಿಸಿದ್ದಳು.








