ಅವರು ತನ್ನೂರಿನ ಆದಿವಾಸಿ ಮಹಿಳೆಯರೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಹಳ್ಳಿಯಾದ ಸಾಲಿಹಾದ ಯುವಕನೊಬ್ಬ ಓಡಿ ಬಂದು: "ಅವರು ಹಳ್ಳಿಯ ಮೇಲೆ ದಾಳಿ ಮಾಡಿ ನಿಮ್ಮ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ." ಎಂದು ಹೇಳಿದ.
ಇಲ್ಲಿ "ಅವರು" ಎಂದರೆ ಶಸ್ತ್ರಸಜ್ಜಿತ ಬ್ರಿಟಿಷ್ ಪೋಲಿಸ್ ಪಡೆ, ಅವರು ಬ್ರಿಟಿಷರನ್ನು (ರಾಜ್) ವಿರೋಧಿಸುವ ಹಳ್ಳಿಯ ಮೇಲೆ ದಾಳಿ ಮಾಡಿದ್ದರು. ಅಂದು ಇತರ ಅನೇಕ ಹಳ್ಳಿಗಳು ಧ್ವಂಸಗೊಂಡವು, ಸುಟ್ಟುಹೋದವು, ಅವುಗಳ ಧಾನ್ಯವನ್ನು ಲೂಟಿ ಮಾಡಲಾಯಿತು. ಅಧಿಕಾರವು ಬಂಡುಕೋರರಿಗೆ ಅವರ ಸ್ಥಾನವನ್ನು ತೋರಿಸಿತ್ತು.
ಕೂಡಲೇ ಸಬಾರ್ ಬುಡಕಟ್ಟಿನ ಆದಿವಾಸಿ ಯುವತಿ ದೇಮತಿ ದೇಯಿ ಸಬಾರ್ 40 ಇತರ ಯುವತಿಯರೊಂದಿಗೆ ಸಾಲಿಹಾಕ್ಕೆ ಓಡಿದರು. "ನನ್ನ ತಂದೆ ನೆಲದ ಮೇಲೆ ರಕ್ತ ಮಡುವಿನಲ್ಲಿ ಮಲಗಿದ್ದರು" ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಹೇಳುತ್ತಾರೆ. "ಅವರ ಕಾಲಿನಲ್ಲಿ ಗುಂಡು ಸೇರಿತ್ತು."
ವಯಸ್ಸಿನೊಂದಿಗೆ ಮರೆಯಾಗುತ್ತಿರುವ ಆ ನೆನಪು ಮತ್ತೆ ಬಂದು ಅವರನ್ನು ರೋಮಾಂಚನಗೊಳಿಸಿತು. "ನಾನು ಕೋಪದಿಂದಲೇ ಬಂದೂಕು ಹಿಡಿದ ಅಧಿಕಾರಿಯ ಬಳಿಗೆ ಹೋದೆ. ಆ ದಿನಗಳಲ್ಲಿ ನಾವು ಹೊಲಕ್ಕೆ ಹೋಗುವಾಗ ದಾರಿಯಲ್ಲಿ ಎದುರಾಗಬಹುದಾದ ಪ್ರಾಣಿಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಏನಾದರೂ ಹೊಂದಿರಬೇಕಿತ್ತು. ನಾವೆಲ್ಲರೂ ಲಾಠಿಗಳನ್ನು ಕೈಯಲ್ಲಿ ಹಿಡಿದು ಹೋಗುತ್ತಿದ್ದೆವು.
ಒಮ್ಮೆ ಆಕೆ ಅಧಿಕಾರಿಯ ಮೇಲೆ ದಾಳಿ ಮಾಡಿದ ಕೂಡಲೇ, ಆಕೆಯ ಜೊತೆಗಿದ್ದ 40 ಯುವತಿಯರು ಉಳಿದ ಸಿಬ್ಬಂದಿಯ ಮೇಲೆ ಲಾಠಿ ಪ್ರಹಾರ ಮಾಡಿದರು. "ಆ ಪುಂಡನನ್ನು ನಾನು ಬೀದಿಯ ತುದಿಯವರೆಗೂ ಓಡಿಸಿಕೊಂಡು ಹೋಗಿದ್ದೆ" ಎಂದು ಅವರು ಹೇಳಿದರು. ಇದನ್ನು ಹೇಳುವಾಗ ಅವರಲ್ಲಿ ಆಕ್ರೋಶ ತುಂಬಿತ್ತಾದರೂ ನಂತರ ನಕ್ಕರು. “ಅವನಿಗೆ ಈ ಪ್ರತಿಕ್ರಿಯೆ ತೀರಾ ಅನಿರೀಕ್ಷಿತವಾಗಿತ್ತು. ನಾನು ಹೀಗೆ ಮಾಡಬಹುದೆಂದು ಅವನು ಎಣಿಸಿರಲಿಲ್ಲ. ಈ ಪ್ರತಿಕ್ರಿಯೆಯಿಂದ ದಿಗ್ಭ್ರಮೆಗೊಂಡ ಅವನು ತಿರುಗಿ ಹೊಡೆಯಲಾಗದೆ ಓಡುತ್ತಲೇ ಇದ್ದನು" ಅವರು ಅವನನ್ನು ಹೊಡೆದು ಊರ ತುಂಬೆಲ್ಲ ಓಡಾಡಿಸಿದರು. ನಂತರ ಅವರು ತನ್ನ ತಂದೆಯನ್ನು ಅಲ್ಲಿಂದ ಎತ್ತಿಕೊಂಡರು. ನಂತರ ಅವರ ತಂದೆಯನ್ನು ಬಂಧಿಸಲಾಯಿತು, ಆದರೆ ಅದು ವಿಭಿನ್ನ ಪ್ರತಿಭಟನೆಗೆ ಕಾರಣವಾಯಿತು. ಕಾರ್ತಿಕ್ ಸಾಬರ್ ಅಲ್ಲಿನ ಬ್ರಿಟಿಷ್ ವಿರೋಧಿ ಚಳುವಳಿಯ ಪ್ರಮುಖ ಸಂಘಟಕರಾಗಿದ್ದರು.



