ಗುರ್‌ಪ್ರತಾಪ್ ಸಿಂಗ್ 11ನೇ ತರಗತಿಯ ವಿದ್ಯಾರ್ಥಿ ಮತ್ತು ಅವನ ಸೋದರಸಂಬಂಧಿ 13 ವರ್ಷದ ಸುಖ್ಬೀರ್ 7ನೇ ತರಗತಿಯಲ್ಲಿದ್ದಾನೆ. ಇಬ್ಬರೂ ಪಂಜಾಬ್‌ನ ಅಮೃತಸರ ಜಿಲ್ಲೆಯವರು. ಅವರು ಇದೀಗ ಶಾಲೆಯಿಂದ ದೂರವಾಗಿದ್ದಾರೆ, ಆದರೆ ವಿಭಿನ್ನ ರೀತಿಯ ಶಿಕ್ಷಣವೊಂದನ್ನು ಕಲಿಯುತ್ತಿದ್ದಾರೆ.
"ನಾವು ಇಲ್ಲಿ ರೈತರು ತಂಗಿರುವ ಪ್ರದೇಶವನ್ನು ರಾತ್ರಿಯಲ್ಲಿ ಕಾಯುತ್ತೇವೆ, ಮತ್ತು ನಾವು ಅದನ್ನು ಮುಂದುವರಿಸುತ್ತೇವೆ" ಎಂದು ಸಿಂಘು-ದೆಹಲಿ ಗಡಿಯಲ್ಲಿರುವ ಹರಿಯಾಣದ ಸೋನಿಪತ್‌ನಲ್ಲಿ 17 ವರ್ಷದ ಗುರ್‌ಪ್ರತಾಪ್ ಹೇಳುತ್ತಾನೆ.
ದೆಹಲಿಯ ವಿವಿಧ ಗಡಿಗಳಲ್ಲಿ ಜಮಾಯಿಸಿರುವ ಲಕ್ಷಾಂತರ ರೈತರಲ್ಲಿ ಗುರುಪ್ರತಾಪ್ ಕೂಡ ಒಬ್ಬ. ಕೆಲವು ರೈತರು ಕೆಲವು ವಾರಗಳ ಹಿಂದೆ ರಾಜಧಾನಿಯನ್ನು ಪ್ರವೇಶಿಸಿ ಉತ್ತರ ದೆಹಲಿಯ ಬುರಾರಿ ಮೈದಾನದಲ್ಲಿ ಬೀಡುಬಿಟ್ಟಿದ್ದಾರೆ.
ಎಲ್ಲಾ ತಾಣಗಳಲ್ಲಿ, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸಂಸತ್ತಿನ ಮೂಲಕ ಅಂಗೀಕರಿಸಲ್ಪಟ್ಟ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಅವರ ಬೃಹತ್ ಮತ್ತು ಶಾಂತಿಯುತ ಪ್ರತಿಭಟನೆಗಳು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮತ್ತು ಈ ರೈತರು ಮುಂದೆ ನಡೆಯುವ ದೀರ್ಘ ಯುದ್ಧವನ್ನು ಎದುರಿಸಲು ಸಿದ್ಧರಾಗಿದ್ದಾರೆ, ಅವರ ಬೇಡಿಕೆಗಳ ಕುರಿತು ಅವರಿಗೆ ಸ್ಪಷ್ಟತೆಯಿದೆ, ಅವರ ಉದ್ದೇಶಕ್ಕೆ ಬದ್ಧರಾಗಿದ್ದಾರೆ.
ನಾನು ಸಿಂಘು ಮತ್ತು ಬುರಾರಿಯಲ್ಲಿ ಕ್ಯಾಂಪ್‌ಗಳನ್ನು ಸ್ಥಾಪಿಸಲಾಗಿರುವ ಸ್ಥಳಗಳಿಗೆ ಹೋದಾಗ ಸಂಜೆಗತ್ತಲೆಯಾಗಿ ಮಲಗುವ ಸಮಯವಾಗಿತ್ತು. ಅಲ್ಲಿ ಕೆಲವು ರೈತರು ತಮ್ಮ ಟ್ರಕ್‌ಗಳಲ್ಲಿ ತಂಗಿದ್ದರೆ, ಕೆಲವರು ಪೆಟ್ರೋಲ್ ಪಂಪ್‌ಗಳಲ್ಲಿ ಮಲಗಿದ್ದರು, ಇನ್ನೂ ಕೆಲವರು ಗುಂಪುಗೂಡಿ ಹಾಡುಗಳನ್ನು ಹಾಡುತ್ತಿದ್ದರು. ಈ ಎಲ್ಲ ಸ್ಥಳಗಳ ವಾತಾವರಣದಲ್ಲೂ ಆಪ್ತತೆ, ಸೌಹಾರ್ದತೆ ಮತ್ತು ಸಂಕಲ್ಪ ಹಾಗೂ ಪ್ರತಿರೋಧದ ಭಾವನೆಯಿತ್ತು.
ಈ ಮೂರು ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ: ರೈತ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಸಂವರ್ಧನೆ ಮತ್ತು ಸರಳೀಕರಣ) ಕಾಯ್ದೆ, 2020; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಕಾಯ್ದೆ, 2020; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020.
ಈ ಕಾನೂನುಗಳನ್ನು ಮೂಲಭೂತವಾಗಿ ತಮ್ಮ ಹಕ್ಕುಗಳು ಮತ್ತು ಕೃಷಿಯಲ್ಲಿನ ಪಾಲನ್ನು ದೇಶದ ಅತ್ಯಂತ ಶಕ್ತಿಶಾಲಿ ಸಂಸ್ಥೆಗಳಿಗೆ ಹಸ್ತಾಂತರಿಸಿ, ಈ ದೊಡ್ಡ ಉದ್ಯಮಿಗಳ ಕರುಣೆಯಲ್ಲಿ ಬದುಕಲು ಒತ್ತಾಯಿಸುತ್ತದೆಂದು ಅವರು ಹೇಳುತ್ತಾರೆ. "ಇದು ದ್ರೋಹವಲ್ಲದಿದ್ದರೆ, ಇನ್ಯಾವುದು?" ಎಂದು ಒಂದು ಧ್ವನಿ ಕತ್ತಲೆಯಲ್ಲಿ ಕೇಳುತ್ತದೆ.
"ನಾವು ರೈತರು ಈ ಕಂಪನಿಗಳೊಂದಿಗೆ ಈ ಮೊದಲೇ ವ್ಯವಹಾರದ ಅನುಭವವನ್ನು ಹೊಂದಿದ್ದೇವೆ - ಮತ್ತು ನಾವು ಅವರನ್ನು ನಂಬುವುದಿಲ್ಲ. ಅವರು ಮೊದಲು ನಮಗೆ ಮೋಸ ಮಾಡಿದ್ದಾರೆ, ಅವರನ್ನು ಮ್ತತೆ ನಂಬಲು ನಾವು ಮೂರ್ಖರಲ್ಲ. ನಮ್ಮ ಹಕ್ಕುಗಳು ನಮಗೆ ತಿಳಿದಿವೆ," ನಾನು ಆ ತಡ ಸಂಜೆ ಸಿಂಘುವಿನಲ್ಲಿರುವ ಶಿಬಿರಗಳ ಮೂಲಕ ಹಾದುಹೋಗುವಾಗ ಕೇಳಿದ ಅನೇಕ ಧ್ವನಿಗಳಲ್ಲಿ ಇದೂ ಒಂದಾಗಿತ್ತು.
ಯಾವುದೇ ರೀತಿಯಲ್ಲಿ ಕಾನೂನುಗಳನ್ನು ರದ್ದುಗೊಳಿಸುವ ಸಾಧ್ಯತೆಯನ್ನು ಸರ್ಕಾರ ನಿರಾಕರಿಸುತ್ತಿರುವಾಗ ಅವರು ಈ ಅಸ್ತವ್ಯಸ್ತತೆಯ ಬಗ್ಗೆ ಚಿಂತಿಸುತ್ತಿಲ್ಲವೇ? ಅವರು ದೃಢವಾಗಿ ನಿಲ್ಲುತ್ತಾರೆಯೇ?
"ನಾವು ಬಲಶಾಲಿಗಳು ನಾವು ನಮ್ಮದೇ ಆದ ಆಹಾರವನ್ನು ತಯಾರಿಸುತ್ತಿದ್ದೇವೆ ಮತ್ತು ಅದನ್ನು ಇತರರಿಗೂ ವಿತರಿಸುತ್ತಿದ್ದೇವೆ. ನಾವು ರೈತರು, ಸದೃಢವಾಗಿರುವುದು ಹೇಗೆ ಎಂದು ನಮಗೆ ತಿಳಿದಿದೆ." ಎಂದು ಪಂಜಾಬ್‌ನ ಮತ್ತೊಬ್ಬ ರೈತ ಹೇಳುತ್ತಾರೆ.













