ರಾಣಿ ಮಹತೋ ಒಂದೆಡೆ ಸುಸೂತ್ರವಾಗಿ ಹೆರಿಗೆ ನಡೆದ ಕುರಿತು ನಿರಾಳರಾಗಿದ್ದರೆ, ಇನ್ನೊಂದೆಡೆ ಮನೆಗೆ ಮರಳುವುದು ಮತ್ತು ಅಲ್ಲಿಗೆ ಹೋದ ನಂತರ ಇನ್ನೊಂದು ಮಗುವೂ ಹೆಣ್ಣಾಗಿದೆಯೆಂದು ಹೇಗೆ ತಿಳಿಸುವುದೆಂಬ ಚಿಂತೆಯಲ್ಲಿದ್ದರು. ಅವರ ಮನಸ್ಸು ಇವೆರಡು ವಿಷಯಗಳ ನಡುವೆ ತೂಗುಯ್ಯಾಲೆಯಾಡುತ್ತಿತ್ತು.
“ಅವರು ಈ ಬಾರಿ ಗಂಡು ಮಗುವನ್ನು ಎದುರು ನೋಡುತ್ತಿದ್ದರು,” ಎಂದು ಆಕೆ ತಗ್ಗಿದ ದನಿಯಲ್ಲಿ ಹೇಳುತ್ತಿದ್ದರು. “ಈಗ ಅವರಿಗೆ ಎರಡನೇ ಮಗುವೂ ಹೆಣ್ಣಾಗಿದೆಯೆಂದು ಹೇಳಿದರೆ ಅವರು ಹೇಗೆ ಪ್ರತಿಕ್ರಿಯಿಸಬಹುದೆನ್ನುವ ಕುರಿತು ಭಯವಾಗತೊಡಗಿದೆ.” ಎಂದು ಬಿಹಾರದ ಪಾಟ್ನಾ ಜಿಲ್ಲೆಯ ದಾನಾಪುರ ಉಪ ವಿಭಾಗ ಆಸ್ಪತ್ರೆಯಲ್ಲಿ ತನ್ನ ಎರಡು ದಿನದ ಮಗುವಿಗೆ ಹಾಲುಣಿಸುತ್ತಿದ್ದ ರಾಣಿ ಆತಂಕದಿಂದ ಹೇಳಿದರು.
2017ರಲ್ಲಿ ಮದುವೆಯಾದ ರಾಣಿ ಮದುವೆಯಾದ ಒಂದು ವರ್ಷದಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದರು. ಅವರ ಗಂಡ ಪ್ರಕಾಶ್ ಕುಮಾರ್ ಮಹತೋ ಆಗ 20 ವರ್ಷದವರಾಗಿದ್ದರು. ಅವರು ತನ್ನ ಪತಿ ಮತ್ತು ಅತ್ತೆಯೊಡನೆ ಅದೇ ಜಿಲ್ಲೆಯ ಫುಲ್ವಾರಿ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದಾರೆ. (ಅವರು ತಮ್ಮ ಊರಿನ ಹೆಸರನ್ನು ಹೇಳಲು ಬಯಸಲಿಲ್ಲ.) ಮಹತೋಗಳು ಸಂಪ್ರದಾಯವಾದಿ ಒಬಿಸಿ ಸಮುದಾಯಕ್ಕೆ ಸೇರಿದವರು.
“ನಮ್ಮ ಊರಿನಲ್ಲಿ ಹೆಣ್ಣು ಮಕ್ಕಳಿಗೆ 16ನೇ ವಯಸ್ಸಿಗೆಲ್ಲ ಮದುವೆ ಮಾಡಿಬಿಡುತ್ತಾರೆ,” ಎಂದು ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಅರಿವು ಹೊಂದಿರುವ ರಾಣಿ ಹೇಳುತ್ತಾರೆ. “ನನಗೊಬ್ಬಳು ತಂಗಿಯೂ ಇದ್ದಾಳೆ, ಈಗ ನನ್ನ ತಂದೆ ತಾಯಿಗಳು ಅವಳಿಗೂ ಆದಷ್ಟು ಬೇಗ ಮದುವೆ ಮಾಡಿಸುವ ಅವಸರದಲ್ಲಿದ್ದಾರೆ.” ಎನ್ನುತ್ತಾರವರು. ರಾಣಿಯೊಂದಿಗೆ ಅವರ ಅತ್ತೆ ಗಂಗಾ ಮಹತೋ ಕೂಡಾ ಬಂದು ಸೇರಿಕೊಂಡರು. ಅವರು ಚುಟ್ಟಿವಾಲೇ ಸರ್ಟಿಫಿಕೇಟ್‌ಗಾಗಿ (ಬಿಡುಗಡೆ ಪ್ರಮಾಣಪತ್ರ) ಕಾಯುತ್ತಿದ್ದರು.
ರಾಣಿ ಮತ್ತು ಆಕೆಯ ಸಹೋದರಿಯದೇನೂ ವಿಶೇಷ ಪ್ರಕರಣವಲ್ಲ. ಚೈಲ್ಡ್ ರೈಟ್ಸ್ ಎಂಡ್ ಯೂ (ಕ್ರೈ) ಎನ್ನುವ ಎನ್‌ಜಿಒ ಪ್ರಕಾರ, ದೇಶದ ಶೇಕಡಾ 55ರಷ್ಟು ಬಾಲ್ಯ ವಿವಾಹಗಳು ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ನಡೆಯುತ್ತವೆ. ಜನಗಣತಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಮತ್ತು ಇತರ ಸರ್ಕಾರಿ ಅಂಕಿಅಂಶಗಳ ವಿಶ್ಲೇಷಣೆಯ ಆಧಾರದ ಮೇಲೆ ಇದನ್ನು ಹೇಳಲಾಗಿದೆ.
“ಚುಟ್ಟಿವಾಲೇ ಪೇಪರ್ ಸಿಕ್ಕಿದ ತಕ್ಷಣ ಬಾಡಿಗೆ ರಿಕ್ಷಾದಲ್ಲಿ ಮನೆಗೆ ಹೋಗುತ್ತೇವೆ.” ಎನ್ನುತ್ತಾರೆ ರಾಣಿ. ಅವರು ಈಗಾಗಲೇ ಅಗತ್ಯಕ್ಕಿಂತಲೂ ಹೆಚ್ಚಾಗಿ ಎರಡು ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಏಕೆಂದರೆ ಅವರಿಗೆ ಚಿಕಿತ್ಸೆ ಪಡೆಯಲೇ ಬೇಕಿದ್ದ ಇತರ ಸಮಸ್ಯೆಗಳಿದ್ದವು. “ನನಗೆ ರಕ್ತದ ಕೊರತೆಯಿದೆ (ಅನಿಮೀಯಾ),” ಎನ್ನುತ್ತಾರೆ ರಾಣಿ.







