ಇದು ಸಿ.ವೆಂಕಟ ಸುಬ್ಬಾ ರೆಡ್ಡಿಯವರು ಹಾಜರಾಗುತ್ತಿದ್ದ ಆರನೇ ಧರಣಿಯಾಗಿತ್ತು. ಅವರಿಗೆ ಬರಬೇಕಿರುವ ಹಣಕ್ಕಾಗಿ18 ತಿಂಗಳಿಗಿಂತ ಹೆಚ್ಚು ಕಾಲದಿಂದ ಧರಣಿಗಳನ್ನು ಆಯೋಜಿಸುತ್ತಿದ್ದಾರೆ, ಆಂಧ್ರಪ್ರದೇಶದ ವೈಎಸ್‌ಆರ್ ಜಿಲ್ಲೆಯ ರೈತರಾದ ಇವರಿಗೆ ಕಬ್ಬಿನ ಬಾಕಿಯನ್ನು ಪಾವತಿಸಲಾಗಿಲ್ಲ.
ಫೆಬ್ರವರಿ 2, 2020ರಂದು, ಸುಬ್ಬಾ ರೆಡ್ಡಿ ಆಂಧ್ರಪ್ರದೇಶದ ಕಬ್ಬು ಬೆಳೆಗಾರರ ಸಂಘ ಆಯೋಜಿಸಿದ್ದ ಧರಣಿಯಲ್ಲಿ (ಮುಷ್ಕರ) ಭಾವಹಿಸಲು ಚಿತ್ತೂರು ಜಿಲ್ಲೆಯ ತಿರುಪತಿ ನಗರಕ್ಕೆ ಸುಮಾರು 170 ಕಿಲೋಮೀಟರ್ ದೂರ ಪ್ರಯಾಣಿಸಿದರು.
ಕಮಲಾಪುರಂ ಮಂಡಲದ ವಿಭಾರಾಮಪುರಂ ಗ್ರಾಮದಲ್ಲಿ 4.5 ಎಕರೆ ಜಮೀನು ಹೊಂದಿರುವ ಸುಬ್ಬಾ ರೆಡ್ಡಿ "ಮಯೂರ ಸಕ್ಕರೆ ಕಾರ್ಖಾನೆ ನನಗೆ 2018ರಲ್ಲಿ ಸರಬರಾಜು ಮಾಡಿದ ಕಬ್ಬಿನ ಹಣ 1.46 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ." ಎಂದು ಹೇಳಿದರು. ಮಯೂರ ಶುಗರ್ಸ್ ಅವರಿಗೆ ರೂ. 2018-19ರ ಹಂಗಾಮಿನಲ್ಲಿ ಪ್ರತಿ ಟನ್‌ಗೆ 2,500 ರೂ. ನೀಡುವುದಾಗಿ ಹೇಳಿತ್ತು. "ಆದರೆ ಕಂಪನಿ ದರವನ್ನು ಪ್ರತಿ ಟನ್‌ಗೆ 2,300 ರೂಪಾಯಿಗಳಿಗೆ ಇಳಿಸಿತು. ಇದರಿಂದ ನನಗೆ ಮೋಸವಾಯಿತು."
ಧರಣಿಯಲ್ಲಿ ಭಾಗವಹಿಸಿದ್ದ ಆರ್.ಬಾಬು ನಾಯ್ಡು ಅವರಿಗೂ ಸಕ್ಕರೆ ಕಾರ್ಖಾನೆಯಿಂದ 4.5 ಲಕ್ಷ ರೂ. ಬರಬೇಕಿದೆ. ಅವರು ಚಿತ್ತೂರಿನ ರಾಮಚಂದ್ರಪುರಂ ಮಂಡಲದಲ್ಲಿರುವ ಗಣೇಶಪುರಂ ಗ್ರಾಮದಲ್ಲಿ ಕಬ್ಬನ್ನು ಬೆಳೆಯುತ್ತಾರೆ, ಅಲ್ಲಿ ಅವರು ತಮ್ಮ ಸಂಬಂಧಿಕರಿಂದ ಎಂಟು ಎಕರೆ ಜಮೀನು ಬಾಡಿಗೆಗೆ ಪಡೆದಿದ್ದಾರೆ. ಅವರ ಸ್ವಂತ ಜಮೀನಿನ ಬೋರ್ ಒಣಗಿದ್ದರಿಂದಾಗಿ ಅವರು ಬಾಡಿಗೆ ಜಮೀನಿನಲ್ಲಿ ಕೃಷಿ ಮಾಡುತ್ತಿರುವುದಾಗಿ ಹೇಳುತ್ತಾರೆ. "ನಾನು ಸಂಬಂಧಿಕರಿಂದ ಕೃಷಿ ಮಾಡಲು ಭೂಮಿಯನ್ನು 80,000 [2019-20ರಲ್ಲಿ] ಸಾವಿರ ಬಾಡಿಗೆಗೆ ಪಡೆದಿದ್ದೆ. ಸಾಮಾನ್ಯವಾಗಿ ಎಕರೆಗೆ 20,000 ರೂ. ಬಾಡಿಗೆ ವಿಧಿಸಲಾಗುತ್ತದೆ. ಆದರೆ ನನ್ನ ಸಂಬಂಧಿಕರು ನನಗೆ ಕಡಿಮೆ ಬಾಡಿಗೆ ವಿಧಿಸಿದರು."
ಮಯೂರ ಶುಗರ್ಸ್ ಬಾಬು ನಾಯ್ಡು ಅವರಿಗೆ ನೀಡಬೇಕಿದ್ದ ಒಟ್ಟು ಮೊತ್ತ 8.5 ಲಕ್ಷ ರೂಪಾಯಿಗಳಲ್ಲಿ ಕೇವಲ ರೂ. 4 ಲಕ್ಷ ರೂಪಾಯಿಗಳನ್ನು ನೀಡಿದೆ. "ಬಾಕಿ ಹಣ ಹಾಗೆಯೇ ಉಳಿದಿದೆ. ರೈತರಿಗೆ ತಮ್ಮ ಬೇಸಾಯ ಮುಂದುವರೆಸಲು ಹಣ ಬೇಕಿದೆ."
ಚಿತ್ತೂರು ಮತ್ತು ವೈಎಸ್ಆರ್ ಜಿಲ್ಲೆಯ (ಕಡಪಾ ಎಂದೂ ಕರೆಯಲಾಗುತ್ತದೆ), ಕಬ್ಬು ಬೆಳೆಗಾರು ಮಯೂರ ಶುಗರ್ಸ್ ಪಾವತಿಸಬೇಕಿರುವ ಬಾಕಿ ಮೊತ್ತಕ್ಕಾಗಿ ಈಗಲೂ ಕಾಯುತ್ತಿದ್ದಾರೆ. "ನಾವು ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಲು ಬಯಸಿದ್ದೆವು ಆದರೆ ಅದು ಸಾಧ್ಯವಾಗುತ್ತಿಲ್ಲ" ಎಂದು ಸುಬ್ಬಾ ರೆಡ್ಡಿ ಹೇಳುತ್ತಾರೆ, ಮಾರ್ಚ್ 2020ರಲ್ಲಿ ವಿಧಿಸಲಾದ ಕೋವಿಡ್ -19 ಲಾಕ್‌ಡೌನ್ ಹೆಚ್ಚಿನ ಪ್ರತಿಭಟನೆಗಳನ್ನು ಆಯೋಜಿಸುವುದಂತೆ ತಡೆಯಿತು.










