ಪ್ರಕಾಶ್ ಭಗತ್ ಬಾಗಿ ದೊಡ್ಡ ಅಲ್ಯೂಮೀನಿಯಮ್ ಪಾತ್ರೆಯೊಳಗಿನ ಆಲೂ-ಮಟರ್ ಗ್ರೇವಿಯನ್ನು ದೊಡ್ಡ ಸೌಟಿನಿಂದ ತಿರುವುತ್ತಾರೆ. ಅವರ ಬಲಗಾಲು ನೆಲದ ಮೇಲಿದ್ದರೆ, ಎಡಗಾಲು ಗಾಳಿಯಲ್ಲಿ ಆಡುತ್ತಿತ್ತು, ತನ್ನ ದೇಹದ ಸಮತೋಲನ ಕಾಯ್ದುಕೊಳ್ಳಲು ಅವರು ಊರುಗೋಲೊಂದನ್ನು ಹೆಗಲಿನಡಿ ಇರಿಸಿಕೊಂಡಿದ್ದರು.
“ನನಗೆ ನೆನಪಿರುವಂತೆ ನನ್ನ 10ನೇ ವಯಸ್ಸಿನಲ್ಲಿ ನಾನು ಈ ಊರುಗೋಲು ಉಪಯೋಗಿಸಲು ಪ್ರಾರಂಭಿಸಿದೆ” ಎನ್ನುತ್ತಾರೆ 52 ವರ್ಷದ ಭಗತ್. “ನಾನು ಚಿಕ್ಕವನಿರುವಾಗ ಕಾಲನ್ನು ಹಿಡಿದುಕೊಂಡೇ ನಡೆಯುತ್ತಿದ್ದೆ. ನಾನು ನರವನ್ನು ಎಳೆದಿದ್ದೇನೆ ಎಂದು ನನ್ನ ಪೋಷಕರು ಹೇಳುತ್ತಾರೆ.”
ಅಂಗವೈಕಲ್ಯವು ಭಗತ್ ಅವರ ಸಂಕಲ್ಪದ ಮೇಲೆ ಪರಿಣಾಮ ಬೀರಿಲ್ಲ. ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಪನ್ವೆಲ್ ತಾಲೂಕಿನಲ್ಲಿರುವ ಅವರ ಗ್ರಾಮವಾದ ಪರ್ಗಾಂವ್‌ನಲ್ಲಿ ದೆಹಲಿಗೆ ಹೋಗುವ ವಾಹನಗಳ ಜಾಥಾದಲ್ಲಿ ಭಾಗವಹಿಸಲು ನಿರ್ಧರಿಸಿದಾಗ, ಜಾಥಾವನ್ನು ಸೇರಿಕೊಳ್ಳುವ ಮೊದಲು ಅವರು ಎರಡು ಬಾರಿ ಯೋಚಿಸಲಿಲ್ಲ. “ನಾನು ಇಲ್ಲಿಗೆ ಒಂದು ಉದ್ದೇಶಕ್ಕಾಗಿ ಬಂದಿದ್ದೇನೆ,” ಎಂದು ಗ್ರೇವಿಯ ರುಚಿಯನ್ನು ನೋಡಿ ಸವಿಯುತ್ತಾ ಅವರು ಹೇಳುತ್ತಾರೆ.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಜಾರಿಗೆ ತಂದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಸಾವಿರಾರು ರೈತರು ದೆಹಲಿಯಲ್ಲಿ ಬೀದಿಗಿಳಿದಿದ್ದಾರೆ. ಈ ಆಂದೋಲನದಲ್ಲಿರುವ ರೈತರನ್ನು ಬೆಂಬಲಿಸಲು, ಡಿಸೆಂಬರ್ 21ರಂದು ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಸುಮಾರು 2,000 ರೈತರು ನಾಸಿಕ್‌ನಲ್ಲಿ ಜಮಾಯಿಸಿದರು. ಅವರು ಅಲ್ಲಿಂದ ಜಾಥಾ ಮೂಲಕ 1,400 ಕಿ.ಮೀ ದೂರದಲ್ಲಿರುವ ದೆಹಲಿಗೆ ತೆರಳಬೇಕಿತ್ತು.
ಪರ್ಗಾಂವ್ ಗ್ರಾಮದಿಂದ 39 ಮಂದಿ ಈ ಜಾಥಾದಲ್ಲಿ ಭಾಗವಹಿಸಲು ನಿರ್ಧರಿಸಿದರು. "ಈ ದೇಶದ ರೈತರು ಮೋಸ ಹೋಗುತ್ತಿದ್ದಾರೆ" ಎಂದು ಭಗತ್ ಹೇಳುತ್ತಾರೆ. "ಅವರಲ್ಲಿ ಹೆಚ್ಚು ಹೆಚ್ಚು ರೈತರು ತಮ್ಮ ಉತ್ಪನ್ನಗಳಿಗೆ ಖಚಿತ ದರಗಳನ್ನು ಪಡೆಯಬೇಕು. ಈ ಕೃಷಿ ಕಾನೂನುಗಳು ಅವರನ್ನು ಇನ್ನಷ್ಟು ಸಾಲದಲ್ಲಿ ಮುಳುಗಿಸುತ್ತವೆ. ರೈತರು ದೊಡ್ಡ ಕಂಪನಿಗಳ ವಶಕ್ಕೆ ಹೋಗುತ್ತಾರೆ, ಅವರು ರೈತರನ್ನು ಶೋಷಿಸುತ್ತಾರೆ. ಕೃಷಿ ಕಾನೂನುಗಳು ಪಂಜಾಬ್ ಮತ್ತು ಹರಿಯಾಣದ ರೈತರ ಮೇಲೆ ತಕ್ಷಣದ ಪರಿಣಾಮ ಬೀರಿರಬಹುದು, ಅದಕ್ಕಾಗಿಯೇ ಅಲ್ಲಿ ಆಂದೋಲನವು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ, ಆದರೆ ಇದರರ್ಥ ದೇಶದಾದ್ಯಂತದ ಇತರ ರಾಜ್ಯಗಳ ರೈತರ ಪರಿಣಾಮ ಮೇಲೆ ಬೀರುವುದಿಲ್ಲ ಎಂದಲ್ಲ.”





