ದೀಪಾವಳಿಗೆ 10 ದಿನಗಳ ಮೊದಲು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮುಖೇಶ್ ರಾಮ್ ತಮ್ಮ ಗ್ರಾಮ ಮೊಹಮ್ಮದ್‌ಪುರಕ್ಕೆ ಮರಳಿದ್ದರು.
ನಲವತ್ತು ವರ್ಷದ ಮುಕೇಶ್ ಪ್ರತಿ ವರ್ಷ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿರುವ ತನ್ನ ಮನೆಗೆ ಛತ್ ಪೂಜೆಯನ್ನು ಆಚರಿಸಲು ಬರುತ್ತಿದ್ದರು. ಗಮನಾರ್ಹವಾಗಿ, ಛತ್ ಹಬ್ಬದಲ್ಲಿ, ದೀಪಾವಳಿಯ ನಂತರ ಆರನೇ ದಿನದಂದು ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಲಾಗುತ್ತದೆ.
ಊರಿಗೆ ಮರಳಿದ ನಂತರ, ಅವರು ಮನೆಯಿಂದ ಆರು ಕಿಲೋಮೀಟರ್ ದೂರದಲ್ಲಿರುವ ಮಂಗಳಪುರ ಪುರಾಣ ಬಜಾರ್‌ನ ನಿರ್ಮಾಣ ಸ್ಥಳದಲ್ಲಿ ಕೂಲಿ ಕೆಲಸ ಮಾಡಲು ಪ್ರಾರಂಭಿಸಿದರು. ಬೆಳಗ್ಗೆ 8ಕ್ಕೆ ಮನೆಯಿಂದ ಹೊರಟು ಸಂಜೆ 6ಕ್ಕೆ ಮನೆಗೆ ಮರಳುತ್ತಿದ್ದರು.
ಆದರೆ ನವೆಂಬರ್ 2, 2021ರಂದು, ಅವರು ತಡವಾಗಿ ಹಿಂತಿರುಗಿದರು ಮತ್ತು ಸ್ವಲ್ಪ ಸಮಯದ ನಂತರ ತೀವ್ರವಾಗಿ ತಲೆನೋಯುತ್ತಿರುವುದಾಗಿ ಹೇಳತೊಡಗಿದರು.
ಬೆಳಗಿನವರೆಗೂ ನೋವಿನಲ್ಲೇ ಇದ್ದ ಅವರಿಗೆ ಕಣ್ಣುಗಳು ಕೂಡ ಮುಚ್ಚತೊಡಗಿದ್ದವು. ಆದರೆ, ಬೆಳಗ್ಗೆ ಒಮ್ಮೆಲೇ ಮುಕೇಶ್ ಕೆಲಸಕ್ಕೆ ಹೋಗಲು ರೆಡಿಯಾದರು, ಆದರೆ ನೋವಿನ ಕಾರಣ ಹೋಗಲಾಗಲಿಲ್ಲ.
ಅವರ ಸ್ಥಿತಿಯನ್ನು ಕಂಡ ಪ್ರಭಾವತಿ ಖಾಸಗಿ ವಾಹನವನ್ನು ಬಾಡಿಗೆಗೆ ಪಡೆದು 35 ಕಿ.ಮೀ ದೂರದ ಗೋಪಾಲಗಂಜ್ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. "ಸುಬೆರೇ ಲೇ ಜಾತ್, 11 ಬಜೆ ಮೊವ್‌ಗಾತ್ ಹೊ ಗಯೀಲ್ [ಬೆಳಿಗ್ಗೆ ಆಸ್ಪತ್ರೆಗೆ ಕರೆದೊಯ್ದೆವು, 11 ಗಂಟೆಗೆ ನಿಧನರಾದರು]."
ಪ್ರಭಾವತಿ (35) ಪತಿಯ ಮೃತದೇಹದೊಂದಿಗೆ ಸಂಜೆ ಮನೆಗೆ ಹಿಂದಿರುಗುವ ವೇಳೆಗೆ ಅವರ ಪಕ್ಕಾ ಮನೆಗೆ ಸೀಲ್ ಹಾಕಲಾಗಿತ್ತು. ಮೊಹಮ್ಮದ್‌ಪುರ ಠಾಣೆಯ ಪೊಲೀಸರು ಅವರ ಮನೆ ಮೇಲೆ ದಾಳಿ ನಡೆಸಿದ್ದರು.










