ಗಾಳಿಯಿಂದ ಕೂಡಿದ ಒಂದು ಅಪರಾಹ್ನ ಉಷಾ ಶಿಂಧೆ ಅವರು ತಮ್ಮ ಮೊಮ್ಮಗನನ್ನು ಸೊಂಟದಲ್ಲಿರಿಸಿಕೊಂಡು ನದಿಯನ್ನು ದಾಟಲು ತೆಪ್ಪವನ್ನು ಏರಿದರು. ಅವರು ನಿರೀಕ್ಷಿಸಿರುವಷ್ಟು ದೋಣಿ ನಿಯಂತ್ರಣದಲ್ಲಿರಲಿಲ್ಲ, ಉಷಾ ಅವರ ಕಾಲಿನ ನಿಯಂತ್ರಣ ತಪ್ಪಿತು. ಮಗುವಿನೊಂದಿಗೆ ನೀರಿಗೆ ಬಿದ್ದ ಅವರನ್ನು ಜೀವದ ಭಯ ಆವರಿಸಿತು.
ದೇಶದಲ್ಲಿ ಕೋವಿಡ್19 ಎರಡನೇ ಅಲೆ ಹಬ್ಬಿರುವಾಗ ಅಂದರೆ ಈ ವರ್ಷದ ಮಾರ್ಚ್ ತಿಂಗಳಲ್ಲಿ ಈ ಘಟನೆ ನಡೆದಿತ್ತು. ಉಷಾ ಅವರ ನಾಲ್ಕು ವರ್ಷದ ಮೊಮ್ಮಗ ಶಂಭು ಜ್ವರದಿಂದ ಬಳಲುತ್ತಿದ್ದ. “ಆತನಿಗೆ ಕೋರೋನಾ [ವೈರಸ್] ತಗಲಿರಬಹುದು ಎಂಬ ಆತಂಕ ನನ್ನನ್ನು ಕಾಡಿತ್ತು,” ಎನ್ನುತ್ತಾರೆ 65 ವರ್ಷದ ಉಷಾ. “ಆತನ ಹೆತ್ತವರು ಪಶ್ಚಿಮ ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ನಾನು ಇವನನ್ನು ಆಸ್ಪತ್ರೆಗೆ ತುರ್ತಾಗಿ ಕೊಂಡೊಯ್ಯಲು ತೀರ್ಮಾನಿಸಿದೆ”
ಆದರೆ ತಾತ್ಕಾಲಿಕವಾಗಿ ನಿರ್ಮಿಸಿದ ತೆಪ್ಪದಲ್ಲಿಯೇ ಅವರ ಗ್ರಾಮದ ಜನರು ನದಿಯನ್ನು ದಾಟಬೇಕಾದ ಅನಿವಾರ್ಯತೆ. “ನನಗೆ ನಿಯಂತ್ರಣದಲ್ಲಿರಲು ಆಗಲಿಲ್ಲ, ಶಂಭು ಜತೆಯಲ್ಲೇ ಬಿದ್ದೆ,” ಎಂದ ಉಷಾ, “ನನಗೆ ಈಜಲು ಬರುವುದಿಲ್ಲ, ಅದೃಷ್ಟವಶಾತ್, ನನ್ನ ಸೋದರಳಿಯ ಹತ್ತಿರದಲ್ಲಿಯೇ ಇದ್ದ. ಆತ ನದಿಗೆ ಹಾರಿ ನಮ್ಮನ್ನು ಮೇಲಕ್ಕೆತ್ತಲು ಸಹಕರಿಸಿದ. ನಾನು ಆತಂಕದಲ್ಲಿದ್ದೆ, ನನ್ನಿಂದಾಗಿ ನನ್ನ ಮೊಮ್ಮಗನಿಗೆ ಏನಾದರೂ ಆಗುವುದನ್ನು ನಾನು ಬಯಸುವುದಿಲ್ಲ,”
ಉಷಾ ಅವರ ಸೌತಡಾ ಗ್ರಾಮವು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ವಿಂಚರ್ಣಾ ನದಿಯ ದಡದ ಮೇಲಿದೆ, ರಮಣೀಯವಾದ ರಾಮೇಶ್ವರ ಜಲಪಾತವು 225 ಅಡಿ ಎತ್ತರದಿಂದ ದುಮುಕುತ್ತಿದ್ದು, ಇದು ಸೌತಡಾದಿಂದ 1.5 ಕಿಮೀ ದೂರದಲ್ಲಿದ್ದು, ಪಟೋಡಾ ತಾಲೂಕಿನಲ್ಲಿದೆ. ನದಿಯು ಸೌತಡಾ ಗ್ರಾಮವನ್ನು ಎರಡು ಭಾಗವನ್ನಾಗಿ ಮಾಡಿದ್ದು, ಗ್ರಾಮದ ಪ್ರಮುಖ ಭಾಗದಿಂದ ಒಂದು ಭಾಗವನ್ನು ಪ್ರತ್ಯೇಕಿಸಿದೆ. ಪ್ರತ್ಯೇಕಗೊಂಡ ಗ್ರಾಮವಾದ ಶಿಂದೇ ವಾಸ್ತಿಯ ನಿವಾಸಿಗಳು ಸೇತುವೆ ಇಲ್ಲದ ಕಾರಣ ಅಂಗಡಿ ಮತ್ತು ಆಸ್ಪತ್ರೆಗಳಿಗೆ ಹೋಗಲು ನದಿಯನ್ನು ದಾಟಬೇಕಾಗುತ್ತದೆ.









