ಬಿಹಾರದ ದರ್ಭಂಗಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಳ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ, ಅಲ್ಲಿನ ಆರೋಗ್ಯ ಕಾರ್ಯಕರ್ತರು ಕಚೇರಿಯಲ್ಲಿ, ವಾರ್ಡ್‌ನ ಹಾಸಿಗೆಯ ಮೇಲೆ ಮತ್ತು ಕೆಲವೊಮ್ಮೆ ನೆಲದ ಮೇಲೂ ಮಲಗಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ಅಂದು ಸೋಮವಾರ ಬೆಳಿಗ್ಗೆ ಸದರ್ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುತ್ತಿದ್ದಂತೆ ಸುನೀತಾ ದತ್ತ ತನ್ನ ಪತಿಯೊಂದಿಗೆ ಅಲ್ಲಿಗೆ ಬಂದರು. ಆದರೆ ಆಕ್ಸಿಲಿಯರಿ ನರ್ಸ್‌ ಮಿಡ್‌ವೈಫ್‌ (ಎಎನ್‌ಎಂ) ಸುನೀತಾರನ್ನು ಡೆಲಿವರಿ ವಾರ್ಡಿಗೆ ಕರೆದೊಯ್ಯುತ್ತಿದಂತೆಯೇ ಸುನಿತಾ, "ಇಸ್ಮೇ ಕೈಸಾ ಹೋಗಾ ಬಚ್ಚಾ, ಬಹುತ್‌ ಗಂದಗಿ ಹೇ ಇಧರ್‌ [ಇಲ್ಲಿ ಹೇಗೆ ಹೆರಿಗೆ ಮಾಡಿಸಿಕೊಳ್ಳುವುದು, ಈ ಸ್ಥಳ ಬಹಳ ಕೊಳಕಾಗಿದೆ]" ಎನ್ನುತ್ತಾ ಪತಿಯೊಡನೆ ಬಂದ ರಿಕ್ಷಾದಲ್ಲೇ ಮರಳಿದರು.

"ಇಂದು ಆಕೆಯ ಹೆರಿಗೆ ದಿನ - ಹೀಗಾಗಿ ನಾವು ಖಾಸಗಿ ಆಸ್ಪತ್ರೆಗೆ ಹೋಗಬೇಕಿದೆ" ಎಂದು ಪತಿ ಅಮರ್ ದತ್ತಾ ತನ್ನ ರಿಕ್ಷಾ ಹೊರಡುವಾಗ ಹೇಳಿದರು. ಈ ಹಿಂದೆ ಇದೇ ಪಿಎಚ್‌ಸಿಯಲ್ಲಿ ಸುನೀತಾ ತನ್ನ ಮೂರನೇ ಮಗುವಿಗೆ ಜನ್ಮ ನೀಡಿದ್ದರು. ಆದರೆ ಈ ಬಾರಿ, ತನ್ನ ನಾಲ್ಕನೇ ಮಗುವಿನ ಹೆರಿಗೆಗೆ, ಅವರು ಬೇರೆಡೆಗೆ ಹೋಗಲು ನಿರ್ಧರಿಸಿದ್ದಾರೆ.

ಬೆಳಗಿನ 11 ಗಂಟೆಯಾದರೂ ಸದರ್‌ನ ಪಿಎಚ್‌ಸಿಯ ಹೆರಿಗೆ ಕೋಣೆ ತನ್ನ ರಕ್ತದಿಂದ ಕೂಡಿದ ನೆಲವನ್ನು ಸ್ವಚ್ಛಗೊಳಿಸಿಕೊಳ್ಳಲು ಸ್ವೀಪರ್‌ಗಾಗಿ ಕಾಯುತ್ತಿತ್ತು. ಅದು ಹಿಂದಿನ ದಿನದ ಹೆರಿಗೆಯಿಂದಾಗಿ ಕೊಳಕಾಗಿತ್ತು.

"ನನ್ನನ್ನು ಕರೆದುಕೊಂಡು ಹೋಗಲು ಬರಲಿರುವ ಗಂಡನಿಗಾಗಿ ಕಾಯ್ತಿದ್ದೇನೆ. ನೈಟ್‌ ಡ್ಯೂಟಿ ಇತ್ತು ಈಗ ಕೆಲಸ ಮುಗಿದು ಮನೆಗೆ ಹೊರಟಿದ್ದೇನೆ, ರಾತ್ರಿ ಯಾವುದೇ ರೋಗಿಗಳಿರಲಿಲ್ಲ ಆದ್ರೆ ಸೊಳ್ಳೆಗಳ ಕಾರಣಕ್ಕೆ ನಿದ್ರೆ ಬರಲಿಲ್ಲ" ಎಂದು 43 ವರ್ಷದ ಪುಷ್ಪಾ ದೇವಿ (43 ವರ್ಷ, ಹೆಸರು ಬದಲಿಸಲಾಗಿದೆ) ಹೇಳುತ್ತಾರೆ. ಪುಷ್ಪಾ ಬಿಹಾರದ ದರ್ಭಂಗಾ ಜಿಲ್ಲೆಯ ಸದರ್ ಟೌನ್‌ನ ಪಿಎಚ್‌ಸಿಯಲ್ಲಿ ಎಎನ್‌ಎಂ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಆಫೀಸಿನ ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದರು. ಕುರ್ಚಿಯ ಹಿಂದೆ ಒಂದು ಮೇಜಿತ್ತು ಅದರ ಮೇಲೆ ಅಲ್ಲಲ್ಲಿ ಕಾಗದಗಳು ಚದುರಿದಂತೆ ಬಿದ್ದಿದ್ದವು. ಜೊತೆಗೆ ಒಂದು ಮರದ ಮಂಚ ಕೂಡ ಇತ್ತು. ಪುಷ್ಪಾ ಸೊಳ್ಳೆಗಳೊಡನೆ ಬಡಿದಾಡುತ್ತಾ ರಾತ್ರಿ ಕಳೆದ ಮಂಚ ಅದೇ ಆಗಿತ್ತು.

ಒಂದು ಕಾಲದಲ್ಲಿ ಕೆನೆ ಬಣ್ಣವನ್ನು ಹೊಂದಿದ್ದ ಸೊಳ್ಳೆ ಪರದೆಯೊಂದು ಹಾಸಿಗೆಯ ಮೇಲೆ ತೂಗಾಡುತ್ತಿತ್ತಾದರೂ ಅದರಲ್ಲಿದ್ದ ತೂತುಗಳಿಂದ ಸೊಳ್ಳೆಯಂತಹ ಯಾವುದೇ ಕೀಟವೂ ಸುಲಭವಾಗಿ ಒಳಗೆ ಬರಬಹುದಿತ್ತು. ಮಂಚದಲ್ಲಿ ಹಾಸಿಗೆಯೊಡನೆ ದಿಂಬೊಂದನ್ನು ಮುಂದಿನ ರಾತ್ರಿ ಪಾಳಿಯ ಎಎನ್‌ಎಂ ಬಳಕೆಗೆಂದು ಮಡಚಿ ಇಡಲಾಗಿತ್ತು.

Sunita Dutta (in the pink saree) delivered her third child at the Sadar PHC (right), but opted for a private hospital to deliver her fourth child
PHOTO • Jigyasa Mishra
Sunita Dutta (in the pink saree) delivered her third child at the Sadar PHC (right), but opted for a private hospital to deliver her fourth child
PHOTO • Jigyasa Mishra

ಸುನೀತಾ ದತ್ತಾ (ಗುಲಾಬಿ ಬಣ್ಣದ ಸೀರೆಯಲ್ಲಿ) ಸದರ್ ಪಿಎಚ್‌ಸಿ (ಬಲ)ಯಲ್ಲಿ ತನ್ನ ಮೂರನೇ ಮಗುವಿಗೆ ಜನ್ಮ ನೀಡಿದರು, ಆದರೆ ತನ್ನ ನಾಲ್ಕನೇ ಮಗುವಿನ ಜನನಕ್ಕಾಗಿ ಖಾಸಗಿ ಆಸ್ಪತ್ರೆಯನ್ನು ಆರಿಸಿಕೊಂಡರು.

"ನಮ್ಮ ಕಚೇರಿ ಮತ್ತು ಮಲಗುವ ಜಾಗ ಎರಡೂ ಒಂದೇ, ಅದು ಕೂಡಾ ಹೀಗಿದೆ" ಎಂದು ಹೇಳುತ್ತಾ ಪುಷ್ಪಾ, ಅಲ್ಲೇ ನೋಟ್‌ ಪುಸ್ತಕದ ಮೇಲೆ ಒಟ್ಟುಗೂಡುತ್ತಿದ್ದ ಸೊಳ್ಳೆಯನ್ನು ಹೊಡೆದೋಡಿಸುತ್ತಿದ್ದರು. ಪುಷ್ಪಾ ತಾನು ವಾಸವಿರುವ ವಾಸಿಸುವ ದರ್ಭಂಗಾ ಪಟ್ಟಣದ ಕಿಶನ್ ಕುಮಾರ್ (47) ಎನ್ನುವವರನ್ನು ಮದುವೆಯಾಗಿದ್ದು ಅವರ ಗಂಡ ಒಂದು ಸಣ್ಣ ಅಂಗಡಿಯನ್ನು ನಡೆಸುತ್ತಾರೆ. ದಂಪತಿಗಳ ಒಬ್ಬನೇ ಮಗ 14 ವರ್ಷದ ಅಮ್ರೀಶ್ ಕುಮಾರ್, ಅಲ್ಲಿನ ಖಾಸಗಿ ಶಾಲೆಯೊಂದರ 8ನೇ ತರಗತಿ ವಿದ್ಯಾರ್ಥಿ.

ಸದರ್ ಪಿಎಚ್‌ಸಿಯಲ್ಲಿ ಪ್ರತಿ ತಿಂಗಳು ಸರಾಸರಿ 10ರಿಂದ 15 ಮಕ್ಕಳು ಜನಿಸುತ್ತಾರೆಂದು ಪುಷ್ಪಾ ಹೇಳುತ್ತಾರೆ. ಕೊವಿಡ್‌ - 19 ಪಿಡುಗಿನ ಮೊದಲು ಈ ಸಂಖ್ಯೆ ಇದರ ಎರಡರಷ್ಟಿತ್ತು ಎನ್ನುತ್ತಾರೆ ಪುಷ್ಪಾ. ಪಿಎಚ್‌ಸಿಯ ಹೆರಿಗೆ ಕೋಣೆಯಲ್ಲಿ ಎರಡು ಹೆರಿಗೆ ಟೇಬಲ್‌ಗಳು ಮತ್ತು ಪ್ರಸವ-ನಂತರದ ಆರೈಕೆ (ಪಿಎನ್‌ಸಿ) ವಾರ್ಡ್‌ನಲ್ಲಿ ಒಟ್ಟು ಆರು ಹಾಸಿಗೆಗಳಿವೆ - ಅವುಗಳಲ್ಲಿ ಒಂದು ಮುರಿದುಹೋಗಿದೆ. ಈ ಹಾಸಿಗೆಗಳಲ್ಲಿ "ನಾಲ್ಕನ್ನು ರೋಗಿಗಳು ಮತ್ತು ಎರಡನ್ನು ಮಮತಾ ಬಳಸುತ್ತಾರೆ" ಎಂದು ಪುಷ್ಪಾ ಹೇಳುತ್ತಾರೆ. ಮಮತಾಗಳು ಮಲಗಲು ಪ್ರತ್ಯೇಕ ಸ್ಥಳ ಲಭ್ಯವಿಲ್ಲ.

ಬಿಹಾರದ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳ ಹೆರಿಗೆ ವಾರ್ಡ್‌ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಆರೋಗ್ಯ ಕಾರ್ಯಕರ್ತರಾಗಿ ದುಡಿಯುವವರನ್ನು ʼಮಮತಾʼ ಎಂದು ಕರೆಯಲಾಗುತ್ತದೆ. ಈ ಹುದ್ದೆಯನ್ನು ಈ ರಾಜ್ಯದಲ್ಲಿ ಮಾತ್ರ ಕಾಣಬಹುದು. ಅವರ ಸಂಪಾದನೆಯು ತಿಂಗಳಿಗೆ ಸುಮಾರು ರೂ. 5,000 ಹಾಗೂ ಕೆಲವೊಮ್ಮೆ ಅದಕ್ಕಿಂತ ಕಡಿಮೆಯಿರುತ್ತದೆ. ಜೊತೆಗ ಅವರು ನೋಡಿಕೊಳ್ಳುವ ಅಥವಾ ಸಹಾಯ ಮಾಡುವ ಪ್ರತಿ ಹೆರಿಗೆಗೆ 300 ರೂ. ʼಪ್ರೋತ್ಸಾಹ ಧನʼ ನೀಡಲಾಗುತ್ತದೆ. ಆದರೆ ಸಂಬಳ ಮತ್ತು ಇನ್ಸೆಂಟಿವ್‌ ಸೇರಿ ತಿಂಗಳಿಗೆ 6,000 ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸುವವರನ್ನು ಕಾಣಲು ಸಾಧ್ಯವಿಲ್ಲ. ಈ ಪಿಎಚ್‌ಸಿಯಲ್ಲಿ ಇಬ್ಬರು ಮತ್ತು ರಾಜ್ಯಾದ್ಯಂತ 4,000ಕ್ಕೂ ಹೆಚ್ಚು ಮಮತಾ ಕಾರ್ಯಕರ್ತರಿದ್ದಾರೆ.

PHOTO • Priyanka Borar

ಈ ನಡುವೆ, ಮಮತಾ ಕಾರ್ಯಕರ್ತೆ ಬೇಬಿ ದೇವಿ (ಹೆಸರು ಬದಲಾಯಿಸಲಾಗಿದೆ) ಬರುವುದರೊಂದಿಗೆ ಪುಷ್ಪಾರ ಕಾಯುವಿಕೆ ಮುಗಿಯಿತು. ಸದ್ಯ! ನಾನು ಹೊರಡುವ ಮೊದಲೇ ಅವಳು ಬಂದಳು. ಇಂದು ಅವಳದು ಡೇ ಶಿಫ್ಟ್.‌ ಇನ್ನುಳಿದ ಎಎನ್‌ಎಂ ಕೂಡ ಇನ್ನೇನು ಬರಬಹುದು." ಎನ್ನುತ್ತಾ ತನ್ನ ಬಳಿಯಿದ್ದ ಮೊಬೈಲ್‌ನ ಬಟನ್‌ ಒತ್ತಿ ಸಮಯ ನೋಡಿದರು. ಅವರ ಬಳಿ ಸ್ಮಾರ್ಟ್‌ ಫೋನ್‌ ಇಲ್ಲ. ಈ ಪಿಎಚ್‌ಸಿಯ ಹೆರಿಗೆ ಕೋಣೆಯಲ್ಲಿ ಇನ್ನೂ ನಾಲ್ಕು ಜನ ಎಎನ್‌ಎಂಗಳು ಕೆಲಸ ಮಾಡುತ್ತಾರೆ. ಮತ್ತು ಇದರೊಂದಿಗೆ ಇನ್ನೂ 33 ಮಂದಿ ಹೊರಗಿನ ಗ್ರಾಮಗಳಲ್ಲಿರುವ ಉಪಕೇಂದ್ರಗಳಲ್ಲಿ ನಿಯೋಜನೆ ಹೊಂದಿದ್ದಾರೆ. ಪಿಎಚ್‌ಸಿಯಲ್ಲಿ ಆರು ವೈದ್ಯರು ಕೆಲಸ ಮಾಡುತ್ತಿದ್ದು, ಸ್ತ್ರೀರೋಗತಜ್ಞರ ಒಂದು ಹುದ್ದೆ ಖಾಲಿಯಿದೆ. ವೈದ್ಯಕೀಯ ತಂತ್ರಜ್ಞರು ಲಭ್ಯವಿಲ್ಲ - ಆ ಕೆಲಸವನ್ನು ಹೊರಗುತ್ತಿಗೆ ನೀಡಲಾಗಿದೆ. ಇಬ್ಬರು ಸ್ವೀಪರ್‌ಗಳಿದ್ದಾರೆ.

ಬಿಹಾರದಲ್ಲಿ, ಎಎನ್‌ಎಂಗಳ ಆರಂಭಿಕ ಸಂಬಳ 11,500 ರೂಪಾಯಿಗಳಷ್ಟಿವೆ. ಪುಷ್ಪಾ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಸೇವೆಯಲ್ಲಿದ್ದು, ಅವರು ಈ ಮೊತ್ತದ ಸುಮಾರು ಮೂರು ಪಟ್ಟು ಹೆಚ್ಚು ಸಂಪಾದಿಸುತ್ತಾರೆ.

52 ವರ್ಷದ ಮಮತಾ, ಬೇಬಿ ದೇವಿ, ತನ್ನ ಕೈಯಲ್ಲಿರುವ ಡಾಟೂನ್ (ಸುಮಾರು 20 ಸೆಂ.ಮೀ ಉದ್ದದ ಬೇವಿನ ತೆಳುವಾದ ಕಡ್ಡಿ, ಹಲ್ಲುಜ್ಜುವ ಬ್ರಷ್ ಆಗಿ ಬಳಸಲಾಗುತ್ತದೆ) ಜೊತೆ ಪಿಎಚ್‌ಸಿಗೆ ಬಂದವರು ಪುಷ್ಪಾ ಬಳಿ "ಅರೆ ದೀದಿ ಆಜ್ ಬಿಲ್ಕುಲ್ ಭಾಗ್ತೇ-ಭಾಗ್ತೇ ಆಯೆ ಹೈ [ಅಕ್ಕಾ, ಇವತ್ತು ಅಕ್ಷರಶಃ ಓಡೋಡಿ ಬಂದೆ]" ಎಂದರು.

ಹಾಗಾದರೆ ಇಂದು ವಿಶೇಷವೇನು? ಅವರ 12 ವರ್ಷದ ಮೊಮ್ಮಗಳು ಅರ್ಚನಾ (ಹೆಸರು ಬದಲಾಯಿಸಲಾಗಿದೆ) ಅವರೊಂದಿಗೆ ಕೆಲಸಕ್ಕೆ ಬಂದಿದ್ದಾಳೆ. ಗುಲಾಬಿ-ಹಳದಿ ಫ್ರಾಕ್, ನಯವಾದ ಕಂದು ಚರ್ಮಹೊಂದಿರುವ, ಚಿನ್ನದ ಬಣ್ಣದ ಕೂದಲನ್ನು ಜುಟ್ಟು ಹಾಕಿಕೊಂಡು, ಅರ್ಚನಾ ತನ್ನ ಅಜ್ಜಿಯನ್ನು ಹಿಂಬಾಲಿಸುತ್ತಾ, ಕೈಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದಿದ್ದಾಳೆ, ಅದು ಬಹುಶಃ ಅವರ ಮಧ್ಯಾಹ್ನದ ಊಟ.

Mamta workers assist with everything in the maternity ward, from delivery and post-natal care to cleaning the room
PHOTO • Jigyasa Mishra

ಮಮತಾ ಕಾರ್ಯಕರ್ತೆಯರು ವಾರ್ಡ್‌ ರೂಮಿನಲ್ಲಿ ಹೆರಿಗೆ ಮತ್ತು ಹೆರಿಗೆ ನಂತರದ ಆರೈಕೆ, ಹೆರಿಗೆ ಕೋಣೆಯ ಸ್ವಚ್ಛಗೊಳಿಸುವಿಕೆ ಹೀಗೆ ಎಲ್ಲದರಲ್ಲೂ ಸಹಾಯ ಮಾಡುತ್ತಾರೆ.

ಮಮತಾ ಕಾರ್ಯಕರ್ತೆಯರಿಗೆ ಮುಖ್ಯವಾಗಿ ತಾಯಂದಿರು ಮತ್ತು ಶಿಶುಗಳ ಆರೈಕೆಯ ಜವಬ್ದಾರಿಯನ್ನು ವಹಿಸಲಾಗಿದೆಯಾದರೂ, ಬೇಬಿ ದೇವಿ ಹೇಳುವಂತೆ, ಅವರು ಹೆರಿಗೆ, ಪ್ರಸವಾ ನಂತರದ ಆರೈಕೆ ಮತ್ತು ಮಾತೃತ್ವದ ವಾರ್ಡ್‌ಗಳವರೆಗೆ ಎಲ್ಲದರಲ್ಲೂ ಸಹಾಯ ಮಾಡುತ್ತಾರೆ. "ಹೆರಿಗೆಯ ನಂತರ ತಾಯಿ ಮತ್ತು ಮಗುವನ್ನು ನೋಡಿಕೊಳ್ಳುವುದು ನನ್ನ ಕೆಲಸ, ಆದರೆ ನಾನು ಆಶಾ ದೀದಿ ಅವರೊಂದಿಗೆ ಹೆರಿಗೆಯಲ್ಲಿ ಸಹಾಯ ಮಾಡುವುದು, ಸ್ವಚ್ಛತಾ ಕೆಲಸಗಾರರು ರಜೆಯಲ್ಲಿದ್ದಾಗ ಹಾಸಿಗೆ ಮತ್ತು ಹೆರಿಗೆ ಕೋಣೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಕೂಡ ಮಾಡುತ್ತೇನೆ" ಎಂದು ಬೇಬಿ ದೇವಿ ಮೇಜಿನ ಮೇಲೆ ಸಂಗ್ರಹವಾದ ಧೂಳು ಕೊಡುವುತ್ತಾ ಹೇಳಿದರು.

ಅವರು ಮೊದಲು ಒಬ್ಬರೇ ಮಮತಾ ಕಾರ್ಯಕರ್ತೆಯಾಗಿದ್ದಾಗ ತಿಂಗಳಿಗೆ ಒಂದಷ್ಟು ಹೆಚ್ಚು ಸಂಪಾದಿಸುತ್ತಿದ್ದೆ ಎನ್ನುತ್ತಾರೆ. "ಮೊದಲು ತಿಂಗಳಿಗೆ 5,000–6,000 ರೂಗಳ ತನಕ ಸಂಪಾದಿಸುತ್ತಿದ್ದೆ, ಆದರೆ ಅವರು ಇನ್ನೊಬ್ಬ ಮಮತಾ ಕಾರ್ಯಕರ್ತೆಯನ್ನು ನೇಮಿಸಿಕೊಂಡ ನಂತರ ಹೆರಿಗೆ ಪ್ರೋತ್ಸಾಹ ಧನದ 300 ರೂಪಾಯಿಯಲ್ಲಿ ಅರ್ಧದಷ್ಟು ಮಾತ್ರ ದೊರೆಯುತ್ತಿದೆ." ಕೋವಿಡ್‌ ಪ್ರಾರಂಭವಾದ ನಂತರ ಪಿಎಚ್‌ಸಿಯಲ್ಲಿ ಹೆರಿಗೆಗಳ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸಿತು, ಆಗಿನಿಂದ ತಿಂಗಳಿಗೆ ಒಬ್ಬೊಬ್ಬರಿಗೆ ಗರಿಷ್ಠ 3,000 ರೂಪಾಯಿಗಳನ್ನಷ್ಟೇ ಸಂಪಾದಿಸಲು ಸಾಧ್ಯವಾಗುತ್ತಿದೆ. ಒಮ್ಮೊಮ್ಮೆ ಅದಕ್ಕಿಂತಲೂ ಕಡಿಮೆ ದೊರೆಯುವುದಿದೆ. ಈಗ ಐದು ವರ್ಷಗಳಿಂದ ಒಂದು ಹೆರಿಗೆಗೆ 300 ʼಪ್ರೋತ್ಸಾಹ ಧನʼ ದೊರೆಯುತ್ತಿದೆ. 2016ರವರೆಗೆ, ಈ ಮೊತ್ತವು ಪ್ರತಿ ಹೆರಿಗೆಗೆ ಕೇವಲ 100 ರೂಪಾಯಿಗಳಷ್ಟೇ ಇತ್ತು.

ಸಾಮಾನ್ಯವಾಗಿ ಪಿಎಚ್‌ಸಿಗೆ ಕೆಲಸದ ಮೇಲೆ ಭೇಟಿ ನೀಡುವವರೆಂದರೆ ಆಶಾ ಕಾರ್ಯಕರ್ತೆಯರು. ಅವರು ತಮ್ಮ ಆರೈಕೆಯಡಿಯಿದ್ದ ಗರ್ಭಿಣಿಯರನ್ನು ಹೆರಿಗೆಗಾಗಿ ಇಲ್ಲಿಗೆ ಕರೆತರುತ್ತಾರೆ. ಸುನೀತಾ ಮತ್ತು ಅವರ ಪತಿ ಇಲ್ಲಿಗೆ ಬಂದಾಗ ಅವರೊಡನೆ ಆಶಾ ಇದ್ದಿರಲಿಲ್ಲ. ಮತ್ತು ಈ ವರದಿಗಾರ್ತಿ ಇಲ್ಲಿದ್ದ ಸಮಯದಲ್ಲೂ ಒಬ್ಬರೂ ಬಂದಿರಲಿಲ್ಲ, ಕೋವಿಡ್ -19 ಸಾಂಕ್ರಾಮಿಕ ಪಿಡುಗು ಪ್ರಾರಂಭವಾದ ನಂತರ ಪಿಎಚ್‌ಸಿಗೆ ರೋಗಿಗಳ ಕುಸಿತದ ಕಾರಣವನ್ನು ಇದು  ಪ್ರತಿಬಿಂಬಿಸುತ್ತದೆ. ಆದರೂ ಆಗೊಮ್ಮೆ ಈಗೊಮ್ಮೆ  ಬರುವ ಗರ್ಭಿಣಿಯರೊಡನೆ ಆಶಾ ಕಾರ್ಯಕರ್ತೆಯರಿರುತ್ತಾರೆ.

ಆಶಾ (ASHA) ಎಂದರೆ ‘accredited social health activist’ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ) - ಮತ್ತು ಇದು ತಮ್ಮ ಗ್ರಾಮೀಣ ಸಮುದಾಯವನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಸಂಪರ್ಕ ಮಾಡಿಸುವ ಮಹಿಳೆಯರನ್ನು ಸೂಚಿಸುತ್ತದೆ.

ಭಾರತದಲ್ಲಿ ಸುಮಾರು ಒಂದು ದಶಲಕ್ಷಕ್ಕೂ ಮಿಕ್ಕಿ ಆಶಾ ಕಾರ್ಯಕರ್ತರಿದ್ದು ಬಿಹಾರದಲ್ಲಿ ಇವರ ಸಂಖ್ಯೆ ಸುಮಾರು 90,000. ಇದು ದೇಶದಲ್ಲೇ ಎರಡನೇ ದೊಡ್ಡ ಸಂಖ್ಯೆಯ ಆಶಾ ಕಾರ್ಯಕರ್ತೆಯರನ್ನು ಹೊಂದಿರುವ ರಾಜ್ಯ. ಅವರನ್ನು ಸರ್ಕಾರಗಳು ‘ಸ್ವಯಂಸೇವಕರು’ ಎಂದು ಕರೆಯುತ್ತಾರೆ, ಈ ಪದದಿಂದಲೇ ಸರ್ಕಾರಗಳು ಅವರಿಗೆ ಅವರಿಗೆ ಕಡಿಮೆ ಮೊತ್ತದ ಗೌರವ ಧನವನ್ನಷ್ಟೇ ಪಾವತಿಸುವುದನ್ನು ಸಮರ್ಥಿಸಿಕೊಳ್ಳುತ್ತವೆ. ಬಿಹಾರದಲ್ಲಿ ತಿಂಗಳಿಗೆ 1,500 ರೂ. ಗೌರವ ಧನ ನೀಡಲಾಗುತ್ತದೆ. ಸಾಂಸ್ಥಿಕ ಹೆರಿಗೆ, ಲಸಿಕೆ, ಮನೆ ಭೇಟಿಗಳು, ಕುಟುಂಬ ಯೋಜನೆ ಮತ್ತು ಇತ್ಯಾದಿಯನ್ನು ಒಳಗೊಂಡಂತೆ ಪೂರ್ಣಗೊಂಡ ಇತರ ಕಾರ್ಯಗಳಿಗೆ ‘ಪ್ರೋತ್ಸಾಹ ಧನ’ವಾಗಿ ಹೆಚ್ಚುವರಿ ಮೊತ್ತಗಳನ್ನು ನೀಡಲಾಗುತ್ತದೆ. ಇವೆಲ್ಲವೂ ಸೇರಿ ತಿಂಗಳಿಗೆ 5,000-6,000 ರೂ. ದೊರೆಯುತ್ತದೆ. 260 ಆಶಾಗಳು ಸದರ್ ಪಿಎಚ್‌ಸಿ ಮತ್ತು ಅದರ ಅನೇಕ ಉಪ ಕೇಂದ್ರಗಳೊಂದಿಗೆ ಸಂಪರ್ಕ ಹೊಂದಿದ್ದಾರೆ.

Left: The mosquito net and bedding in the office where ANMs sleep. Right: A broken bed in the post-natal care ward is used for storing junk
PHOTO • Jigyasa Mishra
Left: The mosquito net and bedding in the office where ANMs sleep. Right: A broken bed in the post-natal care ward is used for storing junk
PHOTO • Jigyasa Mishra

ಎಡ: ಎಎನ್‌ಎಂಗಳು ಮಲಗುವ ಕಚೇರಿಯಲ್ಲಿನ ಸೊಳ್ಳೆ ಪರದೆ ಮತ್ತು ಹಾಸಿಗೆ. ಬಲ: ನವಜಾತ ಶಿಶುಗಳ ಆರೈಕೆ ವಾರ್ಡ್‌ನಲ್ಲಿ ಮುರಿದ ಹಾಸಿಗೆಯನ್ನು ಹಳೆಯ ವಸ್ತುಗಳನ್ನು ಸಂಗ್ರಹಿಸಲು ಬಳಸಲಾಗುತ್ತದೆ

ಬೇಬಿ ತನ್ನ ಮೊಮ್ಮಗಳಿಗೆ ಪ್ಲಾಸ್ಟಿಕ್ ಚೀಲದಿಂದ ಆಹಾರವನ್ನು ತೆಗೆಯುವಂತೆ ಹೇಳುತ್ತಾ ಮತ್ತು ಮುಂದುವರಿಸಿದರು. "ಸ್ಥಳ, ಹಾಸಿಗೆಗಳು ಮತ್ತು ಸೌಲಭ್ಯಗಳ ಕೊರತೆಯಿದೆಯೆಂದು ನಮಗೂ ಗೊತ್ತು. ಆದರೆ ನಾವು ಉತ್ತಮ ಸೌಲಭ್ಯಗಳಿಗಾಗಿ ಕೋರಿಕೆ ಸಲ್ಲಿಸಿದರೆ, ನಮ್ಮನ್ನು ವರ್ಗಾವಣೆ ಮಾಡಲಾಗುವುದೆಂದು ಹೆದರಿಸಲಾಗುತ್ತದೆ. ಮಳೆಗಾಲದ ಸಮಯದಲ್ಲಿ ಮಳೆ ನೀರು ನುಗ್ಗುವುದು ಇಲ್ಲಿ ದೊಡ್ಡ ಸಮಸ್ಯೆಯಾಗಿದೆ. ಅನೇಕ ಬಾರಿ, ಆ ಸಮಯದಲ್ಲಿ ಹೆರಿಗೆಗೆ ಬರುವ ಮಹಿಳೆಯರು ಇಲ್ಲಿನ ಪರಿಸ್ಥಿತಿಯನ್ನು ನೋಡಿ ಮನೆಗೆ ಮರಳುತ್ತಾರೆ,” ಎಂದು ಅವರು ಹೇಳುತ್ತಾರೆ. "ನಂತರ ಅವರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ."

"ನನ್ನೊಂದಿಗೆ ಬನ್ನಿ, ನಮ್ಮ ಪಿಎನ್‌ಸಿ ವಾರ್ಡ್ ತೋರಿಸುತ್ತೇನೆ" ಎಂದು ಹೇಳುತ್ತಾ ಈ ವರದಿಗಾರರ ಕೈಯನ್ನು ಹಿಡಿದು ಕರೆದೊಯ್ದು ಬೇಬಿ "ನೋಡಿ,ಹೆರಿಗೆಯ ನಂತರ ಎಲ್ಲದಕ್ಕೂ ನಮ್ಮಲ್ಲಿರುವ ಏಕೈಕ ಕೊಠಡಿ ಇದು. ಇದನ್ನು ರೋಗಿಗಳು ಮತ್ತು ನಾವು ಇಬ್ಬರೂ ಬಳಸಬೇಕು." ಈ ವಾರ್ಡ್‌ನ ಆರು ಹಾಸಿಗೆಗಳ ಹೊರತಾಗಿ, ಪುಷ್ಪಾ ಅವರಂತಹ ಎಎನ್‌ಎಂಗಳಿಗಾಗಿ ಕಚೇರಿ ಪ್ರದೇಶದಲ್ಲಿ ಮತ್ತು ಹೆರಿಗೆ ವಾರ್ಡ್‌ನ ಹೊರಗಡೆ ಒಂದೊಂದು ಹಾಸಿಗೆಗಳಿವೆ. “ಮಮತಾಗಳು ಈ ಎರಡು ಹಾಸಿಗೆಗಳನ್ನು ಬಳಸುತ್ತಾರೆ. ರಾತ್ರಿ ಪಾಳಿಯಲ್ಲಿ ಎಲ್ಲಾ ಹಾಸಿಗೆಗಳಲ್ಲಿ ರೋಗಿಗಳಿದ್ದಾಗ, ನಾವು ಬೆಂಚುಗಳನ್ನು ಸೇರಿಸಿ ಮಲಗಬೇಕಾಗುತ್ತದೆ.  ಕೆಲವೊಂದು ದಿನಗಳಲ್ಲಿ ನಮ್ಮ ಎಎನ್‌ಎಂಗಳು ಸಹ ನೆಲದ ಮೇಲೆ ಮಲಗಬೇಕಾದ ಪರಿಸ್ಥಿತಿಯಿರುತ್ತದೆ.”

ಬೇಬಿ ಯಾರಾದರೂ ಸೀನಿಯರ್‌ಗಳು ನಮ್ಮ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿರಬಹುದೇ ಎಂದು ಸುತ್ತಲೂ ಒಮ್ಮೆ ನೋಡಿ ಮತ್ತೆ ಮಾತು ಮುಂದುವರಿಸಿದರು. "ಇಲ್ಲಿ ಬಿಸಿ ನೀರಿಗಾಗಿ ಯಾವುದೇ ವ್ಯವಸ್ಥೆಯಿಲ್ಲ. ದೀದಿ [ಎಎನ್‌ಎಂಗಳು] ಅದನ್ನು ಬಹಳ ಸಮಯದಿಂದ ಕೇಳುತ್ತಿದ್ದಾರೆ, ಆದರೆ ಪ್ರಯೋಜವಾಗಿಲ್ಲ. ನಾವು ಬಿಸಿ ನೀರು ಬೇಕಾದಾಗ ಪಿಎಚ್‌ಸಿ ಗೇಟ್‌ನ ಬಲಭಾಗದಲ್ಲಿರುವ ಚಹಾ ಅಂಗಡಿಯ ಮಹಿಳೆಯನ್ನು ಆಶ್ರಯಿಸುತ್ತೇವೆ. ಅದನ್ನು ಒಬ್ಬ ಮಹಿಳೆ ಮತ್ತು ಅವರ ಮಗಳು ನಡೆಸುತ್ತಾರೆ. ಅವರು ನಮಗೆ ಅಗತ್ಯ ಬಿದ್ದಾಗ ಬಿಸಿ ನೀರನ್ನು ಪಥಿಲಾದಲ್ಲಿ [ಪಾತ್ರೆ] ತರುತ್ತಾರೆ. ಅವರು ನೀರು ತಂದಾಗಲೆಲ್ಲ ನಾವು ಅವರಿಗೆ ಒಂದಿಷ್ಟು ಹಣ ಕೊಡುತ್ತೇವೆ. ಸಾಮಾನ್ಯವಾಗಿ 10 ರೂಪಾಯಿ.”

ಅಷ್ಟು ಕಡಿಮೆ ಹಣದಿಂದ ಅವರು ತನ್ನ ಕುಟುಂಬವನ್ನು ಹೇಗೆ ನಡೆಸುತ್ತಾರೆ? "ನಿಮಗೆ ಏನನ್ನನಿಸುತ್ತೆ?" ಬೇಬಿ ಕೇಳುತ್ತಾರೆ. "ನಮ್ಮದು ನಾಲ್ಕು ಜನರ ಕುಟುಂಬ ನಮ್ಮ ಮನೆಯಲ್ಲಿ  ದುಡಿಮೆಯಿರುವುದು ನನಗೆ ಮಾತ್ರ. ಅದೂ 3,000 ರೂ. ನನ್ನ ಮಗ, ಸೊಸೆ ಮತ್ತು ಈ ಹುಡುಗಿ [ಮೊಮ್ಮಗಳು] ನನ್ನೊಂದಿಗೆ ವಾಸಿಸುತ್ತಿದ್ದಾರೆ. ಕೆಲವೊಮ್ಮೆ ಆಸ್ಪತ್ರೆಗೆ ಬಂದ ರೋಗಿಗಳು ಒಂದಷ್ಟು ಹಣ ಕೊಡುತ್ತಾರೆ.ಎಎನ್‌ಎಮ್‌ಗಳು, ಆಶಾಗಳು ಎಲ್ಲರೂ ತೆಗೆದುಕೊಳ್ಳುತ್ತಾರೆ. ನಾವೂ ಈ ದಾರಿಯಲ್ಲಿ ಒಂದಿಷ್ಟು ಹಣ ಮಾಡಿಕೊಳ್ಳುತ್ತೇವೆ. ಕೆಲವೊಮ್ಮೆ ಒಂದು ಹೆರಿಗೆಗೆ 100 ರೂಪಾಯಿ ಕೊಡುತ್ತಾರೆ. ಕೆಲವೊಮ್ಮೆ ಇನ್ನೂರು ಕೂಡ ಕೊಡುತ್ತಾರೆ. ನಾವು ಒತ್ತಾಯ ಮಾಡುವುದಿಲ್ಲ. ನಾವು ಕೇಳಿದಾಗ ಅವರೇ ಸಂತೋಷದಿಂದ ಕೊಡುತ್ತಾರೆ. ಅದರಲ್ಲೂ ಗಂಡು ಮಗುವಾದಾಗ ಕೊಟ್ಟೇ ಕೊಡುತ್ತಾರೆ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಜಿಗ್ಯಾಸ ಮಿಶ್ರಾ ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.

ಅನುವಾದ: ಶಂಕರ ಎನ್. ಕೆಂಚನೂರು

Jigyasa Mishra

ਜਗਿਆਸਾ ਮਿਸ਼ਰਾ ਉੱਤਰ ਪ੍ਰਦੇਸ਼ ਦੇ ਚਿਤਰਾਕੂਟ ਅਧਾਰਤ ਸੁਤੰਤਰ ਪੱਤਰਕਾਰ ਹਨ।

Other stories by Jigyasa Mishra
Illustration : Priyanka Borar

ਪ੍ਰਿਯੰਗਾ ਬੋਰਾਰ ਨਵੇਂ ਮੀਡਿਆ ਦੀ ਇੱਕ ਕਲਾਕਾਰ ਹਨ ਜੋ ਅਰਥ ਅਤੇ ਪ੍ਰਗਟਾਵੇ ਦੇ ਨਵੇਂ ਰੂਪਾਂ ਦੀ ਖੋਜ ਕਰਨ ਲਈ ਤਕਨੀਕ ਦੇ ਨਾਲ਼ ਪ੍ਰਯੋਗ ਕਰ ਰਹੀ ਹਨ। ਉਹ ਸਿੱਖਣ ਅਤੇ ਖੇਡ ਲਈ ਤਜਰਬਿਆਂ ਨੂੰ ਡਿਜਾਇਨ ਕਰਦੀ ਹਨ, ਇੰਟਰੈਕਟਿਵ ਮੀਡਿਆ ਦੇ ਨਾਲ਼ ਹੱਥ ਅਜਮਾਉਂਦੀ ਹਨ ਅਤੇ ਰਵਾਇਤੀ ਕਲਮ ਅਤੇ ਕਾਗਜ਼ ਦੇ ਨਾਲ਼ ਵੀ ਸਹਿਜ ਮਹਿਸੂਸ ਕਰਦੀ ਹਨ।

Other stories by Priyanka Borar

ਪੀ ਸਾਈਨਾਥ People’s Archive of Rural India ਦੇ ਮੋਢੀ-ਸੰਪਾਦਕ ਹਨ। ਉਹ ਕਈ ਦਹਾਕਿਆਂ ਤੋਂ ਦਿਹਾਤੀ ਭਾਰਤ ਨੂੰ ਪਾਠਕਾਂ ਦੇ ਰੂ-ਬ-ਰੂ ਕਰਵਾ ਰਹੇ ਹਨ। Everybody Loves a Good Drought ਉਨ੍ਹਾਂ ਦੀ ਪ੍ਰਸਿੱਧ ਕਿਤਾਬ ਹੈ। ਅਮਰਤਿਆ ਸੇਨ ਨੇ ਉਨ੍ਹਾਂ ਨੂੰ ਕਾਲ (famine) ਅਤੇ ਭੁੱਖਮਰੀ (hunger) ਬਾਰੇ ਸੰਸਾਰ ਦੇ ਮਹਾਂ ਮਾਹਿਰਾਂ ਵਿਚ ਸ਼ੁਮਾਰ ਕੀਤਾ ਹੈ।

Other stories by P. Sainath
Series Editor : Sharmila Joshi

ਸ਼ਰਮਿਲਾ ਜੋਸ਼ੀ ਪੀਪਲਸ ਆਰਕਾਈਵ ਆਫ਼ ਰੂਰਲ ਇੰਡੀਆ ਦੀ ਸਾਬਕਾ ਸੰਪਾਦਕ ਹਨ ਅਤੇ ਕਦੇ ਕਦਾਈਂ ਲੇਖਣੀ ਅਤੇ ਪੜ੍ਹਾਉਣ ਦਾ ਕੰਮ ਵੀ ਕਰਦੀ ਹਨ।

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru