ಬಸಂತ್ ಬಿಂದ್ ಈಗ ಕೆಲವು ದಿನಗಳಿಂದ ಮನೆಯಲ್ಲಿದ್ದಾರೆ. ದಿನಗೂಲಿ ಕೃಷಿ ಕೂಲಿ ಕಾರ್ಮಿಕರಾದ ಅವರು ಕೆಲವು ದಿನಗಳಿಂದ ಪಾಟ್ನಾದಲ್ಲಿನ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಇದು ಯೆಹಾನಾಬಾದ್ ಜಿಲ್ಲೆಯ ಸೇಲಂಪೂರ್ ಗ್ರಾಮದಿಂದ ಕೆಲವು ಗಂಟೆಗಳ ಪ್ರಯಾಣದ ದೂರದಲ್ಲಿದೆ.
ಮರುದಿನ, ಜನವರಿ 15 ರಂದು, ಸಂಕ್ರಾಂತಿ ಹಬ್ಬ ಮುಗಿದ ನಂತರ, ಅವರು ಕೆಲಸಕ್ಕೆ ಮರಳಲು ನಿರ್ಧರಿಸಿದ್ದರು ಮತ್ತು ತಮ್ಮೊಂದಿಗೆ ಕೆಲಸಕ್ಕೆ ಬರಲು ನೆರೆಯ ಚಂದಾರಿಯಾ ಗ್ರಾಮದಿಂದ ಕೆಲವು ಕಾರ್ಮಿಕರನ್ನು ಕರೆಯಲು ಹೋಗಿದ್ದರು. ಈ ಕೆಲಸಗಾರರೊಂದಿಗೆ, ಅವರು ಪಾಟ್ನಾಕ್ಕೆ ಹಿಂತಿರುಗಲು ಸಿದ್ಧರಾಗಿದ್ದರು.
ಅವರು ಅಲ್ಲಿ ಕೆಲವು ಜನರೊಂದಿಗೆ ಮಾತನಾಡುತ್ತಿದ್ದಾಗ, ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳನ್ನು ಹೊತ್ತ ವಾಹನವೊಂದು ಘಟನಾ ಸ್ಥಳಕ್ಕೆ ಬಂದಿತು. ಬಿಹಾರ ನಿಷೇಧ ಮತ್ತು ಅಬಕಾರಿ (ತಿದ್ದುಪಡಿ) ಕಾಯ್ದೆ, 2016ರ ಅಡಿಯಲ್ಲಿ ರಚಿಸಲಾದ ಮದ್ಯ ವಿರೋಧಿ ದಳ ಇದಾಗಿತ್ತು. ಅವರ ಕೆಲಸವೆಂದರೆ, "ಬಿಹಾರ ರಾಜ್ಯದ ವ್ಯಾಪ್ತಿಯಲ್ಲಿ ಸಂಪೂರ್ಣ ಮದ್ಯ ಮತ್ತು ಮಾದಕವಸ್ತುಗಳ ನಿಷೇಧವನ್ನು ಜಾರಿಗೊಳಿಸುವುದು, ಕಾರ್ಯಗತಗೊಳಿಸುವುದು ಮತ್ತು ಉತ್ತೇಜಿಸುವುದು..."
ಪೊಲೀಸರನ್ನು ನೋಡುತ್ತಿದ್ದಂತೆ ಜನರು ಓಡತೊಡಗಿದರು. ಅವರೊಡನೆ ಬಸಂತ್ ಕೂಡಾ ಓಡತೊಡಗಿದರು. ಆದರೆ “ನನ್ನ ಕಾಲಿನಲ್ಲಿ ಸ್ಟೀಲ್ ರಾಡ್ ಇದ್ದ ಕಾರಣ ಎಲ್ಲರಂತೆ ವೇಗವಾಗಿ ಓಡುವುದು ನನ್ನಿಂದ ಸಾಧ್ಯವಿರಲಿಲ್ಲ. ಕೇವಲ ಒಂದೇ ನಿಮಿಷದಲ್ಲಿ ಅವರ ಗ್ರಹಚಾರ ಮೇಲುಗೈ ಸಾಧಿಸಿತ್ತು. “ಯಾರೋ ಅಂಗಿಯ ಕಾಲರ್ ಹಿಡಿದು ನನ್ನನ್ನು ವಾಹನೊದಳಗೆ ತಳ್ಳಿದರು.” ಎಂದು 27 ವರ್ಷ ಪ್ರಾಯದ ಅವರು ನೆನಪಿಸಿಕೊಳ್ಳುತ್ತಾರೆ.
ಅವರು ತಂಡದ ಬಳಿ ತನ್ನ ಬಳಿ ಹಾಗೂ ತನ್ನ ಮನೆಯಲ್ಲಿ ಮದ್ಯ ಇದೆಯೇ ಎಂದು ಪರೀಕ್ಷಿಸುವಂತೆ ಕೇಳಿಕೊಂಡರು. ಆದರೆ ಅವರು ಆ ಕುರಿತು ತಲೆ ಕಡೆಸಿಕೊಳ್ಳಲಿಲ್ಲ. “ಪೊಲೀಸರು ನನ್ನನ್ನು ಅಬಕಾರಿ ಇಲಾಖೆಗೆ ಹೋಗಲು ಬಿಡುವುದಾಗಿ ಹೇಳಿದಾಗ ನನಗೆ ಒಂದಷ್ಟು ಸಮಾಧಾನವಾಯಿತು.”
ಆದರೆ ಬಸಂತ್ ತಂಡದೊಡನೆ ಪೊಲೀಸ್ ಠಾಣೆಗೆ ಬಂದಾಗ ಅಲ್ಲಿ ಅವರಿಗೆ ಆಘಾತ ಕಾದಿತ್ತು. ಪೊಲೀಸರು ಬರೆದ ಟಿಪ್ಪಣಿಯಲ್ಲಿ ಬಸಂತ್ ಬಳಿ 500 ಎಮ್‌ಎಲ್ ಮದ್ಯ ದೊರಕಿತ್ತು ಎಂದು ಅಧಿಕೃತ ಟಿಪ್ಪಣಿಯಲ್ಲಿ ಬರೆದಿದ್ದರು. ಈ ಮೂಲಕ ಮದ್ಯಪಾನ ನಿಷೇಧ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕಾಯ್ದೆಯಡಿ ಮೊದಲ ಬಾರಿಗೆ ಅಪರಾಧ ಎಸಗುವವರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ಗಿಂತ ಕಡಿಮೆಯಿಲ್ಲದಂತೆ ದಂಡ ವಿಧಿಸಲಾಗುತ್ತದೆ.










